ಗುಲ್ಬರ್ಗಾ

ಕೃಷಿ ಇಲಾಖೆ ಕನ್ನಡಿ

Published On :

ಶೇಷಮೂರ್ತಿ ಅವಧಾನಿ/ಶಂಕರಬಾಬು
ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಮೇ 23
ಜಿಲ್ಲೆಯಲ್ಲಿ ಉರಿಬಿಸಿಲ ಉಪಟಳ ತುಸು ತಗ್ಗಿ ಮೋಡ ಮುಸುಕುತ್ತ ಮುಂಗಾರು ಸ್ವಾಗತಕ್ಕೆ ಪ್ರಕೃತಿ ಸಜ್ಜಾಗುತ್ತಿರುವ ಬೆನ್ನಲ್ಲೇ ಇಲ್ಲಿನ ಕೃಷಿ ಇಲಾಖೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಕನ್ನಡಿ ಹಿಡಿಯುವಂತಹ ಬೀಜ, ರಸಗೊಬ್ಬರ ಇತ್ಯಾದಿ ಅದೆಷ್ಟು ಬೇಕೆಂದು ಲೆಕ್ಕಹಾಕಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡಿದೆ.
ಗುಲ್ಬರ್ಗ ಜಿಲ್ಲೆ 'ತೊಗರಿ ಕಣಜ'ವೆಂದೇ ಹೆಸರುವಾಸಿ. ಹೀಗಾಗಿ ಸಹಜವಾಗಿಯೇ ತೊಗರಿ ಬಿತ್ತನೆ ಕ್ಷೇತ್ರ ಹಂಗಾಮಿನಿಂದ ಹಂಗಾಮಿಗೆ ಹಿಗ್ಗುತ್ತ ಸಾಗಿದೆ. ಕಳೆದ ಬಾರಿ 3.40 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲ್ಪಟ್ಟಿದ್ದ ತೊಗರಿ ಈ ಬಾರಿ 3.65 ಲಕ್ಷ ಹೆಕ್ಟೇರ್ಗಿಂತ ಹೆಚ್ಚುವ ಸಾಧ್ಯತೆಗಳಿವೆ.
ಇದಲ್ಲದೆ ಎಂದಿನಂತೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಒಟ್ಟು ಕೃಷಿ ಕ್ಷೇತ್ರ, ಬೀಜ, ರಸಗೊಬ್ಬರ ಲಭ್ಯತೆ, ಯಾವ ಬೆಳೆ ಅದೆಷ್ಟು ಹೆಕ್ಟೇರ್ ಬಿತ್ತನೆಯಾಗಬಹುದು, ಅದಕ್ಕೆ ರೈತರಿಗೆ ಅದೆಷ್ಟು ಬೀಜ ಬೇಕಾಗಬಹುದು ಎಂಬಿತ್ಯಾದಿ ಕೂಡಿ ಕಳೆಯುವ ಲೆಕ್ಕಾಚಾರ ಮಾಡಿಕೊಂಡಿರುವ ಕೃಷಿ ಇಲಾಖೆ ಮೃಗಶಿರಾ ನಕ್ಷತ್ರ ಕಂಡೊಡನೆಯೇ ತನ್ನೆಲ್ಲ ರೈತ ಕೇಂದ್ರಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಕೊರತೆಯಾಗದಂತೆ ನೋಡಿಕೊಳ್ಳಲು ಈಗಿನಿಂದಲೇ ಪೂರ್ವ ತಯಾರಿಯಲ್ಲಿ ತೊಡಗಿದೆ.
