ಜಿಪಂ ಕುಂಭಕರ್ಣ ನಿದ್ರೆ...
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜೂ.4
ಎರಡು ತಿಂಗಳಿಗೊಂದಾವರ್ತಿ ಸಾಮಾನ್ಯ ಸಭೆ ಸೇರಿ ಬದುಕಿನ ಎಲ್ಲ ರಂಗಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಜಿಲ್ಲೆಯ ಜನ- ಜಾನುವಾರುಗಳ ಸುಖ-ದುಃಖ ಆಲಿಸಿ ಪರಿಹಾರ ಹುಡುಕಬೇಕಾಗಿದ್ದ ಜಿಲ್ಲಾ ಪಂಚಾಯ್ತಿ ಕುಂಭಕರ್ಣ ನಿದ್ರೆಗೆ ಜಾರಿದೆಯೇ ಎಂಬ ಶಂಕೆ ಜಿಲ್ಲೆಯ ಜನರನ್ನು ಕಾಡತೊಡಗಿದೆ.
ಏಕೆಂದರೆ ಜಿಪಂ ವ್ಯವಸ್ಥೆ ಎಂದು ಕರೆಯಿಸಿಕೊಳ್ಳಲು ಜರೂರಿಯಾಗಿರುವ 2 ತಿಂಗಳಿಗೊಮ್ಮೆ ಸಾಮಾನ್ಯ ಸಭೆ(ಜನರಲ್ ಬಾಡಿ ಮೀಟಿಂಗ್) ನಡೆಸಬೇಕೆಂಬ ನಿಯಮವೇ ಇಲ್ಲಿ ಅನಾಥವಾಗಿದೆ ಎಂದ ಮೇಲೆ ಜಿಲ್ಲಾ ಪಂಚಾಯ್ತಿ ಮಲಗಿದೆ ಎಂದೇ ಅರ್ಥ!
ಗುಲ್ಬರ್ಗದ ಪ್ರಸ್ತುತ ಜಿಪಂ ಅಸ್ತಿತ್ವಕ್ಕೆ ಬಂದು ಬರೋಬ್ಬರಿ ಎರಡೂವರೆ ವರ್ಷವಾಯ್ತು. ಈ ಅವಧಿಯಲ್ಲಿ 15ಕ್ಕೂ ಹೆಚ್ಚು ಸಾಮಾನ್ಯ ಸಭೆಗಳು ನಡೆದು ಜಿಲ್ಲೆಯ ಪ್ರಗತಿ- ವಿಗತಿಗಳ ಜಾತಕ ಜಾಲಾಡಬೇಕಿತ್ತು. ಆದರೇನು ಮಾಡುವುದು, ನಡೆದ ಸಾಮಾನ್ಯ ಸಭೆಗಳು 7 ಮಾತ್ರ. ವಾಸ್ತವ ಹೀಗಿದ್ದಾಗ ಜಿಲ್ಲೆಯಲ್ಲಿ ಸುಧಾರಣೆ, ಜನಪರ ಕೆಲಸ, ಕಾರ್ಯಗಳು ಅದ್ಹೇಗೆ ಆದಾವು ನೀವೇ ಹೇಳಿ ನೋಡೋಣ...
ಅವಿಶ್ವಾಸ ಪರ್ವ: ಪ್ರಸ್ತುತ ಅಸ್ತಿತ್ವದಲ್ಲಿರುವ ಜಿಲ್ಲಾ ಪಂಚಾಯ್ತಿ ಕಳೆದ 30 ತಿಂಗಳಲ್ಲಿ ಒಂದೂ ಹೇಳಿಕೊಳ್ಳುವಂತಹ, ಜನಮುಖಿ ಕೆಲಸಕ್ಕೆ ಮುಂದಾಗದೆ ಹೋಗಿದ್ದು ಪಂಚಾಯ್ತಿ ಇತಿಹಾಸದಲ್ಲೇ ಕಪ್ಪು ಚುಕ್ಕೆ.
