ಮಹಿಳೆ ಯಾರಿಗೇನು ಕಮ್ಮಿಯಿಲ್ಲ: ಸಂಜೀವರಾವ ಕುಲಕರ್ಣಿ
ಕೆಂಭಾವಿ: ಸರ್ಕಾರ ಮಹಿಳೆಯರಿಗಾಗಿ ಸಾಕಷ್ಟು ಸವಲತ್ತುಗಳನ್ನು ಒದಗಿಸುತ್ತಿದೆ. ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆ ಇಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಸಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದು ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಸಂಜೀವರಾವ ಕುಲಕರ್ಣಿ ಹೇಳಿದರು. ಇಲ್ಲಿಯ ಕನ್ಯಾ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮತನಾಡಿ, ಸರ್ಕಾರ ಶೇ.33ರಷ್ಟು ಮೀಸಲಾತಿ ಒದಗಿಸಿದೆ. ಮಹಿಳೆಯರು ಇದರ ಉಪಯೋಗ ಪಡೆಯಬೇಕು ಎಂದರು. ಸರ್ಕಾರ ಹಲವಾರು ಸವಲತ್ತುಗಳು ಕೊಟ್ಟಿದ್ದರೂ ಅದರ ಉಪಯೋಗ ಪಡೆಯದಿರುವುದು ವಿಷಾದಕರ ಸಂಗತಿಯಾಗಿದ್ದು, ಸೌಲಭ್ಯ ಉಪಯೋಗಿಸಿ ಸ್ವಾವಲಂಬಿ ಜೀವನ ನಡೆಸಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕೆಂದರು. ಸನ್ಮಾನ: ಇದೇ ವೇಳೆ ವಿವಿಧ ರಂಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ವೈದ್ಯಾಧಿಕಾರಿ ಡಾ. ರಕ್ಷಿತಾ ನ್ಯಾಮಗೊಂಡ, ಶಿಕ್ಷಣ ಸಂಯೋಜಕಿ ನಳನಿಬಾಯಿ, ಬಿಎಚ್ಇ ಗುಲಶನ್ ಬೇಗಂ, ಎಲ್ಎಚ್ಒ ನೀಲಮ್ಮ, ಎನ್ಪಿಜಿಇಎಲ್ ತಾಲೂಕಾಧಿಕಾರಿ ಗೀತಾರಾಣಿ, ಮುಖ್ಯಸ್ಥೆ ಗೀತಾಬಾಯಿ ನಾಡಗೇರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಶಾಲಾ ಮುಖ್ಯಾಧ್ಯಾಪಕ ರಜಾಕಸಾಬ ನಾಲತವಾಡ ವಹಿಸಿದ್ದರು. ಭೀಮನಗೌಡ ಕಾಚಾಪುರ, ಶರಣಪ್ಪ ಅಂಗಡಿ, ಗುಂಡಭಟ್ಟ ಜೋಷಿ ಇದ್ದರು.
ಗುಲ್ಬರ್ಗ; ಮೂರು ದಿನದ ಕಾರ್ಯಾಗಾರ
ಗುಲ್ಬರ್ಗ: ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಅಂಡ್ ಎಂಜಿನಿಯರ್ ವಿಭಾಗವು ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಎಮರ್ಜಿಂಗ್ ಟ್ರೆಂಡ್ಸ್ ಇನ್ ಐಟಿ ಕರಿಯರ್ ಪೊಲಿಟಿಕ್ಸ್ ಫಿಕ್ಚರ್ ಆಫ್ ಐಟಿ ಕರಿಯರ್ ಲೈಫ್ ಸೈಕಲ್ ಎಂಬ ವಿಷಯದ ಮೇಲೆ 3 ದಿವಸ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಕಾರ್ಯಗಾರದಲ್ಲಿ ರಿಲಯೆನ್ಸ್ ಗ್ರೂಪ್, ಯಾಹೂ, ಮೈಕ್ರೊಫ್ಟ್ ಮತ್ತು ಪ್ಲಿಫ್ ಕಾರ್ಡ್, ಅಮೆಜಾನ್ ಎಬೋರ್ಡ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಪರಿಣತರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮಾಹಿತಿ ತಂತ್ರಜ್ಞಾನ ವೃತ್ತಿಗಳ ಬಗ್ಗೆ ಸಂಬಂಧಪಟ್ಟ ಹಲವು ಪ್ರಮುಖ ಅಂಶಗಳ ಪರಿಚಯ ಮಾಡಲಾಯಿತು.
