ಬಿಜೆಪಿ ರಸ್ತೆ ತಡೆ; ಮೆರವಣಿಗೆ
ಕ.ಪ್ರ. ವಾರ್ತೆ, ಚಿತ್ತಾಪುರ, ಡಿ.17
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯವಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕ್ಷೇತ್ರದ ಶಾಸಕರು ಅಭಿವೃದ್ಧಿ ಮರೆತಿದ್ದಾರೆ ಎಂದು ಮಾಜಿ ಸಚಿವ ರೇವುನಾಯಕ ಬೆಳಮಗಿ ಹೇಳಿದರು.
ತಾಲೂಕಿನಲ್ಲಿನ ಅಕ್ರಮ ಮರಳು ಸಾಗಣೆ ತಡೆಗಟ್ಟಬೇಕು ಹಾಗೂ ಸ್ಥಗಿತಗೊಂಡ ರಸ್ತೆ ಕಾಮಗಾರಿಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಿಜೆಪಿ ತಾಲೂಕು ಯುವ ಮೋರ್ಚಾ ಘಟಕ ವತಿಯಿಂದ ಮಂಗಳವಾರ ಲಾಡ್ಜಿಂಗ್ ಕ್ರಾಸ್ ಬಳಿ ನಡೆಸಿದ ರಸ್ತೆ ತಡೆ ವೇಳೆ ಅವರು ಮಾತನಾಡಿದರು.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮ: ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ತಾಲೂಕಿನ ಬಾಗೋಡಿ, ಬೆಳಗುಂಪಾ, ದಂಡೋತಿ, ಮುತ್ತಿಗಿ ಸೇರಿದಂತೆ ವಿವಿಧೆಡೆ ರಾಜಾರೋಷವಾಗಿ ಅಕ್ರಮ ಮರಳು ಸಾಗಣೆ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಬಿಜೆಪಿ ಸರ್ಕಾರದಲ್ಲಿನ ಕಾಮಗಾರಿಗಳು ಸ್ಥಗಿತಗೊಂಡಿವೆ. ತಾಲೂಕಿನಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಆರೇಳು ತಿಂಗಳಾದರೂ ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಕ್ರಮ ದಂಧೆಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ಶಾಸಕರು ಕ್ಷೇತ್ರದಲ್ಲಿ ಕಾಣಿಸುತ್ತಿಲ್ಲ. ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಅಕ್ರಮ ಮರಳು ಹಾಗೂ ಮದ್ಯ ಮಾರಾಟ ತಡೆಯಬೇಕು, ಸ್ಥಗಿತಗೊಂಡ ನಾಗಾವಿ ಮಹಾದ್ವಾರ ಹಾಗೂ ಇತರ ರಸ್ತೆ ಕಾಮಗಾರಿ, ತಾಂಡಾ ಅಭಿವೃದ್ಧಿ ನಿಗಮದ ಕಾಮಗಾರಿಗಳನ್ನು ಆರಂಭಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ, ಮುಕುಂದ ದೇಶಪಾಂಡೆ, ಜಿಲ್ಲಾ ಮೋರ್ಚಾ ಅಧ್ಯಕ್ಷ ಪರುಶುರಾಮ, ಮಲ್ಲಿಕಾರ್ಜುನ ಎಮ್ಮೆನೋರ ಮಾತನಾಡಿದರು.
