ಕುಂಟುತ್ತಿದೆ ವಿದ್ಯುತ್ ಜಾಲ ಅಭಿವೃದ್ಧಿ
-ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.2
ವಿದ್ಯುತ್ ಜಾಲ ಬಲಪಡಿಸುವ, ವಿದ್ಯುತ್ ನಷ್ಟ ಇಳಿಕೆಯ ಪ್ರಮಾಣ ಸಾಧಿಸುವ, ವಿದ್ಯುತ್ ಕಂಪನಿಗಳಲ್ಲಿ ಒಟ್ಟಾರೆ ತಾಂತ್ರಿಕ- ವಾಣಿಜ್ಯ ನಷ್ಟವನ್ನು ತಗ್ಗಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪುನರಾಚಿತ ತ್ವರಿತ ಗತಿಯ ವಿದ್ಯುತ್ ಜಾಲ ಅಭಿವೃದ್ಧಿ ಕಾರ್ಯಕ್ರಮ (ರಿಸ್ಟ್ರಕ್ಚರ್ಡ್ ಎಕ್ಸ್ಲರೇಟೆಡ್ ಪವರ್ ಡೆವಲಪ್ಮೆಂಟ್ ರಿಫಾರ್ಮ್ ಪ್ರೋಗ್ರಾಮ್- ಆರ್ಎಪಿಡಿಆರ್ಪಿ) ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯ ವ್ಯಾಪ್ತಿಯಲ್ಲಿ ಕುಂಟುತ್ತ ಸಾಗಿದೆ.
2009 ರಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬಂದಿದ್ದು, 5 ವರ್ಷಗಳಲ್ಲಿ ಅಂದುಕೊಂಡ ಗುರಿ ಸಾಧನೆಯಾಗಬೇಕಿತ್ತು. ಆದರೆ ಜೆಸ್ಕಾಂ ವ್ಯಾಪ್ತಿಯಲ್ಲಿ ಯೋಜನೆ 2009 ರಲ್ಲೇ ಜಾರಿಗೊಂಡರೂ ಗುರಿ ಸಾಧನೆ ಆಗಿಲ್ಲ. ಹೀಗಾಗಿ ಕೇಂದ್ರದ ಬಹುಕೋಟಿ ರುಪಾಯಿ ಅನುದಾನದ, ಮಹತ್ವದ ಯೋಜನೆ ಹೈ-ಕ ನೆಲದಲ್ಲಿ ಕಾರ್ಯಸಾಧನೆ ಮಾಡದೆ ಮುಗ್ಗರಿಸಿದೆ.
372 ಕಿಮೀ ಮಾತ್ರ: ಜೆಸ್ಕಾಂ ತನ್ನ ವ್ಯಾಪ್ತಿಯ 6 ಜಿಲ್ಲೆಗಳಲ್ಲಿ ಆಯ್ದ 21 ಪಟ್ಟಣಗಳಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. ಇದರಡಿಯಲ್ಲಿ ಒಟ್ಟು 1, 540 ಕಿಮೀ ಎಲ್ಟಿ ಎಬಿ ಕೇಬಲ್ ಹಾಕುವ ಗುರಿ ಹೊಂದಲಾಗಿತ್ತು. ಆದರೆ ಇದುವರೆಗೂ ಹಾಕಿರುವ ಕೇಬಲ್ ಉದ್ದ 372 ಕಿಮೀ ಮಾತ್ರ.
ಯೋಜನೆ ಅನುಷ್ಠಾನಗೊಂಡು ವರ್ಷ 4 ಉರುಳಿದರೂ ಇಲ್ಲಿನ್ನೂ ಇದಕ್ಕೆ ವೇಗೋತ್ಕರ್ಷ ದೊರಕದೆ ಹೋಗಿರುವುದು ಕಂಪನಿ ಕೇಂದ್ರದ ಅನುದಾನ ಬಳಸಿ ಹಿಂದುಳಿದ ನೆಲದ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ನೀಡುವಲ್ಲಿ ಅದೆಷ್ಟು ಆಸಕ್ತಿ ತೋರುತ್ತಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.
ಇಲ್ಲೆಲ್ಲಾ ಯೋಜನೆ ಜಾರಿ: ಷರತ್ತಿನ ಪ್ರಕಾರ 30 ಸಾವಿರಕ್ಕಿಂತ ಹೆಚ್ಚಿರುವ ಜನವಸತಿ ಪಟ್ಟಣಗಳಲ್ಲಿ 2009 ರಿಂದಲೇ ಈ ಕೆಳಗಿನ ಪಟ್ಟಣಗಳಲ್ಲಿ ಯೋಜನೆ ಜಾರಿಯಾಗಿದ್ದು ಮಾಹಿತಿ ಹೀಗಿದೆ.
