ಗುಲ್ಬರ್ಗಾ

ಕನಿಷ್ಠ ವೇತನ 15,000 ನಿಗದಿಪಡಿಸಿ

Published On :

ಯಾದಗಿರಿ: ವಿವಿಧ ವಸತಿ ನಿಲಯಗಳಲ್ಲಿರುವ ಸಿ ಮತ್ತು ಡಿ ಗ್ರೂಪ್‌ನ ವಿವಿಧ ಹುದ್ದೆಗಳಲ್ಲಿರುವವರು ವೇತನ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ.
ಅಡುಗೆಯವರಾಗಿ, ಅಡುಗೆ ಸಹಾಯಕರಾಗಿ ಮತ್ತು ಕಾವಲುಗಾರರಾಗಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಾವಿರಾರು ಕಾರ್ಮಿಕರಿಗೆ ಕನಿಷ್ಟ ವೇತನವನ್ನು 15 ಸಾವಿರ ನಿಗದಿಪಡಿಸಲು ಆಗ್ರಹಿಸಿ, ಬಲಿಷ್ಠ ಹೋರಾಟ ನಡೆಸಬೇಕೆಂದು ಆಲ್ ಇಂಡಿಯಾ ಯುಟಿಯುಸಿ ರಾಜ್ಯ ಉಪಾಧ್ಯಕ್ಷರು ಮತ್ತು ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಕರೆ ನೀಡಿದ್ದಾರೆ.
ಸಂಘದ ಜಿಲ್ಲಾ ಸಮಿತಿಯಿಂದ ಇಂದು ಯಾದಗಿರಿಯ ಚರ್ಚ್ ಹಾಲ್‌ನಲ್ಲಿ ಆಯೋಜಿಸಿದ್ದ ವಸತಿ ನಿಲಯ ಕಾರ್ಮಿಕರ ಜಿಲ್ಲಾಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಅತ್ಯಂತ ಕಡಿಮೆ ವೇತನ: ವಸತಿ ಶಿಕ್ಷಣ ಸಂಸ್ಥೆಗಳ ಅಡುಗೆ ಕಾರ್ಮಿಕರಲ್ಲದೆ, ಆಸ್ಪತ್ರೆಗಳಲ್ಲಿನ ಡಿ ಗ್ರೂಪ್ ಕಾರ್ಮಿಕರು, ನೀರಾವರಿ ಇಲಾಖೆಯ ಪುನಾರ್ವಸತಿ ನೌಕರರು ಸರ್ಕಾರದ ಖಾಯಂ ನೌಕರರು ಮಾಡುವ ಕೆಲಸಗಳನ್ನೆ ಮಾಡುತ್ತಿದ್ದರೂ, ಈ ನೌಕರರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದೆ. ಅಷ್ಟೆ ಅಲ್ಲದೆ ಕಾರ್ಮಿಕರಿಗೆ ನೇಮಕಾತಿ ಪತ್ರ, ಹಾಜರಾತಿ ಪುಸ್ತಕ ಇವುಗಳು ಹೆಸರಿಗೂ ಕಾಣಸಿಗವು. ಅಲ್ಲದೆ ಇಪಿಎಫ್ ಹಾಗೂ ಇಎಸ್‌ಐ ಸೌಲಭ್ಯಗಳನ್ನು ನಾಮಕಾವಸ್ತೆ ಮಾತ್ರವೇ ಮುಂದುವರಿಸಲಾಗುತ್ತಿದೆ.
ಲಾಭದಿಂದ ಪಿಂಚಣಿ: ಇಪಿಎಫ್ ಮೇಲಿನ ಬಡ್ಡಿ ದರವನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ದೇಣಿಗೆ ಆಧಾರಿತ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ನೌಕರರ ಹಣವನ್ನು ದೋಚಲಾಗುತ್ತಿದೆ. ಮೇಲಾಗಿ ಷೇರು ಮಾರುಕಟ್ಟೆಯಲ್ಲಿ ಪಿಂಚಣಿ ಹಣವನ್ನು ಹೂಡಿ ಅದರಿಂದ ಬಂದ ಲಾಭದಿಂದ ಪಿಂಚಣಿ ಕೊಡುವುದಾಗಿ ಹೇಳಲಾಗುತ್ತಿದೆ. ಈ ಜೂಜಾಟದ ಜಂಜಾಟದಲ್ಲಿ ಕಾರ್ಮಿಕರ ಹಣಕ್ಕೆ ಯಾವ ಭದ್ರತೆಯೂ ಇಲ್ಲ. ಇದರಿಂದ ನಿವೃತ್ತಿ ವೇತನವೆಂಬುದು ಕನ್ನಡಿಯೊಳಗಿನ ಗಂಟಾಗುತ್ತದೆ ಅಷ್ಟೇ ಅಲ್ಲ, ನಿವೃತ್ತ ನೌಕರರನ್ನು ಬೀದಿಗೆ ತಳ್ಳುತ್ತಿರುವುದನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದರು.
