ಇಕ್ಕಟ್ಟಿನಿಂದ ಪಾರಾಯ್ತು ಎನ್ವಿ ಶಿಕ್ಷಣ ಸಂಸ್ಥೆ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.11
ನೇಮಕಾತಿಯಲ್ಲಿ ಅವ್ಯವಹಾರ, ವಿದ್ಯಾರ್ಥಿಗಳ ಶುಲ್ಕ ಸಂಗ್ರಹದಲ್ಲಿನ ಅಕ್ರಮ ಸೇರಿದಂತೆ ಹಲವು ಹಂತಗಳಲ್ಲಿ ಅವ್ಯವಹಾರಗಳಾಗಿವೆ ಎಂದು ಆರೋಪಗಳನ್ನು ಹೊರಿಸಿ ಶತಮಾನ ಕಂಡ ಪ್ರತಿಷ್ಠಿತ ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆ ವಿರುದ್ಧ 2011 ರಲ್ಲೇ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದ ಕೈಲಾಸನಾಥ ದಿಕ್ಷಿತ್ ಅವರು ಗುರುವಾರ ಗುಲ್ಬರ್ಗದಲ್ಲಿ ಲೋಕಾಯುಕ್ತ ವೈ. ಭಾಸ್ಕರರಾವ್ ನಡೆಸಿದ್ದ ಅಹವಾಲುಗಳ ವಿಚಾರಣೆ ಕಾಲದಲ್ಲಿ ಖುದ್ದು ಹಾಜರಾಗಿ ತಾವು ಎನ್ವಿ ಸಂಸ್ಥೆ ನೀಡಿದ್ದ ದೂರನ್ನು ದಿಢೀರನೆ ವಾಪಸ್ ಪಡೆದರು.
ಈ ಬೆಳವಣಿಗೆಯಿಂದಾಗಿ ಎನ್ವಿ ಶಿಕ್ಷಣ ಸಂಸ್ಥೆ ತನ್ನ ವಿರುದ್ಧ ಬೀಸಲಾರಂಭಿಸಿದ್ದ ಲೋಕಾಯುಕ್ತ ದೊಣ್ಣೆಯಿಂದ ಬಚಾವ್ ಆಗಿದೆ. ಏಕೆಂದರೆ ಎನ್ವಿ ಸಂಸ್ಥೆ ಸಿಬ್ಬಂದಿ ನೇಮಕಾತಿಯಲ್ಲಿ ಶಿಕ್ಷಣ ಕಾಯ್ದೆ ಉಲ್ಲಂಘಿಸಿದೆ ಎಂದು, ಶರದಾ ಟ್ರಸ್ಟ್ (ಎಸ್ಎಲ್ಕೆಟಿ) ರಚಿಸಿ ಅನಧಿಕೃತವಾಗಿ ಹಣ ಸಂಗ್ರಹಿಸುತ್ತಿದೆ ಎಂದು ದೀಕ್ಷಿತ್ ದೂರಿದ್ದರು.
ದೀಕ್ಷಿತ್ರಿಂದ ಅಫಿದಾವಿತ್ ಸಲ್ಲಿಕೆ: ಇದಲ್ಲದೆ ಸಂಸ್ಥೆಯಲ್ಲಿ ಹಲವು ಹಂತಗಳಲ್ಲಿ ಆಗಿರುವ ಅಕ್ರಮಗಳೆಲ್ಲದರ ದಾಖಲಾತಿಗಳನ್ನು ತಮ್ಮ 56 ಪುಟಗಳ ದೂರಿನೊಂದಿಗೆ ಲಗತ್ತಿಸಿ 2011ರಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿ ವಿಚಾರಣೆಗೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಲೋಕಾಯುಕ್ತ ಎನ್ವಿ ಸಂಸ್ಥೆ ವಿರುದ್ಧದ ಅಕ್ರಮಗಳ ದೂರನ್ನು ವಿಚಾರಣೆಗೆ ಅಂಗೀಕರಿಸಿತ್ತಲ್ಲದೆ ಕಳೆದ ತಿಂಗಳಷ್ಟೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮತ್ತು ಎನ್ವಿ ಸಂಸ್ಥೆಗೆ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ದೂರ ವಾಪಸ್: ಇಲ್ಲಿನ ಪಂಡಿತ ರಂಗಮಂದಿರದಲ್ಲಿ ಗುರುವಾರ ಸದರಿ ಪ್ರಕರಣದ ವಿಚಾರಣೆ ಬರುತ್ತಿದ್ದಂತೆಯೇ ಖುದ್ದು ದೂರುದಾರರಿಗೆ ನಿರ್ಮಿಸಿದ್ದ ವೇದಿಕೆಗೆ ಹೋದ ಕೈಲಾಸ ದೀಕ್ಷಿತ್ ತಾವು ಎನ್ವಿ ಸಂಸ್ಥೆಯ ವಿರುದ್ಧದ ಈ ದೂರನ್ನು ವಾಪಸ್ ಪಡೆಯುತ್ತಿರುವುದಾಗಿ ಹೇಳಿದರು. ಜೊತೆಗೇ ತಾವು ತಂದಿದ್ದ ಪ್ರಮಾಣಪತ್ರ (ಅಫಿದಾವಿತ್) ಲೋಕಾಯುಕ್ತರಿಗೆ ಸಲ್ಲಿಸಿದರು.
