ವಿವಿಗೆ ಜಮೀನು:ರೈತರಿಗೆ ಉದ್ಯೋಗ ನೀಡಿ: ಶಾಸಕ ಮನವಿ
ಆಳಂದ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ತಮ್ಮ ಭೂಮಿಯನ್ನು ಕೊಟ್ಟ ರೈತ ಕುಟುಂಬದ ಸದಸ್ಯರಿಗೆ ಅವರ ವಿದ್ಯಾರ್ಹತೆ ಅನುಗುಣವಾಗಿ ವಿದ್ಯಾಲಯದಲ್ಲಿ ಉದ್ಯೋಗ ಒದಗಿಸಬೇಕು ಎಂದು ಶಾಸಕ ಬಿ.ಆರ್. ಪಾಟೀಲ್ ಒತ್ತಾಯಿಸಿದರು. ತಾಲೂಕಿನ ಕಡಗಂಚಿ ಬಳಿಯಿರುವ ಕೇಂದ್ರೀಯ ವಿಶ್ವವಿದ್ಯಾಲಯ ನೂತನ ಕ್ಯಾಂಪಸ್ ಉದ್ಘಾಟನೆ ಸಮಾರಂಭದಲ್ಲಿ ಈಚೆಗೆ ಪಾಲ್ಗೊಂಡು ಅವರು ಮಾತನಾಡಿದರು. ವಿಶ್ವವಿದ್ಯಾಲಯ ನಿರ್ಮಾಣಕ್ಕೆ ರೈತ ಕುಟುಂಬಗಳು ಭೂಮಿ ಕೊಟ್ಟಿದ್ದರೆ ಅವರಿಗೆ ಸಹಜವಾಗಿ ಅವರಲ್ಲಿನ ಉದ್ಯೋಗದ ಬೇಡಿಕೆ ವಿವಿ ಕುಲಪತಿಗಳು ಈಡೇರಿಸಬೇಕು. ವಿ.ವಿ.ಗೆ ಮುಂಬರುವ ದಿನಗಳಲ್ಲಿ ನೀರಿನ ಕೊರತೆ ನೀಗಿಸಲು ಸರ್ಕಾರ ಭೀಮಾ/ಬೆಣ್ಣೆತೋರಾ ನದಿಗಳಿಂದ ನೀರು ತರುವ ಯೋಜನೆ ರೂಪಿಸಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕರು ಮನವಿ ಮಾಡಿದರು.
ಐಟಿಐ, ಪಾಲಿಟೆಕ್ನಿಕ್: ಆಳಂದ ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಬೇಕು ಎಂದು ಒತ್ತಾಯಿಸಿ ಕೋಡಲಂಗರಗಾ ಜೈ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷ ಕಿರಣಕುಮಾರ್ ಆರ್. ಗುತ್ತೇದಾರ ನೇತೃತ್ವದಲ್ಲಿ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಎಸ್.ಕೆ. ಪ್ರಕಾಶ, ರಜಾಕಸಾಬ್, ಶಾಂತಯ್ಯಾಸ್ವಾಮಿ, ಸಿದ್ಧಲಿಂಗ ಪೂಜಾರಿ, ಅಶೋಕ ಜಮಾದಾರ, ಸಿದ್ದರಾಮ ಜಮಾದಾರ ಇತರರಿದ್ದರು.
