ಪ್ರತಿಭಟನೆ ವಿಕೋಪಕ್ಕೆ; ಬಸ್ಸಿಗೆ ಕಲ್ಲು, ಲಾಠಿ ರುಚಿ
ಕನ್ನಡಪ್ರಭ ವಾರ್ತೆ ಯಾದಗಿರಿ ಆ. 28
ನಿರ್ವಾಹಕಿಯೊಬ್ಬರು ಥಳಿಸಿದ್ದಾರೆ ಎಂದು ಆರೋಪಿಸಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕೇಂದ್ರ ಬಸ್ ನಿಲ್ದಾಣದೆದುರು ಬುಧವಾರ ನಡೆಸಿದ ರಸ್ತೆ ತಡೆ ಪ್ರತಿಭಟನೆ ವಿಕೋಪಕ್ಕೆ ತೆರಳಿತು.
ಪ್ರತಿಭಟನೆ ತೀವ್ರಗೊಂಡು ಕೆಲ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ಸುಗಳಿಗೆ ಕಲ್ಲು ತೂರಿದ್ದಾರೆ. ಇದರಿಂದ ಬಸ್ಸುಗಳ ಕಿಟಕಿ ಗಾಜುಗಳು ಪುಡಿಯಾಗಿವೆ. ಇದೇ ವೇಳೆ ಡ್ರೈವರ್ ಮೇಲೂ ಹಲ್ಲೆ ನಡೆದಿದೆ. ಆಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದು, ಸುಮಾರು 15 ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ವಿದ್ಯಾರ್ಥಿಗಳ ಮೇಲೆ ನಗರ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದೆ.
ಘಟನೆ ವಿವರ: ನಗರ ಸಾರಿಗೆ ಬಸ್ ತುಂಬಿದ್ದರಿಂದ ಕೆಲ ವಿದ್ಯಾರ್ಥಿಗಳು ಬಾಗಿಲಲ್ಲಿ ನಿಂತಿದ್ದರು. ಈ ವೇಳೆ ನಿರ್ವಾಹಕಿ ಈ ಬಸ್ ತುಂಬಿದೆ, ಬೇರೆ ಬಸ್ಸಿಗೆ ಬರುವಂತೆ ಸಲಹೆ ನೀಡಿದ್ದಾರೆ. ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಬಸ್ಸಿನಿಂದ ಇಳಿಯಲು ನಿರಾಕರಿಸಿ ಇದೇ ಬಸ್ಸಿನಲ್ಲಿ ಬರುವುದಾಗಿ ಉತ್ತರಿಸಿದ್ದಾರೆ. ಇದರಿಂದಾಗಿ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಿರ್ವಾಹಕಿ ವಿದ್ಯಾರ್ಥಿಯೊಬ್ಬನ ಕೊರಳಪಟ್ಟಿ ಹಿಡಿದು ಥಳಿಸಿದ್ದರೆ, ನಿರ್ವಾಹಕಿಯನ್ನು ವಿದ್ಯಾರ್ಥಿಗಳು ತಳ್ಳಿದ್ದಾರೆ ಎಂದು ಉಭಯರು ಆರೋಪಿಸಿದ್ದಾರೆ.
