ಗುಲ್ಬರ್ಗಾ

ಹೊಣೆಗಾರಿಕೆಯಿಂದ ನುಣುಚಿಕೊಳ್ಳಬೇಡಿ..

Published On :

-ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ  ಯಾದಗಿರಿ  ಮೇ 12
ರಾಜ್ಯದಲ್ಲಿ ನಮ್ಮ ಸರ್ಕಾರವಿಲ್ಲ. ಅನುದಾನ ನೀಡುವಲ್ಲಿ ಬಿಜೆಪಿಯವರು ತಾರತಮ್ಯ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂದು ಇಷ್ಟು ದಿನ ಕುಂಟು ನೆಪ ಹೇಳುತ್ತಿದ್ದವರೇ ಈಗ ಆಳುವ ಸರ್ಕಾರದ ಪಾಲುದಾರರಾಗಿದ್ದಾರೆ. ಆದ್ದರಿಂದ ಈಗ ಹೊಣೆಗಾರಿಕೆಯಿಂದ ನುಣುಚಿಕೊಳ್ಳದೇ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯತ್ತ ಕಾಂಗ್ರೆಸ್ ಶಾಸಕರು ಗಮನಹರಿಸುವುದು ಅಗತ್ಯವಾಗಿದೆ.
ಈ ಮಾತನ್ನು ಈಗ ಹೇಳಲೇಬೇಕಾಗಿದೆ. ಏಕೆಂದರೆ ಕಳೆದ 5 ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೆ, ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕಡೆ ಕಾಂಗ್ರೆಸ್ ಶಾಸಕರಿದ್ದರು. ಸುರಪುರದಲ್ಲಿ ಆಳುವ ಬಿಜೆಪಿ ಸರ್ಕಾರದಲ್ಲಿ ರಾಜುಗೌಡ ಸಚಿವರಾಗಿದ್ದರೆ, ಉಳಿದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಯಾದಗಿರಿಯಲ್ಲಿ ಮಾಲಕರೆಡ್ಡಿ, ಶಹಾಪುರದಲ್ಲಿ ದರ್ಶನಾಪುರ ಹಾಗೂ ಗುರುಮಠಕಲ್‌ನಲ್ಲಿ ಚಿಂಚನಸೂರ ಶಾಸಕರಾಗಿದ್ದರು. ಕುಡಿವ ನೀರು, ರಸ್ತೆ, ಆಸ್ಪತ್ರೆ, ನೀರಾವರಿ ಸೌಲಭ್ಯ ಸೇರಿದಂತೆ ಏನಾದರೂ ಅನುದಾನ ನೀಡುವಂತೆ ಕೇಳಿದರೆ ಆಗ ಕಾಂಗ್ರೆಸ್‌ನ ಮೂವರು ಶಾಸಕರು ಹೇಳುತ್ತಿದ್ದದ್ದು ಒಂದೇ ಮಾತು- ನಮ್ಮ ಸರ್ಕಾರವಲ್ಲ, ಬಿಜೆಪಿಯವರು ಕಾಂಗ್ರೆಸ್ ಶಾಸಕರಿದ್ದಲ್ಲಿ ಅನುದಾನ ನೀಡುತ್ತಿಲ್ಲ. ಹೀಗೆ ಹೇಳುತ್ತಲೇ ಕಾಲ ಕಳೆದವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಅಭಿವೃದ್ಧಿ ಹೊಳೆಯನ್ನೇ ಹರಿಸಿದ್ದೇವೆ ಎಂದು ವ್ಯತಿರಿಕ್ತವಾಗಿ ಹೇಳಿಕೊಂಡು ತಿರುಗಾಡಿದರು. ಇವೆರಡನ್ನೂ ನಂಬಿದ ಮತದಾರ ಮತ್ತೆ ಕಾಂಗ್ರೆಸ್ ಬೆಂಬಲಿಸಿದ್ದಾನೆ. ಆದ್ದರಿಂದ ಶಹಾಪುರ ಹೊರತುಪಡಿಸಿ ಉಳಿದ ಮೂರು ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.