3.65 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರಿನಲ್ಲಿ 3.65 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆಯಾಗುವ ಅಂದಾಜಿದೆ. ನೀರಾವರಿ ಕ್ಷೇತ್ರದಲ್ಲಿ 5 ಸಾವಿರ ಹೆಕ್ಟೇರ್ ಪ್ರದೇಶ ಮಳೆಯಾಧಾರಿತ ಕೃಷಿಯಲ್ಲಿ 3.60 ಲಕ್ಷ ಹೆಕ್ಟೇರ್ ಬಿತ್ತನೆಯಾಗುವ ಸಾಧ್ಯತೆ ಇದೆ.
ಇದಲ್ಲದೆ ವಿವಿಧ ದವಸ ಧಾನ್ಯಗಳ ಬಿತ್ತನೆ ಕ್ಷೇತ್ರ ಇಂತಿದೆ...
1) ಭತ್ತ- 3,200 ಹೆಕ್ಟೇರ್
2) ಮೆಕ್ಕೆಜೋಳ- 6,450 ಹೆಕ್ಟೇರ್
3) ಹೈಬ್ರೀಡ್ ಜೋಳ- 3000 ಹೆಕ್ಟೇರ್
4) ಸಜ್ಜೆ- 20,800 ಹೆಕ್ಟೇರ್
5) ಇತರೆ ತೃಣ ಧಾನ್ಯಗಳು- 600 ಹೆಕ್ಟೇರ್
6) ತೊಗರಿ- 3.65 ಲಕ್ಷ ಹೆಕ್ಟೇರ್
7) ಹುರುಳಿ- 1,500 ಹೆಕ್ಟೇರ್
8) ಹೆಸರು- 30 ಸಾವಿರ ಹೆಕ್ಟೇರ್
9) ಉದ್ದು- 40 ಸಾವಿರ ಹೆಕ್ಟೇರ್
10) ಅಲಸಂದಿ- 1,200 ಹೆಕ್ಟೇರ್
11) ಅವರೆ- 600 ಹೆಕ್ಟೇರ್
12) ಮಟಕಿ- 600 ಹೆಕ್ಟೇರ್
13) ಶೇಂಗಾ- 2 ಸಾವಿರ ಹೆಕ್ಟೇರ್
14) ಎಳ್ಳು- 7 ಸಾವಿರ ಹೆಕ್ಟೇರ್
15) ಸೂರ್ಯಕಾಂತಿ- 40 ಸಾವಿರ ಹೆಕ್ಟೇರ್
16) ಔಡಲ- 150 ಹೆಕ್ಟೇರ್
17) ಸೋಯಾ ಅವರೆ- 700 ಹೆಕ್ಟೇರ್
18) ಹತ್ತಿ- 24 ಸಾವಿರ ಹೆಕ್ಟೇರ್
19) ಕಬ್ಬು- 23 ಸಾವಿರ ಹೆಕ್ಟೇರ್
ಹಂಗಾಮಿನ ಜಿಲ್ಲೆಯ ಒಟ್ಟು ಬಿತ್ತನೆ ಗುರಿ
1) ನೀರಾವರಿ- 54,750 ಹೆಕ್ಟೇರ್
2) ಖುಷ್ಕಿ- 5,16,450 ಹೆಕ್ಟೇರ್
ಒಟ್ಟು- 5,71,200 ಹೆಕ್ಟೇರ್
ರಸಗೊಬ್ಬರ- ಬಿತ್ತನೆ ಬೀಜ: ಜಿಲ್ಲೆಯಲ್ಲಿ 2013-14ನೇ ಸಾಲಿನ ಮುಂಗಾರು ಹಂಗಾಮಿಗೆ ಬಿತ್ತನೆಗೆ ರೈತರಿಗೆ ಖರೀಫ್ನಲ್ಲಿ 59,365 ಮೆಟ್ರಿಕ್ ಟನ್, ಹಾಗೂ ರಬಿಯಲ್ಲಿ 19,116 ಮೆಟ್ರಿಕ್ ಟನ್ ಸೇರಿದಂತೆ ಒಟ್ಟು 1,63,697 ಮೆಟ್ರಿಕ್ ಟನ್ ವಿವಿಧ ನಮೂನೆಯ ರಸಗೊಬ್ಬರದ ಅಗತ್ಯತೆ ಇದೆ.
