ನಾಳೆ ಬಹಿರಂಗ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮೇ 6
ನಾಲ್ವಾರ- ಶಾಹಾಬಾದ್ ಪಟ್ಯಾಗ ಹೆಚ್ಚ ಯಾವ್ದು ನಡದದ್ರಿ? ಮಣ್ಣೂರ- ಮಾಶಾಳದಾಗಂತೂ ಫಿಫ್ಟಿ ಫಿಫ್ಟಿ ನೋಡ್ರಿ, ಗುಲ್ಬರ್ಗ ಸಿಟಿಯೊಳಗ ಫೈಟ್ ಬಕ್ಳ ಬಿರಸ ಅದರಿ. ಪಟ್ಟಣ ಸರ್ಕಲ್ ಮಂದಿ ಯಾರಿಗೆ ಮುದ್ರೆ ಒತ್ಯಾರೋ, ಫರತಾಬಾದ್ ಹೋಬಳಿ ಮಂದಿ ಲೆಕ್ಕ ಯಾವಕಡಿ ಅದನೋ, ನರೋಣಾ ಸರ್ಕಲ್ ಯಾರಪರ ವಾಲ್ಯದೋ, ಮುಧೋಳ, ಆಡ್ಕಿ, ಸುಲೇಪೇಟ್, ನಿಡಗುಂದಾ ಸರ್ಕಲ್ನಾಗ ಕಲಂ 371 ಏನಂತದರಿ? ಕೈ, ಕಮಲ, ತೆನೆ ಹೊತ್ತ ಮಹಿಳೆಗೆ ಇಲ್ಲಿ ಬಂದ ಮತಗಳೆಷ್ಟೋ...
ಜಿಲ್ಲೆಯ 9 ಅಸೆಂಬ್ಲಿ ಕ್ಷೇತ್ರಗಳಿಗಾಗಿ ಭಾನುವಾರ ನಡೆದ ಮತದಾನದಲ್ಲಿ ಮತದಾರ ಪ್ರಭು ಶೇ.64ರಷ್ಟು ಭಾಗವಹಿಸಿ ತನ್ನ ಮನದೊಳಗಣ ಗುಟ್ಟನ್ನು ಗುಂಡಿ ಅದುಮಿ ಮತಯಂತ್ರದಲ್ಲಿ ಭದ್ರಪಡಿಸಿದ ಬೆನ್ನ ಹಿಂದೆಯೇ ಮೇಲಿನಂತೆ ಲೆಕ್ಕಾಚಾರ ಜಿಲ್ಲಾದ್ಯಂತ ಸಾಗಿದೆ.
ಗೆಲ್ಲುವ ಕುದುರೆ ಯಾರಾಗಬಹುದು, ಯಾವ ಭಾಗದಲ್ಲಿ ಯಾರಿಗೆ ಹೆಚ್ಚು ಮತ ಬಂದಿವೆ? ಯಾವ ಪಕ್ಷ ಎಲ್ಲಿ ಹೆಚ್ಚಿಗೆ ಮತರಾಶಿ ಸಾಧಿಸಲಿದೆ... ಎಂಬಿತ್ಯಾದಿ ಪ್ರಶ್ನೆಗಳೇ ಜಿಲ್ಲೆಯುದ್ದಗಲಕ್ಕೂ ಬಹುವಾಗಿ ಚರ್ಚೆಯಲ್ಲಿರುವದರಿಂದ ಕಣದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮಗೆ ಪ್ರಚಾರದಿಂದ ಆಗಿರುವ ಹೈರಾಣ ಸಹ ಲೆಕ್ಕಿಸದೆ ಕಾರ್ಯಕರ್ತರನ್ನು ಮುಂದೆ ಕುಳ್ಳಿರಿಸಿಕೊಂಡು ಗೆಲವಿನ ಲೆಕ್ಕ ಹಾಕುತ್ತಿದ್ದಾರೆ.
ಶೇ.64.22 ಮತದಾನ: ಬಿಸಿಲಿನ ತಾಪದಲ್ಲಿಯೂ ಜಿಲ್ಲಾದ್ಯಂತ ಶೇ.64.22ರಷ್ಟು ಮತದಾನವಾಗಿದೆ. 2008ರ ಮತ ಸಮರದ ಮತದಾನ ಶೇ.56.09ರಷ್ಟಾಗಿತ್ತು. ಈ ಬಾರಿ 8 ಪ್ರತಿಶತ ಮತದಾನ ಅಧಿಕವಾಗಿದ್ದರಿಂದ ಜಿಲ್ಲೆಯ ರಾಜಕೀಯ ಲೆಕ್ಕಾಚಾರಗಳು ತಮ್ಮದೇ ಆದಂತಹ ತಿರುವು ಪಡೆಯುವ ಸಾಧ್ಯತೆಗಳು ಅಧಿಕ.