ಹೆಚ್ಕೆಇ ಸಂಸ್ಥೆಯ ಉಪಾಧ್ಯಕ್ಷ ಬಾಬುರಾವ್ ಮಂಗಾಣಿ, ಪ್ರಾಂಶುಪಾಲ ಡಾ. ಎಸ್.ಎಸ್. ಹೆಬ್ಬಾಳ ಪಾಲ್ಗೊಂಡಿದ್ದರು.
ಸಿದ್ಧಾರೂಢ ಮಠಕ್ಕೆ ನೂತನ ಮಠಾಧೀಶರು
ಶಹಾಪುರ: ಭೀ.ಗುಡಿ ಸಿದ್ಧಾರೂಢ ಮಠಕ್ಕೆ ಜ್ಞಾನೇಶ್ವರಿ ತಾಯಿಯವರನ್ನು ಮಠಾಧೀಶರನ್ನಾಗಿ ನೇಮಕ ಮಾಡಿದ್ದರಿಂದ ಭಕ್ತಾದಿಗಳು ಸ್ವಾಗತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಭಕ್ತರ ಸ್ವಾಗತವನ್ನು ಸ್ವೀಕರಿಸಿ ಮಾತನಾಡಿದ ಮಠದ ನೂತನ ಮಠಾಧೀಶರಾದ ಮಾತೋಶ್ರಿ ಜ್ಞಾನೇಶ್ವರಿ ತಾಯಿಯವರು, ಮಠವನ್ನು ಸಗರನಾಡಿನಲ್ಲಿ ಅಧ್ಯಾತ್ಮಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಲು ಶ್ರಮಿಸುವುದಾಗಿ ತಿಳಿಸಿದರು.
'ಅಧಿಕಾರಿಯಿಂದ ಬಡವರಿಗೆ ಅನ್ಯಾಯ'
ಶಹಾಪುರ: ಹೈಯಾಳ ಬಿ. ಹೋಬಳಿಯಲ್ಲಿ ಉಪ ತಹಸೀಲ್ದಾರರು ನಾಡಕಚೇರಿಯಲ್ಲಿ ದೀನ ದುರ್ಬಲರ ಮನವಿಗೆ ಸ್ಪಂದಿಸದೇ ಸರ್ಕಾರದ ಯೋಜನೆಯನ್ನು ವಿಫಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಖಜಾಂಚಿ ತಿಪ್ಪಣ್ಣಾ ಲಂಡನಕರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬಡಜನರಿಗೆ ತಲುಪಬೇಕಾದ ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ, ಪಡಿತರ ಚೀಟಿ ಇನ್ನಿತರ ಯಾವುದೇ ಕೆಲಸಗಳಿಗೆ ಹೋದರೂ ಲಂಚವಿಲ್ಲದೆ ಕೆಲಸಮಾಡಲು ಹಿಂದೇಟು ಹಾಕುತಿದ್ದಾರೆ. ತಮಗೆ ಬೇಕಿದ್ದವರಿಗೆ ತಕ್ಷಣ ಮಂಜೂರು ಮಾಡುತ್ತಾ ಕೆಲಸದ ಬಗ್ಗೆ ನಿಷ್ಠೆಯಿಲ್ಲದೆ ಅನರ್ಹರಿಗೆ ಅನುಕೂಲ ಮಾಡುತ್ತಿದ್ದಾರೆ. ಅರ್ಹತೆಯುಳ್ಳವರಿಗೆ ಯೋಜನೆ ತಲುಪಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇಂದು ಉಪನ್ಯಾಸ