ಪ್ರಮಾಣಿತ ಬೀಜಗಳ ಬೇಡಿಕೆ ಜಿಲ್ಲೆಯಲ್ಲಿ ಒಟ್ಟು 33,076 ಕ್ವಿಂಟಲ್ ಇದೆ. ಇನ್ನು 84,579 ಕ್ವಿಂಟಲ್ ಸಾಮಾನ್ಯ ಬೀಜಗಳ ಬೇಡಿಕೆ ಜಿಲ್ಲೆಯಲ್ಲಿದೆ. ಕೃಷಿ ಇಲಾಖೆ ತಾಲೂಕುವಾರು ಬೀಜಗಳ ಬೇಡಿಕೆ ಹಾಗೂ ರಸಗೊಬ್ಬರ ಅಗತ್ಯತೆ ಬಗ್ಗೆ ಮಾಹಿತಿ ತರಿಸಿಕೊಂಡಿದೆ. ಈಗಾಗಲೇ ತನ್ನಲ್ಲಿರುವ ದಾಸ್ತಾನು ಆಧಾರಿಸಿ ಮುಂಗಾರು ಹಂಗಾಮಿನಲ್ಲಿ ಯಾವುದೇ ಕಾರಣಕ್ಕೂ ಬೀಜ, ರಸಗೊಬ್ಬರದ ಅಭಾವ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಲು ಈಗಿನಿಂದಲೇ ಯೋಜಿತ ರೀತಿಯಲ್ಲಿ ಹೆಜ್ಜೆ ಇಡಲು ನಿರ್ಣಯಿಸಿದೆ.
ವಿವಿಧ ಕಂಪನಿಗಳಿಗೆ ಆದೇಶ: ಜೋಳ, ಸಜ್ಜೆ, ಭತ್ತ, ತೊಗರಿ, ಹೆಸರು, ಉದ್ದು ಸೇರಿದಂತೆ ವಿವಧ ಧಾನ್ಯಗಳ ಪ್ರಮಾಣಿತ ಬೀಜ ಜಿಲ್ಲೆಗೆ 24,738 ಕ್ವಿಂಟಲ್ ಬೇಕು. ಈಗಾಗಲೇ ಕೆಎಸ್ಎಲ್ಸಿಯಲ್ಲಿ 3,949 ಕ್ವಿಂಟಲ್, ಕೆಓಎಫ್ನಲ್ಲಿ 550 ಕ್ವಿಂಟಲ್, ಖಾಸಗಿಯಲ್ಲಿ 1,165 ಕ್ವಿಂಟಲ್ ಸೇರಿದಂತೆ ಒಟ್ಟು 5,664 ಕ್ವಿಂಟಲ್ ಬೀಜ ದಾಸ್ತಾನಿದೆ. ಇನ್ನೂ ಕೊರತೆಯಿರುವ ದಾಸ್ತಾನು ಜಿಲ್ಲೆಗೆ ಬರುವ ದಿನಗಳಲ್ಲಿ ಹಂತಹಂತವಾಗಿ ತರಿಸಿಕೊಳ್ಳಲು ಇಲಾಖೆ ಯೋಜನೆ ರೂಪಿಸಿದೆ.
