ನಿರುಪಯುಕ್ತ ಶೌಚಾಲಯಗಳು
ಮುದಗಲ್: ಪಟ್ಟಣದ ವಾರ್ಡ 6, 9,11, ಮತ್ತು 13, 16ರಲ್ಲಿ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಮಹಿಳಾ ಶೌಚಾಲಯಗಳನ್ನು ಅನುಕೂಲ ಮಾಡಿಕೊಡಬೇಕಾಗಿರುವ ಸ್ಥಳೀಯ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ತೋರಿದೆ. ಪರಿಣಾಮ ಇವು ನಿರುಪಯುಕ್ತವಾಗಿವೆ.
ವಾರ್ಡ್ ನಂ. 11 ಮತ್ತು 13 ರಲ್ಲಿ 2004-5ನೇ ಸಾಲಿನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ತಲಾ ರು. 4 ಲಕ್ಷ ಖರ್ಚು ಮಾಡಿ ಹೈಟೆಕ್ ಮಹಿಳಾ ಶೌಚಾಲಯಗಳನ್ನು ನಿರ್ಮಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಪ.ಪಂ ಅಧಿಕಾರಿಗಳು ಶೌಚಾಲಯಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಒದಗಿಸದೇ ಇದ್ದುದರಿಂದ ಶೌಚಾಲಯಗಳು ನಿರುಪಯುಕ್ತವಾಗಿವೆ.
ಶೌಚಾಲಯ ನಿರ್ಮಿಸಿ 2 ವರ್ಷ ಗತಿಸಿದರೂ ಮಹಿಳೆಯರಿಗೆ ಬಹಿರ್ದೆಸೆಗೆ ಹೋಗಲು ಅವಕಾಶ ಇಲ್ಲ. ಮಹಿಳಾ ಶೌಚಾಲಯಕ್ಕೆ ಸೌಲಭ್ಯಗಳಾದ ನೀರು, ರಸ್ತೆ, ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಪ.ಪಂ. ಕ್ಯಾರೇ ಎನ್ನುತ್ತಿಲ್ಲ. ಈ ಬಗ್ಗೆ ವಾರ್ಡಿನ ಮಹಿಳೆಯರು ಸಾಕಷ್ಟು ಬಾರಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಏನು ಪ್ರಯೋಜನೆಯಾಗಿಲ್ಲ ಎಂದು ಮಹಿಳೆಯರು ಆರೋಪಿಸಿದ್ದಾರೆ. ಗ್ರಹಣ: ಹೈಕೋರ್ಟ್ ಸೂಚನೆಯಂತೆ ಸರ್ಕಾರ ಬಯಲು ಶೌಚಾಲಯಗಳನ್ನು ತೆರವುಗೊಳಿಸಿ ಎಸ್ಎಫ್ಸಿ ಅನುದಾನದಲ್ಲಿ ವಾರ್ಡ್ ನಂ.2, 4, 6, 19, 15ರಲ್ಲಿ 2010-11, 2012,13ನೇ ಸಾಲಿನಲ್ಲಿ ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಇವುಗಳ ಕೆಲಸ ಇನ್ನೂ ಮುಗಿದಿಲ್ಲ. ಇದರಿಂದಾಗಿ ಪ್ರಯೋಜನವೂ ಆಗಿಲ್ಲ.
ಗೋಳು: ಶೌಚಾಲಯಗಳಗಳಿಗೆ ಬೀಗ ಜಡಿದು ಮೂಲ ಸೌಲಭ್ಯಗಳನ್ನು ನೀಡದೆ ಬಿಟ್ಟಿದ್ದಾರೆ. ಇದರಿಂದಾಗಿ ಮಹಿಳೆಯವರು ಬಯಲಲ್ಲಿಯೇ ಶೌಚಾಲಯಕ್ಕೆ ಹೋಗುವಂತಾಗಿದೆ. ರಾತ್ರಿ ಇಲ್ಲವೇ, ಮುಂಜಾವಿನಲ್ಲೇ ಬಯಲಿಗೆ ಹೋಗುವ ದುಸ್ಥಿತಿ ಬಂದಿದೆ ಎಂದು ಮಹಿಳೆಯರು ತಮ್ಮ ಗೋಳನ್ನು ತೊಡಿಕೊಳ್ಳುತ್ತಾರೆ.
ಯಾರೂ ಬರುತ್ತಿಲ್ಲ: ಪಟ್ಟಣದಲ್ಲಿ ಮೂರು ಹೈಟೆಕ್ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳ ನಿರ್ವಹಣೆಗೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಹಣದಲ್ಲಿ ರು. 1.50 ಲಕ್ಷ ಕಾಯ್ದಿರಿಸಲಾಗಿದೆ. ಸ್ವಚ್ಛತೆಗೆ ಟೆಂಡರ್ ಕರೆಯಲಾಗಿದೆ. ಯಾರೊಬ್ಬರೂ ಇದಕ್ಕೆ ಮುಂದೆ ಬರುತ್ತಿಲ್ಲ.
ಶೌಚಾಲಯಕ್ಕೆ ಬರುವ ಸಾರ್ವಜನಿಕರು ರು. 1 ನೀಡಿ ತಮ್ಮ ನಿತ್ಯಕರ್ಮ ಪೂರೈಸಿಕೊಳ್ಳಬಹುದು. ಆದರೆ ಯಾರೂ ಹಣ ನೀಡುತ್ತಿಲ್ಲ. ಆದೇ ಹಣದಿಂದ ನಿರ್ವಹಣೆ ಮಾಡಬೇಕು ಎನ್ನುವ ನಿಯಮ ಇರುವುದರಿಂದ ಗುತ್ತಿಗೆ ಪಡೆಯಲು ಯಾರೂ ಬರುತ್ತಿಲ್ಲವೆಂದು ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮೀ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.
- ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

