ಕಾಂಗ್ರೆಸ್ ದಲಿತ ವಿರೋಧಿ ನೀತಿಗೆ ಆಕ್ರೋಶ
ಕ.ಪ್ರ. ವಾರ್ತೆ, ಶಹಾಪುರ, ಮೇ 12
ರಾಜ್ಯದ ಮುಖ್ಯಮಂತ್ರಿಯಾಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದ ಕಾಂಗ್ರೆಸ್ನ ಏಕೈಕ ಮುತ್ಸದ್ಧಿ ರಾಜಕಾರಣಿ, ಕೇಂದ್ರ ಕಾರ್ಮಿಕ ಖಾತೆಯ ಸಚಿವ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನದಿಂದ ವಂಚಿತಗೊಳಿಸುವ ಮೂಲಕ ಕಾಂಗ್ರೆಸ್ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ಸಮಾಜದ ಮುಖಂಡ ಬಿ.ಎಚ್. ಶರಣರಡ್ಡಿ ಆರೋಪಿಸಿದ್ದಾರೆ.
ನಾಲ್ಕು ದಶಕಗಳ ಕಾಲ ದಲಿತರ ಮತಗಳನ್ನು ಪಡೆದುಕೊಂಡು ರಾಜಕೀಯ ಅಧಿಕಾರಕ್ಕಾಗಿ ದಲಿತ ಹೆಸರನ್ನು ಹೇಳಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ದಲಿತರ ಬೆನ್ನಿಗೆ ಚೂರಿ ಹಾಕಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷವು ಅತ್ಯಂತ ಹಿರಿಯ ರಾಜಕಾರಣಿ ಖರ್ಗೆಯವರು ಒಬ್ಬ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರಿಗೆ ಸಿಎಂ ಸ್ಥಾನ ತಪ್ಪಿತು ಎಂಬ ಕೆಟ್ಟ ಭಾವನೆ ಜನತೆಯಲ್ಲಿ ಮೂಡುವಂತಾಗಿದೆ. ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡಬಾರದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ಸಿನ ಶಿಸ್ತಿನ ಸಿಪಾಯಿ: ರಾಜ್ಯ ವಿಧಾನಸಭೆಗೆ ಸತತ 9 ಬಾರಿ ಆಯ್ಕೆಯಾಗಿ ಕಳೆದ 40 ವರ್ಷಗಳ ಸುದೀರ್ಘ ರಾಜಕೀಯ ಇತಿಹಾಸದಲ್ಲಿ ಖರ್ಗೆಯವರು ಕಾಂಗ್ರೆಸ್ನ ಒಬ್ಬ ಶಿಸ್ತಿನ ಸಿಪಾಯಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಖರ್ಗೆಯವರಂಥ ಹಿರಿತನ ಹಾಗೂ ದಾಖಲೆ ಪ್ರಮಾಣದಲ್ಲಿ ವಿಧಾನಸಭೆಗೆ ಆಯ್ಕೆಯಾದ ನಾಯಕ ಬೇರೆ ಸಮುದಾಯದಲ್ಲಿದ್ದರೆ ಕಾಂಗ್ರೆಸ್ಸಿಗರು ಅವರನ್ನು ಇದೇ ರೀತಿ ನಡೆದುಕೊಳ್ಳುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.