ಏಕೆಂದರೆ ಈ ಅವಧಿಯಲ್ಲಿ ಜಿಪಂ ಆಳಿದ್ದು ರಾಜಕೀಯ ಅಸ್ಥಿರತೆ, ಅವಿಶ್ವಾಸ ಪರ್ವ ಹಾಗೂ ಸದಸ್ಯರು- ಅಧಿಕಾರಿಗಳ ನಡುವಿನ ಹೊಂದಾಣಿಕೆ ಮೈತ್ರಿ... ಈ ಮೂರೇ ಸಂಗತಿಗಳು ಎಂದು ಹೇಳಿದರೆ ಇದನ್ನು ಕೇಳಿದವರು ನಗಬೇಕೋ- ಅಳಬೇಕೋ ಎಂದು ಒಂದೂ ಅರಿಯದೆ ಮೌನವಾಗುತ್ತಾರಷ್ಟೆ.
ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ವೇಗವರ್ಧಕವಾಗಿ, ತನ್ನಡಿಯಲ್ಲಿನ 38 ವಿವಿಧ ಇಲಾಖೆಗಳ ಕೆಲಸ, ಕಾರ್ಯಗಳ ಮೇಲೆ ನಿಗಾ ಇಡುವ ಮಹತ್ವದ ಹೊಣೆಗಾರಿಕೆ ನಿರ್ವಹಿಸಬೇಕಿದ್ದ ಜಿಲ್ಲಾ ಪಂಚಾಯ್ತಿಯೇ ಹೀಗೆ ಚಲ್ತೆ ಕಾ ನಾಮ್... ಎಂಬಂತಾದಲ್ಲಿ ಅಂತಹ ಜಿಲ್ಲೆಯ ಜನಪರ ಪ್ರಗತಿ- ವಿಗತಿ ಚರ್ಚೆ ಇನ್ನಾವ ವೇದಿಕೆಯಲ್ಲಿ ಸಾಧ್ಯ.
ಪರದಾಟ- ತೊಳಲಾಟ: ಅಧ್ಯಕ್ಷಗಿರಿ ಗದ್ದುಗೆ ಹತ್ತಿದವರು ಅವಿಶ್ವಾಸ ಗಾಳಿ ಬೀಸುವವರೆಗೂ ಇರೋಣ, ನಂತರ ನೋಡೋಣ... ಎಂಬ ನಿಲುವುಗೆ ಅಂಟಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಂಡಿದ್ದರಿಂದಲೇ ಇಲ್ಲಿನ ಜಿಪಂ ಸಾಧನಾಮುಖಿಯಾಗುತ್ತಿಲ್ಲ.
ಅಷ್ಟೇ ಯಾಕೆ, ಅಧ್ಯಕ್ಷರಾದವರು ಸರ್ಕಾರದ ಹಂತದಲ್ಲಿ ಓಡಾಡಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರುವ ಮೂಲಕ ಜಿಲ್ಲೆಯ ಪ್ರಗತಿಗೆ ವಿಶೇಷ ಕಾಳಜಿ ತೋರುವ ಪ್ರವೃತ್ತಿಯನ್ನು ಕಳೆದ ಎರಡೂವರೆ ವರ್ಷಗಳಲ್ಲಿ ಪ್ರದರ್ಶಿಸಿದ್ದೂ ಅಷ್ಟಕ್ಕಷ್ಟೆ. ಆಂತರಿಕವಾಗಿ ಇಂತಹ ಆತಂಕಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಜಿಪಂ.ನಿಂದ ಜಿಲ್ಲೆಯ ಪ್ರಗತಿ ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
ಸಾಮಾನ್ಯ ಸಭೆ ಎಂಬ ಬೀಸೋ ದೊಣ್ಣೆ: ಜಿಪಂ ಸಾಮಾನ್ಯ ಸಭೆ ಎಂಬುದು ಬೀಸೋ ದೊಣ್ಣೆ. ಏಕೆಂದರೆ ನೆನಪಾದಾಗೊಮ್ಮೆ ನಡೆಯುವ ಈ ಸಭೆಯ 1 ದಿನ ಚರ್ಚೆಗಳಿಂದ ತಪ್ಪಿಸಿಕೊಂಡರಾಯ್ತು, ಮುಂದಿನದ್ದೆಲ್ಲ ಸಲೀಸು ಎಂಬ ಧೋರಣೆಯ 38 ಇಲಾಖೆಗಳ ಅಧಿಕಾರಿ ವರ್ಗದಿಂದ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ?
