ಗುಲ್ಬರ್ಗಾ

ಕನ್ನಡ ತೇರನು ಎಳೆಯೋಣ...

Published On :

ಪ್ರಭುತ್ವ ಮತ್ತು ಸಂಸ್ಕೃತಿ ಎರಡೂ ಒಟ್ಟಿಗೆ ಹೋಗಲಾರವು ಎಂಬುದು ಜರ್ಮನಿಯ ದಾರ್ಶನಿಕನ ಮಾತು. ಅನೇಕ ಉದಾಹರಣೆಗಳಿಂದ ಸಾಧಿಸಿ ತೋರಿಸಿದ್ದಾನೆ. ಯಾವುದೇ ಒಂದು ರಾಜ್ಯ ಅಥವಾ ದೇಶ ರಾಜಕೀಯವಾಗಿ ಶಕ್ತಿಯುತವಾದಂತೆ ಅಲ್ಲಿಯ ಸಂಸ್ಕೃತಿ ಕಮರಿ ಹೋಗುತ್ತದೆ ಎಂದು ಅವನ ವಾದ.
ಜರ್ಮನಿಯ ಅಂದಿನ ಸ್ಥಿತಿಗತಿಗಳನ್ನು ಗಮನಿಸಿಯೇ ಆತ ಹೇಳಿರಬಹುದು. ಆ ಮಾತು ಬೇರೆ. ಆದರೆ, ಅದಕ್ಕೆ ಪರಿಹಾರವನ್ನು ಹೇಳಿದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಕಸಾಪ, ಕನ್ನಡ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅನೇಕ ಅಕಾಡೆಮಿಗಳು ರಾಜಕೀಯ ಶಕ್ತಿಗಳು ಅಷ್ಟಾಗಿ ಗಮನ ಕೊಡಲಾಗದ ಸಂಗತಿಗಳಾದ ಸಾಹಿತ್ಯ, ಸಂಗೀತ, ಕಲೆ, ನಾಟಕ, ನೃತ್ಯ, ಜನಪದ ಇತ್ಯಾದಿಗಳ ಬಗ್ಗೆ ಕಾರ್ಯನಿರ್ವಹಿಸುತ್ತ ಆ ಕೊರತೆಯನ್ನು ತುಂಬುವುದಕ್ಕಾಗಿ ಸ್ಥಾಪಿತವಾಗಿವೆ.
ಇಂದು ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಿಕೇಂದ್ರೀಕರಣಗೊಂಡ ಸಂದರ್ಭದಲ್ಲಿ ಆಯಾ ಹಂತದಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಸಮೃದ್ಧಗೊಳಿಸುವ ಹೊಣೆ ಪ್ರತಿ ಪ್ರಜೆಯ ಆದ್ಯತೆಯಾಗಿದ್ದು, ಪರಿಷತ್ತಿನಂತಹ ಸಂಸ್ಥೆಗಳು ಅದಕ್ಕೆ ಆಶ್ರಯ ತಾಣವಾಗಿವೆ.
ಸಮ್ಮೇಳನ ಸಂಚಲನ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ರಾಜ್ಯ ಮಟ್ಟದಲ್ಲಿ ನಡೆದರೆ ಪ್ರತಿ ಜಿಲ್ಲೆ, ತಾಲೂಕಿನಲ್ಲಿಯೂ ಇಂತಹ ಸಮ್ಮೇಳನಗಳು ಜನರಲ್ಲಿ ನಾಡು- ನುಡಿಯ ಗೌರವದ ಬಗ್ಗೆ ಸಂಚಲನ ಉಂಟು ಮಾಡುತ್ತವೆ.