ಗುಲ್ಬರ್ಗ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಮಲಾಪುರ ಸಹಯೋಗದಲ್ಲಿ ಮಹಾದೇವಿಯಮ್ಮ ಮತ್ತು ಗುರುಪಾದಪ್ಪ ಮಾಲಿಪಾಟೀಲ್ ರವರ ಸ್ಮರಣಾರ್ಥ ಮಾ.9 ರಂದು ಬೆಳಗ್ಗೆ 11.30ಕ್ಕೆ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಕಾರ್ಯಕ್ರಮ ಉದ್ಘಾಟಿಸುವರು. ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ರಾಜಕುಮಾರ ಆರ್. ಪಾಟೀಲ್ ವಚನ ಸಾಹಿತ್ಯ- ವ್ಯಕ್ತಿತ್ವ ವಿಕಾಸ ಕುರಿತು ಉಪನ್ಯಾಸ ನೀಡಲಿದ್ದಾರೆ. ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಗುರುಪಾದಪ್ಪ ಕಶೆಟ್ಟಿ ಹಾಗೂ ಪುಂಡಲಿಕರಾವ್ ಚಿರಡೆ ಗೌರವ ಅತಿಥಿಗಳಾಗಿ ಆಗಮಿಸುವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಝೆಡ್. ಬಿ. ಉಮರ್ ಅಧ್ಯಕ್ಷತೆ ವಹಿಸುವರು.
ನಾಳೆ ಬಸ್ ಸೌಲಭ್ಯ
ಗುಲ್ಬರ್ಗ: ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತಾದಿಗಳು ಶ್ರೀಶೈಲಂಗೆ ಹೋಗುವವರಿಗೆ ಮಾ.9 ರಿಂದ 12 ರವರೆಗೆ ಗುಲ್ಬರ್ಗ ಆಳಂದ, ಜೇವರ್ಗಿ, ಹಾಗೂ ಅಫಜಲ್ಪುರ ಘಟಕಗಳಿಂದ ವಿಶೇಷ ಬಸ್ಗಳ ಸೌಲಭ್ಯ ಮಾಡಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. ಗುಲ್ಬರ್ಗ ವಿಭಾಗ- 2ರ ವ್ಯಾಪ್ತಿಗೆ ಬರುವ ಗ್ರಾಮಗಳಿಂದ 40 ರಿಂದ 50 ಜನ ನೇರ ಪ್ರಯಾಣಿಕರಿದ್ದಲ್ಲಿ ಅಲ್ಲಿಂದಲೇ ಬಸ್ ಸೌಕರ್ಯ ಕಲ್ಪಿಸಲಾಗುವುದು. ವಿಶೇಷ ಬಸ್ ಸೌಕರ್ಯ ಸೌಲಭ್ಯ ಪಡೆಯಲು ಆಯಾ ಘಟಕದ ಅಧಿಕಾರಿಗಳಿಗೆ ಸಂಪರ್ಕಿಸಲು ಕೋರಲಾಗಿದೆ. ಗುಲ್ಬರ್ಗ ಘಟಕ-ಐಐ 7760992114 ಹಾಗೂ 77 60992115, ಆಳಂದ ಘಟಕ 7760992116, ಜೇವರ್ಗಿ ಘಟಕ 7760992118, ಅಫಜಲ್ಪುರ ಘಟಕ 7760992121, ಕೇಂದ್ರ ಬಸ್ ನಿಲ್ದಾಣ ಗುಲ್ಬರ್ಗ 968 6976451ಗೆ ಸಂಪರ್ಕಿಸಬಹುದು.
