ಸಿರವಾಳದಲ್ಲಿ ಚಾಲುಕ್ಯರ ಕಾಲದ ಕನ್ನಡ ಶಿಲಾಶಾಸನ ಪತ್ತೆ
ಶಹಾಪುರ:ಸಂಶೋಧಕ ಹಾಗೂ ಕನ್ನಡ ಸಂಸ್ಕೃತಿ ಸಂಶೋಧನಾ ಸಂಸ್ಥೆ ಅಧ್ಯಕ್ಷ ಡಾ. ಎಂ. ಎಸ್. ಸಿರವಾಳ ಅವರು ಇತ್ತೀಚೆಗೆ ಸಂಶೋಧನಾರ್ಥವಾಗಿ ಕೈಕೊಂಡ ಕ್ಷೇತ್ರಕಾರ್ಯದಲ್ಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಿರವಾಳ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದ ಸುಮಾರು ಒಂದು ಸಾವಿರ ವರ್ಷ ಹಳೆಯದು ಎನ್ನಲಾದ ಕನ್ನಡ ಶಿಲಾಶಾಸನ ದೊರೆತಿದೆ. ಶಾಸನದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸಂಶೋಧಕರು ಪ್ರಥಮಬಾರಿಗೆ ಅದರ ವಿವರಗಳನ್ನು ಈ ರೀತಿಯಾಗಿ ನೀಡಿದ್ದಾರೆ.
ಶಾಸನ ಶೋಧ ಮಾಡಿದ ಸ್ಥಳ ನಿವೇಶನ: ಪುರಾತನ ಕಾಲದಲ್ಲಿ ಶ್ರೀಮದ್ ದಕ್ಷಿಣ ವಾರಣಾಸಿ ಧರ್ಮದ ಮನೆಯ ಆದಿಪಟ್ಟಣ ಎಂಬ ಹಿರಿಮೆಯ ಗರಿ ಹೊತ್ತಿದ್ದ ಅಗ್ರಹಾರ ಸಿರವಾಳದಲ್ಲಿರುವ ದಿ. ಸಾಯಬಣ್ಣ ಚಪಾಟ್ಲಿಯವರ ಮನೆಯ ಹಿಂಭಾಗದ ಮೆಟ್ಟಿಲು ಗೋಡೆಯಲ್ಲಿ ಸಂಶೋಧಕರು ಈ ಶಾಸನವನ್ನು ಪತ್ತೆ ಮಾಡಿದ್ದಾರೆ.
ಶಾಸನದ ಸ್ವರೂಪ: ಸಿರವಾಳದಲ್ಲಿ ಯಥೇಚ್ಛವಾಗಿ ಲಭಿಸುವ ಸುಣ್ಣದ ಕಲ್ಲಿನ ಬಿಳಿ ಶಾಸನವನ್ನು ಸುಂದರವಾಗಿ ಕೆತ್ತಲಾಗಿದೆ. ದೊಡ್ಡ ಗಾತ್ರದ್ದಾಗಿದ್ದ ಈ ಶಿಲಾಶಾಸನವನ್ನು ಅವಜ್ಞೆಯಿಂದ ಒಡೆದು ಹಾಕಲಾಗಿದೆ. ಹೀಗಾಗಿ ಅದರ ಬಹುತೇಕ ಭಾಗ ಕಳೆದುಹೋಗಿದೆ. ಪ್ರಸ್ತುತ ಅದರ ಒಂದು ಅಡಿ ಅಗಲ, ಒಂದೂವರೆ ಅಡಿ ಉದ್ದ ಹಾಗು ಅರ್ಧ ಅಡಿ ದಪ್ಪನೆಯ ಶಿಲಾಶಾಸನದ ತ್ರುಟಿತಗೊಂಡಿರುವ ಸಣ್ಣ ಭಾಗ ಮಾತ್ರ ನಮಗೆ ಲಭ್ಯವಾಗಿದೆಯೆಂದು ಸಂಶೋಧಕ ಡಾ. ಸಿರವಾಳ ತಿಳಿಸಿದ್ದಾರೆ.