ಸದಸ್ಯರೂ ಅಷ್ಟೇ, ಆಗೀಗ ನಡೆಯುವ ಸಭೆಯಲ್ಲಿ ಏನು ಮಾತನಾಡಿದರೂ ಪ್ರಯೋಜನವಿಲ್ಲ... ಎಂದು ದೇಶಾವರಿ ಚರ್ಚೆಗಳಲ್ಲೇ ಕಾಲಹರಣ ಮಾಡುತ್ತಿರುವುದರಿಂದ ಸಭೆಗಳೂ ಫಲಪ್ರದವಾಗದ ಬೆಳವಣಿಗೆ ಜಿಪಂ ಪಾಲಿಗೆ ಮಾರಕ.
ಪಂಚಾಯತ್ ರಾಜ್ ನಿಯಮ ಪ್ರಕಾರ 2 ತಿಂಗಳಿಗೊಮ್ಮೆ ಸಾಮಾನ್ಯ ಸಭೆ ನಡೆಯಬೇಕು. ಎರಡೂವರೆ ವರ್ಷ(30 ತಿಂಗಳು)ದಲ್ಲಿ ಇಲ್ಲಿ 15 ಸಭೆಗಳಾದರೂ ನಡೆಯಬೇಕಿತ್ತು. ದುರಂತವೆಂದರೆ ನಡೆದಿದ್ದು ಕೇವಲ 7 ಸಭೆಗಳು. ಜೂನ್ 8ರಂದು ಸಭೆ ನಿಗದಿಯಾಗಿದ್ದು, ಅದು ಎರಡೂವರೆ ವರ್ಷದಷ್ಟು ಹಳೆಯದಾಗಿರುವ ಜಿಪಂನ 8ನೇ ಸಾಮಾನ್ಯ ಸಭೆ ಎಂಬುದು ಗಮನಾರ್ಹ ಸಂಗತಿ.
ಅಧಿಕಾರಿಗಳದ್ದೇ ಕಾರುಬಾರು: ಶಿಕ್ಷಣ, ಆರೋಗ್ಯ ಇಲಾಖೆಗಳು, ಕೃಷಿ, ಜಲಾನಯನ, ತೋಟಗಾರಿಕೆ, ಬಿಸಿಯೂಟದಂತಹ ಇಲಾಖೆಗಳು, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿನ ವಸತಿ ನಿಲಯಗಳ ಆಗುಹೋಗುಗಳಿಗೆಲ್ಲ ಸದಸ್ಯರಿಗೆ ವಿಸ್ತೃತವಾಗಿ ಚರ್ಚಿಸಲು ಸಾಮಾನ್ಯ ಸಭೆಗಳೇ ವೇದಿಕೆ. ಇಲ್ಲಿ ಆ ಸಭೆಗಳು ಅಪರೂಪವಾಗಿ ಅಧಿಕಾರಿಗಳಿಗೆ ಕೇಳುವವರಿಲ್ಲದಂತಾಗಿದೆ.
43 ಸದಸ್ಯ ಬಲದ ಜಿಪಂನಲ್ಲಿ ಜನಪರವಾಗಿ ಚಿಂತಿಸುವ ಸದಸ್ಯರಿದ್ದರೂ ಅಂತಹವರಿಗೆ ಚರ್ಚೆಗೆ ಅವಕಾಶಗಳೇ ದೊರಕುತ್ತಿಲ್ಲ. ಸಾಮಾನ್ಯ ಸಭೆಯೇ ನಡೆಯದಿದ್ದರೆ ಅದೆಲ್ಲಿ ಚರ್ಚಿಸಬೇಕು ಎಂದು ಪ್ರಜ್ಞಾವಂತ ಸದಸ್ಯರನೇಕರ ಪ್ರಶ್ನೆಗೆ ಉತ್ತರ ನೀಡುವವರೂ ಇಲ್ಲಿಲ್ಲ.
