ನಗರದಲ್ಲಿ ನಮೋ ಜಾತ್ರೆ...
ಕ.ಪ್ರ. ವಾರ್ತೆ, ಗುಲ್ಬರ್ಗ, ಫೆ.28
ಮೋದಿ.. ಮೋದಿ.. ಮೋದಿ...
- ನಗರದಲ್ಲಿ ಶುಕ್ರವಾರ ನಡೆದ ನಮೋ ರ್ಯಾಲಿಯಲ್ಲಿ ಕೇಳಿ ಬಂದ ಒಕ್ಕೊರಲ ಧ್ವನಿಯಿದು.
ಹೌದು, ರ್ಯಾಲಿ ಥೇಟ್ ಅಪ್ಪನ ಜಾತ್ರೆ ಸ್ವರೂಪ ಧರಿಸಿತ್ತು. ಯುವಕರೇ ಹೆಚ್ಚು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅವರೆಲ್ಲ ಸಮಾರಂಭದುದ್ದಕ್ಕೂ ಬಿಜೆಪಿ ಪ್ರಧಾನಿ ಅಭ್ಯರ್ಥಿಯ ಜಪ ಮಾಡಿದರು.
ಮೋದಿ ಬರುವ ಮುಂಚೆ ಮಾತನಾಡಿದ ಬಿಜೆಪಿ ನಾಯಕಿ ತಾರಾ, ಮಹಿಳೆಯರಿಗೆ ಶೌಚಕ್ಕೂ ಇಲ್ಲಿ ದುರ್ಗತಿ ಎಂದು ಏನ್ ದನಾ ಕಾಯ್ತಿದ್ದೀರಾ ಎಂದು ಕೇಂದ್ರ ಮಂತ್ರಿಗಳನ್ನು ದಬಾಯಿಸಿದರೆ, ರೇವು ನಾಯಕ ಅವರು ಮೋದಿ ಮೋಡಿಗೆ ಖರ್ಗೆ ಎದೆಯಲ್ಲಿ ಢವಢವ ಎಂಬ ನಡುಕ ಶುರುವಾಗಿದೆ ಎಂದು ಹೇಳುವ ಮೂಲಕ ಸೇರಿದ್ದ ಜನರ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಎಲ್ರೂ ನಿರೀಕ್ಷೆಯಲ್ಲಿರುವಾಗಲೇ ಬಂದ ಮೋದಿ ತಾವೇ ಮಾತಿಗೆ ಇಳಿದ್ರು. ಹೀಗಾಗಿ ಮೋದಿ ಜೊತೆಗೇ ಬಂದಿದ್ದ ಯಡಿಯೂರಪ್ಪ, ಅನಂತ ಕುಮಾರ, ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ನಾಯಕರು ಮಾತನಾಡದೆ ಮೌನದ ಮೊರೆ ಹೊಕ್ಕರು.
ಅಪ್ಪನ ಜಾತ್ರೆ ಹೋಲುವ ನೋಟಗಳು: ಎಲ್ಲಿ ನೋಡಿದರಲ್ಲಿ ಜನಜಾತ್ರೆ, ಬಸ್, ಕಾರ್, ಜೀಪು ಸೇರಿದಂತೆ ತರಹೇವಾರಿ ವಾಹನ ಸಾಲು. ತಟ್ಟೆ ಹೋಟೆಲ್, ಟೀ ಸ್ಟಾಲ್, ಜ್ಯೂಸ್ ಅಂಗಡಿಗಳಲ್ಲೂ ನೂಕುನುಗ್ಗಲು.
ಈ ಭಾಗದಲ್ಲಿನ ಅತಿದೊಡ್ಡದಾದ ಅಪ್ಪನ (ಶರಣಬಸವೇಶ್ವರ) ಜಾತ್ರೆಯಲ್ಲಿ ವರ್ಷಕ್ಕೊಮ್ಮೆ ಕಾಣುತ್ತಿದ್ದ ಇಂತಹ ನೋಟ ಜಾತ್ರೆಗೂ ಮುನ್ನ ಜಿಡಿಎ ನಿರ್ಮಿಸಿರುವ ವಾಜಪೇಯಿ ಬಡಾವಣೆ(ಇನ್ನೂ ನಿವೇಶನ ಹಂಚಿಕೆಯಾಗಿಲ್ಲ)ಯ ವಿಶಾಲ ಪ್ರಾಂಗಣದ ನಮೋ ರ್ಯಾಲಿಯಲ್ಲಿ ಕಂಡುಬಂತು.