1) ಗುಲ್ಬರ್ಗ ಜಿಲ್ಲೆ
ಗುಲ್ಬರ್ಗ, ಆಳಂದ, ಶಹಾಬಾದ್, ವಾಡಿ, ಸೇಡಂ
2) ಯಾದಗಿರಿ ಜಿಲ್ಲೆ
ಯಾದಗಿರಿ, ಶಹಾಪುರ, ಸುರಪುರ
3) ಬೀದರ್ ಜಿಲ್ಲೆ
ಬೀದರ್, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ
4) ರಾಯಚೂರು ಜಿಲ್ಲೆ
ರಾಯಚೂರು, ಮಾನವಿ, ಸಿಂಧನೂರು
5)ಕೊಪ್ಪಳ ಜಿಲ್ಲೆ
ಕೊಪ್ಪಳ, ಗಂಗಾವತಿ
6) ಬಳ್ಳಾರಿ ಜಿಲ್ಲೆ
ಹೊಸಪೇಟೆ, ಕಂಪ್ಲಿ, ಬಳ್ಳಾರಿ, ಸಿರಗುಪ್ಪ
ಸಾಧನೆ ಶೂನ್ಯ
1) ಆಯ್ದ 21 ಪಟ್ಟಣಗಳಲ್ಲಿ ವಿದ್ಯುತ್ ಜಾಲ ಬಲಪಡಿಸಲು ಯೋಜನೆಯ ಅನ್ವಯ ಎಲ್ಟಿ ಎಬಿ ಕೇಬಲ್ ಅಳವಡಿಕೆ ಈಗಾಗಲೇ ಮುಗಿಯಬೇಕಿತ್ತು. ಆದರಿಲ್ಲಿ ಹಾಕಿಕೊಂಡ ಗುರಿ 1, 540 ಕಿಮೀ ಆದರೂ, ಕಳೆದ 4 ವರ್ಷಗಳಲ್ಲಿ ಕಾರ್ಯಸಾಧನೆಯಾಗಿದ್ದು, ಕೇವಲ 372 ಕಿಮೀ ಎಂಬುದು ಗಮನಾರ್ಹ ಸಂಗತಿ.
2) ಯಾದಗಿರಿ ಹಾಗೂ ಕೊಪ್ಪಳದಲ್ಲಿ ಸದರಿ ಯೋಜನೆ ಕಾರ್ಯಾರಂಭವೇ ಮಾಡಿಲ್ಲ. ಯೋಜನೆಯ ಅನುಷ್ಠಾನದ 5 ವರ್ಷಗಳಲ್ಲಿ 4 ವರ್ಷ ಪೂರ್ಣಗೊಂಡರೂ ಯೋಜನೆ ಕೆಲವು ಪಟ್ಟಣಗಳಲ್ಲಿ ಆರಂಭವೇ ಆಗಿಲ್ಲ ಎಂಬುದು ವಿಚಿತ್ರವಾದರೂ ಸತ್ಯ.
3) ರಾಯಚೂರಲ್ಲಿ ಯೋಜನೆಯಡಿಯಲ್ಲಿ 138.07 ಕಿಮೀ ಕೇಬಲ್ ಪರಿವರ್ತನೆ ಆಗಬೇಕು. ಆಗಿದ್ದು 9.5 ಕಿಮೀ ಮಾತ್ರ. ಅದರಂತೆ ಬಳ್ಳಾರಿಯಲ್ಲಿ 12.83 ಕಿಮೀ ಕೇಬಲ್ ಹಾಕಲಾಗಿದೆ. ಇದಕ್ಕೆ 4 ವರ್ಷ ತಗುಲಿದೆ.
