'ಗುಲ್ಬರ್ಗ, ಬೀದರ್ ಹೂಡಿಕೆ ವಲಯಕ್ಕೆ ಕೇಂದ್ರ ಸಮ್ಮತಿ'
ಕ.ಪ್ರ. ವಾರ್ತೆ ಬೆಂಗಳೂರು ಡಿ.23
ಗುಲ್ಬರ್ಗ ಹಾಗೂ ಬೀದರ್ನಲ್ಲಿ ಹೂಡಿಕೆ ವಲಯ ಪ್ರಾರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮಾ ತಿಳಿಸಿದ್ದಾರೆ.
ಹೂಡಿಕೆ ವಲಯ ಪ್ರಾರಂಭಿಸಲು ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಇದರೊಂದಿಗೆ ರಾಜ್ಯದಲ್ಲಿನ ಹೂಡಿಕೆ ವಲಯಗಳ ಸಂಖ್ಯೆ ಮೂರಕ್ಕೆ ಏರಿದಂತಾಗಿದೆ. ಈಗಾಗಲೇ ತುಮಕೂರು ಹೂಡಿಕೆ ವಲಯಕ್ಕೂ ಕೇಂದ್ರ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರ ಇನ್ನು ಹೆಚ್ಚಿನ ಹೂಡಿಕೆ ವಲಯಗಳನ್ನು ಸ್ಥಾಪಿಸಲು ಪ್ರಸ್ತಾವ ಕಳಿಸಿದರೆ ಪರಿಶೀಲಿಸಲಾಗುವುದು ಎಂದು ಅವರು ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿದ ಬಳಿಕ ಹೇಳಿದರು. ಈ ಹೂಡಿಕೆಗಳಿಂದ ಉದ್ಯೋಗಾವಕಾಶ ಹೆಚ್ಚಲಿದೆ. ಇದರ ಜತೆಗೆ ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ನೆರವಾಗುತ್ತದೆ. ಮತ್ತೊಂದೆಡೆ ಬೆಂಗಳೂರು ಹೊರತಾಗಿ ಇತರ ಪ್ರದೇಶಗಳಿಗೂ ಕೈಗಾರಿಕೆಯನ್ನು ವಿಸ್ತರಿಸಲು ಇದು ಸಹಾಯವಾಗಲಿದೆ ಎಂದು ಆನಂದ ಶರ್ಮಾ ಅಭಿಪ್ರಾಯಪಟ್ಟರು.
ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನಲ್ಲಿ ಐಟಿಐಪಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ದೊಡ್ಡ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಕೈಗಾರಿಕೆ ವಲಯಗಳಿಗೆ ನೀಡುವ ಎಲ್ಲ ಸವಲತ್ತುಗಳನ್ನು ಒದಗಿಸಲು ಈ ಯೋಜನೆಯ ವ್ಯಾಪ್ತಿಯ ಕೈಗಾರಿಕೆಗಳಿಗೆ ನೀಡಲಾಗುತ್ತದೆ.
ಇದರ ಜತೆಗೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿರುವ ಕೆಟಿಪಿಒ ಅಭಿವೃದ್ಧಿಗೆ ಕೇಂದ್ರ ಸರ್ಕಾರ 20 ಕೋಟಿ ನೀಡಲು ನಿರ್ಧರಿಸಿದೆ. ಇದರಿಂದ ಪ್ರದರ್ಶನ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಕೈಗಾರಿಕೆ ಅಭಿವೃದ್ಧಿ ಜತೆ ಆಹಾರ ಪದಾರ್ಥಗಳ ಉದ್ಯಮವನ್ನು ಬೆಳೆಸಬೇಕಿದೆ. ಸರ್ಕಾರದ ವತಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಶೀತಲೀಕರಣ ಘಟಕ ಸ್ಥಾಪನೆಗೆ ಪ್ರಸ್ತಾವ ಸಲ್ಲಿಸಿದರೆ ಒಪ್ಪಿಗೆ ಕೊಡಲು ಕೇಂದ್ರ ತಯಾರಿದೆ. ಹಾವೇರಿಯಲ್ಲಿ ಮೆಣಸಿನಕಾಯಿ ಪಾರ್ಕ್ ಮಾಡುತ್ತಿರುವಂತೆ ಸಾಂಬಾರು ಪದಾರ್ಥ, ಕರಿಮೆಣಸು ಹಾಗೂ ಇತರ ಆಹಾರ ಪದಾರ್ಥಗಳ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತಿಸಬೇಕಿದೆ. ಇದರಿಂದ ಕೃಷಿಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಬಹುದು ಎಂದರು.
ಇದೇ ಹಿನ್ನೆಲೆಯಲ್ಲಿ ಬಹು ಬ್ರಾಂಡ್ಗಳ ಮಾರಾಟ ಉದ್ಯಮಕ್ಕೆ ಅನುಮತಿ ನೀಡಲಾಗಿದ್ದು, ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಟಾಟಾ ಟಿಸ್ಕೋ ಸಂಸ್ಥೆಯು ಇದರ ಜವಾಬ್ದಾರಿ ಹೊಂದಿದೆ. ಈ ಯೋಜನೆಗೆ 110 ಮಿಲಿಯನ್ ಡಾಲರ್ ಹಣವು ಹೂಡಿಕೆಯಾಗುತ್ತಿದ್ದು, ಇದರಲ್ಲಿ ಶೇ.50ರಷ್ಟನ್ನು ಕೃಷಿ ಕ್ಷೇತ್ರದ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಬೇಕಿದೆ ಎಂದು ಅವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