ಬಿಜೆಪಿ ಗುಲ್ಬರ್ಗ, ರಾಯಚೂರು, ಬೀದರ್ ಲೋಕಸಭೆ ಕ್ಷೇತ್ರಗಳ ಮೇಲೆ ಕಣ್ಣಿಟ್ಟು ಗುಲ್ಬರ್ಗದಲ್ಲಿ ಈ ರ್ಯಾಲಿ ಆಯೋಜಿಸಿತ್ತು. ಅದಕ್ಕೆ ತಕ್ಕಂತೆ ಮೂರು ಪಾರ್ಲಿಮೆಂಟ್ ಕ್ಷೇತ್ರಗಳಲ್ಲಿನ 6 ಸಾವಿರಕ್ಕೂ ಹೆಚ್ಚು ಬೂತ್ಗಳಿಂದ ಕಾರ್ಯಕರ್ತರನ್ನು ಇಲ್ಲಿಗೆ ಬಸ್ಸು, ಕಾರ್, ಜೀಪುಗಳಲ್ಲಿ ಕರೆತಂದಿತ್ತು.
ನಗರವಾಸಿಗಳಿಗಿಂತ ಹೊರಗಿನಿಂದ ಬಂದ ಕಾರ್ಯಕರ್ತರದ್ದೇ ಕಲರವ. ಬಂದವರಿಗೆಲ್ಲ ಭೋಜನಕ್ಕೆ ಶರಣಬಸವೇಶ್ವರ ಹೆಸರಲ್ಲಿ ಪಾಕಶಾಲೆಯನ್ನೇ ಸ್ಥಾಪಿಸಲಾಗಿತ್ತು. ಮೋದಿ ರ್ಯಾಲಿಗೆ ಬಂದಾಗ ಮ.2.25 ಗಂಟೆ. ಬೆಳಗ್ಗೆಯಿಂದಲೇ ಮೈದಾನದಲ್ಲಿ ಬಂದು ಸೇರಿದ್ದ ಜನತೆ 5 ಗಂಟೆಗೂ ಅಧಿಕ ಕಾಲ ಮೋದಿಗಾಗಿ ಕಾಯಬೇಕಾಯ್ತು. ಭದ್ರತೆ ಹಿನ್ನೆಲೆಯಲ್ಲಿ ಮೋದಿ ರ್ಯಾಲಿ ಮೈದಾನದ ಆಚೀಚೆ ಸಂಚಿರಸುವಂತೆಯೂ ಇರಲಿಲ್ಲ. ಹೀಗಾಗಿ ಸೇರಿದ್ದ ಜನತೆ ರ್ಯಾಲಿ ಆರಂಭದಲ್ಲಿನ ವಿಳಂಬಕ್ಕೆ ಬೇಸರಿಸಿದರು.
ನಮೋ ಮಾತಿಗೆ ಕಿವಿಯಾದ ಪೊಲೀಸ್ರು...: ನಮೋ ರ್ಯಾಲಿಗೆ ಪೊಲೀಸ್ ಸರ್ಪಗಾವಲನ್ನೇ ಹಾಕಲಾಗಿತ್ತು. ಆದರೂ ಮೋದಿ ಮಾತಿಗೆ ನಿಂತಾಗ ಭದ್ರತೆ ಕಾಯಕದಲ್ಲಿದ್ದ ಪೊಲೀಸರೂ ಎಲ್ಲವನ್ನೂ ಮರೆತು ಮೋದಿ ಮಾತುಗಳಿಗೆ ಕಿವಿಯಾದರು.
