ಸಿಬ್ಬಂದಿ ಕೊರತೆ; 'ಪಶು' ಆಸ್ಪತ್ರೆಗಳಿಗೆ ಅನಾರೋಗ್ಯ
ಕ.ಪ್ರ.ವಾರ್ತೆ , ಗುಲ್ಬರ್ಗ , ನ.30
ಹಿಂದುಳಿದ ಹೈ-ಕ ನೆಲದಲ್ಲಿರುವ ಅರ್ಧ ಡಜನ್ ಜಿಲ್ಲೆಗಳಲ್ಲಿ ಜಾನುವಾರುಗಳ ಆರೋಗ್ಯ ಸಂರಕ್ಷಣೆಗೆ ಗ್ರಹಣ ಅಮರಿಕೊಂಡಿದೆ. ಪಶು ವೈದ್ಯರು, ಜಾನುವಾರು ಅಧಿಕಾರಿ, ವೈದ್ಯಕೀಯ ಪರೀಕ್ಷಕ ಸೇರಿದಂತೆ ವಿವಿಧ ಹಂತದ ನೂರಾರು ಹುದ್ದೆಗಳು ಖಾಲಿ ಬಿದ್ದಿದ್ದೇ ಇದಕ್ಕೆ ಕಾರಣ.
ಸಿಬ್ಬಂದಿ ಕೊರತೆ ಕಾಟದಿಂದ ಹೈ-ಕ ಪ್ರದೇಶದ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿನ ಜಾನುವಾರು ಆರೋಗ್ಯ ಸಂರಕ್ಷಣೆಗೆ ಗರ ಬಡಿದಂತಾಗಿದೆ. ಬಡಪಾಯಿ ರೈತರು ತಮ್ಮ ಪಶುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಕಂಗಾಲಾಗಿದ್ದಾರೆ.
6 ಜಿಲ್ಲೆಗಳಲ್ಲಿ ಒಟ್ಟು 55 ಪಶು ಆಸ್ಪತ್ರೆ, 439 ಪಶು ಚಿಕಿತ್ಸಾಲಯಗಳಿವೆ. ಆದರೂ, ಸಿಬ್ಬಂದಿ ಬರದಿಂದಾಗಿ ಇವುಗಳಲ್ಲಿ ಸಿಂಹಪಾಲು ಆಸ್ಪತ್ರೆ, ಚಿಕಿತ್ಸಾಲಯಗಳು ಕೆಲಸಕ್ಕೆ ಬಾರದಂತಾಗಿವೆ. ಬಹುತೇಕ ಕಡೆಗಳಲ್ಲಿ ಪಶು ವೈದ್ಯರೇ ಇಲ್ಲ. ಹೀಗಾಗಿ, ರೋಗಗಳು ಕಾಡುವ ಜಾನುವಾರು ಜೊತೆ ರೈತರು ಆಸ್ಪತ್ರೆಗೆ ಬಂದರೂ ವ್ಯರ್ಥ ಎಂಬಂತಾಗಿದೆ.
ಆಸ್ಪತ್ರೆಗಳು ಖಾಲಿ ಖಾಲಿ: ಮಂಜೂರಾದ ಸಹಾಯಕ ನಿರ್ದೇಶಕರ ಹುದ್ದೆಗಳು 55 ಆದರೂ ಭರ್ತಿಯಾಗಿವೆ. ಕೇವಲ 17, 38 ಹುದ್ದೆಗಳು ಖಾಲಿ ಬಿದ್ದಿರುವುದರಿಂದ ಹೈ-ಕ ಪ್ರದೇಶದ 6 ಜಿಲ್ಲೆಗಳಲ್ಲಿ ಪಶು ಆರೋಗ್ಯ ಸೇವಾ ಅಭಿಯಾನವೇ ಕುಸಿತ ಕಂಡಿದೆ. ಮಂಜೂರಾದ ಪಶು ವೈದ್ಯಾಧಿಕಾರಿಗಳ 31 ಹುದ್ದೆಗಳಲ್ಲಿ 12ಕ್ಕೂ ಹೆಚ್ಚು ಹುದ್ದೆ ಖಾಲಿ ಬಿದ್ದರೆ, ಜಾನುವಾರು ಅಧಿಕಾರಿ 13 ಹುದ್ದೆಗಳೂ ಸಿಬ್ಬಂದಿ ಇಲ್ಲದೆ ಭಣಗುಡುತ್ತಿವೆ. ಇನ್ನು ಪಶು ಚಿಕಿತ್ಸಾಲಯಗಳಲ್ಲಿನ ಮಂಜೂರಾದ 250 ಜಾನುವಾರು ಅಧಿಕಾರಿ ಹುದ್ದೆಗಳಲ್ಲಿ 195ಕ್ಕೂ ಹೆಚ್ಚು ಹುದ್ದೆ ಖಾಲಿ ಇವೆ.
ಪಶು ಚಿಕಿತ್ಸಾಲಯಗಳಲ್ಲಿಯೂ ಇದೇ ದುರ್ಗತಿ. ಹೀಗಾಗಿ ಹೈ-ಕ ಪ್ರದೇಶದ 6 ಜಿಲ್ಲೆಗಳ ಪಶು ಆರೋಗ್ಯ ಸೇವೆ ಸಿಬ್ಬಂದಿ ಕೊರತೆಯಿಂದಾಗಿ ಯೋಜನೆ ಹಳ್ಳ ಹಿಡಿದಿದೆ. ಗುಲ್ಬರ್ಗ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಯಲ್ಲಂತೂ ದಶಕಗಳಿಂದ ಹುದ್ದೆಗಳು ಖಾಲಿ ಇದ್ದ ಕಾರಣ ಸಮಸ್ಯೆ ದ್ವಿಗುಣಗೊಂಡಿದೆ.