ಶಾಸನದ ಲಿಪಿ ಮತ್ತು ಭಾಷೆ: ಈ ಶಾಸನದಲ್ಲಿ ಬಳಸಿರುವ ಲಿಪಿ ಮತ್ತು ಭಾಷೆಗಳೆರಡೂ ಹಳೆಗನ್ನಡದಾಗಿದ್ದು, ಶಕಟರೇಫ ಅಂದರೆ “ÁÚ’ ಕಾರವನ್ನು ಬಳಸಲಾಗಿದೆ, ಅನುಸ್ವಾರವನ್ನು ಅಕ್ಷರಗಳ ಮೇಲ್ಭಾಗದಲ್ಲಿ ಬರೆಯಲಾಗಿದೆ.
ಶಾಸನದ ಕಾಲ: ಪ್ರಸ್ತುತ ಶೋಧಿಸಿರುವ ಶಾಸನದ ಬಹುತೇಕ ಭಾಗವು ಒಡೆದು, ಕಳೆದುಹೋಗಿರುವುದರಿಂದ ಈ ಶಾಸನದ ಖಚಿತವಾದ ಕಾಲನಿರ್ಣಯ ಅಸಾಧ್ಯ. ಏಕೆಂದರೆ ಈ ತ್ರುಟಿತ ಶಾಸನದಲ್ಲಿ ಶಾಸನ ನಿರ್ಮಿಸಿದ ಮಿತಿಯಾಗಲಿ, ನಿರ್ಮಿಸಿದ ರಾಜರ ಹೆಸರಾಗಲಿ ಇಲ್ಲ. ಹೀಗಾಗಿ ಲಿಪಿಶಾಸ್ತ್ರದ ಆಧಾರದ ಮೇಲೆ ಆ ಶಾಸನದಲ್ಲಿನ ಅಕ್ಷರಗಳನ್ನು ಅವಲೋಕಿಸಿದರೆ ರಾಷ್ಟ್ರಕೂಟರ ಕಾಲದ ಕೊನೆಯ ಹಾಗೂ ಕಲ್ಯಾಣ ಚಾಲುಕ್ಯರ ಆರಂಭ ಕಾಲದ ಕನ್ನಡ ಲಿಪಿಗಳಿಗೆ ಸಾಮ್ಯತೆಯನ್ನು ಹೊಂದಿವೆ. ಆ ಕಾರಣಕ್ಕೆ ಈ ಶಾಸನದ ಕಾಲವನ್ನು ಕ್ರಿ.ಶ. ಸುಮಾರು ಹನ್ನೊಂದನೇ ಶತಮಾನದ ಪ್ರಾರಂಭದ್ದು ಎಂದು ಸಂಶೋಧಕರು ಹೇಳುತ್ತಾರೆ.
ಶಾಸನದ ಪಠ್ಯ: ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದ ಪ್ರಮುಖ ಲಿಪಿಗಳಲ್ಲಿ ಒಂದಾಗಿರುವ ಕನ್ನಡ ಲಿಪಿಯಲ್ಲಿ ಅತ್ಯಂತ ಸುಂದರವಾಗಿ ಈ ಶಾಸನವನ್ನು ಕೆತ್ತಲಾಗಿತ್ತು. ಆದರೆ ಅದರ ಬಹುತೇಕ ಭಾಗ ಚದುರಿ ಹೋಗಿರುವುದು ಈ ನಾಡಿನ ಸಾಂಸ್ಕೃತಿಕ ಇತಿಹಾಸದ ದುರಾದೃಷ್ಟವೇ ಸರಿ ಎಂದು ಖೇದದಿಂದ ನುಡಿಯುತ್ತಾ ಡಾ. ಸಿರವಾಳ ಅವರು ತ್ರುಟಿತ ಶಾಸನದ ಪಠ್ಯವನ್ನು ಈ ರೀತಿಯಾಗಿ ನೀಡಿದ್ದಾರೆ.