ವೇದಿಕೆಯುದ್ದಕ್ಕೂ ಗಸ್ತಿನಲ್ಲಿದ್ದ ಗ್ರಾಮಾಂತರ ಡಿಎಸ್ಪಿ ಸಂತೋಷ ಬಾಬು 'ನೀವೆಲ್ಲರೂ ಭಾಷಣ ಆಲಿಸೋದಲ್ಲ, ಜನರತ್ತ ನಿಗಾ ವಹಿಸಿ ಭದ್ರತೆ ಕಾಯಕ ನಿಭಾಯಿಸ್ರಿ' ಎಂದು ತಿವಿದಾಗ ಪೊಲೀಸರು ಮತ್ತೆ ತಮ್ಮ ಕಾವಲು ಕಾಯಕದಲ್ಲಿ ತೊಡಗಿಸಿಕೊಂಡರು.
ವೇದಿಕೆಗಷ್ಟೇ ಸೀಮಿತವಾಯ್ತು ಡಾ. ತಂಗಾ ಹೆಸರು: ನಮೋ ರ್ಯಾಲಿಯ ವೇದಿಕೆಗೆ ಡಾ. ಎಂ.ಆರ್. ತಂಗಾ ವೇದಿಕೆ ಎಂದು ಹೆಸರಿಡಲಾಗಿತ್ತು. ಹಾಗಂತ ವೇದಿಕೆಯ ಕೆಳಗಡೆಯೇ ಢಾಳಾಗಿ ಬರೆಯಲಾಗಿತ್ತು. ಆದರೆ ವೇದಿಕೆಯಲ್ಲಿ ನಡೆದ 5 ಗಂಟೆಗಳ ಸಮಾರಂಭದಲ್ಲಿ ಯಾರೊಬ್ಬರೂ ಡಾ. ತಂಗಾ ವೇದಿಕೆ ಎಂದು ಹೇಳಲೇ ಇಲ್ಲ. ಡಾ. ತಂಗಾ ಬಿಜೆಪಿಯ ಈ ಭಾಗದ ದೊಡ್ಡ ನಾಯಕರಾಗಿದ್ದರು. ಯಾಕೆ ಈಗಿನ ಮುಖಂಡರು ಈ ಹೆಸರು, ಅದರ ಮಹತ್ವ ಸಾರಿ ಹೇಳುತ್ತಿಲ್ಲವೋ ಎಂದು ಜನ ಆಡಿಕೊಂಡರು.
ಪಕ್ಷ ಸೇರುವ ಮುನ್ನವೇ ಭಾಷಣ..: 2013ರಲ್ಲಿ ಬಿಜೆಪಿ ತೊರೆದಿದ್ದ ಸುರಪುರ ಮಾಜಿ ಶಾಸಕ ರಾಜುಗೌಡರು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ್ತೀಗ ಬಿಜೆಪಿಯತ್ತ ವಾಲಿದ್ದಾರೆ. ಇವರು ಮತ್ತೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆಂದು ಸಂಘಟಕರು ಹೇಳುತ್ತಿದ್ದರು. ಆದರೆ ಅವರು ಪಕ್ಷಕ್ಕೆ ಸೇರುವ ಮುನ್ನವೇ ಮಾತನಾಡಲು ಆಹ್ವಾನಿಸಲಾಯ್ತು. ಈ ಆಭಾಸ ಸಂಘಟಕರ ಗಮನಕ್ಕೆ ಬಂತೋ ಇಲ್ಲೋ ಗೊತ್ತಿಲ್ಲ, ಸೇರಿದ್ದ ಜನರು ಮಾತ್ರ ಇದನ್ನು ಗಮನಿಸಿ ನಸುನಕ್ಕರು.
ಟೋಪಿ ಹಾಕಿದ ಬಿಜೆಪಿ: ನಮೋ ರ್ಯಾಲಿ ಪ್ರಧಾನ ವೇದಿಕೆ ಮಾತ್ರ ಮೇಲು ಹೊದಿಕೆ ಹಂದಿತ್ತು. ಉಳಿದಂತೆ ಎಲ್ಲವೂ ಖುಲ್ಲಾ. ಹಾಗಾಗಿ ಮಾಧ್ಯಮದವರು, ವಿಐಪಿ, ಪಕ್ಷದ ಪ್ರಮುಖರಾದಿಯಾಗಿ ರ್ಯಾಲಿಗೆ ಬಂದವರು, ಬಿಸಿಲಲ್ಲೇ ಕುಳಿತುಕೊಳ್ಳುವಂತಾಗಿತ್ತು. ಅವರಿಗೆಲ್ಲರಿಗೂ ಕೇಸರಿ ಬಣ್ಣದ ಟೋಪಿಯನ್ನು ವಿತರಿಸಲಾಗಿತ್ತು. ಇದರಿಂದ ಇಡೀ ರ್ಯಾಲಿ ಕೇಸರಿಮಯವಾದಂತೆ ಕಂಡುಬಂತು.