ಇಂದು ಅನಾವರಣ
ಗುಲ್ಬರ್ಗ: ಸುಬ್ರಾವ ಕುಲ್ಕರ್ಣಿ ಅವರ ಕಥಾಸಂಕಲನ ಭಾಗೀರಥಿ ಚಾಳ ಅನಾವರಣ ಕಾರ್ಯಕ್ರಮ ಮಾ.9 ರಂದು ಸಂಜೆ 4.15ಕ್ಕೆ ಕನ್ನಡಭವನದಲ್ಲಿ ಹಮ್ಮಿಕೊಳ್ಳಾಲಿಗದೆ ಎಂದು ಜಿಲ್ಲಾ ಕಸಾಪ ತಿಳಿಸಿದೆ. ಉನ್ನತ ಸಾಹಿತಿ ಮಲ್ಲಿಕಾರ್ಜುನ ಹಿರೇಮಠ ಕೃತಿ ಅನಾವರಣಗೊಳಿಸುವರು. ಹಿರಿಯ ಪತ್ರಕರ್ತ ರಾಜಶೇಖರ ಹತಗುಂದಿ ಹಾಗೂ ಪ್ರಕಾಶಕ ಬಸವರಾಜ ಕೋನೆಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾಹಿತಿ ಗುರುರಾಜ ಅಗ್ನಿಹೋತ್ರಿ ಕೃತಿ ಕುರಿತು ಮಾತನಾಡಲಿದ್ದಾರೆ.
ವಿಚಾರ ಸಂಕಿರಣ
ಗುಲ್ಬರ್ಗ: ಗುಲ್ಬರ್ಗದ ವಾರ್ತಾ ಇಲಾಖೆ, ಮಳಖೇಡದ ರಾಜಶ್ರೀ ಸಿಮೆಂಟ್ ಕಾಗಿಣಾ ಜನಸೇವಾ ಟ್ರಸ್ಟ್, ಸಹಜೀವನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕಿರಣ ರೂರಲ್ ರಿಕನ್ಸಟ್ರಕ್ಷನ್ ಸೊಸಾಯಿಟಿಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಆದಿತ್ಯನಗರದಲ್ಲಿ ಮಾ.9 ರಂದು ಬೆಳಗ್ಗೆ 11ಕ್ಕೆ ಹೆಚ್ಐವಿ ಏಡ್ಸ್ ಹಾಗೂ ಟಿ.ಬಿ. ಕುರಿತು ವಿಚಾರ ಸಂಕಿರಣ ಹಮ್ಮಿಕೊಂಡಿದೆ.
ನಾಳೆ ಬಿದ್ದಾಪುರ ಕಾಲೋನಿಯಲ್ಲಿ ಶಿವರಾತ್ರಿ
ಗುಲ್ಬರ್ಗ: ಆದಿಶಂಕರಚಾರ್ಯ ಅಷ್ಟೋತ್ತರ ಸೇವಾ ಸಮಿತಿ, ಶಾರದಾ ಭಜನಾ ಮಂಡಳಿ ಹಾಗೂ ಸಂಜನಗೂಡು ರಾಘವೇಂದ್ರ ಸ್ವಾಮಿ ಮಠದ ಸಂಯುಕ್ತಾಶ್ರಯದಲ್ಲಿ ನಗರದ ಬಿದ್ದಾಪುರ ಕಾಲೋನಿಯ ರಾಘವೇಂದ್ರಸ್ವಾಮಿ ಮಠದಲ್ಲಿ ಮಾ.10 ರಂದು ಮಹಾಶಿವರಾತ್ರಿ ವೈಭವದಿಂದ ಆಚರಿಸಲಾಗುವುದು. ಅಂದು ಮಾದನೂರ ವಿಷ್ಣು ತೀರ್ಥರ ಆರಾಧನೆ ಮಾಡಲಾಗುವುದು. ಬೆಳಗ್ಗೆ 9ಕ್ಕೆ ರುದ್ರಾಭಿಷೇಕ, 11ಕ್ಕೆ ಲಕ್ಷ ಬಿಲ್ವಾರ್ಚನೆ, ಸಾಯಂಕಾಲ 4 ರಿಂದ 5 ಗಂಟೆಗೆ ಸೌಂದರ್ಯ ಲಹರಿ ನಂತರ ಶಿವರಾತ್ರಿಯ ಬಗ್ಗೆ ಮಹಾರಾಜರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗದೆ. 6.30 ರಿಂದ 7.30 ರವರೆಗೆ ಪಂಡಿತ ಹಣಮಂತಚಾರ್ಯ ಸರಡಗಿ ಇವರಿಂದ ವಿಷ್ಣುತೀರ್ಥರ ಬಗ್ಗೆ ಉಪನ್ಯಾಸ, 7.30 ರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಭಕ್ತರೆಲ್ಲರು ಭಾಗವಹಿಸಬೇಕೆಂದು ಮಠದ ವ್ಯವಸ್ಥಾಪಕ ನವಲಿ ಕೃಷ್ಣಾಚಾರ್ಯ ತಿಳಿಸಿದ್ದಾರೆ.