ಮೂಲ ಸೌಲಭ್ಯ ಕಲ್ಪಿಸಿ: ಆದರೆ ಈಗ ಗೆದ್ದ ಕಾಂಗ್ರೆಸ್ ಶಾಸಕರು ಹಿಂದಿನಂತೆ ಬಿಜೆಪಿಯವರ ಮೇಲೆ ಆರೋಪ ಹೊರಿಸಿ ಅಭಿವೃದ್ಧಿ ಮರೆಯುವಂತಿಲ್ಲ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಆದ್ದರಿಂದ ನೂತನ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವುದುರ ಜತೆಗೆ ಜನರ ಸಮಸ್ಯೆಗೆ ಸ್ಪಂದಿಸಬೇಕಿದೆ. ಜಿಲ್ಲಾ ಕೇಂದ್ರದ ವ್ಯಾಪ್ತಿ ಹೊಂದಿರುವ ಯಾದಗಿರಿ ಕ್ಷೇತ್ರದಿಂದ ಹಿರಿಯರು, ಮುತ್ಸದ್ದಿ ರಾಜಕೀರಣಿಯಾಗಿರುವ ಡಾ.ಎ.ಬಿ. ಮಾಲಕರೆಡ್ಡಿ ಪುನರಾಯ್ಕೆಯಾಗಿದ್ದಾರೆ. ಜಿಲ್ಲೆ ಕೇಂದ್ರ, ವಡಗೇರಾ ಸೇರಿದಂತೆ ಪ್ರಮುಖ ರಸ್ತೆಗಳು ಹದಗೆಟ್ಟು ಹಳ್ಳ ಹಿಡಿದಿವೆ. ಜಿಲ್ಲಾ ಕೇಂದ್ರದಲ್ಲಿ ಚರಂಡಿ, ಕುಡಿವ ನೀರು, ಸಮರ್ಪಕ ವಿದ್ಯುತ್ ಸೇರಿದಂತೆ ಪ್ರಮುಖ ಸಮಸ್ಯೆಗಳು ತಾಂಡವಾಡುತ್ತಿವೆ. ಮುಖ್ಯವಾಗಿ ತಾಲೂಕು ಕೇಂದ್ರವಾಗಿರುವ ವಡಗೇರಾ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಜಿಡ್ಡುಗಟ್ಟಿದ ಆಡಳಿತ ಯಂತ್ರಕ್ಕೆ ಚುರುಕು ಮೂಡಿಸುವ ಅಗತ್ಯವಿದೆ. ಹಿಂದಿನಂತೆ ನೆಪ ಹೇಳಿ ನುಣುಚಿಕೊಳ್ಳದೇ ಸ್ಪಂದಿಸಲು ಮಾಲಕರೆಡ್ಡಿ ಮುಂದಾಗಬೇಕಿದೆ.
ಎರಡು ಬೆಳೆಗೆ ನೀರು:  ಸುರಪುರದಲ್ಲಿ ಈ ಹಿಂದೆ ರಾಜುಗೌಡರಿಂದ 2 ಬಾರಿ ಪರಾಭವಗೊಂಡಿದ್ದ ರಾಜಾ ವೆಂಕಟಪ್ಪ ನಾಯಕ ಅವರನ್ನು ಜನತೆ ಮತ್ತೆ ಆರಿಸಿ ಕಳುಹಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ನಾರಾಯಣಪುರ ಎಡದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ನಡೆಸಿದ ಪಾದಯಾತ್ರೆ. ರೈತರು 2 ಬೆಳೆ ಬೆಳೆಯಲು ಅನುಕೂಲವಾಗುವಂತೆ ನಾರಾಯಣಪುರ ಜಲಾಶಯದಿಂದ ನೀರು ಹರಿಸಬೇಕು ಎಂದು ಅವರು ಸಾವಿರಾರು ರೈತರೊಂದಿಗೆ ಹೋರಾಟ ನಡೆಸಿದ್ದರು. ಇದಕ್ಕೆ ರೈತರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಇದರ ಪರಿಣಾಮವೇ ರಾಜುಗೌಡರಿಗೆ ಸೋಲಾಯಿತು. ಆದ್ದರಿಂದ ಈಗ ಶಾಸಕರಾಗಿರುವ ರಾಜಾ ವೆಂಕಟಪ್ಪ ನಾಯಕರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಮುಂದಿನ ಬೇಸಿಗೆಯಲ್ಲಿ 2 ಬೆಳೆಗೆ ನೀರು ಹರಿಸುವಂತೆ ನೋಡಿಕೊಳ್ಳಬೇಕಿದೆ. ಅಲ್ಲದೇ ಸುರಪುರ ಪಟ್ಟಣಕ್ಕೆ ಕುಡಿವ ನೀರು, ಅರ್ಹರಿಗೆ ವಸತಿ ಯೋಜನೆಯಡಿ ಮನೆ ಕಲ್ಪುಸುವ ಹೊಣೆಗಾರಿಕೆಯಿದೆ.