ಖರ್ಗೆಯವರಿಗೆ ಮೂರು ಬಾರಿ ಸಿಎಂ ಸ್ಥಾನ ತಪ್ಪಿಸಲಾಗಿದೆ. ಖರ್ಗೆಯವರ ಮೂಲಕ ದಲಿತರನ್ನು ಮತ ಬ್ಯಾಂಕನ್ನಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿರುವುದಕ್ಕೆ ಇದು ತಾಜಾ ನಿದರ್ಶನವಾಗಿದೆ ಎಂದು ಶರಣರಡ್ಡಿ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಂಚನಸೂರಗೆ ಸಚಿವ ಸ್ಥಾನ ನೀಡಿ: ಮುದ್ನಾಳ
ಯಾದಗಿರಿ: ಕಬ್ಬಲಿಗ ಸಮಾಜದಿಂದ ಆಯ್ಕೆ ಯಾದ ರಾಜ್ಯದ ಏಕೈಕ ಶಾಸಕ ಬಾಬುರಾವ್ ಚಿಂಚನಸೂರ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಕರ್ನಾಟಕದಲ್ಲಿರುವ 50 ಲಕ್ಷ ಕಬ್ಬಲಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಟೋಕರಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ಉಮೇಶ ಮುದ್ನಾಳ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಪ್ರಸ್ತುತ ಐದನೇ ಬಾರಿಗೆ ಶಾಸಕರಾಗಿರುವ ಚಿಂಚನಸೂರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರಾಗಿ, ಸಣ್ಣ ಉಳಿತಾಯ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿ ಆಡಳಿತದ ಅನುಭವ ಹೊಂದಿದ್ದಾರೆ. ಅವರ ಸೇವಾ ಅನುಭವ ಹಾಗೂ ಹಿರಿತನ ಪರಿಗಣಿಸಿ, ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ.
ಆದ್ಯತೆ ನೀಡಿ: ಚಿಂಚನಸೂರ ಅವರಲ್ಲಿ ತುಳಿತಕ್ಕೆ ಒಳಗಾದ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುವ, ಅಭಿವೃದ್ಧಿಗೆ ಶ್ರಮಿಸುವ ಗುಣವಿದೆ. ಅಲ್ಲದೇ ಹೈ-ಕ ಭಾಗಕ್ಕೆ 371(ಜೆ) ಕಲಂ ಜಾರಿಯಾಗಿರುವ ಕಾರಣಕ್ಕೆ ಈ ಭಾಗದವರಿಗೆ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಹಿಂದುಳಿದ ಭಾಗ ಎಂಬ ಹಣೆ ಪಟ್ಟಿ ಕಿತ್ತೊಗೆಯಲು ನೆರವಾಗಬೇಕು. ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಸಂಶೋಧಕ ಡಾ. ಶಿರವಾಳ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯನವರ ಯುವಕ ಸಂಘದ ಪದಾಧಿಕಾರಿಗಳು ಕೂಡ ಬಾಬುರಾವ್ ಚಿಂಚನಸೂರಗೆ ಸಚಿವ ಸ್ಥಾನ ನೀಡಬೇಕು ಎಂದು ನಿಯೋಜಿತ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಹಾಗೂ ವರಿಷ್ಠ ನಾಯಕರನ್ನು ಒತ್ತಾಯಿಸಿದ್ದಾರೆ.
ಗುರುಪಾಟೀಲ ಶಿರವಾಳಗೆ ಅಭಿನಂದನೆ
ಶಹಾಪುರ: ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಗುರುಪಾಟೀಲ ಶಿರವಾಳ ಅವರನ್ನು ಸ್ವಕುಳ ಸಾಳಿ ಸಮಾಜದ ವತಿಯಿಂದ ಸಮಾಜದ ಅಧ್ಯಕ್ಷ ಸಿದ್ದಣ್ಣ ಶಿರವಾಳ, ರಾಜ್ಯಾಧ್ಯಕ್ಷ ಚಂದ್ರಕಾಂತ ಭಂಡಾರೆ ಸೇರಿದಂತೆ ಪ್ರಮುಖರು ಸನ್ಮಾನಿಸಿ ಶುಭ ಕೋರಿದರು.