ಬೈಕ್ ಡಿಕ್ಕಿ: ಸವಾರ ಸಾವು
ಗುಲ್ಬರ್ಗ: ಇಲ್ಲಿನ ಜೇವರ್ಗಿ ರಸ್ತೆಯಲ್ಲಿರುವ ಸನ್ ಇಂಟರ್ನ್ಯಾಶನಲ್ ಹೋಟಲ್ ಬಳಿ ಸಂಜೆ ಹೊತ್ತು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಸಾವನ್ನಪ್ಪಿರುವ ಸವಾರನನ್ನು ಸೈಬಣ್ಣ ಎಂದು ಗುರುತಿಸಲಾಗಿದೆ. ಸೈಬಣ್ಣ ಬೈಕ್ ಸವಾರಿಯಲ್ಲಿದ್ದ, ಹಿಂಬದಿ ಅನಿಲ ಸರಡಗಿ ಕುಳಿತಿದ್ದು, ಇವರಿಬ್ಬರಿದ್ದ ಬೈಕ್ ರಸ್ತೆಯಲ್ಲಿ ಟಂಟಂ ಆಟೋಗೆ ಹಿಂದಿಕ್ಕಲು ಹೋದಾಗ ಈ ದುರಂತ ಸಂಭವಿಸಿದೆ. ಬೈಕ್ ವೇಗದಲ್ಲಿತ್ತು. ನಿಷ್ಕಾಳಜಿಯ ಚಾಲನೆಯೇ ಈ ರಸ್ತೆ ದುರಂತಕ್ಕೆ ಕಾರಣ ಎಂದು ಗಾಯಗೊಂಡಿರುವ ಅನಿಲ ದೂರಿನಲ್ಲಿ ತಿಳಿಸಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಕಾಲೇಜಿನಲ್ಲಿ ಉಪನ್ಯಾಸ
ಗುಲ್ಬರ್ಗ: ಸಿದ್ದಾರ್ಥ ಕಾನೂನು ಕಾಲೇಜಿನಲ್ಲಿ ರೆಮಿಡಿಯಲ್ ಕೋಚಿಂಗ್ ಕ್ಲಾಸ್ನಲ್ಲಿ ತಡೆಯಾಜ್ಞೆಗಳು ಕುರಿತು ಉಪನ್ಯಾಸ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಉಪ ಕುಲಸಚಿವ ಪ್ರೊ. ನಾಗಬಸಯ್ಯ ಅನುಚ್ಚೇದ 32 ಮತ್ತು 226 ಸಂವಿಧಾನದ ಹೃದಯ ಭಾಗವೆಂದು ಹೇಳಿದರು. ಪರಮಾದೇಶ, ಹೇಬಿಯಸ್ ಕಾರ್ಪಸ್ ನಿಷೇದಾಜ್ಞೆ, ಸರ್ಟಿಯಾರರಿ ಮತ್ತು ಕೋ-ವಾರಂಟೋಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

