ಕಾಂಗ್ರೆಸ್-ಬಿಜೆಪಿ ಕೆಸರೆರಚಾಟ
ಕ.ಪ್ರ. ವಾರ್ತೆ, ಗುಲ್ಬರ್ಗ, ಏ.14
ಇನ್ನೇನು ಮತದಾನಕ್ಕೆ 2 ದಿನಗಳಷ್ಟೇ ಬಾಕಿ ಉಳಿದಿರುವಾಗ ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿವೆ. ಖರ್ಗೆ ಪುನರಾಯ್ಕೆ ಬಯಸಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಶತಾಯು ಗತಾಯು ಗೆಲ್ಲಲೇಬೇಕು ಎಂದು ಬಿರುಸಿನ ಪೈಪೋಟಿಗೆ ಇಳಿದಿದೆ.
ಇದರಿಂದಾಗಿ ಸಹಜವಾಗಿಯೇ ಗುಲ್ಬರ್ಗ ಗದ್ದುಗೆಯಲ್ಲಿ ರಾಜಕೀಯವಾಗಿ ಬಿಸಿ ಹೆಚ್ಚುತ್ತಿದೆ. ಅಭಿವೃದ್ಧಿ ಮಾಡಿದ್ದೇನೆ, ಅದನ್ನು ನೋಡಲು ಬಿಜೆಪಿಯರಿಗೆ ಕಣ್ಣಿಲ್ಲ, ಕಣ್ಣಿಗೆ ಪೊರೆ ಬಂದಿವೆ ಎಂದು ಖರ್ಗೆ ಟೀಕೆಗೆ ತಿರುಗೇಟು ನೀಡಿರುವ ಬಿಜೆಪಿ, ತಮ್ಮ ಸರ್ಕಾರದ ಅವಧಿಯಲ್ಲಿ ಗುಲ್ಬರ್ಗಕ್ಕೆ ಆಗಿರುವ ಲಾಭಗಳನ್ನೆಲ್ಲ ಪಟ್ಟಿ ಮಾಡಿ ಹೇಳುವ ಮೂಲಕ ಖರ್ಗೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರಗತಿ ಮಾಡಿದ್ದೇವೆ, ಯಾರ ಕಣ್ಣಿಗೆ ಪೊರೆ ಬಂದಿದೆ ಎಂಬುದನ್ನು ಜನರೇ ನಿರ್ಧರಿಸಲಿ ಎಂದು ಟಾಂಗ್ ನೀಡಿದ್ದಾರೆ.
ದೊಡ್ಡವರ ಟೀಕೆಗೆ ನೋ ಕಮೆಂಟ್: ಖರ್ಗೆ ಕೇಂದ್ರದಿಂದ ಅನುದಾನ ತಂದೇ ಇಲ್ಲ ಎಂಬ ರೇವುನಾಯಕರ ಹೇಳಿಕೆ ಬಗ್ಗೆ ಖರ್ಗೆ ಗಮನ ಸೆಳೆದಾಗ, ದೊಡ್ಡವರ ಬಗ್ಗೆ ಏನೂ ಹೇಳೋದಿಲ್ಲ, ಅವರು ಯಾವ ಶೀರ್ಷಿಕೆ ಎಂದು ಹೇಳಲಿ, ಮಾಧ್ಯಮದಲ್ಲಾದರೂ ಹೇಳಿಕೆ ಕೊಡಲಿ, ಆಗ ಪ್ರತಿ ಹೇಳಿಕೆ, ಮಾಹಿತಿ ಸಮೇತ ಕೊಡುವೆ ಎಂದರು.
1970ರಲ್ಲಿ ಗುಲ್ಬರ್ಗ ಸೇರಿದಂತೆ ಹೈ-ಕ ಎಲ್ಲಿತ್ತೋ ಅಲ್ಲೇ ಇದೆ ಎಂಬುದು ತಜ್ಞರ ಅಭಿಮತ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅಭಿವೃದ್ಧಿ ದಿನ ಬೆಳಗಾದರೆ ಆಗೋದಲ್ಲ, ಅವಕಾಶ ಕೊಡಿ, ಅಂಕಿ-ಸಂಖ್ಯೆ ಸಮೇತ ವರದಿ ನೀಡುವೆ ಎಂದರು.
ಕಲಂ 371(ಜೆ) ಕಾಂಗ್ರೆಸ್ ಕೊಡುಗೆ, ರೇಲ್ವೆ ಡಿವಿಜನ್ ಗುಲ್ಬರ್ಗಕ್ಕೆ ನೀಡಿದ ಕೊಡುಗೆ, ಪಟ್ಟಣಗಳ ಅಭಿವೃದ್ಧಿಗೆ ಹಣ ತಂದಿರುವೆ, ನೀರಾವರಿಗೂ ಕೊಡುಗೆ ನೀಡಲಾಗಿದೆ. ಇದೆಲ್ಲವೂ ಪ್ರಗತಿಯಲ್ಲವೆ ಎಂದರು ಖರ್ಗೆ. ಮಾಜಿ ಶಾಸಕ ಕೈಲಾಸ ಪಾಟೀಲ್, ವೀರಯ್ಯ ಸ್ವಾಮಿ, ಸಚಿವ ಡಾ. ಶರಣಪ್ರಕಾಶ ಪಾಟೀಲ್ ಇದ್ದರು.
