ಸಿಎಂಗೆ ಮನವಿ ಮಹಾಪೂರ
ಕ.ಪ್ರ. ವಾರ್ತೆ, ಜೇವರ್ಗಿ, ಮಾ.20
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಅಡಿಗಲ್ಲು ನೆರವೇರಿಸಲು ಮಂಗಳವಾರ ಪಟ್ಟಣಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ತಾಲೂಕಿನ ವಿವಿಧ ಸಂಘಟನೆಗಳಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್: ಮಾಜಿ ಸಿಎಂ ಧರ್ಮಸಿಂಗ್ ಅವರ ಅವಧಿಯಲ್ಲಿ ಅನೇಕ ಕಾಮಗಾರಿಗಳು ಮಂಜೂರಿಯಾಗಿದ್ದವು. ಧರ್ಮಸಿಂಗ್ ಹಾಗೂ ಕೇಂದ್ರ ಸಚಿವ ಖರ್ಗೆ ಅವರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕಾಗಿತ್ತು. ಆದರೇ ಕೇವಲ ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಮುದ್ರಿಸಿ ಅವರನ್ನು ಕರೆಯದೇ ಕಾರ್ಯಕ್ರಮ ಮಾಡುತ್ತಿರುವ ಕ್ರಮವನ್ನು ಖಂಡಿಸಿ ಕೆಪಿಸಿಸಿ ಸದಸ್ಯ ಡಾ. ಅಜಯಸಿಂಗ್, ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ದೂರು ನೀಡಿದ್ದಾರೆ.
ಬಂಧನ, ಬಿಡುಗಡೆ: ಕಾರ್ಮಿಕ ಮುಖಂಡ ಗೋಪಾಲರಾವ ಗುಡಿ ಹಾಗೂ ಜಿಪಂ ಸದಸ್ಯೆ ಶೋಭಾ ಬಾಣಿ ನೇತೃತ್ವದಲ್ಲಿ ನೂರಾರು ರೈತರು ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಮುಖ್ಯಮಂತಿಗೆ ಮನವಿ ಪತ್ರ ಸಲ್ಲಿಸಲು ಹೆಲಿಪ್ಯಾಡ್ಗೆ ಆಗಮಿಸಿದ್ದರು. ಇದಕ್ಕೆ ಅವಕಾಶ ನೀಡದ ಪೊಲೀಸ್ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು.
ವೇದಿಕೆ ಬಳಿ ಸಿಎಂ ಮನವಿ ಪತ್ರ ಸ್ವೀಕರಿಸಲಿದ್ದು, ಹೆದ್ದಾರಿ ಮೇಲೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲು ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು. ಇದಕ್ಕೆ ಒಪ್ಪದ ಜಿಪಂ ಸದಸ್ಯೆ ಶೋಭಾ ಬಾಣಿ ಅವರು ಹೆಲಿಪ್ಯಾಡ್ ಬಳಿಯೇ ಮನವಿ ಪತ್ರ ನೀಡುವುದಾಗಿ ಪಟ್ಟು ಹಿಡಿದಾಗ ಪೊಲೀಸ್ ಅಧಿಕಾರಿಗಳು ಬಂಧಿಸಿ, ಬಿಡುಗಡೆಗೊಳಿಸಿದ ನಂತರ ಮತ್ತೆ ಹೆಲಿಪ್ಯಾಡ್ ಬಳಿ ಆಗಮಿಸಿ ಸಿಎಂಗೆ ಮನವಿ ಸಲ್ಲಿಸಿದರು.
ಟಿಪ್ಪುಸುಲ್ತಾನ್ ಸಂಯುಕ್ತರಂಗ: ಮೊದಲು ಯಡ್ರಾಮಿಯು ಹೋಬಳಿ ಕೇಂದ್ರ ಸ್ಥಾನವಾಗಿತ್ತು. ಆದ್ದರಿಂದ ಆ ಹೋಬಳಿ ಕೇಂದ್ರದ ಸ್ಥಾನಮಾನವನ್ನು ಸುಮಾರು 20 ಹಳ್ಳಿಗಳಿಗೆ ಕೇಂದ್ರ ಸ್ಥಾನ ಹೊಂದಿದ ಮಳ್ಳಿ ಗ್ರಾಮಕ್ಕೆ ಹೋಬಳಿ ಸ್ಥಾನಮಾನ ನೀಡುವುದರೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮಿತಿ ಅಧ್ಯಕ್ಷ ಮಹಿಬೂಬ್ ಮನಿಯಾರ, ಕರವೇ ಅದ್ಯಕ್ಷ ಭಗವಂತ್ರಾಯ ಬೆಣ್ಣೂರ ನೇತ್ರತ್ವದಲ್ಲಿ ಸಿಎಂ ಅವರಿಗೆ ಮನವಿ ಸಲ್ಲಿಸಲಾಯಿತು.
ಪಡಿತರ ವಿತರಕರ ಸಂಘ: ನ್ಯಾಯಬೆಲೆ ಅಂಗಡಿ ಬಾಡಿಗೆ, ವಿದ್ಯುತ್, ಇನ್ನಿತರ ಖರ್ಚು ವೆಚ್ಚಗಳು ಹೆಚ್ಚಾಗಿರುವುದರಿಂದ 10 ಸಾವಿರ ಭತ್ಯೆ ನೀಡಬೇಕೆಂದು ಅಧ್ಯಕ್ಷ ಜಗದೀಶ ಪಡಶೆಟ್ಟಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ: ತಾಲೂಕಿನ ವಿವಿಧ ಬೇಡಿಕೆ ಈಡೇರಿಕೆಗಾಗಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸಿದ್ರಾಮ ಕಟ್ಟಿ ನೇತೃತ್ವದಲ್ಲಿ ಸಿಎಂ ಅವರಿಗೆ ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