ರಸ್ತೆಗಳ ದುರವಸ್ಥೆ: ಹಳ್ಳಿ ಸಂಪರ್ಕ ರಸ್ತೆಗಳು ಹರಿದು ಹೋದರೂ ಅನುದಾನ ಕೊರತೆಯಿಂದಾಗಿ ಜಿಪಂ ಸದಸ್ಯರು ಕ್ಷೇತ್ರದಲ್ಲಿ ಕೆಲಸ ಮಾಡಲಾಗದೆ ಫಜೀತಿಗೊಳಗಾಗಿದ್ದಾರೆ. ರಸ್ತೆ ದುರಸ್ತಿಗೆ ಎರಡೂವರೆ ವರ್ಷದಲ್ಲಿ ಪ್ರತಿ ಸದಸ್ಯರಿಗೆ ಬಂದದ್ದು 13ರಿಂದ 15 ಲಕ್ಷ ರು. ಅನುದಾನ. 1 ಕಿ.ಮೀ. ರಸ್ತೆ ನಿರ್ಮಾಣಕ್ಕೂ ಸಾಕಾಗದ ಪರಿಸ್ಥಿತಿ. ಇನ್ನು ಶೌಚಾಲಯ, ಸಮುದಾಯ ಭವನ ನಿರ್ಮಾಣಕ್ಕೆ ಬಿಆರ್ಜಿಎಫ್ನಲ್ಲಿ ಬಂದದ್ದು 10 ಲಕ್ಷ ರು. ಅನುದಾನ ಬರದಿಂದಾಗಿ ಮತ ಹಾಕಿದವರಿಗೆ ಮುಖ ತೋರಿಸದಂತಾಗಿದೆ ಎಂದು ಸದಸ್ಯರೇ ಪರೇಶಾನ್ ಆಗಿದ್ದಾರೆ.
ಜಿಪಂ ಅಧ್ಯಕ್ಷರಾದವರು ಜನಮುಖಿಯಾಗಿದ್ದು ಸರ್ಕಾರದವರೆಗೂ ಹೋಗಿ ಹೆಚ್ಚಿನ ಹಣ ತಂದು ಕೆಲಸಗಳಿಗೆ ಒತ್ತಾಸೆಯಾಗಿ ನಿಲ್ಲಬೇಕು. ಆದರಿಲ್ಲಿನ ಅಧ್ಯಕ್ಷರುಗಳು ಸ್ಥಾನಮಾನಕ್ಕಷ್ಟೇ ತೃಪ್ತರಾಗಿಬಿಟ್ಟರೆ ಆಗೋದೇ ಹೀಗೆ... ಎಂದು ಸದಸ್ಯರೇ ಆಡಿಕೊಳ್ಳುತ್ತಿದ್ದಾರೆ.
ಮದುವೆ- ಮುಂಜಿವೆ, ಅಂತ್ಯ ಸಂಸ್ಕಾರಕ್ಕೇ ಸೀಮಿತ: ಇತ್ತ ಸಭೆಗಳು ನಡೆಯದೆ ಪ್ರಗತಿ- ವಿಗತಿ ಚರ್ಚೆ ಶೂನ್ಯ. ಅತ್ತ ಅನುದಾನ ಬಾರದೆ ಕ್ಷೇತ್ರದಲ್ಲಿ ಜನರಿಗೆ ನೀಡಿರುವ ವಾಗ್ದಾನ ಅನುಷ್ಠಾನವೂ ಕಷ್ಟ. ಇಂತಹ ಬಿಕ್ಕಟ್ಟಿನಲ್ಲಿರುವಾಗ ಏನು ಮಾಡಲು ಸಾಧ್ಯ? ಜನರಿಗಂತೂ ಹತ್ತಿರವಾಗಿರಲೇಬೇಕಲ್ಲ, ಅದಕ್ಕೆ ಜಿಪಂ ಸದಸ್ಯರು ತಮ್ಮ ಕ್ಷೇತ್ರಗಳಿಂದ ಬರುವ ಮದುವೆ, ಮುಂಜಿವೆ ಆಮಂತ್ರಣ, ನಿಧನ ವಾರ್ತೆಗಳನ್ನು ಕಾಳಜಿಯಿಂದ ಆಲಿಸಿ ಅಲ್ಲಿಗೆ ಖುದ್ದು ಹಾಜರಿಯಾಗುತ್ತಿದ್ದಾರೆ.