ಶಾಸನದ ಪಠ್ಯದ ಅರ್ಥ ಮತ್ತು ಉದ್ದೇಶ: ಪ್ರಸ್ತುತ ಶೋಧ ಮಾಡಿರುವ ಈ ತ್ರುಟಿತ ಕನ್ನಡ ಶಿಲಾಶಾಸನದ ಪಠ್ಯದ ಅರ್ಥ ಮತ್ತು ಶಾಸನ ರಚಿಸಿದ ಉದ್ದೇಶ ಈ ರೀತಿ ಇರಬಹುದು. ನಾಲ್ವರು ಸೆಟ್ಟಿಗಳು, ಪಂಚ ಪ್ರಧಾನರು, ಹಾಗೂ ಯಜರಸ ಹಾಗೂ ಅಲ್ಲಿನ ಕೊತ್ತಳಿ ಅಂದರೆ ಬೇರೆ ಬೇರೆ ವೃತ್ತಿಯನ್ನು ಮಾಡುವವರು ಸೇರಿಕೊಂಡು ಸ್ಥಾಪಿಸಲಾಗಿರುವ, ಸಂಘದ ಸದಸ್ಯರು ಕೂಡಿಕೊಂಡು ಸಿರವಾಳದಲ್ಲಿ ನಿರ್ಮಿಸಿರುವ ಶ್ರೀ ರಾಮೆಶ್ವರ ದೇವಸ್ಥಾನಕ್ಕೆ ಧರ್ಮಾರ್ಥವಾಗಿ ಕೆಲವೊಂದು ದತ್ತಿಗಳನ್ನು ಬಿಟ್ಟಿದ್ದಾರೆ ಈ ದತ್ತಿ ಸೂರ್ಯಚಂದ್ರರು ಇರುವವರೆಗೆ ಶಾಶ್ವತವಾಗಿ ನಡೆಸಿಕೊಂಡು ಬರಲೆಂಬ ಉದ್ದೇಶಕ್ಕೆ ಈ ಶಾಸನವನ್ನು ರಚಿಸಲಾಗಿದೆ ಎಂಬುದು ಸಂಶೋಧಕರ ಆಂಬೋಣ.
ಶಾಸನದ ಮಹತ್ವ: ಸ್ವರೂಪ ಮತ್ತು ಗಾತ್ರದ ದೃಷ್ಟಿಯಿಂದ ಈ ತ್ರುಟಿತ ಶಾಸನ ಚಿಕ್ಕದಾಗಿರಬಹುದು. ಆದರೆ ಅದು ಒದಗಿಸುವ ಮಾಹಿತಿ ಮಾತ್ರ ಬಹು ಮಹತ್ವದ್ದು. ಸಿರವಾಳದಲ್ಲಿ ಅಂದು ನಿರ್ಮಿಸಿದ್ದ ನೂರಾರು ದೇವಸ್ಥಾನಗಳ ಹೆಸರೇ ಕಣ್ಮರೆಯಾಗಿದೆ. ಅತಿ ಮಹತ್ವದ ಅಂಶವೆಂದರೆ ಕೊತ್ತಳಿಗಳದ್ದು. ಬೇರೆ ಬೇರೆ ವೃತ್ತಿಗಳನ್ನು ಮಾಡುವವರು ಹಲವಾರು ಜನ ಸೇರಿಕೊಂಡು ಕೊತ್ತಳಿ ಅಂದರೆ ಸಂಘಗಳನ್ನು ಸ್ಥಾಪಿಸಿಕೊಂಡು ಸಾಕಷ್ಟು ದಾನ-ಧರ್ಮ-ದತ್ತಿಗಳನ್ನು ತಮ್ಮ ಆದಾಯದಲ್ಲಿ ಬಂದ ಕೆಲಮೊಂದು ಭಾಗವನ್ನು ನೀಡುವುದರ ಮೂಲಕ ನಡೆಸುತ್ತಿದ್ದರು ಎಂದು ಡಾ. ಸಿರವಾಳ ಹೇಳುತ್ತಾರೆ. ಇದರೊಂದಿಗೆ ಸಿರವಾಳದಲ್ಲಿ ಈವರೆಗೆ ಶೋಧಿಸಿ ಪ್ರಕಟಿಸಿರುವ ಶಾಸನಗಳ ಸಂಖ್ಯೆ ಎಂಟರಿಂದ ಒಂಬತ್ತಕ್ಕೆ ಏರಿಕೆಯಾಗಿರುವುದು ಸಗರ ನಾಡಿನ ಸಾಂಸ್ಕೃತಿಕ ಲೋಕದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಸಿರವಾಳದ ಶಾಸನಗಳ ಸಮಗ್ರ ಸಂಶೋಧನೆ ಕೈಕೊಂಡು ಅಲ್ಲಿನ ಸ್ಮಾರಕಗಳ ರಕ್ಷಣೆ ಕಡೆಗೆ ಗಮನ ಹರಿಸಬೇಕಾದ್ದು ನಮ್ಮೆಲ್ಲರ ಹೊಣೆ ಎಂದು ಡಾ. ಸಿರವಾಳ ಹೇಳುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