ಒಟ್ಟು 17,57,951 ಮತದಾರರ ಪೈಕಿ 11,20,633 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಈ ಪೈಕಿ 5,86,645 ಪುರುಷರು, 5,33,988 ಮಹಿಳೆಯರು ಸೇರಿದ್ದಾರೆ. ಇದಲ್ಲದೇ ಜಿಲ್ಲೆಯಲ್ಲಿ 8,289 ಅಂಚೆ ಮತಗಳು ಚಲಾಯಿಸಲ್ಪಟ್ಟಿವೆ. ಅಂಚೆ ಮತಗಳೂ ಸೇರಿದಂತೆ ಜಿಲ್ಲಾದ್ಯಂತ 9 ಕ್ಷೇತ್ರಗಳಲ್ಲಿ ಶೇ.64.22ರಷ್ಟು ಮತದಾನವಾಗಿದೆ.
ಸ್ವೀಪ್ನಿಂದ ತುಸು ಹೆಚ್ಚಳ: ಈ ಬಾರಿ ಚುನಾವಣಾ ಆಯೋಗ ಮತದಾನ ಪ್ರಮಾಣ ಹೆಚ್ಚಳಕ್ಕೆಂದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 2 ಲಕ್ಷ.ನಂತೆ ಹಣ ಮೀಸಲಿಟ್ಟು ಮತದಾರರ ಜಾಗೃತಿಗೆ ನಾಟಕ, ಜಾಥಾ, ಭಾಷಣ, ಸ್ಪರ್ಧೆಗಳನ್ನು ನಡೆಸುತ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಜಿಲ್ಲಾ ಪಂಚಾಯ್ತಿ ಸಿಇಒ ಅಧ್ಯಕ್ಷತೆ, ವಾರ್ತಾ ಇಲಾಖೆ ಸಹಯೋಗದ ಮತದಾರರ ಜಾಗೃತಿ ಸಮಿತಿ ಕ್ರಿಕೆಟ್, ರಂಗೋಲಿ ಸ್ಪರ್ಧೆಳಂತಹ ವಿನೂತನ ಕಾರ್ಯಕ್ರಮಗಳೊಂದಿಗೆ ಮತದಾರರಲ್ಲಿ ಮತದಾನದ ಹಕ್ಕು ಜಾಗೃತಿಗೆ ಕ್ರಮ ಕೈಗೊಂಡಿತ್ತು.
ಇದರಿಂದಾಗಿ ಈ ಬಾರಿ ಅತಿ ಹೆಚ್ಚಿನ ಮತದಾನವಾಗುವ ನಿರೀಕ್ಷೆ ಮೂಡಿತ್ತು. ಆದರೆ ನಿರೀಕ್ಷೆ ತಲುಪಲು ಸಾಧ್ಯವಾಗಿಲ್ಲವಾದರೂ ಸ್ವೀಪ್ ಕಾರ್ಯಕ್ರಮ ಸಂಪೂರ್ಣ ಸ್ಲೀಪ್ ಆಗದೆ ಜಿಲ್ಲೆಯ ಮತದಾನದಲ್ಲಿ ಶೇ.6ರಿಂದ 8 ಪ್ರತಿಶತ ಹೆಚ್ಚಳವಾಗಿದೆ. 2008ರ ಚುನಾವಣೆಯಲ್ಲಿ ಮತದಾನ ಪ್ರಮಾಣ ಶೇ.56 ದಾಖಲಾಗಿತ್ತು. ಈ ಬಾರಿ ಇದು ಶೇ.64ಕ್ಕೆ ತಲುಪಿದೆ. ಸ್ವೀಪ್ ಸಮಿತಿ ಮತದಾನ ಜಾಗೃತಿ ಮಾಡಿದ್ದರಿಂದ ತುಸು ಹೆಚ್ಚಳ ಸಾಧ್ಯವಾಯ್ತು ಎಂಬುದರಲ್ಲಿ ಎರಡು ಮಾತಿಲ್ಲ.
