ಏಜೆಂಟ್ ಫಾರ್ಮ್ ಹಸ್ತಾಕ್ಷರ ಗೊಂದಲ: ಕಣ್ಣೀರಿಟ್ಟ ಬೆಳಮಗಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.16
ಮತಗಟ್ಟೆ ಏಜಂಟ್ ನೇಮಕದ ನಿಗದಿತ ಫಾರ್ಮ್ ಮೇಲೆ ಹಸ್ತಾಕ್ಷರ ಹೊಂದಿಕೆಯಾಗದೆ ಉಂಟಾಗಿರುವ ಗೊಂದಲ ಸರಿಪಡಿಸುವಲ್ಲಿ ಸ್ಥಳೀಯ ಜಿಲ್ಲಾಡಳಿತ ಅಲಕ್ಷ್ಯ ತೋರುತ್ತಿದೆ. ತಮಗೆ ಮೋಸವಾಗುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಮುಂದೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಏನಿದು ಪ್ರಕರಣ?: ಮತದಾನದ ದಿನ ಪ್ರತಿಯೊಂದು ಮತಗಟ್ಟೆಯಲ್ಲಿಯೂ ಪಕ್ಷಗಳು ತಮ್ಮ ಪರವಾಗಿ ಏಜಂಟರನ್ನು ನೇಮಕ ಮಾಡಲು ಅವಕಾಶವಿದೆ. ಹೀಗೆ ಏಜಂಟರಾಗುವವರನ್ನು ಮೊದಲೇ ಗುರುತಿಸಿ ಅವರಿಗೆ ನಿಗದಿತ ನಮೂನೆ ಫಾರ್ಮ್ ನೀಡಲಾಗುತ್ತದೆ. ಆ ಫಾರ್ಮ್ ಮೇಲೆ ಅಭ್ಯರ್ಥಿಯ ಪ್ರಮುಖರ ಹಸ್ತಾಕ್ಷರವಿರುತ್ತದೆ. ಅದೇ ಹಸ್ತಾಕ್ಷರ ಜುಲ್ಲಾ ಚುನಾವಣಾಧಿಕಾರಿಗಳು ತಮ್ಮ ಮತಗಟ್ಟೆ ಸಿಬ್ಬಂದಿಗೆ ಪೂರೈಸುವ ಹಸ್ತಾಕ್ಷರದ ಮಾಹಿತಿಯಲ್ಲಿಯೂ ಇರುತ್ತದೆ.
ಮತಗಟ್ಟೆ ಸಿಬ್ಬಂದಿ ಮತಗಟ್ಟೆ ಏಜೆಂಟರ ಬಳಿಯ ಫಾರ್ಮ್, ಅಲ್ಲಿನ ಮಾಹಿತಿ ಪರಿಶೀಲಿಸಿ ಅವರು ಅದೇ ಪಕ್ಷದವರು ಎಂಬುದನ್ನು ಖಚಿತಪಡಿಸಿಕೊಂಡು ಮತಗಟ್ಟೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡುತ್ತಾರೆ. ಆದರೆ ಇಲ್ಲೀಗ ಬಿಜೆಪಿ ಏಜಂಟರ ಬಳಿಯ ಫಾರ್ಮ್ನಲ್ಲಿ ಅಭ್ಯರ್ಥಿಯ ಪ್ರಮುಖರಾದ ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಹಸ್ತಾಕ್ಷರವಿದೆ. ಆದರೆ ಅದೇ ಹಸ್ತಾಕ್ಷರ ಜಿಲ್ಲಾಡಳಿತ ಸಿಬ್ಬಂದಿಗೆ ಪೂರೈಸುವ ಸ್ಪೆಸಿಮನ್ ಹಸ್ತಾಕ್ಷರದಲ್ಲಿ ಇಲ್ಲ. ಅಲ್ಲಿ ಅದಲು ಬದಲಾಗಿದ್ದೇಕೆ ಎಂದು ಬಿಜೆಪಿ ಇದೀಗ ತಕರಾರು ಎತ್ತಿದೆ.