ಬೀಗ ಹಾಕುವ ದುಸ್ಥಿತಿ: ಜಿಲ್ಲೆಯಲ್ಲಿ ಮಂಜೂರಾದ ಪಶು ಆರೋಗ್ಯ ಸೇವೆಯ 800 ಹುದ್ದೆಗಳಲ್ಲಿ 350ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಅನೇಕ ಆಸ್ಪತ್ರೆಗಳಲ್ಲಿ 'ಡಿ' ಗುಂಪಿನ ನೌಕರರಿಲ್ಲ. ಹೀಗಾಗಿ, ಇಲ್ಲಿರುವ ಪಶು ವೈದ್ಯಕೀಯ ಪರೀಕ್ಷಕರೇ ಲಸಿಕೆ ಹಾಕಲೋ, ಔಷಧಿ ವಿತರಿಸಲೋ ಹೋದರೆ ಆಸ್ಪತ್ರೆಗೆ ಬೀಗ ಹಾಕುವ ಅನಿವಾರ್ಯತೆ ಇದೆ. ಅದೆಷ್ಟೋ ಕಡೆಗಳಲ್ಲಿ ಇರೋ ಒಬ್ಬ ಸಿಬ್ಬಂದಿ ರಜೆ ಹಾಕಿದರೆ ಆಸ್ಪತ್ರೆಗೆ ಬೀಗ ಹಾಕಲೇಬೇಕಾದಂತಹ ಸ್ಥಿತಿ. ಹೀಗಿರೋವಾಗ ಜಾನುವಾರು ಆರೋಗ್ಯ ಕಾಳಜಿಗೆ ಬೆಲೆ ಉಂಟೆ? ಗುಲ್ಬರ್ಗಕ್ಕೆ ಸೇರಿದ ರೇವು ನಾಯಕ ಬೆಳಮಗಿ ಪಶು ಸಂಗೋಪನಾ ಸಚಿವರಾಗಿ 2 ಅವಧಿವರೆಗೆ ಇದ್ದರೂ ಸಹ ಈ ಭಾಗದಲ್ಲಿನ ಪಶು ಆಸ್ಪತ್ರೆಗಳು ಸಿಬ್ಬಂದಿ ಕೊರತೆಯಿಂದ ನರಳುತ್ತಿರುವುದು ಮಾತ್ರ ದುರಂತ.
'ಧನ್ವಂತರಿ'ಗೆ ಬಾಲಗ್ರಹಪೀಡೆ: ಹೈ-ಕ ಪ್ರದೇಶದ 6 ಜಿಲ್ಲೆಗಳ ಆಯ್ದ 26 ತಾಲೂಕುಗಳಲ್ಲಿ ಸಂಚಾರಿ ಪಶು ಆಸ್ಪತ್ರೆ ಯೋಜನೆ ಧನ್ವಂತರಿಗೆ ಚಾಲನೆ ನೀಡಲಾಗಿತ್ತು. ಆರೋಗ್ಯ ಕವಚ-108 ಮಾದರಿಯಲ್ಲೇ ಧನ್ವವಂತರಿ ಯೋಜನೆ ರೂಪಿಸುವುದಾಗಿ ಹಿಂದಿನ ಸರ್ಕಾರ ಹೇಳಿತ್ತು. ಈ ಯೋಜನೆಗೆ ಗುಲ್ಬರ್ಗದಲ್ಲಿ ಅಂದಿನ ಸಿಎಂ ಜಗದೀಶ ಶೆಟ್ಟರ್, ಪಶು ಸಂಗೋಪನಾ ಸಚಿವ ರೇವು ನಾಯಕ ಚಾಲನೆ ಸಹ ನೀಡಿದ್ದರು. ಆದರೆ ಈ ಯೋಜನೆ ಆರಂಭವಾಗಲೇ ಇಲ್ಲ.
ಬೆಂಗಳೂರಿನ ಸ್ಪ್ಯಾನ್ ಏಜನ್ಸಿಯವರು ಈ ಯೋಜನೆ ಟೆಂಡರ್ ಪಡೆದಿದ್ದರೂ ಯೋಜನೆ ಅನುಷ್ಠಾನಗೊಳ್ಳದೆ ಹೋಗಿದ್ದು, ಜಾನುವಾರುಗಳ ಪಾಲಿನ ದೌರ್ಭಾಗ್ಯ. ಸದನದಲ್ಲಿ ಈ ವಿಚಾರವಾಗಿ ಎಂಎಲ್ಸಿ ಅಮರನಾಥ ಪಾಟೀಲ್, ಎಲ್ಲಂಪ್ರಭು ಪಾಟೀಲ್ ಇಬ್ಬರೂ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪಶು ಸಂಗೋಪನಾ ಸಚಿವ ಜಯಚಂದ್ರ ಅವರು, 2013- 14ನೇ ಸಾಲಿನ ಆಯವ್ಯಯದಲ್ಲಿ ಸಂಚಾರಿ ಪಶು ಚಿಕಿತ್ಸಾಯಲಗಳಿಗೆ ನೂತನ ವಾಹನವನ್ನು ಒದಗಿಸಿ ಧನ್ವಂತರಿ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