ನಾಡು- ನುಡಿಯ ಮಹತ್ವ, ಅದನ್ನು ಕಟ್ಟಿದವರ ಬಗ್ಗೆ ಅವರ ಬದ್ಧತೆ, ಅವರ ಬದುಕು ಮೀಸಲಾಗಿಟ್ಟ ಪರಿ ಹಾಗೂ ಅವರ ಹೋರಾಟವನ್ನು ಸ್ಮರಿಸುತ್ತ ಅವರಿಗೆ ಕೃತಜ್ಞತೆ ಸಲ್ಲಿಸಲು ಇಂತಹ ಸಮ್ಮೇಳನಗಳು ಯೋಗ್ಯವೆನಿಸುವುದಲ್ಲದೆ ಮುಂಬರುವ ಪೀಳಿಗೆಯವರಿಗೆ ಅವರ ಪರಿಚಯ ಮಾಡುತ್ತ ಅವರಲ್ಲಿಯೂ ದೇಶ ಭಾಷೆಗೆ ಕಂಕಣಬದ್ಧರಾಗುವಂತೆ, ಉಳಿವಿಗಾಗಿ ಎಚ್ಚರವಾಗಿರುವಂತೆ ಪ್ರೇರಣೆ ನೀಡಲು ಉತ್ತಮ ಅವಕಾಶವಾಗುತ್ತದೆ. ಅಷ್ಟೇ ಅಲ್ಲ ಪ್ರತಿಯೊಬ್ಬ ಕನ್ನಡಿಗನೂ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾಗವಹಿಸಿ ನಾಡು, ನುಡಿಗೆ ಋಣ ಸಲ್ಲಿಸಲು ಒಂದು ವೇದಿಕೆ ಕಲ್ಪಿಸಿದಂತಾಗುತ್ತದೆ.
ಅಸಂಬದ್ಧ ಚಟುವಟಿಕೆ ಹೆಚ್ಚುತ್ತಿವೆ: ಇತ್ತೀಚೆಗೆ ಸಮ್ಮೇಳನವೆಂದರೆ ಗೊಂದಲ, ದೊಂಬಿ, ಈರ್ಷೆ, ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಗರ ಮೈಮನಸ್ಸು, ಗೋಷ್ಠಿ ಸಂವಾದಗಳಲ್ಲಿ ಸಾಮರಸ್ಯಕ್ಕಿಂತ ಅಸಹನೆ, ಕಿಡಿ ಕಾರುವಿಕೆ, ಊಟದ ಅಸ್ತವ್ಯಸ್ಥತೆ ಬಗ್ಗೆ ಗುಲ್ಲು, ಅಪಪ್ರಚಾರ, ಕವಿಗೋಷ್ಠಿಯಲ್ಲಿ ಭಾಗವಹಿಸಲು ಲಾಬಿ, ಪರದಾಟ, ಗುದ್ದಾಟ ಏನೆಲ್ಲವುಗಳೂ ಪ್ರಮುಖವಾಗುತ್ತಿವೆ.
ಗೋಷ್ಠಿಗಳಲ್ಲಿ ಏಕತಾನತೆ, ಅತಿಯಾದ ವೈಭವೀಕರಣ ಇತ್ಯಾದಿಗಳು ಪ್ರಚಾರ ಪಡೆಯುತ್ತಿವೆ. ಸಿದ್ಧ ಮಾದರಿಯಲ್ಲಿಯೇ ಕಾರ್ಯಕ್ರಮಗಳು, ಸಮಯದ ಅವ್ಯವಸ್ಥೆ ಹೀಗೆ ಏನೆಲ್ಲ ಲೋಪದೋಷಗಳುಂಟಾಗುತ್ತವೆ. ಇವೆಲ್ಲವನ್ನು ಮೀರಿ ನಾಡಿನ ಬಗ್ಗೆ ಭಾವೈಕ್ಯತೆ ಸಾರುವಂತೆ ನುಡಿನಮನ ಸಮ್ಮೇಳನ ಜರುಗಬೇಕಾಗಿದೆ.