ರಸ್ತೆ ತಡೆ ಮೆರವಣಿಗೆ: ತಾಲೂಕು ಯುವ ಮೋರ್ಚಾ ಅಧ್ಯಕ್ಷ ತಮ್ಮಣ್ಣ ಡಿಗ್ಗಿ ನೇತೃತ್ವದಲ್ಲಿ ರಸ್ತೆತಡೆ ಪ್ರತಿಭಟನೆ ಮೆರವಣಿಗೆ ನಡೆಯಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಚಂದ್ರಶೇಖರ ಪರಸರೆಡ್ಡಿ, ತಾಲೂಕಾಧ್ಯಕ್ಷ ಶಶಿಕಾಂತ ಪಾಟೀಲ್, ಬಾಲಾಜಿ ಬುರುಬುರೆ, ಅಣ್ಣಾರಾವ ಬಾಳಿ, ವಕ್ತಾರ ಗಿರೀಶ ಭಜಂತ್ರಿ, ಶರಣು ಜ್ಯೋತಿ, ಪುರಸಭೆ ಸದಸ್ಯ ಸುರೇಶ ಬೆನಕನಳ್ಳಿ, ದಶರಥ ದೊಡ್ಮನಿ, ರಾಮದಾಸ ಚವ್ಹಾಣ, ಮುಕುಂದ ಕೊಡದೂರ, ನಾಗರಾಜ ಹೂಗಾರ, ರವಿ ಹಡಪದ, ಪರಮೇಶ್ವರ ಬಾಗೋಡಿ, ಸಿದ್ರಾಮಪ್ಪ ರೇಷ್ಮಿ, ಅಂಬರೀಷ ಸುಲೆಗಾಂವ, ವಿಷ್ಣು ಜಿತುರೆ, ಚಂದ್ರು ಕಾಳಗಿ ಸೇರಿದಂತೆ ನೂರಾರು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಸಂಚಾರ ಸ್ಥಗಿತ: ರಸ್ತೆ ತಡೆಯಿಂದಾಗಿ ಒಂದು ತಾಸುವರೆಗೆ ಲಾಡ್ಜಿಂಗ್ ಕ್ರಾಸ್ ಬಳಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರಯಾಣಿಕರು ಪರದಾಡಬೇಕಾಯಿತು. ನಂತರ ಪ್ರತಿಭಟನೆ ಮೆರವಣಿಗೆಯೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿಗೆ ತಲುಪಿ ತಹಸೀಲ್ದಾರ್ ಮಲ್ಲೇಶ ತಂಗಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮೋದಿ ಅಭಿವೃದ್ಧಿ ಹರಿಕಾರ: ಬೆಳಮಗಿ
ಚಿತ್ತಾಪುರ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಭಿವೃದ್ಧಿ ಹರಿಕಾರರಾಗಿದ್ದಾರೆ. ಅವರು ದೇಶದ ರಕ್ಷಣೆಗಾಗಿ ಪ್ರಧಾನಿಯಾಗಬೇಕೆಂದು ಮಾಜಿ ಸಚಿವ ರೇವು ನಾಯಕ ಬೆಳಮಗಿ ಹೇಳಿದರು.
ತಾಲೂಕಿನ ರಾವೂರ ಗ್ರಾಮದಲ್ಲಿ ನರೇಂದ್ರ ಮೋದಿ ಅಭಿಮಾನಿಗಳ ಬಳಗದ ಸಂಘ ಉದ್ಘಾಟಿಸಿ ಮಾತನಾಡಿ, ಮೋದಿ ನಿಸ್ವಾರ್ಥ ಸೇವಕರಗಿದ್ದಾರೆ. ಅವರ ಸಾಧನೆಯನ್ನು ಜನರಿಗೆ ತಿಳಿಸಲು ಯುವಕರು ಅವರ ಅಭಿಮಾನಿ ಬಳಗ ಸ್ಥಾಪಿಸಿರುವುದು ಶ್ಲಾಘನೀಯವಾದದ್ದು. ಯುವಕರು ದೇಶದ ದೊಡ್ಡ ಶಕ್ತಿ. ದೇಶವನ್ನು ಬದಲಾಯಿಸುವ ಶಕ್ತಿ ಯುವಕರಲ್ಲಿದೆ. ಮೋದಿಯಂತೆ ಯುವಕರು ನಿಸ್ವಾರ್ಥ ಸೇವೆಯಿಂದ ಬೆಳಸಿಕೊಂಡು ದೇಶದ ಅಭಿವೃದ್ಧಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ ಮಾತನಾಡಿ, ದೇಶದ ಅಭಿವೃದ್ಧಿಗೆ ಮೋದಿ ಸೇವೆ ಅಗತ್ಯವಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮೋದಿಯ ಸಂದೇಶಗಳನ್ನು ಪ್ರಚಾರ ಮಾಡಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ಮಾಡಬೇಕೆಂದು ಕರೆ ನೀಡಿದರು.
ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿ ಶರಣು ಜ್ಯೋತಿ ಮಾತನಾಡಿದರು. ಚೆನ್ನಣ್ಣ ಬಾಳಿ, ಶರಪ್ಪ ಸಣಬೋ, ಹರಿ ಗಲ್ಹಾಂಡೆ, ದೇವಿಂದ್ರಪ್ಪ ತಳವಾರ, ಬಸಲಿಂಗಪ್ಪ ಬಾಳಿ, ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣರಾವ ಬಾಳಿ, ಸಾಹೇಬಗೌಡ, ಕಾಶಿನಾಥ, ರಾಜು, ಮಲ್ಲು ಮಾಲಗತ್ತಿ, ರಾಮು, ಲೋಕೇಶ, ಶುಭಂ, ವೆಂಕಟೇಶ, ಶಿವುಕುಮಾರ್, ಶರಣು ಅವಿನಾಶ, ಮಲ್ಲು ಹಳ್ಳಿ ಸೇರಿದಂತೆ ಯುವಕರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

