ಕೆಜೆಪಿಗೆ ಕಮಕನೂರ್ ಗುಡ್ಬೈ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಡಿ.7
ಕೋಲಿ ಸಮಾಜದ ಮುಖಂಡ, ಶಾಶ್ವತ ಹಿಂದುಳಿದ ಆಯೋಗದ ಮಾಜಿ ಸದಸ್ಯ ತಿಪ್ಪಣ್ಣ ಕಮಕನೂರ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷ ತೊರೆದಿದ್ದಾರೆ. ಇವರು ಕೆಜೆಪಿಯಲ್ಲಿನ ತಮ್ಮ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೂ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿದ್ದಾಗಿ ಶನಿವಾರ ಪ್ರಕಟಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ತಾವಾಗಿಯೇ ಮನೆಗೆ ಬಂದು ಕೆಜೆಪಿ ಬೆಂಬಲಿಸುವಂತೆ ಕೋರಿದ್ದರಿಂದ ತಾವು ಅವರೊಂದಿಗೆ ಇದ್ದುದಾಗಿ ಹೇಳಿದ ಕಮಕನೂರ್, ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪನವರೇ ಕೆಜೆಪಿ ಮುಂದುವರಿಸುವ, ಬಿಜೆಪಿ ಸೇರುವ ವಿಚಾರದಲ್ಲಿ ಗೊಂದಲದ ಪರಿಸ್ಥಿತಿಯಲ್ಲಿದ್ದಾರೆ. ಇದರಿಂದ ತಮಗೆ ಬೇಸರವಾಗಿದ್ದು ರಾಜಿನಾಮೆಗೆ ಕಾರಣವಾಯಿತೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಮ್ಮಂಥವರ ಪಾಡೇನು?: ಕೆಜೆಪಿಯಲ್ಲಿ ಸಾಮಾಜಿಕ ಸಮಾನತೆಗೆ ಬೆಲೆಯೇ ಇರಲಿಲ್ಲ ಎಂಬುದು ಮೇ ತಿಂಗಳ ಅಸೆಂಬ್ಲಿ ಚುನಾವಣೆಯಲ್ಲಿ ಅನುಭವಕ್ಕೆ ಬಂತು. ಆದಾಗ್ಯೂ ಸಮಾಜದ ಹಿತಾಸಕ್ತಿಗೋಸ್ಕರ ತಾವು ಕೆಜೆಪಿಯಲ್ಲಿ ಮುಂದುವರಿದಿದ್ದಾಗಿ ಹೇಳಿದ ಅವರು, ಯಡಿಯೂರಪ್ಪನವರೇ ಕೆಜೆಪಿ ತೊರೆಯುವ ತಯಾರಿಯಲ್ಲಿರುವಾಗ ಅವರನ್ನು ನಂಬಿ ಹೋಗಿರುವ ತಮ್ಮಂಥವರ ಪಾಡೇನು ಎಂದು ಪ್ರಶ್ನಿಸಿದರು.
ಬಿಜೆಪಿ, ಕಾಂಗ್ರೆಸ್ಗೆ ಪರ್ಯಾಯವಾಗಿ ಕೆಜೆಪಿ ಕಟ್ಟುವ ಮಾತನ್ನಾಡಿದ ಯಡಿಯೂರಪ್ಪ ಕೊನೆವರೆಗೂ ಈ ನಿಲುವಿಗೆ ಬದ್ಧವಾಗಲಿಲ್ಲ. ಎನ್ಡಿಎ, ನರೇಂದ್ರ ಮೋದಿ ಅವರನ್ನು ಹೊಗಳಲು ಶುರುವಿಟ್ಟುಕೊಂಡರು. ಈಗಂತೂ ಬಿಜೆಪಿಗೆ ಹೋಗುವ ದಟ್ಟ ಸುದ್ದಿ ಇದೆ. ಇದರಿಂದ ನಿರ್ಮಾಣವಾಗಿರುವ ಗೊಂದಲದಿಂದ ಹೊರಬರಲು ರಾಜಿನಾಮೆಯೊಂದೇ ಮಾರ್ಗವೆಂದು ತಾವು ಹೊರಬಂದಿದ್ದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೋಲಿ ಸಮಾಜ ಸಂಘಟನೆ: ಮಾಜಿ ಎಂಎಲ್ಸಿ ವಿಠ್ಠಲ್ ಹೆರೂರ್ ನಿಧನದಿಂದಾಗಿ ಕೋಲಿ ಸಮಾಜಕ್ಕೆ ನಷ್ಟವಾಗಿದೆ. ಹೆರೂರ್ ತಮ್ಮ ಕೊನೆಯ ದಿನಗಳಲ್ಲಿ ಸಮಾಜ ಸಂಘಟನೆಯ ಹೊಣೆಗಾರಿಕೆ ಬಗ್ಗೆ ತಮ್ಮೊಂದಿಗೆ ಮಾತುಕತೆ ನಡೆಸಿದ್ದು ಇದಕ್ಕೆ ಮಾಜಿ ಶಾಸಕ ಹೆಬ್ಬಾಳ ವಿಶ್ವನಾಥ ಅವರೇ ಸಾಕ್ಷಿ. ಗೆಳೆಯ ಹೆರೂರ್ ಅವರ ಆದೇಶದಂತೆ ತಾವು ಯಾವುದೇ ರಾಜಕೀಯ ಪಕ್ಷ ಸೇರದೆ ಸಮಾಜ ಸಂಘಟನೆಗಾಗಿ ಬರುವ ದಿನಗಳಲ್ಲಿ ದುಡಿಯುವುದಾಗಿ ಹೇಳಿದರು.
ಬಂಜಾರಾ ಅಭಿವೃದ್ಧಿ ನಿಗಮ ಮಾದರಿಯಲ್ಲಿ ಸರ್ಕಾರ ಕೋಲಿ ಸಮಾಜಕ್ಕೂ ವಿಠ್ಠಲ್ ಹೆರೂರ್ ಹೆಸರಲ್ಲಿ ಅಭಿವೃದ್ಧಿ ನಿಗಮ ರಚಿಸಬೇಕು, ಗುಲ್ಬರ್ಗದಲ್ಲಿ ಹೆರೂರ್ ಪುತ್ಥಳಿ ಸ್ಥಾಪನೆಗೂ ಯತ್ನಿಸಲಾಗುತ್ತದೆ, ಅದಕ್ಕಾಗಿ ಪಾಲಿಕೆಗೆ ಅನುಮತಿ ಕೇಳುತ್ತೇವೆ. ಹೆರೂರ್ ಸ್ಮರಣೆಗಾಗಿ ಪಾರಿತೋಷಕಗಳನ್ನು ಸ್ಥಾಪಿಸಲಾಗುತ್ತದೆ ಎಂದ ಕಮಕನೂರ್ ಶೀಘ್ರವೇ ಧರಂಸಿಂಗ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಹ್ವಾನಿಸಿ ಹೆರೂರ್ ಸ್ಮರಣೋತ್ಸವ ನಡೆಸಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