ಇಂದಿನಿಂದ ಗುವಿವಿ ಪದವಿ ಪರೀಕ್ಷೆ
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯದ ಬಿಎ, ಬಿಕಾಂ, ಬಿಎಸ್ಸಿ ಇನ್ನಿತರ ಪದವಿ ಪರೀಕ್ಷೆಗಳು ಡಿ.3ರಿಂದ ಆರಂಭಗೊಳ್ಳಲಿವೆ. ಈ ಪರೀಕ್ಷೆಗಾಗಿ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗ ಮಾಡಿಕೊಂಡಿದೆ. ಬಂದೋಬಸ್ತ್ ಸಹ ಕಲ್ಪಿಸಲಾಗಿದೆ. ಪದವಿಯ 1ನೇ, 3ನೇ, 5ನೇ ಸೆಮಿಸ್ಟರ್ ಪರೀಕ್ಷೆಗಳು ನಡೆಯಲಿವೆ. ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿನ 145 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಅಲ್ಲದೆ ಈಗ ಕೃಷ್ಣದೇವರಾಯ ವಿವಿ ವ್ಯಾಪ್ತಿಯ ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿರುವ ಹಳೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೂ ಎರಡು ಜಿಲ್ಲೆಗಳಲ್ಲಿ 2 ವಿಶೇಷ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪದಾಧಿಕಾರಿಗಳು
ಜೇವರ್ಗಿ: ರಾಜ್ಯ ಸರ್ಕಾರಿ ಅಹಿಂದ ನೌಕರರ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಬಸವರಾಜ ಸಪ್ಪಣಗೋಳ್, ಜಿಲ್ಲಾಧ್ಯಕ್ಷ ಶಿವಪುತ್ರಪ್ಪ ಕೋಣಿನ್, ಪ್ರಧಾನ ಕಾರ್ಯದರ್ಶಿ ವಿಠಲ್ ವಗ್ಗನ್ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಬಸವರಾಜ ತೇಲ್ಕರ್, ಗೌರವಾಧ್ಯಕ್ಷರಾಗಿ ಪುಂಡಲಿಕ ಪಾಟೀಲ್, ಕಾರ್ಯದರ್ಶಿಯಾಗಿ ಅಲ್ಲಾಭಕ್ಷ ಗಂವ್ಹಾರ, ಖಜಾಂಚಿಯಾಗಿ ಮಹಾಂತಗೌಡ ಮಾಲಿಪಾಟೀಲ್ ಆಯ್ಕೆಯಾದರು.
ರಾಜೀವ್ ಗಾಂಧಿ ಚೈತನ್ಯ ಯೋಜನೆಗೆ ಅರ್ಜಿ ಆಹ್ವಾನ
ಗುರುಮಠಕಲ್: ಜಿಲ್ಲೆಯಲ್ಲಿ 2013-14 ನೇ ಸಾಲಿನಲ್ಲಿ ರಾಜೀವ್ ಗಾಂಧಿ ಚೈತನ್ಯ ಯೋಜನೆ ಅನುಷ್ಠಾನದ ಮೂಲಕ ಪ್ರತಿ ಗ್ರಾಪಂ, 40 ಯುವ ನಿರುದ್ಯೋಗಿಗಳನ್ನು ಸರ್ಕಾರದ ಮೀಸಲಾತಿ ನಿಯಮಗಳನ್ನು ಗ್ರಾಮ ಸಭೆಗಳಲ್ಲಿ ಆಯ್ಕೆ ಮಾಡಲಾಗುವುದು. ಡಿ.10ರೊಳಗಾಗಿ ಆಸಕ್ತ ನಿರುದ್ಯೋಗ ಯುವಕ-ಯುವತಿಯರು ತಮ್ಮ ಹೆಸರನ್ನು ಆಯಾ ಗ್ರಾಪಂಗಳಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎ. ಜಿಲಾನಿ ತಿಳಿಸಿದ್ದಾರೆ.
18ರಿಂದ 35ವರ್ಷದವರೆಗಿನ ಯುವ ಜನರಿಗಷ್ಟೆ ಮೀಸಲಾಗಿದ್ದು, ಕನಿಷ್ಠ ವಿದ್ಯಾರ್ಹತೆ 8ನೇ ತರಗತಿ ಉತ್ತೀರ್ಣರಾಗಿರಬೇಕು.
ಗ್ರಾಪಂ ವ್ಯಾಪ್ತಿಯ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಮಹಿಳೆಯರಿಗೆ ಅದ್ಯತೆ ನೀಡಲಾಗುವುದು. ಅರ್ಜಿ ನಮೂನೆಯನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿ ಕಾರ್ಯದರ್ಶಿಗಳಿಂದ ಪಡೆದು, ನಿಗದಿತ ಅವಧಿಯೊಳಗೆ ತಮ್ಮ ವ್ಯಾಪ್ತಿಯ ಗ್ರಾಪಂ ವ್ಯಾಪ್ತಿಯಲ್ಲಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ.