ಸ್ಥಳಕ್ಕೆ ಬಿಜೆಪಿ ನಾಯಕರು: ಪಕ್ಷದ ಪ್ರಮುಖರೊಬ್ಬರು ಮತಗಟ್ಟೆ ಏಜಂಟರ್ ಫಾರ್ಮ್ ವಿಚಾರದಲ್ಲಿ ತಿಳಿಯಲು ತೆರಳಿದ್ದ ಸಂದರ್ಭದಲ್ಲಿ ಈ ಯಡವಟ್ಟು ಬಹಿರಂಗವಾಗಿದೆ. ಸುದ್ದಿ ತಿಳಿದ ತಕ್ಷಣವೇ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್, ಶಾಸಕ ದತ್ತು ಪಾಟೀಲ್, ಎಂಎಲ್ಸಿ ಅಮರನಾಥ ಪಾಟೀಲ್, ಅಭ್ಯರ್ಥಿ ರೇವು ನಾಯಕ ಬೆಳಮಗಿ ಸೇರಿದಂತೆ ಅನೇಕರು ಜಿಲ್ಲಾಧಿಕಾರಿ ಕಚೇರಿಗೆ ಧಾವಿಸಿ ಮಾಹಿತಿ ಕೇಳಿದರು. ಆದರೆ ಅವರಿಗೆ ಸಮಾಧಾನಕರ ಮಾಹಿತಿ ಲಭ್ಯವಾಗಲೇ ಇಲ್ಲ. ಆಗಿರುವ ಗೊಂದಲದ ಬಗ್ಗೆಯೂ ಸರಿಯಾದ ತಿಳಿವಳಿಕೆ ಹೇಳುವ ಕೆಲಸವೂ ಅಲ್ಲಿ ನಡೆಯಲಿಲ್ಲ ಎಂದು ಬಿಜೆಪಿ ನಾಯಕರು ದೂರಿದ್ದಾರೆ. ತಕ್ಷಣ ಮುಖ್ಯ ಚುನಾವಣಾಧಿಕಾರಿ ಅನಿಲಕುಮಾರ್ ಝಾ ಅವರೊಂದಿಗೆ ನಾಯಕರು ದೂರವಾಣಿಯಲ್ಲಿ ವಿಷಯ ತಿಳಿಸದ್ದಾರೆ. ಆಗ ಝಾ ಅವರು ಸಮಸ್ಯೆ ಇತ್ಯರ್ಥಕ್ಕೆ ಕಾಲಾವಕಾಶ ಕೊಡಿ ಎಂದು ಕೋರಿದ್ದಾರಂದು ಬಿಜೆಪಿ ಪ್ರಮುಖರು ಹೇಳಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಶಂಕಾಸ್ಪದ: ಆದಾಗ್ಯೂ ಬಿಜೆಪಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್ ಜಿಲ್ಲಾ ಚುನಾವಣಾಧಿಕಾರಿ ಈ ಶಂಕಾಸ್ಪದ ನಡೆಯ ಬಗ್ಗೆ ಸ್ಥಳೀಯವಾಗಿಯೂ ದೂರು ನೀಡಿದ್ದಾರೆಂದು ಬಿಜೆಪಿ ಮಾಧ್ಯಮ ಪ್ರಮುಖ ನಾಮದೇವ ರಾಠೋಡ ತಿಳಿಸಿದ್ದಾರೆ.
ಚುನಾವಣೆಯಲ್ಲಿ ಎದುರಾಳಿಗೆ ಸೋಲಿನ ಭಯ ಉಂಟಾಗಿದೆ. ಹೀಗಾಗಿ ಹೇಗಾದರೂ ಮಾಡಿ, ಜಿಲ್ಲಾಡಳಿತವನ್ನು ದುರುಪಯೋಗಪಡಿಸಿಕೊಂಡಾದರೂ ಸರಿ, ಗೆಲ್ಲಲೇಬೇಕು ಎಂಬ ಹಠದೊಂದಿಗೆ ಇಂತಹ ಕುತಂತ್ರಗಾರಿಕೆ ಸಾಗಿದೆ. ಇದನ್ನು ಬಿಜೆಪಿ ವಿರೋಧಿಸುತ್ತದೆ ಎಂದು ಬೆಳಮಗಿ ಸುದ್ದಿಗಾರರಿಗೆ ಹೇಳಿದ್ದಾರೆ.
ಒಂದುವೇಳೆ ಏ. 17ರ ಮತದಾನ ದಿನದಂದು ತಮ್ಮ ಪಕ್ಷದ ಏಜಂಟರಿಗೆ ಮತಗಟ್ಟೆಗಳಲ್ಲಿ ಪ್ರವೇಶ ನಿರಾಕರಿಸಿದ್ದೇ ಆದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಜಿಲ್ಲಾಧಿಕಾರಿಗಳ ವಿರುದ್ಧವೇ ಜಿಲ್ಲಾದ್ಯಂತ ಹೋರಾಟ ಸಂಘಟಿಸುತ್ತೇವೆ ಎಂದು ಬೆಳಮಗಿ ಎಚ್ಚರಿಸಿದ್ದಾರೆ.
ಯಾವುದೇ ಗೊಂದಲವಿಲ್ಲ: ಅಭ್ಯರ್ಥಿ ಪ್ರಮುಖರು ನಾವು ಸಹಿ ಕೇಳಿದ್ದ ಸಂದರ್ಭದಲ್ಲಿ ಚಿಕ್ಕದಾದ ಸಹಿ ಮಾಡಿ ನೀಡಿದ್ದರು. ಆ ನಂತರ ಈಗ ಆ ಸಹಿ ಬೇರೆ, ಈ ಸಹಿ ಬೇರೆ ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರವನ್ನು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಅವರ ಅನುಮತಿ ಪಡೆದೇ ಮತ್ತೆ ಹೊಸತಾಗಿ ನೀಡಲಾಗಿರುವ ಹಸ್ತಾಕ್ಷರವನ್ನೇ ಮತಗಟ್ಟೆ ಸಿಬ್ಬಂದಿಗಳ ಬಳಿಯೂ ಇರುವಂತೆ ನೋಡಿಕೊಳ್ಳಲಾಗುತ್ತದೆ. ಎಲ್ಲಿಯಾದರೂ ಏಜಂಟರ ಪ್ರವೇಶದಲ್ಲಿ ಗೊಂದಲ ಕಂಡಲ್ಲಿ ಬಿಜೆಪಿ ಅಭ್ಯರ್ಥಿ, ಅಭ್ಯರ್ಥಿ ಪ್ರಮುಖರು ನೇರವಾಗಿ ನನ್ನನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸುಸೂತ್ರ- ನ್ಯಾಯಸಮ್ಮತ ಚುನಾವಣೆಗೆ ಎಲ್ಲರ ಸಹಕಾರ ಅಗತ್ಯ. ನಾನೇ ಬಿಜೆಪಿ ಏಜೆಂಟರು ಎಲ್ಲಾ ಕಡೆ ಇದ್ದಾರೋ ಇಲ್ಲವೋ ಪರಿಶೀಲಿಸುವೆ. ಇದರಲ್ಲಿ ಯಾರೂ ಯಾವುದೇ ಶಂಕೆ ಹೊಂದುವುದು ಬೇಡ ಎಂದು ಡಿಸಿ ಡಾ. ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