ಡಿಎಪಿ, ಯೂರಿಯಾ, ಎಂಒಪಿ, ಕಾಂಪ್ಲೆಕ್ಸ್ ಸೇರಿದಂತೆ ರಸಗೊಬ್ಬರದ ದಾಸ್ತಾನು ಸಹ ಲೆಕ್ಕ ಹಾಕಲಾಗುತ್ತಿದೆ. ಸರ್ಕಾರದ ವಿವಿಧ ಏಜೆನ್ಸಿಗಳಲ್ಲಿ 30,457 ಮೆಟ್ರಿಕ್ ಟನ್, ಖಾಸಗಿಯವರಲ್ಲಿ 10,050 ಮೆಟ್ರಿಕ್ ಟನ್ ಸೇರಿದಂತೆ 45,757 ಮೆಟ್ರಿಕ್ ಟನ್ ದಾಸ್ತಾನು ಲಭ್ಯವಿದೆ. 1,03,480 ಮೆಟ್ರಿಕ್ ಟನ್ ರಸಗೊಬ್ಬರ ಕೊರತೆ ಇದ್ದು, ಬರುವ ದಿನಗಳಲ್ಲಿ ಇದು ಜಿಲ್ಲೆಗೆ ತಲುಪುವಂತೆ ಈಗಾಗಲೇ ವಿವಿಧ ಕಂಪನಿಗಳಿಗೆ ಆದೇಶ ರವಾನೆಯಾಗಿದೆ.


ರಸಗೊಬ್ಬರ- ಬಿತ್ತನೆ ಬೀಜ ಮಾಹಿತಿ

 2013-14ನೇ ಸಾಲಿನ ರಸಗೊಬ್ಬರ ಬೇಡಿಕೆ- 1,63,697 ಮೆಟ್ರಿಕ್ ಟನ್.
 ಖಾರೀಫ್ ಹಂಗಾಮಿಗೆ ಬೇಕಾಗುವ ರಸಗೊಬ್ಬರ ಪ್ರಮಾಣ- 1,49,237 ಮೆಟ್ರಿಕ್ ಟನ್.
ಅ) ಡಿಎಪಿ- 73,929 ಮೆಟ್ರಿಕ್ ಟನ್, ಆ) ಯೂರಿಯಾ- 46,732 ಮೆಟ್ರಿಕ್ ಟನ್, ಇ) ಎಂಒಪಿ- 7,805 ಮೆಟ್ರಿಕ್ ಟನ್, ಈ) ಕಾಂಪ್ಲೆಕ್ಸ್- 20,771 ಮೆಟ್ರಿಕ್ ಟನ್.
 ರಸಗೊಬ್ಬರ ವಿತರಣೆ 185 ಸಹಕಾರ ಸಂಸ್ಥೆಗಳ ಮೂಲಕ ಕೈಗೊಳ್ಳಲಾಗುತ್ತದೆ.
 297 ಖಾಸಗಿ ಡೀಲರ್ಗಳೂ ಈ ವಿತರಣೆ ಜಾಲದಡಿಯಲ್ಲಿ ಪ್ರಮಾಣಿತ ಪರವಾನಗಿಯೊಂದಿಗೆ ನೋಂದಣಿಯಾಗಿದ್ದಾರೆ.
 ಹೆಚ್ಚುವರಿ ರಸಗೊಬ್ಬರ ದಾಸ್ತಾನು- 33,735 ಮೆಟ್ರಿಕ್ ಟನ್.
 ಪ್ರಮಾಣಿತ ಬೀಜಗಳ ಬೇಡಿಕೆ- 33,076 ಕ್ವಿಂಟಲ್.
 ಖಾರೀಫ್ ಹಂಗಾಮಿಗೆ ಬೇಕಾಗುವ ಬೀಜದ ಪ್ರಮಾಣ- 24,738 ಕ್ವಿಂಟಲ್.
 ಜಿಲ್ಲೆಯ 7 ತಾಲೂಕುಗಳಲ್ಲಿನ 32 ರೈತ ಸಂಪರ್ಕ ಕೇಂದ್ರಗಳಿಂದ ಪ್ರಮಾಣಿತ ಬಿತ್ತನೆ ಬೀಜ ವಿತರಣೆ ನಡೆಯಲಿದೆ. 89 ಖಾಸಗಿ ಸಂಸ್ಥೆಗಳವರೂ ಈ ಕೆಲಸ ಮಾಡುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.