2.18 ಲಕ್ಷ ಕೋಟಿ ಪರಿಹಾರ: ಬಂಡವಾಳ ಶಾಹಿಗಳಿಗೆ ಗರಿಷ್ಟ ಲಾಭವನ್ನು ಖಾತ್ರಿ ಪಡಿಸುವುದಕ್ಕಾಗಿ, ಕೈಗಾರಿಕಾ ಅಭಿವೃದ್ಧಿಯ ಹೆಸರಿನಲ್ಲಿ ವಿಶೇಷ ಆರ್ಥಿಕ ವಲಯ (ಎಸ್‌ಇಝಡ್)ಗಳನ್ನು ಸ್ಥಾಪಿಸಲಾಗುತ್ತಿದೆ. ಈ ವಿಶೇಷ ವಲಯಗಳಲ್ಲಿ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ. ಮಾಲೀಕರು ಕಾರ್ಮಿಕರನ್ನು ಮನಬಂದಂತೆ ಶೋಷಿಸುತ್ತಾರೆ. ಆದ್ದರಿಂದ ದೇಶದ ಕಾರ್ಪೋರೇಟ್ ಮನೆತನಗಳಿಗೆ ಸರ್ಕಾರ 2.18 ಲಕ್ಷ ಕೋಟಿ ಪರಿಹಾರವನ್ನು ಉಡುಗೊರೆಯಾಗಿ ನೀಡಿದೆ. ಆದರೆ ಅಸಂಘಟಿತ ವಲಯಕ್ಕೆ ನೀಡಿರುವ ಮೊತ್ತ ಕೇವಲ 1 ಸಾವಿರ ಕೋಟಿ ಮಾತ್ರ. ದೇಶದ ಕಾರ್ಮಿಕರನ್ನು ಎಂತಹ ಘೋರವಾದ ಶೋಷಣೆಗೆ ಗುರಿಪಡಿಸಲಾಗಿದೆ ಎನ್ನುವುದನ್ನು ಎತ್ತಿತೋರಿಸುತ್ತಿದೆ ಎಂದರು.
ಆಂದೋಲನ ಏಕೈಕ ಮಾರ್ಗ: ಇಂತಹ ಸಂದರ್ಭದಲ್ಲಿ ಎಲ್ಲಾ ವಿಭಾಗದ ಕಾರ್ಮಿಕರು ಒಂದುಗೂಡಿ ಸಮರಶೀಲ ಆಂದೋಲನವನ್ನು ಬೆಳೆಸುವುದು ಕಾರ್ಮಿಕ ವರ್ಗದ ಮುಂದಿರುವ ಏಕೈಕ ಮಾರ್ಗವಾಗಿದೆ. ಆಲ್ ಇಂಡಿಯಾ ಯುಟಿಯುಸಿಯು  ನಮ್ಮ ಸಂಘಟನೆಯ ಸ್ಥಾಪಕರಾದ ಕಾಮ್ರೇಡ್ ಶಿವದಾಸ್ ಘೋಷ್ರವರ ಉದಾತ್ತ ಚಿಂತನೆಗಳ ಆಧಾರದ ಮೇಲೆ ದುಡಿಯುವ ಜನರ ಹೋರಾಟಗಳನ್ನು ಬೆಳೆಸುತ್ತಿದೆ ಎಂದರು.
ಪ್ರಾರಂಭದಿಂದಲೂ ಆಲ್ ಇಂಡಿಯಾ ಯುಟಿಯುಸಿ ದೇಶಾದ್ಯಂತ ಸಂಘಟಿತ ಹಾಗೂ ಅಸಂಘಟಿತ ಎರಡೂ ವಲಯಗಳಲ್ಲಿ ಸಮರ ಶೀಲ ಹೋರಾಟಗಳನ್ನು ಕಟ್ಟುತ್ತಿದೆ. ಕಟ್ಟಡ ನಿರ್ಮಾಣ, ಕೃಷಿಕ್ಷೇತ್ರ, ಗಣಿ, ನೀರಾವರಿ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಲ್ಲಿನ ಗುತ್ತಿಗೆ ಕಾರ್ಮಿಕರು, ಆಶಾ- ಅಂಗನಾವಾಡಿ ಕಾರ್ಯಕರ್ತೆಯರು, ಹಾಸ್ಟೆಲ್ ನೌಕರರು, ವಿದ್ಯುತ್ ಗುತ್ತಿಗೆ ಕಾರ್ಮಿಕರು, ರೇಲ್ವೆ ನೌಕರರು, ಸ್ಪಾಂಜ್ ಐರನ್ ಕಾರ್ಮಿಕರು, ಪುನಾರ್ವಸತಿ ನೌಕರರು, ಹಮಾಲಿಗಳು, ಮನೆಗೆಲಸದವರು ಇತ್ಯಾದಿ ಕಾರ್ಮಿಕರ ಸಂಘಗಳನ್ನು ಕಟ್ಟುವ ಮೂಲಕ ವಿವಿಧ ವಲಯಗಳಿಗೆ ಸೇರಿದ ಕೋಟ್ಯಾಂತರ ಕಾರ್ಮಿಕರ ಹೋರಾಟಗಳನ್ನು ಸಂಘಟಿಸುತ್ತಿದ ಹತ್ತಾರು ವರ್ಷಗಳಿಂದ ಹಲವಾರು ಸ್ಮರಣೀಯವಾದ ಹೋರಾಟಗಳನ್ನು ಬೆಳೆಸಿ ಜಯಶಾಲಿಗಳಾಗಿದ್ದಾರೆಂದು ಹಿಂದಿನ ಹೋರಾಟಗಳನ್ನು ಸ್ಮರಿಸಿದರು.  
ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಮಿತಿ ಸದಸ್ಯ ಕಾ. ಡಿ. ಉಮಾದೇವಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಲ್ಲಪ್ಪ ಕಂದಕೂರ ವಹಿಸಿದ್ದರು. ತಾಜುದ್ದೀನ್ ಕಾರ್ಯಕ್ರಮ ನಡೆಸಿಕೊಟ್ಟರು. ಹಣಮಂತ, ಗೋವಿಂದಗೌಡ, ವಿಜಯಕುಮಾರ, ಮರಳಮ್ಮ ಮತ್ತಿತರರು ವೇದಿಕೆಯ ಮೇಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.