ನಿರ್ವಾಹಕಿ ಅಮಾನತಿಗೆ ಆಗ್ರಹ: ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ನಗರದ ಕೇಂದ್ರ ಬಸ್ ನಿಲ್ದಾಣ ಎದುರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಗೆ ಇಳಿದರು. ನಿರ್ವಾಹಕಿ ವಿರುದ್ಧ ಘೋಷಣೆ ಕೂಗಿದರು. ಅಮಾಯಕ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಬಸ್ಸಿನಲ್ಲಿ ಯಾವಾಗಲೂ ನಿರ್ವಾಹಕರು ಅನವಶ್ಯಕವಾಗಿ ಕಿರುಕುಳ ಕೊಡುತ್ತಿದ್ದಾರೆ. ತಮಗೆ ನ್ಯಾಯ ಕಲ್ಪಿಸಬೇಕು. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕಾದ ನೌಕರರು ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ. ಕೂಡಲೇ ಆ ನಿರ್ವಾಹಕಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಟ್ರಾಫಿಕ್ ಜಾಮ್: ವಿದ್ಯಾರ್ಥಿಗಳು ರಸ್ತೆ ತಡೆ ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದರು. ರಸ್ತೆ ಬಿಟ್ಟು ಪ್ರತಿಭಟನೆ ನಡೆಸುವಂತೆ ಈ ವೇಳೆ ಪೊಲೀಸರು ತಿಳಿಸಿದ್ದಾರೆ. ಆದರೆ ವಿದ್ಯಾರ್ಥಿಗಳು ಈ ಮಾತಿಗೆ ಜಗ್ಗಲಿಲ್ಲ. ನಗರದ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರಿಂದ ಪರಿಸ್ಥಿತಿ ಮಿತಿಮೀರುವ ಹಂತಕ್ಕೆ ಬಂತು. ಆದರೂ ಸಿಪಿಐ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಪೊಲೀಸರು ವಿದ್ಯಾರ್ಥಿಗಳ ಪ್ರತಿಭಟನೆಯನ್ನು ರಸ್ತೆಯಿಂದ ಸರಿಸುವಲ್ಲಿ ಯಶಸ್ವಿಯಾದರು.
ಲಘು ಲಾಠಿ ಪ್ರಹಾರ: ರಸ್ತೆಯಿಂದ ಸರಿದ ವಿದ್ಯಾರ್ಥಿಗಳು ನಿಲ್ದಾಣದ ಆವರಣದೊಳಗೆ ಪ್ರವೇಶಿಸಿದ್ದಾರೆ. ಆ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಬಸ್ಸಿಗೆ ಕಲ್ಲು ತೂರಿದ್ದಾರೆ. ಇದರಿಂದ ಕಿಟಕಿ ಗಾಜು ಪುಡಿಪಡಿಯಾಗಿದೆ. ಇದಲ್ಲದೇ ಚಾಲಕ ನಿಂಗಣ್ಣ ಎಂಬುವರ ಮೇಲೆ ಹಲ್ಲೆ ಮಾಡಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ತಹಬಂದಿಗೆ ತರಲು ಪೊಲೀಸರು ಕೆಲ ವಿದ್ಯಾರ್ಥಿಗಳಿಗೆ ಬೆತ್ತದ ರುಚಿ ತೋರಿಸಿದರು. ಅಲ್ಲದೇ ಘಟನೆ ಸಂಬಂಧಸಿದಂತೆ ತನಿಖೆ ನಡೆಸಲು ಪೊಲೀಸರು 15ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆದರೆ ಪೊಲೀಸರು ವಶಪಡಿಸಿಕೊಂಡ ವಿದ್ಯಾರ್ಥಿಗಳಲ್ಲಿ ಯಾರೂ ಹಲ್ಲೆ ನಡೆಸಿದವರಲ್ಲ ಎಂದು ಹಲ್ಲೆಗೊಳಗಾದ ನಿರ್ವಾಹಕಿ ಹಾಗೂ ಡ್ರೈವರ್ ಹೇಳಿದ್ದರಿಂದ ಎಲ್ಲರನ್ನೂ ಬಿಡಲಾಗಿದೆ. ಆರೋಪಿ ವಿದ್ಯಾರ್ಥಿಗಳಿಗಾಗಿ ಪೊಲೀಸರು ಮಾಹಿತಿ ಕಲೆಹಾಕುವಲ್ಲಿ ನಿರತರಾಗಿದ್ದಾರೆ. ಘಟನೆ ಕುರಿತಂತೆ ಮಾಹಿತಿ ಕಲೆಹಾಕಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ವಂಶಿಕೃಷ್ಟ ತಿಳಿಸಿದ್ದಾರೆ.
