ವೈಭವದ ಮೈಲಾಪೂರ ಮಲ್ಲಯ್ಯನ ಜಾತ್ರೆ
ಯಾದಗಿರಿ: ಹೈದ್ರಾಬಾದ್-ಕರ್ನಾಟಕದ ಧಾರ್ಮಿಕ ಶ್ರದ್ಧಾಕೇಂದ್ರವಾದ ತಾಲೂಕಿನ ಮೈಲಾಪೂರ ಮಲ್ಲಯ್ಯನ ಜಾತ್ರೆ ಮಂಗಳವಾರ ಮಕರ ಸಂಕ್ರಮಣ ದಿನದಂದು ಲಕ್ಷಾಂತರ ಭಕ್ತರ ಜಯ ಘೋಷಗಳ ಮಧ್ಯೆ ಅದ್ದೂರಿಯಾಗಿ ಜರುಗಿತು.
ಸೋಮವಾರ ದಿನದಿಂದಲೇ ಕ್ಷೇತ್ರಕ್ಕೆ ಕರ್ನಾಟಕ, ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಇಲ್ಲಿಗೆ ಆಗಮಿಸಿದ್ದರು.
ಬೆಳಗ್ಗೆ ಭಕ್ತರು ಪವಿತ್ರ ಹೊನ್ನಕೆರೆಯಲ್ಲಿ ಮಿಂದು ಮಲ್ಲಯ್ಯನ ದರ್ಶನ ಪಡೆದರು. ಮಧ್ಯಾಹ್ನ ಮಲ್ಲಯ್ಯನ ಮೂರ್ತಿ, ಆತನ ಕುದುರೆಯನ್ನು ಗಂಗಾ ಸ್ನಾನಕ್ಕೆಂದು ಹೊನ್ನಕೆರೆಗೆ ಪಲ್ಲಕ್ಕಿಯಲ್ಲಿ ವಿವಿಧ ವಾದ್ಯಗಳೊಂದಿಗೆ ತೆಗೆದುಕೊಂಡು ಹೋಗಲಾಯಿತು.
ಈ ಸಂದರ್ಭದಲ್ಲಿ ಎತ್ತ ನೋಡಿದರು ಜನ ಸಾಗರವೇ ಕಾಣುತಿತ್ತು. ದಾರಿಯುದ್ದಕ್ಕೂ, ಬೆಟ್ಟದ ಮೇಲೆ ಮರದ ಮೇಲೆ ನಿಂತಿದ್ದ ಭಕ್ತರು ಮಲ್ಲಯ್ಯನ ಮೂರ್ತಿ ಮೇಲೆ ಕಲ್ಲುಸಕ್ಕರೆ, ಉತ್ತುತ್ತಿ, ಭಂಡಾರ, ಕುರಿ ಉಣ್ಣೆ, ರೊಕ್ಕ ರೂಪಾಯಿಗಳನ್ನು ಹಾಗೂ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು, ಜೋಳ, ಶೇಂಗಾ, ಭತ್ತದ ಬೆಳೆಯನ್ನು ಎಸೆದು ಜೈಕಾರ ಹಾಕಿ ಭಕ್ತಿ ಭಾವ ಮೆರೆದರು. ಈ ಸಮಯದಲ್ಲಿ ಅಲ್ಲಿ ಹಳದಿಮಯ ವಾತಾವರಣ ಸೃಷ್ಟಿಯಾಯಿತು.
ಮಲ್ಲಯ್ಯನ ಮೂರ್ತಿಯ ಗಂಗಾ ಸ್ನಾನದ ನಂತರ ದೇವಸ್ಥಾನದ ಮುಂಭಾಗದಲ್ಲಿ ದೇವರ ಸರಪಳಿ ಹರಿಯಲಾಯಿತು. ಸಮಯ 4 ಗಂಟೆ ಹೊತ್ತಿಗೆ ಮೂಲ ಸ್ಥಳದಲ್ಲಿ ಮೂರ್ತಿಯನ್ನು ಸಕಲ ಪೂಜೆಗಳೊಂದಿಗೆ ಇಡಲಾಯಿತು.
ಕಳೆದ ಎರಡು ವರ್ಷಗಳಿಂದ ಮಲ್ಲಯ್ಯನ ಜಾತ್ರೆಯಲ್ಲಿ ಭಕ್ತರು ಕುರಿಗಳನ್ನು ಹಾರಿಸುವದನ್ನು ಜಿಲ್ಲಾಡಳಿತ ನಿಷೇಧಿಸಿದೆ. ಪ್ರಾಣಿ ಹಿಂಸೆಗೆ ಕಡಿವಾಣ ಹಾಕಿ ಗ್ರಾಮದ ಮುಖ್ಯ ದ್ವಾರದಲ್ಲಿಯೇ ಪೋಲಿಸರು ಹಾಗೂ ಅಧಿಕಾರಿಗಳು ಭಕ್ತರಿಂದ ಕುರಿಗಳನ್ನು ವಶಪಡಿಸಿಕೊಂಡರು. ಈ ವರ್ಷವೂ ಅಗತ್ಯ ಕ್ರಮ ಕೈಗೊಂಡರೂ ಜಾತ್ರೆಗೆ ಬಂದಮ ಭಕ್ತರು ಕದ್ದು ಮುಚ್ಚಿ ತಂದ ತಮ್ಮ ಎರಡು ಕುರಿಗಳನ್ನು ಮಲ್ಲಯ್ಯನ ಪಲ್ಕಕಿಯ ಮೇಲೆ ಎಸೆದರು.
ಜಾತ್ರೆಗೆ ಆಗಮಿಸಿದ್ದ ಮಲ್ಲಯ್ಯನ ಭಕ್ತರು ಮಲ್ಲಯ್ಯನ ಕುದುರೆ ಸವಾರರಿಂದ ಬಾರುಕೋಲಿನಿಂದ ಹೊಡೆಸಿಕೊಳ್ಳುತ್ತಿರುವುದು ನೋಡುಗರಲ್ಲಿ ಕ್ಷಣ ಕಾಲ ಆತಂಕ ಉಂಟಾಯಿತು.
ಭಕ್ತರು ಜಾತ್ರೆಯಲ್ಲಿ ಬಿರುಸಾಗಿ ಮಲ್ಲಯ್ಯನ ಭಂಡಾರ, ಸಿಹಿ ತಿನಿಸುಗಳನ್ನು ಹಾಗೂ ಕೃಷಿ ಚಟುವಟಿಕೆಗೆ ಬೇಕಾಗುವ ವಸ್ತುಗಳನ್ನು ಖರೀದಿ ಮಾಡಿದರು. ಮಕ್ಕಳು ಜೋಕಾಲಿ ಮತ್ತು ತೊಟ್ಟಿಲಲ್ಲಿ ಕುಳಿತು ಸಂಭ್ರಮಿಸಿದರು.
ಜಾತ್ರೆಗೆ ಆಗಮಿಸಿದ ಲಕ್ಷಾಂತರ ಭಕ್ತರು ಸೂಕ್ತ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

