ಜಾಗೃತ ದಳಕ್ಕೆ ಭೀತಿ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.20
ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಸಂಚಾರಿ ಜಾಗೃತ ದಳ(ಫ್ಲೈಯಿಂಗ್ ಸ್ಕ್ವಾಡ್) ಹಾಗೂ ಸ್ಥಾನಿಕ ಜಾಗೃತ ದಳ(ಸಿಟ್ಟಿಂಗ್ ಸ್ಕ್ವಾಡ್)ದ ಸದಸ್ಯರ ಪಾಲಿಗೆ ಅಗ್ನಿ ಪರೀಕ್ಷೆ.
ಏಕೆಂದರೆ ಕೆಲವು ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿರುವ ನಕಲಿ ಪರೀಕ್ಷಾರ್ಥಿಗಳ ಸಂಖ್ಯಾಬಲದಿಂದಾಗಿ ಅಲ್ಲೆಲ್ಲಾ ಗೂಂಡಾ ಪ್ರವೃತ್ತಿಯೂ ಹೆಚ್ಚಿದೆ. ಇದಕ್ಕೆ ಪೂರಕವಾಗಿ ನಕಲು ಹಾವಳಿಯೂ ಸೇರಿಕೊಂಡಿದೆ. ಇದನ್ನೆಲ್ಲ ಪ್ರಶ್ನಿಸುವ ಜಾಗೃತ ದಳದವರೇ ನಕಲುಪ್ರಿಯರ ಪಾಲಿಗೆ ವಿಲನ್. ಹೀಗಾಗಿ 'ಹೊಡಿ-ಬಡಿ' ಪ್ರಕರಣಗಳು ವರದಿಯಾಗುತ್ತಿವೆ.
ಗೂಂಡಾ ವರ್ತನೆ: ನಾಲ್ಕು ದಿನದಿಂದ ದುಂಬಾಲು ಬಿದ್ದರೂ ನಕಲು ಮಾಡಲು ಅವಕಾಶ ಕೊಡಲಿಲ್ಲ ಎಂದು ಪರೀಕ್ಷಾ ಕೇಂದ್ರದ ಸ್ಥಾನಿಕ ಜಾಗೃತ ದಳದ ಮುಖ್ಯಸ್ಥರೊಬ್ಬರನ್ನು ಥಳಿಸಿದ ಪ್ರಸಂಗ ಬೀದರ್ ಜಿಲ್ಲೆಯ ಹುಮನಾಬಾದ್ನಿಂದ ಸುದ್ದಿಯಾಗಿದೆ. ಗುಲ್ಬರ್ಗ, ಪಕ್ಕದ ಯಾದಗಿರಿ ಜಿಲ್ಲೆ, ದೂರದ ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇಂತಹದ್ದೇ ಸಂದರ್ಭಗಳು ಸದ್ದು ಮಾಡಿವೆ.
ಇದರಿಂದಾಗಿ ಫ್ಲೈಯಿಂಗ್- ಸಿಟ್ಟಿಂಗ್ ಸ್ಕ್ವಾಡ್ ಎಂದು ಅನ್ಯ ಜಿಲ್ಲೆಗಳಿಗೆ ಹೋಗಿರುವ ಉಪನ್ಯಾಸಕರ ಜಂಘಾಬಲವೇ ಉಡುಗಿದಂತಾಗಿದೆ. ಪರೀಕ್ಷಾರ್ಥಿಗಳ ಗೂಂಡಾತನಕ್ಕೆ ಹೌಹಾರಿದ್ದಾರೆ. ಅಲ್ಲದೆ ತಾವು ಜಾಗೃತ ದಳದ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ಹಾಗೂ ಭಯಮುಕ್ತವಾದಂತಹ ವಾತಾವರಣ ಪರೀಕ್ಷಾ ಕೇಂದ್ರಗಳಲ್ಲಿ ಕಲ್ಪಿಸಿ ಎಂದು ತಮ್ಮ ಇಲಾಖೆ ನಿರ್ದೇಶಕರಿಗೆ ದುಂಬಾಲು ಬಿದ್ದಿದ್ದಾರೆ.
ಯಾಕೆ ಹೀಗೆ? ಪರೀಕ್ಷೆಗಳನ್ನು ಉತ್ತಮ ಗುಣಮಟ್ಟದಲ್ಲಿ ನಡೆಸಲು ಅನೇಕ ಕ್ರಮಗಳನ್ನು ಪಪೂ ಶಿಕ್ಷಣ ಇಲಾಖೆ ಕೈಗೊಂಡಿದೆ. ಆದರೂ ಜಾಗೃತ ದಳದ ಕಾರ್ಯ ಚಟುವಟಿಕೆ ಭಯಮುಕ್ತವಾಗಿರುವಂತೆ ಮಾಡಲು ಆಯಾ ಜಿಲ್ಲೆಗಳ ಪೊಲೀಸ್ ನೆರವು ಪಡೆಯುವಲ್ಲಿ ಮುಗ್ಗರಿಸಿದ್ದೇ ಇಂತಹ ಭಯದ ವಾತಾವರಣ ಎಲ್ಲೆಡೆ ಮೂಡಿ ಉಪನ್ಯಾಸಕರೇ ಬೆದರುವಂತಾಗಲು ಕಾರಣ.
ತಂಡಕ್ಕೆ ಹೆಚ್ಚಿದ ಜವಾಬ್ದಾರಿ: ಮೊದಲೆಲ್ಲಾ ಪರೀಕ್ಷಾ ಕೋಣೆಗಳಿಗೆ ಮಾತ್ರ ಸೀಮಿತವಾಗಿದ್ದ ಜಾಗೃತ ದಳದ ಕಾರ್ಯವ್ಯಾಪ್ತಿ ಈ ಬಾರಿಯ ಪರೀಕ್ಷೆಯಲ್ಲಿ ಝರಾಕ್ಸ್ ಅಂಗಡಿ, ಕಾಲೇಜು ಕಾರಿಡಾರ್, ಅಂಗಳಕ್ಕೆಲ್ಲ ವ್ಯಾಪಿಸಿದ್ದೂ ಇಂತಹ ಘಟನಾವಳಿಗಳು ಹೆಚ್ಚುವಂತೆ ಮಾಡಿದೆ. ಇಲ್ಲೆಲ್ಲಾ ಬಂದೋಬಸ್ತ್ ಕೆಲಸ ಪೊಲೀಸ್ ನಿರ್ವಹಿಸಿದ್ದರೆ ಉತ್ತಮ.
ಪಿಯುಸಿ ಪರೀಕ್ಷೆಯಲ್ಲಿ ಶಿಸ್ತು ತರಲು ಹೆಣಗಾಡುತ್ತಿರುವ ಪಪೂ ಶಿಕ್ಷಣ ಇಲಾಖೆ ಪರೀಕ್ಷಾರ್ಥಿಗಳಿಂದ ಹಲ್ಲೆಯಂತಹ ದುರಾವರ್ತನೆಗೆ ಮೂಗುದಾರ ಹಾಕಲು, ಮುಕ್ತ ಹಾಗೂ ಸ್ವತಂತ್ರವಾಗಿ ಕೆಲಸ ನಿರ್ವಹಿಸುವಂತೆ ಜಾಗೃತ ದಳ ತಂಡಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