ಈ ಬೆಳವಣಿಗೆಯನ್ನು ಕಂಡ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರರಾವ್ ಸಭಾಂಗಣದಲ್ಲಿ ತಮ್ಮ ಮುಂದೆ ಕೈಲಾಸನಾಥ ದಿಕ್ಷೀತ್ ಅವರು ಹಾಜರಾಗಿ ದೂರನ್ನೇ ವಾಪಸ್ ಪಡೆಯುವ ಹೇಳಿಕೆ ನೀಡಿದಾಕ್ಷಣ ಅಲ್ಲೇ ಇದ್ದ ಅಧಿಕಾರಿಗಳಿಗೆ ಖುದ್ದು ದೂರುದಾರರೇ ಹೀಗೆ ಹೇಳಿಕೆ ನೀಡಿದ್ದಾರೆ. ಈ ದೂರನ್ನು ಕ್ಲೋಸ್ ಮಾಡಿಬಿಡಿ ಎಂದು ಆದೇಶಿಸಿದರು.
ಗಂಭೀರ ಆರೋಪಗಳಿದ್ದವು: ಕೈಲಾಸ ದೀಕ್ಷಿತ್ 2007 ರಲ್ಲಿಯೇ ಎನ್ನಿ ಸಂಸ್ಥೆ ವಿರುದ್ಧ ಗಂಭೀರ ಆರೋಪಗಳನ್ನು ಸಾಕ್ಷಾಧಾರಗಳ ಸಮೇತ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಗಮನ ಸೆಳೆದಿದ್ದರು. ಇವರ ಆರೋಪಗಳ ಆಧಾರದಲ್ಲಿ ಸಾಶಿಇ ನಡೆಸಿದ್ದ ಎಲ್ಲ ವಿಚಾರಣೆಗಳಲ್ಲಿ ಎಲ್ಲವು ಬಹುತೇಕ ಸಾಬೀತಾಗಿದ್ದವು.
ಆದಾಗ್ಯೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿಯೇ ಇರುವ ಅಧಿಕಾರಿಗಳು ಹಲವರು ಈ ದೂರಿನ ಹಿನ್ನೆಲೆಯಲ್ಲಿ ಯಾವುದೇ ಶಿಸ್ತುಕ್ರಮ ಜರುಗಿಸದೆ ಸಂಸ್ಥೆಯೊಂದಿಗೆ ಕೈಜೋಡಿಸಿದ್ದರಿಂದ ದೀಕ್ಷಿತ್ ವಿಚಲಿತರಾಗಿದ್ದರಲ್ಲದೆ ತಮಗೆ ನ್ಯಾಯಬೇಕು ಎಂದು 2011ರಲ್ಲಿ ಲೋಕಾಯುಕ್ತ ಕದ ತಟ್ಟಿದ್ದರು.
ಆಗಿನ ಲೋಕಾಯುಕ್ತ ಶಿವರಾಜ ಪಾಟೀಲರು ಗುಲ್ಬರ್ಗದಲ್ಲಿ ಅಹವಾಲು ಆಲಿಕೆಗೆ ಬಂದಾಗ ಈ ದೂರನ್ನು ಸಲ್ಲಿಸಿದ್ದ ದೀಕ್ಷಿತ್ ನ್ಯಾಯ ಕೋರಿದ್ದರು.
ಹೊಸ ಸಂಚಲನ ಮೂಡಿಸಿತ್ತು: ಕೊನೆಗೂ ಲೋಕಾಯುಕ್ತ ಸದಜರಿ ದೂರಿನ ವಿಚಾರಣೆ ಖುದ್ದು ನಡೆಸಲು ತೀರ್ಮಾನಿಸಿ ನೋಟೀಸ್ ನೀಡಿದಾಗಲೇ ಸದರಿ ಪ್ರಕರಣದ ಗಂಭೀರತೆ ಅರಿವಿಗೆ ಬಂದಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಯುಕ್ತಾಲಯ ಹಾಗೂ ಎನ್ವಿ ಸಂಸ್ಥೆಗಳಲ್ಲಿ ಈ ಪ್ರಕರಣ ಹೊಸ ಸಂಚಲನವನ್ನೇ ಹುಟ್ಟುಹಾಕಿತ್ತು.