ಗುಲ್ಬರ್ಗ ಲೋಕಲ್ನಲ್ಲಿ ಖರ್ಗೆ-ಧರಂ ಜಾತಿ ರಾಜಕೀಯ: ಬಿಜೆಪಿ: ಮಾತೆತ್ತಿದರೆ ಬಿಜೆಪಿ ಕೆಲಸ ಮಾಡಿಲ್ಲ, ಮಾಡಿದ ಕೆಲಸಗಳಿಗೆ ಹೊಗಳೋದಿಲ್ಲ ಎಂಬ ಖರ್ಗೆ ಹೇಳಿಕೆಯನ್ನೇ ಹಿಡಿದು ಮಾಧ್ಯಮಗೋಷ್ಠಿ ಮಾಡಿರುವ ಬಿಜೆಪಿ ಮಾಧ್ಯಮ ಪ್ರಮುಖ ನಾಮದೇವ ರಾಠೋಡ, ಮಾಜಿ ಎಂಎಲ್ಸಿ ಶಶಿಲ್ ನಮೋಶಿ, ಕಳೆದ 10 ತಿಂಗಳಲ್ಲಿ ಗುಲ್ಬರ್ಗದಲ್ಲಿರುವ ಸರ್ಕಾರಿ ಕಚೇರಿಗಳ ಮಹತ್ವದ ಹುದ್ದೆಗಳಲ್ಲಿ ಬಂದಿರುವ ಎರಡೇ ಕೋಮಿನ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡುತ್ತ ಈಗ ಹೇಳಿ ಯಾರು ಕೋಮುವಾದಿ ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತದ ಮಹತ್ವದ ಹುದ್ದೆಗಳಿಂದ ಹಿಡಿದು ಸಿಪಾಯಿ ಹುದ್ದೆಯವರೆಗೂ ಇಲ್ಲಿ ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿಯವರೇ ಅಲಂಕರಿಸಿದ್ದಾರೆ. ಅನ್ಯ ಕೋಮಿನವರಿಗೆ ಕೆಲಸ ಮಾಡುವ ಅರ್ಹತೆ ಇಲ್ಲವೇ? ಅಂತಹ ಅಧಿಕಾರಿಗಳು ದೊರಕುತ್ತಿಲ್ಲವೇ..? 10 ತಿಂಗಳಲ್ಲೇ ಯಾಕೆ ಈ ಬೆಳವಣಿಗೆ, ಸ್ಥಳೀಯವಾಗಿ ಆಡಳಿತದಲ್ಲಿ ಕೋಮುವಾದ ಬೀಜ ಬಿತ್ತಿದವರು ಬಿಜೆಪಿಯೇ ಅಥವಾ ಕಾಂಗ್ರೆಸೇ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದರು.
ಕಳವಳಕಾರಿ ಬೆಳವಣಿಗೆ: ಆಡಳಿತದಲ್ಲಿ ಕೋಮುವಾದ ಅಪಾಯಕಾರಿ. ಇದರಿಂದ ಸ್ಥಳೀಯವಾಗಿ ಜನತೆ ಬೇಸರಿಸುತ್ತಿದ್ದಾರೆ. ಜಿಲ್ಲಾ ಪ್ರಗತಿಗೂ ಧಕ್ಕೆ ಎಂದು ಹೇಳಿದ ನಾಮದೇವ ರಾಠೋಡ, ಯಾವ ಪಕ್ಷದವರೇ ಆಗಲಿ, ತಾವಿರುವ ಜಾತಿ, ಮತಗಳ ಅಧಿಕಾರಿಗಳನ್ನೇ ಹುಡುಕಿ ಆಯಕಟ್ಟಿನ ಜಾಗಕ್ಕೆ ತರುವುದು ಸರಿಯಲ್ಲ, ಕೆಲಸ ಮಾಡುವವರಿಗೆ ಪ್ರೋತ್ಸಾಹಿಸಬೇಕೇ ಹೊರತು ಜಾತಿ ಕಾರಣದಿಂದ ರಾಜಕಾರಣ ಮಾಡಬಾರದು. ಇದು ಪ್ರಗತಿಗೆ ಕೊಡಲಿ ಪೆಟ್ಟು ನೀಡಿದಂತೆ ಎಂದರು.
