ಕುಂಚಾವರಂ ಗಡಿಭಾಗದವರ ಬದುಕು ಹಸನಾದೀತೆ?
ಕನ್ನಡಪ್ರಭ ವಾರ್ತೆ, ಚಿಂಚೋಳಿ, ಮೇ 12
ತಾಲೂಕಿನ ಕುಂಚಾವರಂ ಗಡಿಭಾಗದ ಅರಣ್ಯಪ್ರದೇಶದಲ್ಲಿರುವ ಲಂಬಾಣಿ ತಾಂಡಾಗಳಲ್ಲಿ ಕಾಡುತ್ತಿರುವ ಬಡತನ, ನಿರುದ್ಯೋಗ, ಅಜ್ಞಾನ, ಮೂಢನಂಬಿಕೆಯಿಂದಾಗಿ ತಮ್ಮ ಕರುಳ ಬಳ್ಳಿಯನ್ನೇ ಮಾರಾಟ ಮಾಡಿಕೊಂಡು ಬದುಕುತ್ತಿರುವ ಇಲ್ಲಿನ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನೂತನ ಕಾಂಗ್ರೆಸ್ ಪಕ್ಷದ ಶಾಸಕ ಡಾ. ಉಮೇಶ ಜಾಧವ ಕುಂಚಾವರಂ ಲಂಬಾಣಿ ತಾಂಡಾಗಳಿಗೆ ವಿಶೇಷ ಪ್ಯಾಕೇಜ್ ಒದಗಿಸಿ ಕೊಡುವರೇ ಎಂಬುದು ಇಲ್ಲಿನ ಜನರ ಪ್ರಶ್ನೆ.
ತಾಲೂಕಿನ ಶಾದೀಪುರ ಮತ್ತು ವೆಂಕಟಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಿಕ್ಕು ನಾಯಕ ತಾಂಡಾ, ವಂಟಿಗುಡುಸಿ ಮತ್ತು ವಂಟಿಚಿಂತಾ ತಾಂಡಾಗಳಲ್ಲಿ ಅತಿಯಾದ ಬಡತನದಿಂದ ತಮ್ಮ ಹೆತ್ತ ಹೆಣ್ಣು ಹಸುಗೂಸುಗಳನ್ನೇ ಮಾರಾಟ ಮಾಡಿಕೊಳ್ಳುವ ಘಟನೆಗಳು ಇಲ್ಲಿ ಆಗಾಗ ನಡೆಯುತ್ತಲೇ ಇವೆ.
ಇದೆಲ್ಲ ಅವಶ್ಯ: ಇದಕ್ಕೆ ಮುಖ್ಯಕಾರಣ ಇಲ್ಲಿನ ಲಂಬಾಣಿ ತಾಂಡಾಗಳಲ್ಲಿ ಬಡವರಿಗೆ ಸರ್ಕಾರದ ಸೌಲಭ್ಯಗಳೇ ಮರೀಚಿಕೆಯಾದದ್ದು. ಬಡತನ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ಬೇರುಸಹಿತ ಕಿತ್ತು ಹಾಕಬೇಕಾಗಿದೆ.
ಅದಕ್ಕಾಗಿ ಇಲ್ಲಿನ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಮಹಿಳೆಯರಿಗೆ ಬ್ಯಾಂಕಿನ ಸಾಲ ಒದಗಿಸಬೇಕು. ಲಂಬಾಣಿ ಕಸೂತಿಗೆ ಹೆಚ್ಚಿನ ಮಹತ್ವ ನೀಡಬೇಕು. ಬಡವರಿಗೆ ವಾಸಿಸಲು ಮನೆಗಳು ನೀಡಬೇಕು ಮತ್ತು ಸಾರಿಗೆ ವ್ಯವಸ್ಥೆ ಹಾಗೂ ಶಿಕ್ಷಣ ಸೌಲಭ್ಯಕ್ಕಾಗಿ ಪ್ರತಿಯೊಂದು ಶಾಲೆಗಳಲ್ಲಿ ಶಿಕ್ಷಕರ ನೇಮಕ ಮಾಡಬೇಕಾಗಿದೆ.
