ಜಿಲ್ಲೆಯನ್ನು ಕಡೆಗಣಿಸಿರುವ ನೀರಾವರಿ ಸಲಹಾ ಸಮಿತಿ
ಕ.ಪ್ರ. ವಾರ್ತೆ ಯಾದಗಿರಿ ಜು.11
ಕೃಷ್ಣಾ ಭಾಗ್ಯ ಜಲ ನಿಗಮವು ನೀರಾವರಿ ಸಲಹಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದು, ಅದರಲ್ಲಿ ಯಾದಗಿರಿ ಜಿಲ್ಲಾಧಿಕಾರಿಯನ್ನು ಸದಸ್ಯರನ್ನಾಗಿ ನೇಮಿಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಜಿಲ್ಲೆಯ ಶಾಸಕರನ್ನು ಸಮಿತಿಗೆ ನೇಮಿಸುವಲ್ಲಿ ಕಡೆಗಣಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ನಾರಾಯಣಪುರ ಜಲಾಶಯ ಜಿಲ್ಲೆಯಲ್ಲಿದ್ದು, ಅತೀ ಹೆಚ್ಚು ನೀರಾವರಿ ಪ್ರದೇಶ ಹೊಂದಿದೆ. ಇಲ್ಲಿನ ರೈತರ ಸಮಸ್ಯೆಗಳು ಹೆಚ್ಚಾಗಿದ್ದು, ಇನ್ನೂ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಜಿಲ್ಲೆಯ ಜಿಲ್ಲಾಧಿಕಾರಿಯವರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕಿತ್ತು ಎಂಬುದು ಅಚ್ಚುಕಟ್ಟು ಪ್ರದೇಶದ ರೈತರ ಅಭಿಪ್ರಾಯವಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಜೇವರ್ಗಿ ತಾಲೂಕು ಒಂದೇ ಬರುತ್ತಿದ್ದರೂ ಗುಲ್ಬರ್ಗ ಜಿಲ್ಲಾಧಿಕಾರಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. 73 ಕಿಮೀ ಮುಖ್ಯ ಕಾಲುವೆ ಮತ್ತು ಶಹಾಪುರ ಮತ್ತು ಸುರಪುರ ತಾಲೂಕು ನೀರಾವರಿಗೆ ಒಳಪಡುತ್ತಿದ್ದರೂ, ಯಾದಗಿರಿ ಜಿಲ್ಲಾಧಿಕಾರಿಯನ್ನು ಕಡೆಗಣಿಸಿದ್ದು ರೈತರ ಅತೃಪ್ತಿಗೆ ಕಾರಣವಾಗಿದೆ.
ವಿಶೇಷ ಅಹ್ವಾನಿತರು: ರಾಯಚೂರು, ಬಿಜಾಪುರ ಜಿಲ್ಲಾಧಿಕಾರಿಗಳನ್ನು ಹಾಗೂ ರಾಯಚೂರು, ಗುಲ್ಬರ್ಗ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರನ್ನು ಸಲಹಾ ಸಮಿತಿ ಸಭೆಗೆ ವಿಶೇಷ ಅಹ್ವಾನಿತರನ್ನಾಗಿ ನೇಮಿಸಲಾಗಿದೆ. ಆದರೆ ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಂಟಿ ಕೃಷಿ ನಿರ್ದೇಶಕರನ್ನು ವಿಶೇಷ ಅಹ್ವಾನಿತರ ಪಟ್ಟಿಯಲ್ಲೂ ಸೇರಿಸದೇ ಇರುವುದು ನಿಗಮಕ್ಕೆ ಯಾದಗಿರಿ ಹೊಸ ಜಿಲ್ಲೆಯಾಗಿದೆ ಎಂಬ ಮಾಹಿತಿ ಇಲ್ಲವೇನೂ ಎಂಬ ಸಂಶಯಕ್ಕೆ ಕಾರಣವಾಗಿದೆ.
ಒಬ್ಬರು ಸದಸ್ಯರು: ನೀರಾವರಿ ಸಲಹಾ ಸಮಿತಿಯಲ್ಲಿ 7 ಜನ ಅಧಿಕಾರಿಗಳ ಮತ್ತು 8 ಜನ ಅಧಿಕಾರೇತರ ಸದಸ್ಯರನ್ನು ಮಾತ್ರ ನೇಮಕ ಮಾಡಲು ಅವಕಾಶವಿದೆ. ಅದಕ್ಕಾಗಿ ನಾಲ್ಕು ಜಿಲ್ಲೆಯಿಂದ ತಲಾ ಇಬ್ಬರು ಶಾಸಕರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ನೀರಾವರಿ ಸಚಿವರು ತಿಳಿಸಿದ್ದಾರೆ. ಆದರೆ ಆದೇಶದ ಪ್ರತಿಯಲ್ಲಿ ಜಿಲ್ಲೆಯ ಡಾ.ಎ.ಬಿ.ಮಾಲಕರೆಡ್ಡಿ ಒಬ್ಬರು ಮಾತ್ರ ಸದಸ್ಯರಾಗಿದ್ದಾರೆ. ಉಳಿದ ಇಬ್ಬರು ಶಾಸಕರಾದ ರಾಜಾ ವೆಂಕಟಪ್ಪ ನಾಯಕ ಮತ್ತು ಗುರುಪಾಟೀಲ್ ಶಿರವಾಳ ಅವರು ವಿಶೇಷ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
ಈಗಲಾದರೂ ಸರ್ಕಾರ ಯಾದಗಿರಿ ಜಿಲ್ಲೆಯ ಇನ್ನೊಬ್ಬ ಶಾಸಕರನ್ನು ಮತ್ತು ಜಿಲ್ಲಾಧಿಕಾರಿಯನ್ನು ಸದಸ್ಯರನ್ನಾಗಿ ನೇಮಿಸಬೇಕು ಎಂಬ ಒತ್ತಾಯ ಈ ಭಾಗದ ರೈತರದ್ದಾಗಿದೆ.