ಚಂದ್ರಕಾಂತ ಭಂಡಾರೆ ಮಾತನಾಡಿ, ನವತರುಣರು ದೇಶದ ಪ್ರಗತಿಯತ್ತ ಸಮಾಜಮುಖಿಯಾಗಿ ಕ್ಷೇತ್ರದ ಅಭಿವೃದ್ಧಿಗೋಸ್ಕರ ಸೇವೆ ಮಾಡಿ ಜನ ಮಾನಸದಲ್ಲಿ ಸ್ಥಾನ ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಶಾಸಕರು ನಿಮ್ಮ ಸಮಾಜದ ಜೊತೆ ನಮ್ಮ ಮನೆತನದ ಅವಿನಾವಭಾವ ಸಂಬಂಧವಿದೆ. ತಮ್ಮ ಸಮಾಜದ ಯಾವುದೇ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು. ರಾಜು ಚಿಲ್ಲಾಳ, ಸುನೀಲ ಮಾನು, ಅಶೋಕ ಚೌಧರಿ, ಅರುಣಕುಮಾರ ಶಿರವಾಳ, ಕಾರ್ಯದರ್ಶಿ ಜನಾರ್ಧನ ಮಾನು, ಉಪಾಧ್ಯಕ್ಷ ಪರುಶುರಾಮ ಮಿರ್ಜಿ, ವಿಠಲ ದಿವಟೆ, ಸುರೇಶ ಚಿಲ್ಲಾಳ ಇತರರು ಇದ್ದರು.
ಇಂದು ಬಸವ ಜಯಂತಿ
ಗುಲ್ಬರ್ಗ: ಬಸವ ಜಯಂತಿ ಉತ್ಸವ ಸಮಿತಿ ಮತ್ತು ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ಮೇ 13ರಂದು ನಗರದ ಮಹಾನಗರ ಪಾಲಿಕೆ ಬಸವೇಶ್ವರ ಮೂರ್ತಿಯ ಆವರಣದಲ್ಲಿ ಬಸವ ಜಯಂತಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8 ಗಂಟೆಗೆ ಷಟಸ್ಥಲ ದ್ವಜಾರೋಹಣ ನಡೆಯಲಿದೆ. ಸುಲಫಲ ಮಠದ ಡಾ. ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ನಂತರ ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಕುರಿತು ಡಾ. ಪ್ರದೀಪಕುಮಾರ ಹೆಬ್ರಿ ಮಂಡ್ಯ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ವಿಲಾಸವತಿ ಖೂಬಾ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ಸಾಂಸ್ಕೃತಿಕ ಮೆರವಣಿಗೆಯನ್ನು ಗುಲ್ಬರ್ಗ ವಿವಿ ಕುಲಸಚಿವ ಪ್ರೊ. ಎ.ದಯಾನಂದ ಉದ್ಘಾಟಿಸಲಿದ್ದಾರೆ.
ಗುವಿವಿಯಲ್ಲಿ...
ಗುಲ್ಬರ್ಗ: ಗುಲ್ಬರ್ಗ ವಿಶ್ವವಿದ್ಯಾಲಯ ಜ್ಞಾನಗಂಗೆ ಆವರಣದಲ್ಲಿ ಮೇ 13ರಂದು ಬೆಳಗ್ಗೆ 11 ಗಂಟೆಗೆ ಮಹಾ ಮಾನವತಾವಾದಿ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ನಡೆಯಲಿದೆ.ಗಳಂಗಳಪ್ಪ ಪಾಟೀಲ್ ಬಸವಾದಿ ಶರಣ ಸಾಹಿತ್ಯ ಕೇಂದ್ರದ ಆಶ್ರಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಕನ್ನಡ ಅಧ್ಯಯನ ಸಂಸ್ಥೆಯ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ.
ಹುಬ್ಬಳ್ಳಿಯಲ್ಲಿರುವ ಖ್ಯಾತ ಸಾಹಿತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಸಂಗಮೇಶ ಹಂಡಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.ದಾನಿಗಳೂ ಆಗಿರುವ ಉದ್ಯಮಿ ಬಿ.ಜಿ. ಪಾಟೀಲ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

