ಗುಲ್ಬರ್ಗಾ

ಗೆಲವಿಗೊಂದು, ಅಧಿಕಾರಕ್ಕೆ ಮತ್ತೊಂದು

Published On :

ಯಾದಗಿರಿ: ನಗರ, ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾರು ಯಾವ ಪಕ್ಷದಿಂದ ಆಯ್ಕೆಯಾಗಿ ಮುಂದೆ ಯಾವ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೋ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಇದಕ್ಕೆ ಕಾರಣ 2007ರಿಂದ ಜಿಲ್ಲೆಯ ಪೌರ ಸಂಸ್ಥೆಗಳಲ್ಲಿ ನಡೆದಿರುವ ಘಟನಾವಳಿಗಳು.
  2007ರ ಚುನಾವಣೆಯನ್ನು ಗಮನಿಸಿದರೆ ಜನರು ನೀಡಿದ ಮತಕ್ಕೆ ಮನ್ನಣೆ ಸಿಕ್ಕಿಲ್ಲ ಎನ್ನುವುದು ಗೊತ್ತಾಗುತ್ತದೆ. ಈಗಲೂ ಮತ್ತೆ ಅದೇ ರೀತಿ ಪುನರಾವರ್ತನೆಯಾಗುತ್ತದೆಯೇ ಎಂಬ ಜಿಜ್ಞಾಸೆ ಶುರುವಾಗಿದೆ, ಇದಕ್ಕೆ ಕಾರಣವೂ ಇದೆ. ಕಳೆದ ಬಾರಿ ಜನರು ನೀಡಿದ ಅಧಿಕಾರ ಒಂದು ಪಕ್ಷಕ್ಕಾದರೆ, ನಂತರ ನಡೆದ ಪಕ್ಷಾಂತರ ಪರ್ವದಿಂದಾಗಿ ಅಧಿಕಾರ ಪಡೆದವರು ಮಾತ್ರ ಬೇರೆಯವರು.
ವಿಧಾನಸಭೆ ಚುನಾವಣೆಯಿಂದ..: ಜಿಲ್ಲೆಯ ನಾಲ್ಕೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಇಂತಹ ಸನ್ನಿವೇಶಗಳು ಎದುರಾಗಿವೆ. ಈ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದ ಒಂದು ವರ್ಷದ ನಂತರ ನಡೆದ ವಿಧಾನಸಭೆಯ ಚುನಾವಣೆಯ ಫಲಿತಾಂಶದಿಂದಾಗಿ ನಗರ ಸ್ಥಳೀಯ ಸಂಸ್ಥೆಗಳ ರಾಜಕೀಯ ಬಲಾಬಲವೂ ಬದಲಾಗುತ್ತಲೇ ಹೋಯಿತು. ಹೀಗಾಗಿ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಅಭ್ಯರ್ಥಿಗಳು ಸಂಪೂರ್ಣವಾಗಿ ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಪಕ್ಷಾಂತರ ನಿಷೇಧ ಕಾಯ್ದೆಯಿಂದಲೂ ಯಾವುದೇ ತೊಂದರೆ ಅನುಭವಿಸದಂತೆ ಜಾಣ್ಮೆ ವಹಿಸಿದ್ದರು.
ಜೆಡಿಎಸ್‌ನಿಂದ ಬಿಜೆಪಿಗೆ: ಸುರಪುರ ಪುರಸಭೆಗೆ 2007ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ರಾಜುಗೌಡ ಜೆಡಿಎಸ್‌ನಲ್ಲಿದ್ದರು. ಹೀಗಾಗಿ ಒಟ್ಟು 27 ವಾರ್ಡುಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ತಲಾ 13 ಸ್ಥಾನಗಳನ್ನು ಪಡೆದವು. ಬಿಜೆಪಿ ಒಂದು ಸ್ಥಾನ ಗಳಿಸಿತು. 2008ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜುಗೌಡರು ಬಿಜೆಪಿ ಅಭ್ಯರ್ಥಿಯಾಗಿ ಸುರಪುರದಿಂದ ಆಯ್ಕೆಯಾದರು. ಇದಾದ ತಕ್ಷಣವೇ ಜೆಡಿಎಸ್‌ನಿಂದ ಗೆದ್ದಿದ್ದ 13 ಪುರಸಭೆ ಸದಸ್ಯರು ಬಿಜೆಪಿಗೆ ಸೇರ್ಪಡೆಯಾದರು. ಹೀಗಾಗಿ ಬಿಜೆಪಿ ಬಹುಮತ ಪಡೆಯುವಂತಾಯಿತು. ನಂತರ ಪುರಸಭೆಯಲ್ಲೂ ಅಧಿಕಾರ ಅನುಭವಿಸಿತು.
ಪ್ರತಿ ಪಕ್ಷವೇ ಉಳಿಯಲಿಲ್ಲ: 2007ರಲ್ಲಿ ಶಹಾಪುರ ಕ್ಷೇತ್ರದ ಶಾಸಕರಾಗಿದ್ದ ಶರಣಬಸಪ್ಪ ದರ್ಶನಾಪುರ ಸಹ ಜೆಡಿಎಸ್‌ನಲ್ಲಿದ್ದರು. ಇದರಿಂದಾಗಿ ಆಗ ನಡೆದ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 7, ಜೆಡಿಎಸ್ 15 ಹಾಗೂ ಬಿಜೆಪಿ ಒಂದು ಸ್ಥಾನ ಗಳಿಸಿದ್ದವು. 2008ರ ವಿಧಾನಸಭೆ ಚುನಾವಣೆಯಲ್ಲಿ ದರ್ಶನಾಪುರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು.