ಶಿಕ್ಷಣಕ್ಕೆ ಸಮಯ ಮೀಸಲಿಡಿ
ಕೆಂಭಾವಿ: ಪ್ರತಿ ವಿದ್ಯಾರ್ಥಿಯೂ ಶಿಕ್ಷಣಕ್ಕಾಗಿ ತಮ್ಮ ಸಮಯ ಮಿಸಲಿಡಬೇಕು. ಪಾಲಕರು ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದರ ಜೊತೆಗೆ, ಅವರು ಅಧ್ಯಯನದಲ್ಲಿ ತೊಡಗಿ ವಿದ್ಯಾವಂತರಾಗುವಂತೆ ಮಾಡಬೇಕು ಎಂದು ಶಾಲಾ ಶೈಕ್ಷಣಿಕ ಯೋಜನಾಧಿಕಾರಿ ಪರಮೇಶ್ವರಯ್ಯ ಹೇಳಿದರು.
ಅವರು ಇತ್ತೀಚೆಗೆ ಸಮೀಪದ ಯಾಳಗಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಯೋಜನೆ ಅಡಿಯಲ್ಲಿ ಮಕ್ಕಳಿಗೆ ವಿವಿಧ ರೀತಿ ತರಬೇತಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಎಲ್ಲಾ ಮಕ್ಕಳು ಕಡ್ಡಾಯವಗಿ ಶಾಲೆ ಕಲಿಯಬೇಕು. ತೃಪ್ತಿಕರ ಕಲಿಕೆಯನ್ನು ಪಡೆಯಬೇಕು ಎಂಬುದೇ ಈ ಯೋಜನೆಯ ಉದ್ದೇಶವಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರ್ತಿಸಿ ಅವರಿಗೆ ವಿಶೇಷ ತರಬೇತಿ ನೀಡುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ. ಇದಕ್ಕೆ ಶಾಲೆಯ ಪ್ರಧಾನಗುರು ಮತ್ತು ಎಲ್ಲ ಶಿಕ್ಷಕರ ಸಹಕಾರ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರು, ಎಸ್ಡಿಎಂಸಿ ಅಧ್ಯಕ್ಷರು, ಗ್ರಾಮದ ಪ್ರಮುಖರು, ಪಾಲಕರು-ಪೋಷಕರು ಹಾಜರಿದ್ದರು.
ಕಬಡ್ಡಿ: ವಿವಿ ತಂಡಕ್ಕೆ ಪ್ರಭು ಕಾಲೇಜು ಆಯ್ಕೆ
ಸುರಪುರ: ಇಲ್ಲಿಯ ಶ್ರೀ ಪ್ರಭು ಮಹಾವಿದ್ಯಾಲಯದ ಏಳು ಜನ ಕ್ರೀಡಾಪಟುಗಳು ಗುಲ್ಬರ್ಗ ವಿಶ್ವ ವಿದ್ಯಾಲಯದ 2013-14ನೇ ಸಾಲಿನ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಎಸ್. ಬಡಗಾ ತಿಳಿಸಿದ್ದಾರೆ.
ಕ್ರೀಡಾಪಟುಗಳಾದ ನಾರಾಯಣ, ಶರಣಬಸಪ್ಪ, ಮಾಳಪ್ಪ, ಕುಮಾರ ನಾಯಕ, ಶರಣಬಸವ, ಶರಣಪ್ಪ, ಅಮರೇಶ ಆಯ್ಕೆಯಾಗಿದ್ದು ಡಿ. 4ರಿಂದ 8ರವರೆಗೆ ಗುಂಟೂರಿನ ನಾಗಾರ್ಜುನ ವಿಶ್ವ ವಿದ್ಯಾಲಯದಲ್ಲಿ ಜರುಗುವ ಅಂತರ ವಿಶ್ವ ವಿದ್ಯಾಲಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