ನೇಮಕ ಮಾಡಲಾಗುವುದು-ಸಚಿವ: ನೀರಾವರಿ ಸಲಹಾ ಸಮಿತಿಯಲ್ಲಿ 7 ಜನ ಅಧಿಕಾರಿಗಳ ಮತ್ತು 8 ಜನ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲು ಅವಕಾಶವಿದೆ. ಆ ನಿಟ್ಟಿನಲ್ಲಿ ಅಚ್ಚುಕಟ್ಟು ಪ್ರದೇಶದ ಜಿಲ್ಲೆಗಳ ಶಾಸಕರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಯಾದಗಿರಿ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಂಟಿ ಕೃಷಿ ನಿರ್ದೇಶಕರನ್ನು ಮುಂದಿನ ದಿನಗಳಲ್ಲಿ ವಿಶೇಷ ಆಹ್ವಾನಿತರನ್ನಾಗಿ ಆಮಂತ್ರಿಸಲು ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಐಸಿಸಿ ಸಭೆಗೆ ಶಾಸಕರ ಗೈರು: ಕಳೆದ ಹತ್ತು ವರ್ಷದಿಂದ ಕೃಷ್ಣಾ ಭಾಗ್ಯ ಜಲ ನಿಗಮದ ನೀರಾವರಿ ಸಲಹಾ ಸಮಿತಿಯಿಂದ (ಐಸಿಸಿ) ಜಿಲ್ಲೆಯ ಶಾಸಕರನ್ನು ಹೊರಗಿಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಸರ್ಕಾರ ಜಿಲ್ಲೆಯ ಒಬ್ಬ ಶಾಸಕರನ್ನು ಸದಸ್ಯರನ್ನಾಗಿ ಮತ್ತು ಇನ್ನಿಬ್ಬರು ಶಾಸಕರನ್ನು ವಿಶೇಷ ಅಹ್ವಾನಿತರನ್ನಾಗಿ ನೇಮಿಸಿದೆ. ಆದರೆ ಆಲಮಟ್ಟಿಯಲ್ಲಿ ಬುಧವಾರ ಜರುಗಿದ ನೀರಾವರಿ ಸಲಹಾ ಸಮಿತಿಯಲ್ಲಿ ಜಿಲ್ಲೆಯ ಯಾವೊಬ್ಬ ಶಾಸಕರೂ ಹಾಜರಾಗದಿರುವುದು ಜಿಲ್ಲೆಯ ನೀರಾವರಿ ಬಗ್ಗೆ ಇರುವ ಆಸಕ್ತಿ ಎತ್ತಿ ತೋರಿಸಿದೆ.
ಡಾ. ಮಾಲಕರೆಡ್ಡಿ ಸದಸ್ಯರಾಗಿದ್ದರೂ ಗುರುವಾರ ನಡೆದ ಸಭೆಯಲ್ಲಿ ಭಾಗವಹಿಸಿಲ್ಲ. ಶಾಸಕ ಗುರು ಪಾಟೀಲರು ಕೆಜಿಪಿ ಸಭೆಯಲ್ಲಿ ಭಾಗವಹಿಸಿದ್ದರೆ, ಮತ್ತೊಬ್ಬ ಶಾಸಕ ರಾಜಾ ವೆಂಕಟಪ್ಪ ನಾಯಕ ಪಾಲ್ಗೊಂಡು ಸುರಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಶುಕ್ರವಾರದಿಂದಲೇ ನದಿಗೆ ನೀರು ಬಿಡಲು ಆಗ್ರಹಿಸಿದರು ಎಂದು ತಿಳಿದು ಬಂದಿದೆ.
ಹತ್ತು ವರ್ಷದಿಂದ ಸದಸ್ಯರನ್ನಾಗಿ ನೇಮಿಸಿಲ್ಲ ಎಂಬ ಆಪಾದನೆ ಮಾಡುತ್ತಿದ್ದ ಶಾಸಕರು ಈಗ ಅಧಿಕೃತವಾಗಿ ಸಭೆಗೆ ಕರೆದರೂ ಹೋಗದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಭಾಗದ ಚುನಾಯಿತ ಪ್ರತಿನಿಧಿಗಳಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಸಭೆಯಲ್ಲಿ ಭಾಗವಹಿಸಿ ಪರಿಹಾರ ಒದಗಿಸಲು ಧ್ವನಿ ಎತ್ತುತ್ತಿದ್ದರು ಎಂಬ ಆರೋಪ ಕೇಳಿಬರುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