ಬಿಜೆಪಿಗೆ ಪ್ರತಿಯಾಗಿ 'ಕೈ' ಕಾರ್ಯಕ್ರಮ: ಫೆ.28ರಂದು ಗುಲ್ಬರ್ಗಕ್ಕೆ ಮೋದಿ ಬರುವುದು ಗೊತ್ತಿದ್ದರೂ ಕಾಂಗ್ರೆಸ್ ಪಕ್ಷ, ಸಿಎಂ ಸಿದ್ದರಾಮಯ್ಯ, ರೇಲ್ವೆ ಸಚಿವ ಖರ್ಗೆ ಮೊದಲ್ಗೊಂಡು ಎಲ್ಲರೂ ಬಿಜೆಪಿಯ ಈ ಕಾರ್ಯಕ್ರಮಕ್ಕೆ ಪ್ರತಿಯಾಗಿ ವಾಡಿಯಲ್ಲಿ ಸಮಾರಂಭ ಹೂಡಿದ್ದಾರೆ. ಸಿಎಂ ಇಲ್ಲಿಂದ 40 ಕಿಮೀ ದೂರದಲ್ಲೇ ಇದ್ದಾರೆ. ಅವರ ಸಮಾರಂಭಕ್ಕೆ 2 ಸಾವಿರ ಜನರಿಲ್ಲ, ನಮೋ ರ್ಯಾಲಿಗೆ ಲಕ್ಷಾಂತರ ಮಂದಿ ಸೇರಿದ್ದಾರೆಂದು ನಾಯಕರಾದ ಅಶೋಕ, ರೇವು ನಾಯಕ ಎಲ್ಲರೂ ಹೇಳಿದರಲ್ಲದೆ ಜನರ ಒಲವು ಬಿಜೆಪಿಯತ್ತ ಇದೆ ಎನ್ನಲು ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಎಂದು ತಮ್ಮನ್ನು ತಾವೇ ಬೆನ್ನು ಚಪ್ಪರಿಸಿಕೊಂಡರು.
ಮೋದಿಯವರು ಸಹ ರ್ಯಾಲಿಯಲ್ಲಿ ಸೇರಿದ್ದ ಜನರನ್ನು ಕಂಡು ಪುಳಕಿತರಾದರಲ್ಲದೆ, ಜನರ ಮೂಡ್ ಹೇಗಿದೆ ಎಂಬುದನ್ನು ಅರಿಯಲು ಬಿಜೆಪಿ ತೆಗಳುವ ಕಾಂಗ್ರೆಸ್ ಮಿತ್ರರು ಹೆಲಿಕಾಪ್ಟರ್ನಲ್ಲಿ ಒಂದು ಸುತ್ತು ಹಾಕಿಕೊಂಡು ಹೋಗಲಿ ಎಂದು ವ್ಯಂಗ್ಯವಾಗಿ ಹೇಳಿದ್ದೂ ಜನರ ನಗುವಿಗೆ, ಕೇಕೆಗೆ ಕಾರಣವಾಗಿತ್ತು.