ಏಕೆಂದರೆ ಈಚೆಗಷ್ಟೆ ಜಿಲ್ಲೆ ಕಂಡಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗುಲ್ಬರ್ಗ ಮಹಾನಗರ ಪಾಲಿಕೆ ಮತದಾನ ರಾಜ್ಯದಲ್ಲೇ ಅತಿ ಕಡಿಮೆ ಪ್ರಮಾಣದಲ್ಲಿ ದಾಖಲಾಗಿ(ಶೇ.52) ಸುದ್ದಿ ಮಾಡಿತ್ತು. ಈ ಬೆಳವಣಿಗೆ ಅಸೆಂಬ್ಲಿ ಮತ ಸಮರದ ಮತದಾನದ ಸುತ್ತಮುತ್ತ ಆತಂಕ ಹುಟ್ಟು ಹಾಕಿತ್ತು. ಆದರೆ ಸ್ವೀಪ್ ಸರಣಿ ಕಾರ್ಯಕ್ರಮಗಳು ಹೆಚ್ಚಿಗೆ ಅಲ್ಲದೆ ಹೋದರೂ ಅಲ್ಪವಾದರೂ ಜಾಗೃತಿ ಒದಗಿದಂತಾಗಿವೆ.
ನಾಳೆ ಬಹಿರಂಗ: ಇಲ್ಲಿನ ಜ್ಞಾನಗಂಗೆ ಅಂಗಳದ ಕೋಣೆಗಳಲ್ಲಿ ಮತಯಂತ್ರಗಳು ಭದ್ರವಾಗಿವೆ. ಮಾಜಿ ಮಂತ್ರಿಗಳು, ಶಾಸಕರು, ಮುಖ್ಯಮಂತ್ರಿಗಳ ಪುತ್ರರಾದಿಯಾಗಿ ಎಲ್ಲ 131 ಅಭ್ಯರ್ಥಿಗಳ ಹಣೆಬರಹ ಏನೆಂಬುದು ಮೇ 8ರ ಮಂತ ಎಣಿಕೆಯಲ್ಲಿ ಬಹಿರಂಗವಾಗಲಿದೆ.
ಬಿಗಿ ಬಂದೋಬಸ್ತ್ನಲ್ಲಿ ಮತಯಂತ್ರಗಳನ್ನು ಕೋಣೆಯಲ್ಲಿ ಭದ್ರವಾಗಿ ಇಡಲಾಗಿದೆ. ಮೇ 8ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಗುಲ್ಬರ್ಗ ವಿವಿ ಅಂಗಳದಲ್ಲಿಯೇ ನಡೆಯಲಿದೆ. ಮಧ್ಯಾಹ್ನದ ಹೊತ್ತಿಗೆ ಜಿಲ್ಲೆಯ 9 ಅಸೆಂಬ್ಲಿಗಳ ಫಲಿತಾಂಶ ಹೊರಬೀಳುವ ಸಾಧ್ಯತೆಗಳಿವೆ.
ತುರುಸಿನ ಹಣಾಹಣಿಯಿರುವ ಗುಲ್ಬರ್ಗ ದಕ್ಷಿಣ ಕ್ಷೇತ್ರದ ಫಲಿತಾಂಶ, ಧರಂ- ಖರ್ಗೆ ಮಕ್ಕಳು ಕಣದಲ್ಲಿರುವ ಜೇವರ್ಗಿ, ಚಿತ್ತಾಪುರ ಅಖಾಡದ ಫಲಿತಾಂಶ, ಮಾಜಿ ಮಂತ್ರಿಗಳೇ ಮುಖಾಮುಖಿಯಾಗಿರುವ ಗುಲ್ಬರ್ಗ ಗ್ರಾಮೀಣ ಕ್ಷೇತ್ರದ ಜಂಗಿ ಕುಸ್ತಿಗಳು ಈ ಬಾರಿಯ ಮತ ಸಮರದ ಪ್ರಮುಖ ಜನಾಕರ್ಷಣೆಯಾಗಿವೆ. ಇದಲ್ಲದೆ ನೃಪತುಂಗನ ನೆಲ ಸೇಡಂನಲ್ಲಿ ಕಲಂ 371 ಫಲ ವೈಜನಾಥರಿಗೆ ದಕ್ಕುವುದೋ, ಡಾ. ಶರಣ ಆ ಫಲ ಸವಿಯುವರೋ ಕಾದು ನೋಡುವಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