ಇಲ್ಲಿನ ಸರ್ಕಾರದ ಮಹತ್ವದ ಹುದ್ದೆಗಳಲ್ಲಿ ಎರಡೇ ಕೋಮುಗಳಿಗೆ ಪ್ರಾತಿನಿಧ್ಯ ದೊರಕಿದ್ದರ ಹಿಂದೆ ರಾಜಕೀಯ ಕೈವಾಡವಿದೆ. ರಾಜಕೀಯ ಆಸರೆ ಇಲ್ಲದೆ ಇಂತಹ ಬೆಳವಣಿಗೆ ಆಗೋದಿಲ್ಲ ಎಂದು ಆರೋಪಿಸಿದ ನಾಮದೇವ, ಇದಕ್ಕೆ ಖಮರುಲ್ ಇಸ್ಲಾಂ ಹಾಗೂ ಖರ್ಗೆಯವರೇ ಕಾರಣ ಎಂದು ದೂರಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಗುಲ್ಬರ್ಗ ನಗರೋತ್ಥಾನವೆಂದು 200 ಕೋಟಿ ಹಣ ಬಂದರೆ ಆ ಹಣದಡಿಯಲ್ಲಿ ಕೆಲಸಗಳು ಆಗದಂತೆ ತಡೆದವರು ಕಾಂಗ್ರೆಸಿಗರು ಎಂದು ದೂರಿದರು. ಯಡಿಯೂರಪ್ಪ ಗುಲ್ಬರ್ಗದಲ್ಲಿ ಸಂಪುಟ ಸಭೆ ನಡೆಸಿ ಈ ಭಾಗದ ಪ್ರಗತಿ ಒತ್ತು ನೀಡಿದರು. ರಸ್ತೆ, ನೀರಿನ ಸೌಕರ್ಯ ಕಲ್ಪಿಸುವ ಯೋಜನೆ ರೂಪಿಸಿದರು. ಇಂತಹ ಪ್ರಗತಿ ಕೆಲಸಗಳು ಕಾಂಗ್ರೆಸಿಗರಿಗೇ ಕಾಣಲಿಲ್ಲ ಯಾಕೆ, ಖರ್ಗೆ ಮಾಡಿರುವ ಪ್ರಗತಿಗೆ ನಾವು ಮೆಚ್ಚುತ್ತೇವೆ. ಹಾಗಂತ ಅನ್ಯರು ಪ್ರಗತಿಯನ್ನೇ ಮಾಡಿಲ್ಲ ಎಂದರೆ ಸಹಿಸಲಾಗದು ಎಂದು ನಾಮದೇವ ರಾಠೋಡ ಹೇಳಿದರು.
ಕೇಂದ್ರದಿಂದ ಹೈ-ಕ.ದತ್ತ ಅಲಕ್ಷ್ಯತನ: ಸಣ್ಣ- ಮಧ್ಯಮ ಪಟ್ಟಣಗಳ ಅಭಿವೃದ್ಧಿಗೆ ಇರುವ ಕೇಂದ್ರದ ಜೆ-ನರ್ಮ್ ಯೋಜನೆಯ ಅನುದಾನ ಹೈ-ಕ ಭಾಗಕ್ಕೆ ಬಂದೇ ಇಲ್ಲ. ಆದಾಗ್ಯೂ ಖರ್ಗೆಯವರು ಹಾಗೂ ಕಾಂಗ್ರೆಸಿಗರು ಈ ಹಣ ಬಂದಿದೆ ಎಂದು ಹೇಳುತ್ತಿದ್ದಾರೆ, ಇದು ಸುಳ್ಳು ಎಂದರು.
ಕರ್ನಾಟಕಕ್ಕೆ ಬಂದ ಹಣವೇ ಅಲ್ಪ. ಅದರಲ್ಲಿಯೂ ಗುರುಮಠಕಲ್ಗೆ 14 ಕೋಟಿ ಬಂದಿದ್ದು ಬಿಟ್ಟರೆ ಮತ್ತೆಲ್ಲೂ ಹಣ ಬಿಡುಗಡೆಯಾಗಿಲ್ಲ. ಸುಮ್ಮನೆ ಇಂತಹ ಹೇಳಿಕೆ ನೀಡಿ ಪ್ರಗತಿಪರರು ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಕಾಂಗ್ರೆಸ್ ನಾಯಕರು ಎಂದು ಟೀಕಿಸಿದರು.
664 ಕೋಟಿ ಪೈಕಿ ಕರ್ನಾಟಕಕ್ಕೆ ಬಿಡುಗಡೆಯಾಗಿದ್ದು, 312 ಕೋಟಿ ಈ ಪೈಕಿ ಗುರುಮಠಕಲ್ಗೆ ಮಾತ್ರ ಹಣ ಬಂದಿದೆ. 1ನೇ ಕಂತಲ್ಲಿ ಹೈ-ಕ ಅಲಕ್ಷ್ಯಕ್ಕೊಳಗಾಗಿದೆ ಎಂದು ನಮೋಶಿ ದಾಖಲೆ ಸಮೇತ ಮಾಹಿತಿ ನೀಡಿದರು. ದಿಲೀಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

