ಗುಲ್ಬರ್ಗಾ

ಬತ್ತದ ಕಟಾವು ಬಲುಜೋರು...

Published On :

ಹುಣಸಗಿ: ಕೃಷ್ಣಾ ಅಚ್ಚಕಟ್ಟು ಪ್ರದೇಶದ ಹುಣಸಗಿ ಹಾಗೂ ಸುತ್ತಮುತ್ತಲಿನ ಗದ್ದೆಗಳಲ್ಲಿ ಎರಡ್ಮೂರು ದಿನಗಳಿಂದ ಬತ್ತದ ಬೆಳೆಯ ರಾಶಿ ಆರಂಭಗೊಂಡಿದ್ದು, ರೈತರು ಮತ್ತು ತಮ್ಮ ಕೃಷಿ ಕಾರ್ಮಿಕರು ಬಿಡುವಿಲ್ಲದ ಚಟುವಟಿಕೆಯಲ್ಲಿ ತೊಡಗಿದ್ದಾರೆ.
ಈ ಬಾರಿ ಕೆಲವರ ಗದ್ದೆಗಳಲ್ಲಿ ಪ್ರತಿ ಎಕರೆಗೆ 40 ರಿಂದ 45 ಚೀಲಗಳಷ್ಟು ಇಳುವರಿ ಬರುತ್ತಿದೆ ಎಂದು ಹುಣಸಗಿಯ ಪ್ರಗತಿಪರ ರೈತ ಬಸವರಾಜ್ ಸ್ಥಾವರಮಠ ಅಭಿಪ್ರಾಯ ವ್ಯಕ್ತಪಡಿಸಿ, ಈ ಸಲ ಬತ್ತಕ್ಕೆ ಉತ್ತಮ ಬೆಲೆ ಬಂದಲ್ಲಿ ರೈತರಿಗೆ ಬಂಪರ್ ಕೊಡುಗೆ ಸಿಕ್ಕಂತಾಗಲಿದೆ ಎಂದು ಪತ್ರಿಕೆಗೆ ತಿಳಿಸಿದರು.
ಆತಂಕ: ಆದರೆ ಇದೇ ಖುಷಿ ಈ ಮುಂದಿನ ಹಂಗಾಮಿಗೆ ಆಗದಿರಬಹುದೆಂಬ ಆತಂಕ ಅನೇಕ ಜನ ರೈತರಲ್ಲಿ ಮೂಡಿಸಿರುವುದನ್ನು ತಳ್ಳಿಹಾಕುವಂತಿಲ್ಲ.
  ಕಾರಣವಿಷ್ಟೇ, ನ. 18ರಂದು ನಡೆಸಲಾದ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ. 10ರವರೆಗೆ ಮಾತ್ರ ಕಾಲುವೆಗಳಿಗೆ ನೀರು ಹರಿಸಲಾಗುವುದೆಂದು ನಿರ್ಧಾರ ಕೈಗೊಂಡಿರುವುದು.  
ಕಳೆದ ಎರಡು ವರ್ಷಗಳಿಂದ ಜಲಾಶಯಗಳಲ್ಲಿ ನೀರಿನ ಕೊರತೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮದವರು ಮಾ. 31ರವರೆಗೆ ನೀರು ನೀಡದ್ದರಿಂದ ಹೊಲ ಗದ್ದೆಗಳನ್ನು ಖಾಲಿ ಬಿಟ್ಟು ಭಾರಿ ಪ್ರಮಾಣದ ನಷ್ಟ ಅನುಭವಿಸಿದೆವು ಎಂದು ಅನೇಕ ರೈತರು ಹಿಂದಿನ ಕಷ್ಟವನ್ನು ನೆನೆಸಿಕೊಳ್ಳುತ್ತಿದ್ದಾರೆ.
ಕಾಲುವೆಗಳಿಗೆ ನೀರು: ಇದೀಗ ಬತ್ತದ ರಾಶಿ ಭರದಿಂದ ಆರಂಭಗೊಂಡಿದ್ದರೂ, ಕನಿಷ್ಟ ಇನ್ನೂ ಮೂರು ವಾರಗಳಿಗೂ ಹೆಚ್ಚು ಕಾಲ ನಡೆಯಲಿದೆ ಎನ್ನಲಾಗುತ್ತಿದೆ. ಈ ವರ್ಷ ಆಗಸ್ಟ್‌ನಿಂದ ಕಾಲುವೆಗಳಿಗೆ ನೀರು ಹರಿಸಲು ಆರಂಭಿಸಲಾಯಿತು. ಕೊಳವೆ ಬಾವಿ, ಹಳ್ಳದ ದಂಡೆಗಳಿಗಿರುವ ರೈತರು ಮುಂಚೆಯೇ ಬತ್ತದ ಸಸಿಮಡಿಗಳನ್ನು ಹಾಕಿ ನಾಟಿ ಮಾಡಿದರು. ಆದರೆ ಇಂಥವರ ಸಂಖ್ಯೆ ಮಾತ್ರ ಬೆರೆಳೆಣಿಕೆಯಷ್ಟು. ಬಹುತೇಕ ಜನ ರೈತರು ನಾನಾ ಕಾರಣಗಳಿಂದಾಗಿ ಸೆಪ್ಟಂಬರ್ ಕೊನೆ ವಾರದವರೆಗೂ ಬತ್ತದ ನಾಟಿ ಮಾಡಿದ್ದೂ ಉಂಟು. ಇಂಥವರ ಗದ್ದೆಗಳ ರಾಶಿ ಸ್ವಲ್ಪ ತಡವಾಗಲು ಕಾರಣವೆನ್ನಲಾಗುತ್ತಿದೆ.
ಮುಂಗಾರು ಹಂಗಾಮಿನಲ್ಲಿ ತಡವಾಗಿ ನಾಟಿ ಮಾಡಿರುವ ರೈತರು ಹಿಂಗಾರು ಹಂಗಾಮಿಗೆ ಬತ್ತ ನಾಟಿ ಮಾಡಲು ಮೀನಮೇಷ ಎಣಿಸುತ್ತಿರುವುದು ನಿಜ. ಕಳೆದ ವರ್ಷದ ಹಿಂಗಾರು ಹಂಗಾಮಿಗೆ ಈ ಭಾಗದ ಹಲವು ಜನ ರೈತರು ಬತ್ತಕ್ಕೆ ಬೈ ಹೇಳಿ ಇತರ ಅಲ್ಪಾವಧಿ ಬೆಳೆಗೆ ಜೈ ಎಂದಿದ್ದನ್ನು ಸ್ಮರಿಸಬಹುದು.
ಒಟ್ಟಾರೆ ಇನ್ನೂ ಒಂದು ತಿಂಗಳು ನಿಸರ್ಗ ಯಾವುದೇ ಮುನಿಸು ತೋರದೆ ಸಹಕರಿಸಿದಲ್ಲಿ ಹಾಗೂ ಸಮರ್ಪಕ ಬೆಲೆ ಸಿಕ್ಕರೆ ಬತ್ತದ ಬೆಳೆಗಾರ ಮುಖದಲ್ಲಿ ಮಂದಹಾಸ ಮೂಡಲಿದೆ ಎಂದು ಯುವ ರೈತ ಗುರಣ್ಣ ರೇವಡಿ ಹೇಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.