ಗುರುಮಠಕಲ್ ಅಭಿವೃದ್ಧಿ: ಯಾದಗಿರಿ ಬಳಿಯ ಭೀಮಾ ನದಿಯಿಂದ ಗುರುಮಠಕಲ್ ಪಟ್ಟಣ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಕುಡಿವ ನೀರು ಪೂರೈಕೆ ಕಾಮಗಾರಿ ಈಗಾಗಲೇ ಚಾಲ್ತಿಯಲ್ಲಿದೆ. ಆದರೆ ಈವರೆಗೆ ಯೋಜನೆ ಪೂರ್ಣಗೊಂಡಿಲ್ಲ. ಚುನಾವಣಾ ಪೂರ್ವದಲ್ಲಿ ಹಾಗೂ ಪ್ರಚಾರದ ಸಂದರ್ಭದಲ್ಲಿ ಬಾಬುರಾವ ಚಿಂಚನಸೂರ ಮತದಾರರಿಗೆ ನಿರಂತರ ನೀರು ಕೊಡುವ ಭರವಸೆ ನೀಡಿದ್ದರು. ಅಲ್ಲದೇ ಕಡೇಚೂರು ಗ್ರಾಮದಲ್ಲಿ ಬೃಹತ್ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗ ನಿವಾರಣೆ ಮಾಡುವುದಾಗಿಯೂ ಆಶ್ವಾಸನೆ ನೀಡಿದ್ದರು. ಕ್ಷೇತ್ರದಲ್ಲಿನ ನೂರಾರು ಕೆರೆಗಳ ಹೂಳು ತೆಗೆಸಿ ನೀರು ತುಂಬಿಸುವ ಯೋಜನೆಗೂ ಅವರು ಚಾಲನೆ ನೀಡಬೇಕಿದೆ.
ಅವ್ಯವಹಾರ ಬಯಲಿಗೆಳೆಯಿರಿ: ಶಹಾಪುರ ಕ್ಷೇತ್ರದಲ್ಲಿ ಕೆಜೆಪಿಯಿಂದ ಆಯ್ಕೆಯಾಗಿರುವ ಯುವ ಶಾಸಕ ಗುರು ಪಾಟೀಲ ಮೇಲೂ ಸಾಕಷ್ಟು ಜವಾಬ್ದಾರಿಯಿದೆ. ಹಿಂದಿನ ಶಾಸಕರು ಅನೇಕ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದಾರೆ. ವಸತಿ ಯೋಜನೆಯಲ್ಲಿ ಅವ್ಯವಹಾರ ಇತ್ಯಾದಿ ಆರೋಪಗಳನ್ನು ದರ್ಶನಾಪುರ ಮೇಲೆ ಗುರು ಪಾಟೀಲ ಮಾಡಿದ್ದರು. ಈಗ ಅವುಗಳನ್ನು ಬಯಲಿಗೆಳೆಯುವ ಕಾಲ ಕೂಡಿಬಂದಿದೆ. ಪ್ರಚಾರದ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಬೇಕಿದೆ. ಇಲ್ಲದಿದ್ದರೆ ನೀವೂ ಹೊಂದಾಣಿಕೆ ರಾಜಕಾರಣಿ ಎಂದು ಜನ ಅಂದುಕೊಳ್ಳುತ್ತಾರೆ.
 ಆದ್ದರಿಂದ ವಿರೋಧ ಪಕ್ಷದ ಶಾಸಕರಾಗಿ ಕ್ಷೇತ್ರ ಹಾಗೂ ಜಿಲ್ಲೆಯ ಪ್ರತಿಯೊಂದು ಆಗುಹೋಗುಗಳ ಬಗ್ಗೆ ಗಮನ ನೀಡಬೇಕಿದೆ. ಎಲ್ಲಾ ನಾಲ್ಕು ಶಾಸಕರ ಮೇಲೆ ಜನತೆ ಅಪಾರ ವಿಶ್ವಾಸವಿಟ್ಟಿದ್ದು, ಅವರ ಭಾವನೆಗಳಿಗೆ ಧಕ್ಕೆ ಬಾರದಂತೆ ಮಂದಿನ 5 ವರ್ಷ ಕೆಲಸ ಮಾಡಿ ತೋರಿಸುವ ಜವಾಬ್ದಾರಿಯಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.