ದನ ಕಾಯ್ತಿದ್ದೀರಾ ನೀವೆಲ್ರೂ..!: ತಾರಾ
ಬಿಜೆಪಿ ಎಂಎಲ್ಸಿ, ಚಿತ್ರನಟಿ ತಾರಾ ರ್ಯಾಲಿಯಲ್ಲಿ ನಮೋ ಬರುವ ಮುಂಚೆ ಮಾತನಾಡುತ್ತಲೇ ಸುರಪುರದಲ್ಲಿ ಮಹಿಳೆಯರು ಶೌಚಕ್ಕೂ ಪರದಾಡುತ್ತಾರೆ. ಸಿಂಧನೂರು, ಯಲಬುರ್ಗಾ ಸೇರಿದಂತೆ ಹೈ-ಕ ನೆಲದಲ್ಲಿ ಬಿಂದಿಗೆ ಹಿಡಿದು ಕುಡಿವ ನೀರಿಗೂ ಪರದಾಟ ತಪ್ಪಿಲ್ಲ. ಇಂತಹ ದುರ್ಗತಿ ಯಾಕೆ, ದನ ಕಾಯ್ತಿದ್ದೀರಾ ನೀವೆಲ್ರೂ, ಕೇಂದ್ರ- ರಾಜ್ಯ ಮಂತ್ರಿಗಳಿದ್ದೇನು ಪ್ರಯೋಜನ?. ತಾರಾ ತಮ್ಮ ಮಾತಿನ ಭರಾಟೆಯಲ್ಲಿ ಹೀಗೆ ದಬಾಯಿಸಿದಾಗ ವೇದಿಕೆಯಲ್ಲಿದ್ದವರೆಲ್ಲ ಮುಖ ನೋಡಿಕೊಂಡರೆ ಸೇರಿದ್ದ ಜನತೆ ನಟಿ ತಾರಾ ಮಾತುಗಳಿಗೆ ದಂಗು. ತಾರಾ ಹೀಗೆ ಹೇಳುವಾಗ ಬರೋಬ್ಬರಿ ಅವರ ಪಕ್ಕವೇ ಸುರಪುರ ಮಾಜಿ ಶಾಸಕ, ಬಿಜೆಪಿ ಸೇರಲು ವೇದಿಕೆ ಹತ್ತಿದ್ದ ರಾಜುಗೌಡ ಕುಳಿತಿದ್ದರು. ಸುರಪುರದಲ್ಲೇ ಶೌಚಕ್ಕೆ ದುರ್ಗತಿ ಎಂದಿದ್ದ ತಾರಾ ಅವರ ಮಾತು ಕೇಳಿದ್ದ ಜನತೆ ಆ ದುರ್ಗತಿಗೆ ಕಾರಣರಾದವರು ಹಿಂದೆಯೇ ಇದ್ದಾರ ನೋಡ್ರಿ ಮೇಡಮ್ ಎಂದು ಕುಳಿತಲ್ಲಿಂದಲೇ ಕಿರುಚಿದ್ರು.
ಖರ್ಗೆ ಎದೆ ಢವಢವ... ರೇವು ಕನಸು
ರ್ಯಾಲಿಗೆ ಸೇರಿರುವ ಜನಸ್ತೋಮ ಖರ್ಗೆ ಎದೆಯಲ್ಲಿ ನಡುಕ ಮೂಡಿಸಿದೆ ಎಂದು ಲೋಕಸಭೆ ಚುನಾವಣೆ ಬಿಜೆಪಿ ಸಂಭಾವ್ಯ ಅಭ್ಯರ್ಥಿ ರೇವುನಾಯಕ ಬೆಳಮಗಿ ಹೇಳಿದರು.
ಹಳೇ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತ ಖರ್ಗೆ ಹೊಂಟಾರ, 40 ವರ್ಷ ರಾಜಕಾರಣ ಮಾಡಿವರಿಗೆ ಹೈ-ಕ ಪ್ರಗತಿ ಮಾಡಬೇಕು ಅನ್ನಿಸಲೇ ಇಲ್ಲ, ಅದಕ್ಕಾಗಿ ಯಡಿಯೂರಪ್ಪನವರು ಬರಬೇಕಾಯ್ತು. ಈಚೆಗಿನ ಬಂಡೆ ಸಾವಿನ ವಿಚಾರದಲ್ಲೂ ಈ ನಾಯಕರು ಮೌನ ತಾಳಿರುವುದು ಖಂಡನೀಯ. ಬಂಡೆ ಸಾವಿನ ಪ್ರಕರಣ ಸಿಬಿಐ ತನಿಖೆಗೆ ಕೊಡದೆ ಸರ್ಕಾರ ದ್ವಂದ್ವ ನಿಲುವು ತಾಳಿದೆ ಎಂದು ಖರ್ಗೆ, ಧರಂ ಸೇರಿದಂತೆ ಸ್ಥಳೀಯ- ರಾಜ್ಯ ಮಟ್ಟದ ನಾಯಕರನ್ನು ತೆಗಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

