ಗುಲ್ಬರ್ಗಾ

ನಾಳೆ ಕೇಂದ್ರೀಯ ವಿವಿ ಕ್ಯಾಂಪಸ್ ಸಮರ್ಪಣೆ

Published On :

ಗುಲ್ಬರ್ಗ:  ಗುಲ್ಬರ್ಗ- ಆಳಂದ ರಸ್ತೆಯ ಕಡಗಂಚಿ ಹತ್ತಿರ ನೂತನವಾಗಿ ನಿರ್ಮಾಣವಾಗುತ್ತಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ಎಂ.ಎಂ. ಪಲ್ಲಂರಾಜು ನ.30ರಂದು ಬೆ.11ಕ್ಕೆ ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಎಸ್.ಎಸ್. ಮೂರ್ತಿ ತಿಳಿಸಿದರು.
ಕಡಗಂಚಿ ಹತ್ತಿರದ ಕೇಂದ್ರೀಯ ವಿವಿ ನೂತನ ಕಟ್ಟಡದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಶೈಕ್ಷಣಿಕ ಸಮುಚ್ಚಯ- 1, ರೇಲ್ವೆ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ಆಡಳಿತ ಕಚೇರಿ ಕಟ್ಟಡ, ಸಚಿವ ಖಮರುಲ್ ಇಸ್ಲಾಂ ಹಾಸ್ಟೆಲ್ ಕಟ್ಟಡ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಶೈಕ್ಷಣಿಕ ಸಮುಚ್ಚಯ-2ನ್ನು ಉದ್ಘಾಟಿಸುವರು ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಸಂಸದ ಡಾ. ಧರ್ಮಸಿಂಗ್, ರಾಜ್ಯಸಭಾ ಸದಸ್ಯ ಬಿಪಿ ಸೇಡಂ, ಶಾಸಕ ಬಿ.ಆರ್. ಪಾಟೀಲ್ ಉಪಸ್ಥಿತರಿರುವರು. ಕರ್ನಾಟಕ ಕೇಂದ್ರೀಯ ವಿವಿಯ ಕುಲಾಧಿಪತಿ ಪ್ರೊ. ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಗಾಮೀಣಾಭಿವೃದ್ಧಿಯಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು 25 ಕೋಟಿಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇದರಡಿಯಲ್ಲಿ ವಿಶೇಷ ಸ್ಥಳಗಳಲ್ಲಿ ನೀರು ನಿರ್ವಹಣೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕ್ಯಾಂಪಸ್ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ 2009ರಿಂದ 2014ರವರೆಗೆ 243 ಕೋಟಿ ಬಿಡುಗಡೆ ಮಾಡಿದೆ. ಈಗಾಗಲೇ 170 ಕೋಟಿಯನ್ನು ಗುತ್ತಿಗೆದಾರರಾದ ರೈಟ್ಸ್ ಕಂಪನಿಗೆ ಬಿಡುಗಡೆ ಮಾಡಿದ್ದು, ಈ ಪೈಕಿ 90 ಕೋಟಿ ಖರ್ಚು ಮಾಡಲಾಗಿದೆ ಎಂದರು.
ಡಿಸೆಂಬರ್‌ನಿಂದ ನೂತನ ಕಟ್ಟಡ ಕಾರ್ಯಾರಂಭ: ಸದ್ಯ ಕೇಂದ್ರೀಯ ವಿಶ್ವವಿದ್ಯಾಲಯವು 50 ಬೋಧನಾಂಗ ಸಿಬ್ಬಂದಿ ಹಾಗೂ 800 ವಿದ್ಯಾರ್ಥಿಗಳನ್ನು ಹೊಂದಿದೆ. ಡಿಸೆಂಬರ್ ಮಾಹೆಯಿಂದ ನೂತನ ಕಟ್ಟಡದಲ್ಲಿ ವಿಶ್ವವಿದ್ಯಾಲಯ ಕಾರ್ಯಾರಂಭ ಮಾಡಲಿದ್ದು, ಸುಮಾರು 260 ವಿದ್ಯಾರ್ಥಿಗಳಿಗೆ 2014ರ ಮಾರ್ಚ್ ಮಾಹೆಯಿಂದ ವಸತಿ ಸೌಕರ್ಯ ಕಲ್ಪಿಸಲಾಗುವುದು. 2017ರ ಹೊತ್ತಿಗೆ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 150 ಬೋಧನಾ ಸಿಬ್ಬಂದಿ ಹಾಗೂ 1500 ವಿದ್ಯಾರ್ಥಿಗಳನ್ನು ಹೊಂದಲು ಗುರಿ ಹಮ್ಮಿಕೊಳ್ಳಲಾಗಿದೆ ಎಂದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಡೋಣೂರ, ಕುಲಸಚಿವ ಪ್ರೊ. ಅಲಿ ರಾಜಾ ಮೋಸ್ವಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ವೀರಣ್ಣ ಕಮ್ಮಾರ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.