ಬಸ್ ತಡೆದರು, ಪ್ರತಿಭಟನೆ ನಡೆಸಿದರು
ಗುರುಮಠಕಲ್: ಸಮಯಕ್ಕೆ ಸರಿಯಾಗಿ ಸಾರಿಗೆ ಸಂಸ್ಥೆ ಬಸ್ ಬಾರದ್ದರಿಂದ ಶಾಲಾ ಕಾಲೇಜುಗಳಿಗೆ ಸರಿಯಾದ ವೇಳೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸಾರಿಗೆ ಸಂಸ್ಥೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಗುರುಮಠಕಲ್ದಿಂದ ಬೆಳಗ್ಗೆ 7 ಗಂಟೆಗೆ ಮಲ್ಕಾಪಲ್ಲಿಗೆ ತೆರಳಿ ವಾಹನ ಅಲ್ಲಿಂದು ಮರಳಿ 8 ಗಂಟೆಗೆ ಬಿಡುತ್ತದೆ. ಅದು ಎಲ್ಲ ಕಡೆ ಸುತ್ತಿ ಬರುವಷ್ಟರಲ್ಲಿ ಬಸ್ ತುಂಬಿ ವಿದ್ಯಾರ್ಥಿಗಳಿಗೆ ಸ್ಥಳವಿರುವುದಿಲ್ಲ.
ಈ ಕುರಿತು ಸಾಕಷ್ಟು ಬಾರಿ ಘಟಕ ವ್ಯವಸ್ಥಾಪಕರಿಗೆ ಮನವಿಯನ್ನು ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೆಚ್ಚಿನ ಬಸ್ ಓಡಿಸುವಂತೆ ಕೇಳಿದರೂ ಬಿಡುತ್ತಿಲ್ಲ.
ಒಂದು ಬಸ್ನಲ್ಲಿ 300 ವಿದ್ಯಾರ್ಥಿಗಳು ಹಿಡಿಯಲು ಸಾಧ್ಯವೇ, ನಾವು ಮನುಷ್ಯರಲ್ಲವೇ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದರು.
ಘಟಕ ವ್ಯವಸ್ಥಾಪಕರಿಗೆ ಫೋನ್ ಮೂಲಕ ಈ ರೀತಿ ತೊಂದರೆಯಾಗಿದ್ದನ್ನು ಹೇಳಿದರೆ ನಾನೇನು ಮಾಡಲಿ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ಅಧಿಕಾರಿ ಶಂಕ್ರಪ್ಪ ಅವರ ನಡತೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.
ವಿಷಯ ತಿಳಿದ ಪಪಂ ಸದಸ್ಯ ರಾಜರಮೇಶ ಗೌಡ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸಿದರು. ಅಷ್ಟರಲ್ಲಿ ಪೊಲೀಸರು ಆಗಮಿಸಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮನಮೊಲಿಸಿದರು.
ಕ್ರಮಕ್ಕೆ ಸಿಬ್ಬಂದಿ ಆಗ್ರಹ
ಚಾಲಕ ಹಾಗೂ ನಿರ್ವಾಹಕಿ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚಾಲಕ ಮತ್ತು ನಿರ್ವಾಹಕರು ಕೂಡ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಯಾಣಿಕರಿಗೆ ಉತ್ತಮವಾದ ಸೇವೆ ನೀಡುತ್ತಿದ್ದೇವೆ. ಆದರೂ ನಮ್ಮ ಮೇಲೆ ಹಲ್ಲೆ ಮಾಡುತ್ತಿರುವುದು ಖಂಡನೀಯ. ವಿದ್ಯಾರ್ಥಿಗಳೇ ನಮ್ಮ ನೌಕರರ ಮೇಲೆ ಹಲ್ಲೆ ನಡೆಸಿದ್ದು, ತಪ್ಪಿತಸ್ಥ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೆಲ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ವಶಪಡಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಅಲ್ಲದೇ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಡೆಸಿದ ಸಾರಿಗೆ ಸಂಸ್ಥೆ ನೌಕರರ ಮೇಲೆ ಶಿಶ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