ಯಾವ ಉದ್ದೇಶದಿಂದ ಜಿಪಂ ಸದಸ್ಯರಾದೆವೋ ಅದು ಇನೇಕ ಕಾರಣಗಳಿಂದ ಕೈಗೂಡುತ್ತಿಲ್ಲ. ಹೀಗಾದರೂ ಜನರೊಡನಾಟದಲ್ಲಿ ಇರೋಣ ಎಂದು ಕಳೆದ 4 ತಿಂಗಳಿಂದ ಈ ಕೆಲಸಗಳಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದೇವೆ ಎಂದು ಹೆಸರು ಹೇಳಲು ಬಯಸದ ಜಿಪಂ ಸದಸ್ಯರು 'ಕನ್ನಡಪ್ರಭ' ಜೊತೆ ಮಾತನಾಡುತ್ತ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಪ್ರಗತಿ ಶೂನ್ಯ
ಕಳೆದ ಎರಡೂವರೆ ವರ್ಷದಿಂದ ಜಿಪಂ ಸದಸ್ಯರಾಗಿದ್ದರೂ ಸಾಮಾನ್ಯ ಸಭೆಗಳು ನಿಯಮದಂತೆ ನಡೆಯುತ್ತಿಲ್ಲ. ಅನುದಾನವೂ ಬರುತ್ತಿಲ್ಲ. ಅಧ್ಯಕ್ಷರಾದವರು ಹೆಚ್ಚು ಮುತುವರ್ಜಿ ತೋರಿ ಸರ್ಕಾರಕ್ಕೆ ನಮ್ಮ ಜಿಲ್ಲೆಯ ಅಳಲು ರವಾನಿಸುತ್ತಿಲ್ಲ. ಮಹತ್ವದ ಸಾಮಾನ್ಯ ಸಭೆಗಳೇ ಇಲ್ಲಿ ಮರೀಚಿಕೆಯಾಗಿರುವಾಗ ಜಿಲ್ಲೆಯ ಪ್ರಗತಿ ಶೂನ್ಯವಾಗದೆ ಇನ್ನೇನಾಗಲು ಸಾಧ್ಯ? ಅಧ್ಯಕ್ಷರಾದವರು ಆಸಕ್ತಿ ತೋರಿದಾಗ ಮಾತ್ರ, ಅಧಿಕಾರಿಗಳಾದವರು ಕಾಳಜಿಯಿಂದ ಜಿಲ್ಲೆಯಲ್ಲಿ ಕಲ್ಯಾಣ ಯೋಜನೆಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಮುಂದಾದಾಗ ಮಾತ್ರ ಪ್ರಗತಿ ಹಸಿರು ಚಿಗುರೀತು.
- ಶೋಭಾ ಶಂಕರ ಬಾಣಿ, ನೆಲೋಗಿ ಜಿಪಂ ಸದಸ್ಯರು, ಜೇವರ್ಗಿ
ಇವರಿಂದ ಏನೂ ಕೆಲ್ಸ ಆಗಿಲ್ರಿ...
ಊರಿಗೆ ಹೋಗ್ಲಕ್ಕ ರೋಡ್ ಇಲ್ಲ, ಇದ್ದ ರೋಡಿಗೆ ಮಣ್ಣ ಹಾಕೋರು ಗತಿ ಇಲ್ಲ. ನಾವು ಆರ್ಸಿ ಕಳಿಸಿದ ಮಂದಿ ಸತ್ತಾಗ, ತೊಟ್ಟಲಕ್ಕ, ಮದ್ವಿಗೆ ಬಂದು ಮುಖ ತೋರ್ಸಿ ಹೋಗ್ತಾರ, ಆದ್ರ ಇದೆಲ್ಲ ಕೆಲ್ಸಕ್ಕ ಬರ್ತದೇನ್ರಿ ನೀವೇ ಹೇಳ್ರಿ ನೋಡಾಣ? ರಸ್ತಾ, ಕುಡಿಯೋ ನೀರ, ದವಾಖಾನಿಯಂತಹ ಕೆಲ್ಸ ಹಳ್ಳಿದಾಗಿನ ಮಂದಿಗೆ ಮೊದ್ಲ ಒದಗಸಬೇಕು. ಅದೇ ಆಗವಲ್ತು ನೋಡ್ರಿ. ಯಾರಿಗೆ ಅಂದು ಯಾನ್ ಅದರಿ, ನಾವೇ ಖೊಟ್ಟಿ ಆಗ್ತೀವಿ.
- ಬಸವರಾಜ, ರಾಮನಗರ ನಿವಾಸಿ, ಅಫಜಲ್ಪುರ
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

