ಗುಲ್ಬರ್ಗಾ

'ವ್ಯಕ್ತಿತ್ವ ವಿಕಾಸಕ್ಕೆ ಏಕಾಗ್ರತೆ, ನಿರಂತರ ಪ್ರಯತ್ನ ಅಗತ್ಯ'

Published On :

ಯಾದಗಿರಿ: ವ್ಯಕ್ತಿತ್ವ ವಿಕಾಸಕ್ಕೆ ಏಕಾಗ್ರತೆ, ಸಾಧನೆ, ನಿರಂತರ ಪ್ರಯತ್ನ ಅವಶ್ಯ. ಮಾನಸಿಕ ಸ್ವಾಸ್ಥ್ಯ ಹೊಂದಿದಾಗ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ವೈದ್ಯಾಧಿಕಾರಿ ಡಾ. ಬಿ.ಟಿ. ಪಾಲಾದಿ ಹೇಳಿದರು.
ತಾಲೂಕಿನ ಸೈದಾಪುರದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ವಾರ್ತಾ ಇಲಾಖೆ, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಕಿರಣ ರೂರಲ್ ರಿಕನ್ಸಟ್ರಕ್ಷನ್ ಸೊಸೈಟಿ ಇವುಗಳ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸ ವಿಚಾರ ಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು.
ವ್ಯಕ್ತಿತ್ವ ವಿಕಾಸಕ್ಕೆ ಶಿಕ್ಷಣ ನೆರವು: ಶಿಕ್ಷಣವು ವ್ಯಕ್ತಿತ್ವ ವಿಕಾಸಕ್ಕೆ ನೆರವು ನೀಡುತ್ತದೆ. ನಾವು ಉತ್ತಮ ಆಲೋಚನೆ, ಸಮತೋಲನ ಆಹಾರ, ನಿಯಮ ಬದ್ಧ ಉಸಿರಾಟದಂತಹ ಚಟುವಟಿಕೆಗಳ ಮೂಲಕ ಉತ್ತಮ ಆರೋಗ್ಯದೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಮಹಾಭಾರತ, ರಾಮಾಯಣದ ಕೆಲ ಸಂದರ್ಭಗಳನ್ನು ಹೋಲಿಸಿ ಮಕ್ಕಳಿಗೆ ವ್ಯಕ್ತಿತ್ವ ವಿಕಾಸದ ಬಗ್ಗೆ ಉದಾಹರಣೆಗಳೊಂದಿಗೆ ಮನವರಿಕೆ ಮಾಡಿದರು.
ಡಿಇಡಿ ಕಾಲೇಜಿನ ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಮಾತನಾಡಿ, ಶಿಕ್ಷಣ ಮಕ್ಕಳ ವ್ಯಕ್ತಿತ್ವದ ವಿಕಾಸದ ಮೇಲೆ ಪರಿಣಾಮ ಬೀರುತ್ತದೆ. ಶಾಲೆಯಲ್ಲಿನ ಎನ್ನೆಸ್ಸೆಸ್ ಚಟುವಟಿಕೆ, ಕವಾಯತು, ಚರ್ಚಾ ಕೂಟ, ರಸಪ್ರಶ್ನೆ ಕಾರ್ಯಕ್ರಮಗಳು ಮಕ್ಕಳ ಜ್ಞಾನಾತ್ಮಕ, ದೈಹಿಕ ಹಾಗೂ ಬೌದ್ಧಿಕ ವಿಕಾಸಕ್ಕೆ ಸಹಾಯಕವಾಗುತ್ತವೆ. ಶಿಕ್ಷಕರು ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.
ಮಕ್ಕಳ ಸೃಜನಶೀಲತೆ ಪ್ರೋತ್ಸಾಹಿಸಿ: ಸಂಸ್ಥೆಯ ಅಧ್ಯಕ್ಷ ಸಿದ್ದಣಗೌಡ ಪೊಲೀಸ್ ಪಾಟೀಲ ಕಡೇಚೂರು ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಲ್ಲಿನ ಸೃಜನಾತ್ಮಕತೆಯನ್ನು ನಾವು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕು. ಎಲ್ಲ ಮಕ್ಕಳ ಬೌದ್ಧಿಕ ಮಟ್ಟ ಒಂದೇ ರೀತಿಯಾಗಿರುವುದಿಲ್ಲ. ಆದರೆ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಅವರ ಭವಿಷ್ಯ ರೂಪಿಸಲು ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇದು ಮಕ್ಕಳಿಗೆ ಮಾರ್ಗದರ್ಶನ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಹಾಗೂ ಎಪಿಎಂಸಿ ಅಧ್ಯಕ್ಷ ಭೀಮಣಗೌಡ ಕ್ಯಾತನಾಳ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ವಿಜ್ಞಾನಿಗಳ ಕೊರತೆ ಕಂಡುಬುರುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಬೇಕು. ಅವರಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಬೇಕಾಗಿದೆ ಎಂದರು.
ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ ಇದ್ದರು. ಮುಖ್ಯಾಧ್ಯಾಪಕ ಲಿಂಗಾರಡ್ಡಿ ನಾಯಕ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಸುಲೇಮಾನ ನದಾಫ್ ಸ್ವಾಗತಿಸಿದರು. ಕಾಶೀನಾಥ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.