ಕಲಬುರ್ಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಪ್ರಪ್ರಥಮವಾಗಿ 1974ರಲ್ಲಿ ಜರುಗಿದ್ದು ಜ.ಚ.ನಿ. ಅವರು ಸಮ್ಮೇಳನಾಧ್ಯಕ್ಷರಾಗಿದ್ದರು. ಕನ್ನಡ ಕಟ್ಟಾಳು ಭೀಮಸೇನರಾವ ತವಗ ಅವರು 1981ರಲ್ಲಿ,  1991ರಲ್ಲಿ ಶೈಲಜಾ ಉಡಚಣ ಹೀಗೆ ಇಲ್ಲಿಯವರೆಗೂ ಕಸಾಪ ಕನ್ನಡದ ಸೇವೆಗೆ ಅವಕಾಶ ಕಲ್ಪಿಸುತ್ತ ಬಂದಿದೆ. ಇದನ್ನು ಉತ್ಸವ, ಸಂಭ್ರಮ, ನಾಡ ಹಬ್ಬ ಏನೆಲ್ಲ ಕರೆಯಬಹುದು.
ಏನೆಲ್ಲಾ ಉಂಟು..: ಜೂ.15, 16ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಮ್ಮೇಳನದ ಅಧ್ಯಕ್ಷರಾಗಿ ಎಲ್.ಬಿ.ಕೆ. ಆಲ್ದಾಳರು ಆಯ್ಕೆಯಾಗಿದ್ದು, ಪರಿಷತ್ತಿನ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮತ್ತು ಅವರ ಗೆಳೆಯರೆಲ್ಲ ಉತ್ಸಾಹದಿಂದ ಸಮ್ಮೇಳನದ ತಯ್ಯಾರಿಯಲ್ಲಿದ್ದಾರೆ. ಅರ್ಥಪೂರ್ಣವಾದ ಆಮಂತ್ರಣ ಪತ್ರಿಕೆ, ಸುಂದರವಾದ ದೇಸಿ ಸೊಗಡಿನ ವೇದಿಕೆ, ಸಾಹಿತ್ಯದ ಹಲವು ಪ್ರಕಾರಗಳ ಕುರಿತು ಗೋಷ್ಠಿ, ಚರ್ಚೆ, ಸಂವಾದ ಏನೆಲ್ಲ ಉಂಟು. ಸಂಗೀತಗಾರರು, ಕಲಾವಿದರು, ನಾಟಕಕಾರರು, ನೃತ್ಯಾಂಗನೆಯರು, ಜಾನಪದ ಕಲಾವಿದರು, ಪುಸ್ತಕದ ಮಳಿಗೆಗಳು ಹೀಗೆ ಎಲ್ಲ ಕನ್ನಡದ ಮನಸ್ಸುಗಳು ಒಂದಾಗುತ್ತಿವೆ.
ಎನ್.ಎಸ್.ಡಿ., ರಂಗಾಯಣ, ನಿನಾಸಂ ಮುಂತಾದ ಸಂಸ್ಥೆಗಳಲ್ಲಿ ತರಬೇತಿ ಪಡೆದ ಕಲಾವಿದ ಡಾ. ಪರಶುರಾಮನೊಂದಿಗೆ ಅರುಣ, ತುಕಾರಾಮ, ಪ್ರಮೋದ, ವೀರೇಶ, ಅಕ್ಷಯಕುಮಾರ, ಅಬಿಲಾಷ ಹಾಗೂ ಮಾಣಿಕ ಇವರೆಲ್ಲ ಸಮ್ಮೇಳನದ ವೇದಿಕೆಯನ್ನು ದೇಸಿ ಸೊಗಡಿನಲ್ಲಿ ಅಲಂಕರಿಸಿದ್ದಾರೆ. ಮದುಮಗಳಂತೆ ಸಿಂಗಾರಗೊಂಡ ಕನ್ನಡ ಭವನದ ಆವರಣದಲ್ಲಿ ನಡೆಯಲಿರುವ ನುಡಿ ಜಾತ್ರೆ ಮೈದುಂಬಿಕೊಳ್ಳುತ್ತಿದೆ. ಬನ್ನಿ-ಕಲಬುರ್ಗಿ ಜಿಲ್ಲೆಯ ಸಮಸ್ತ ಜನ ಒಗ್ಗೂಡಿ ಕನ್ನಡದ ತೇರನ್ನು ಎಳೆಯೋಣ.
- ಸಂಧ್ಯಾ ಹೊನಗುಂಟೀಕರ್,
ಕಥೆಗಾರ್ತಿ- ಕವಯಿತ್ರಿ, ಗುಲ್ಬರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.