ಸರ್ಕಾರ ಮಾಡಿದ್ದು..: ಕುಂಚಾವರಂ ಗಡಿಭಾಗದಲ್ಲಿರುವ ಲಂಬಾಣಿ ತಾಂಡಾಗಳ ಸುಧಾರಣೆಗಾಗಿ 1999- 2004ರಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕುಂಚಾವರಂ ಪ್ರದೇಶಾಭಿವೃದ್ಧಿಗಾಗಿ 10 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿ ವಂಟಿಚಿಂತಾ ತಾಂಡಾದಲ್ಲಿ ಬಡವರ ಮಕ್ಕಳಿಗೆ ಆಶ್ರಮ ವಸತಿ ಶಾಲೆ, ಧರ್ಮಾಸಾಗರ ರಸ್ತೆ ಸುಧಾರಣೆ, ಸಂಗಾಪುರ ತಾಂಡಾಗಳಲ್ಲಿರುವ ಸ್ವಸಹಾಯ ಮಹಿಳಾ ಸಂಘಗಳಿಗೆ ಬ್ಯಾಂಕಿನಿಂದ ಸಾಲ ನೀಡಲಾಯಿತು.
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಬೋರ್ವೆಲ್ ಕೊರೆಸಲಾಯಿತು. ರೈತರ ಜಮೀನು ನೀರಾವರಿಗಾಗಿ ಅಂತಾವರಂ ಗ್ರಾಮದಲ್ಲಿ ಸಣ್ಣ ನೀರಾವರಿ ಕೆರೆ ನಿರ್ಮಿಸಲಾಯಿತು.
ಆದರೆ ಅವುಗಳು ಫಲಕಾರಿಯಾಗಲಿಲ್ಲ. ಬಡವರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಮತ್ತೆ ತಮ್ಮ ಕರುಳಿನ ಕುಡಿಯನ್ನೇ ಮಾರಾಟ ಮಾಡಿಕೊಳ್ಳುವ ಸ್ಥಿತಿ ಮರುಕಳಿಸಿತು.
ಭರವಸೆ ನೀಡಿದ್ದೇ ಬಂತು..: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ನಾಯಕ, ಸ್ಥಳೀಯ ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಸುನೀಲ್ ವಲ್ಯಾಪುರೆ, ಕಳಕಪ್ಪ ಬಂಡಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಸರೋಜನಿ ನಾಯ್ಡು, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷ ಸಿ.ಮಂಜುಳಾ ಮುಂತಾದವರು ಇಲ್ಲಿನ ವಂಟಿಚಿಂತಾ ಮತ್ತು ವಂಟಿ ಗುಡಸಿ ತಾಂಡಾಗಳಿಗೆ ಭೇಟಿ ನೀಡಿ ಭರವಸೆ ಮಹಾಪೂರವೇ ಹರಿಸಿದರು. ಯಾವುದೇ ಇದುವರೆಗೂ ಯಾವುದೇ ಭರವಸೆ ಈಡೇರಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ರಾಮಯ್ಯನವರ ಅಧಿಕಾರದಲ್ಲಿ ಇಲ್ಲಿನ ನೂತನ ಶಾಸಕ ಡಾ. ಉಮೇಶ ಜಾಧವ ಕುಂಚಾವರಂ ಗಡಿಭಾಗಕ್ಕೆ ವಿಶೇಷ ಪ್ಯಾಕೇಜ್ ಒದಗಿಸಿ ಕೊಡುವರೇ ಎಂಬುದು ಇಲ್ಲಿನ ತಾಂಡಾ ನಿವಾಸಿಗಳ ನಿರೀಕ್ಷೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