  ದರ್ಶನಾಪುರ ಅವರನ್ನು ಬೆಂಬಲಿಸಿದ ಪುರಸಭೆಯ ಜೆಡಿಎಸ್‌ನ 15 ಸದಸ್ಯರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಹೀಗಾಗಿ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್ 22 ಪಡೆದಂತಾಯಿತು. ಇದ್ದೊಬ್ಬ ಬಿಜೆಪಿ ಸದಸ್ಯರೂ ಕಾಂಗ್ರೆಸ್ ಸೇರುವ ಮೂಲಕ ಶಹಾಪುರ ಪುರಸಭೆಯಲ್ಲಿ ಪ್ರತಿಪಕ್ಷ ಇಲ್ಲದಂತಾಯಿತು.
ಗುರುಮಠಕಲ್ ಕೂಡ ಹೊರತಾಗಿಲ್ಲ: ಗುರುಮಠಕಲ್ ಪಟ್ಟಣ ಪಂಚಾಯಿತಿಯಲ್ಲೂ 2007ರಲ್ಲಿ ಕಾಂಗ್ರೆಸ್ 6, ಜೆಡಿಎಸ್‌ನ 11, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ತಲಾ ಒಬ್ಬರು ಸದಸ್ಯರು ಆಯ್ಕೆಯಾದರು. ನಂತರದ ದಿನಗಳಲ್ಲಿ ಅಧಿಕಾರಕ್ಕಾಗಿ ಜೆಡಿಎಸ್‌ನ ನಾಲ್ವರು ಸದಸ್ಯರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರಿಂದ ಕಾಂಗ್ರೆಸ್ ಅಧಿಕಾರ ಪಡೆಯುವಂತಾಯಿತು.
  ಇನ್ನು ಯಾದಗಿರಿ ನಗರಸಭೆಯ 31 ವಾರ್ಡುಗಳ ಪೈಕಿ 18 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿಯಿತು. ಮೊದಲು 30 ತಿಂಗಳು ಜೆಡಿಎಸ್‌ನವರೇ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅಧಿಕಾರ ಚಲಾಯಿಸಿದರು. ಎರಡನೇ ಅವಧಿಯ ಮೊದಲ 15 ತಿಂಗಳೂ ಜೆಡಿಎಸ್‌ನವರೇ ಅಧ್ಯಕ್ಷ-ಉಪಾಧ್ಯಕ್ಷರಾದರು. ಆದರೆ ನಂತರದ 15 ತಿಂಗಳ ಅವಧಿಗಾಗಿ ಜೆಡಿಎಸ್‌ನಲ್ಲಿ ಭುಗಿಲೆದ್ದ ಭಿನ್ನಾಭಿಪ್ರಾಯದ ಫಲ ಕಾಂಗ್ರೆಸ್‌ಗೆ ದೊರೆಯಿತು. ಕೇವಲ 9 ಸದಸ್ಯರಿದ್ದ ಕಾಂಗ್ರೆಸ್ ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಪಡೆಯಿತು.
ಮತದಾರರ ತೀರ್ಪಿಗೆ ಬೆಲೆಯೇ ಇಲ್ಲ: ಇದೆಲ್ಲದರ ಪರಿಣಾಮ ಕಳೆದ ಚುನಾವಣೆಯಲ್ಲಿ ಮತದಾರರ ತೀರ್ಪಿಗೆ ಬೆಲೆಯೇ ಇಲ್ಲದಂತಾಯಿತು. ಚುನಾವಣೆಯಲ್ಲಿ ದೊರೆತ ಜನಾದೇಶ ಎಲ್ಲಿಗೆ ಹೋಯಿತು ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಒಂದು ಕಡೆ ತಮ್ಮ ಮತ ನೀಡಿ, ಅಭ್ಯರ್ಥಿಗಳನ್ನು ಜನರು ಆಯ್ಕೆ ಮಾಡುತ್ತಾರೆ. ಆದರೆ ರಾಜಕೀಯ ನಾಯಕರ ಬೆನ್ನು ಹತ್ತುವ ಸ್ಥಳೀಯ ಜನಪ್ರತಿನಿಧಿಗಳು ರಾಜಕೀಯ ಲಾಭಕ್ಕಾಗಿ ಜನರ ಮನ್ನಣೆಯನ್ನು ಬದಿಗೊತ್ತುತ್ತಿದ್ದಾರೆ. ಇದರಿಂದಾಗಿ ಜನರೂ ಕೂಡ ಇಂತಹ ರಾಜಕೀಯದಿಂದ ಬೇಸರ ವ್ಯಕ್ತಪಡಿಸುವಂತಾಗಿದೆ.
  ಆದ್ದರಿಂದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧೆಗೆ ಮಾತ್ರ ಪ್ರಮುಖ ಪಕ್ಷದ ಬೆಂಬಲ ಸಿಕ್ಕರೆ ಸಾಕು ಎಂಬಂಥ ಮನೋಭಾವನೆ ಬಲಗೊಳ್ಳುತ್ತಿದೆ. ಮತ ನೀಡಿದವರು ಮಾತ್ರ ಎಲ್ಲ ಬೆಳವಣಿಗೆಯನ್ನು ನೋಡುತ್ತಿರುವುದು ಅನಿವಾರ್ಯ. ಆದ್ದರಿಂದ ಈ ಬಾರಿಯೂ ಅಂಥ ಬೆಳವಣಿಗೆ ನಡೆಯುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.