ಈ ಪ್ರಕರಣದಲ್ಲಿ ದೂರುದಾರ ದೀಕ್ಷಿತ್ ಸಂಸ್ಥೆಯಲ್ಲಿನ ಅಕ್ರಮಗಳಿಂದಾಗಿ ಸಾಮಾನ್ಯ ಜನರಿಗೆ ನ್ಯಾಯ ದೊರಕುತ್ತಿಲ್ಲವೆಂದು ಆರೋಪಿಸಿದ್ದರಲ್ಲದೆ ಆಡಳಿತಾಧಿಕಾರಿ ನೇಮಕದ ಬೇಡಿಕೆಯನ್ನೂ ಇಟ್ಟಿದ್ದರು.
ಆದರೆ ದಿಢೀರನೆ ವಿಚಾರಣೆಯ ಹಂತದಲ್ಲಿ ಕೈಲಾಸನಾಥ ದಿಕ್ಷಿತ್ ತಮ್ಮ ದೂರನ್ನು ವಾಪಸ್ ಪಡೆಯುವ ಮೂಲಕ ಶಿಕ್ಷಣ ಪ್ರೇಮಿಗಳು, ಸಮಾಜ ಸೇವಕರು ಅನೇಕರ ಹುಬ್ಬು ಮೇಲೇರುವಂತೆ ಮಾಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಎನ್ವಿ ಸಂಸ್ಥೆ ವಿರುದ್ಧದ ಈ ಪ್ರಕರಣದಲ್ಲಿ ದೂರುದಾರರು ವರ್ತಿಸಿದ ರೀತಿ ಇದೀಗ ಚರ್ಚೆಗೆ ಗ್ರಾಸವಾಗಿದೆ.
ದೂರು ನೀಡಿದವರೇ ಗೈರು!
ಗುಲ್ಬರ್ಗ: ಇಲ್ಲಿನ ಪಂಡಿತ ರಂಗ ಮಂದಿರದಲ್ಲಿ ಲೋಕಾಯುಕ್ತ ನ್ಯಾ. ವೈ. ಭಾಸ್ಕರರಾವ್ ಅವರಿಗೆ ಜಿಲ್ಲೆಯ ಮೀನುಗಾರಿಕೆ ಇಲಾಖೆಯವರು ರು. 24 ಲಕ್ಷ ವೆಚ್ಚದಲ್ಲಿ ಜಲಾಶಯಗಳು, ಕೆರೆಗಳಲ್ಲಿ ಮೀನು ಮರಿಗಳನ್ನು ಬಿಡಲಾಗಿದೆ ಎಂದು ಬೋಗಸ್ ದಾಖಲೆ ಸೃಷ್ಟಿಸಿ ಹಣ ನುಂಗಿ ಹಾಕಿದ್ದಾರೆ ಎಂಬ 2 ದೂರುಗಳು ಬಂದಿದ್ದವು.
ಅವರು ಸದರಿ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡು ದೂರುದಾರರಾದ ದೇವೇಂದ್ರ ಗಾಯಕವಾಡ ಹಾಗೂ ವೀರಣ್ಣ ಕೋರಳ್ಳಿ ಇವರಿಬ್ಬರನ್ನು ಎರಡೆರಡು ಬಾರಿ ಕರೆದರಾದರೂ ದೂರುದಾರರೇ ಹಾಜರಿರಲಿಲ್ಲ. ಹೀಗಾಗಿ ಪ್ರಕರಣದಲ್ಲಿ ನೀಡಲಾದ ದೂರನ್ನು ಕೈಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಪ್ರಸಂಗ ನಡೆಯಿತು.
ಮೀನುಗಾರಿಕೆ ಇಲಾಖೆಯ ಅಧಿಕಾರಿ ಹಾಜರಿದ್ದು ವರದಿ ನೀಡಲು ಮುಂದಾದರಾದರೂ ಭಾಸ್ಕರರಾವ್ ಅವರಿಗೆ ಯಾವುದೇ ಮಾಹಿತಿ ಸದ್ಯಕ್ಕೆ ಬೇಡ ಎಂದರಲ್ಲದೆ ಮೀನುಮರಿ ಕುರಿತಾದ 2 ದೂರುಗಳು ಒಂದೇ ತೆರನಾಗಿದ್ದದ್ದಕ್ಕೆ ಸೋಜಿಗ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