ಆರ್ಎಪಿಡಿಆರ್ಪಿ ಯೋಜನೆ ಮಹತ್ವದ್ಯಾಕೆ: ವಿದ್ಯುತ್ ಜಾಲ ಬಲಪಡಿಸುವ, ವಿದ್ಯುತ್ ನಷ್ಟ ತಗ್ಗಿಸುವ ಸಂಗತಿಗಳನ್ನು ಯೋಜನೆ ಒಳಗೊಂಡಿದೆ. ಶೇ.30 ಕ್ಕಿಂತ ಹೆಚ್ಚು ನಷ್ಟವಿರುವಲ್ಲಿ ಅದನ್ನು ಶೇ.3ಕ್ಕೆ ತರುವುದು, ಶೇ.30 ಕ್ಕಿಂತ ಕಡಿಮೆ ನಷ್ಟವಿರುವಲ್ಲಿ ಅದನ್ನು ಶೇ. 1.5ಕ್ಕೆ ತರುವುದು ಯೋಜನೆಯ ಗುರಿ. ಯೋಜನೆ ಅನುಷ್ಠಾನಗೊಂಡಲ್ಲಿ ವಾಣಿಜ್ಯ ನಷ್ಟ ಶೇ.15 ಕ್ಕಿಂತ ಕಡಿಮೆಗೊಳಿಸುವುದು ಯೋಜನೆಯ ಗುರಿ, ಇವೆಲ್ಲ ಕಾರಣಗಳಿಂದಾಗಿ ಕೇಂದ್ರದ ಈ ಪುರ್ರಾಚಿತ ವಿದ್ಯುತ್ ಜಾಲ ಸುಧಾರಣೆ ಕಾರ್ಯಕ್ರಮ ಮಹತ್ವದ್ದು.
ಕುಂಟುನೆಪ ಹೇಳುತ್ತಿರುವ ಜೆಸ್ಕಾಂ: ಕೇಂದ್ರದ ವಿದ್ಯುತ್ ಜಾಲ ಸುಧಾರಣೆ ಯೋಜನೆ ಯಾಕೆ ತ್ವರಿತವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಎಂಎಲ್ಸಿ ಅಲ್ಲಂಪ್ರಭು ಪಾಟೀಲ್ ಈಚೆಗೆ ಸದನದಲ್ಲಿ ಕೇಳಿದ್ದ ಪ್ರಶ್ನೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿಖರ ಕಾರಣಗಳನ್ನು ಹೇಳಿಲ್ಲವಾದರೂ ಜೆಸ್ಕಾಂ ನೀಡಿರುವ ಕುಂಟು ನೆಪವೇ ಪ್ರಧಾನವಾಗಿರುವ ಕಾರಣವನ್ನೇ ಲಿಖಿತವಾಗಿ ನೀಡಿದ್ದಾರೆ.
ಪಟ್ಟಣಗಳಲ್ಲಿ ಅನಿರ್ಬಂಧಿತ ಲೈನ್ ಕ್ಲಿಯರ್ (ಎಲ್ಸಿ) ಮಾಡಲಾಗದ ಕಾರಣ ಹಾಗೂ ಸ್ಥಾನಿಕ ಮಟ್ಟದಲ್ಲಿ ಅಡೆತಡೆಗಳು ಉಂಟಾಗುವ ಕಾರಣದಿಂದ ಕಾಮಗಾರಿಯು ವಿಳಂಬವಾಗುತ್ತಿದೆ. ಹೀಗಾಗಿ ತ್ವರಿತವಾಗಿ ಯೋಜನೆ ಮುಗಿಸಲು ಆಗದಂತಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಎಂಎಲ್ಸಿ ಅಲ್ಲಂಪ್ರಭು ಪ್ರಶ್ನೆಗೆ ಲಿಖಿತ ಉತ್ತರ ನೀಡಿ ಕೈತೊಳೆದುಕೊಂಡಿದ್ದಾರೆ.
ವಿದ್ಯುತ್ ಜಾಲ ಸುಧಾರಣೆಗೆ ಎಲ್ಲಿಂದಲೂ ವಿರೋಧವಂತೂ ವ್ಯಕ್ತವಾಗದು. ಏಕೆಂದರೆ ಕಳಪೆ ಗುಣಮಟ್ಟದ ಪ್ರಸರಣದಿಂದಲೇ ಸಾಕಷ್ಟು ಗ್ರಾಹಕರು ತೊಂದರೆ ಅನುಭವಿಸುತ್ತಿರುವಾಗ ಹೊಸ ಯೋಜನೆಯಿಂದ ಅನುಕೂಲವಾಗಲಿದೆ ಎಂಬುದು ಅರಿತಾಗ ಯಾಕೆ ವಿರೋಧಿಸುತ್ತಾರೆ ಹೇಳಿ ಜೆಸ್ಕಾಂ ಇನ್ನಾದರೂ ತನ್ನ ಇಚ್ಛಾಶಕ್ತಿ ಪ್ರದರ್ಶಿಸಿ ಕೇಂದ್ರದ ಆರ್ಎಪಿಡಿಆರ್ಪಿ ಯೋಜನೆಯಡಿ ಕಾಮಗಾರಿಗಳಿಗೆ ವೇಗ ದೊರಕುವಂತೆ ಮಾಡುವುದೆ ಕಾದುನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

