ಗಂಭೀರ ಚರ್ಚೆಗೆ ನಾಂದಿಯಾದ ಕಳಪೆ ಟ್ರಾನ್ಸ್ಫಾರ್ಮರ್ ಬಳಕೆ
ಗುರುಮಠಕಲ್: ಯಾದಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳಪೆ ಟ್ರಾನ್ಸ್ಫಾರ್ಮರ್ ಬಳಕೆ ಮತ್ತು ಕೊರತೆಯಿಂದ ರೈತರು ಮತ್ತು ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಕುರಿತು ಡಾ. ಮಾಲಕರಡ್ಡಿ ಅವರ ಪ್ರಶ್ನೆ ವಿಧಾನಸಭೆಯಲ್ಲಿ ಅತ್ಯಂತ ಗಂಭೀರ ಮತ್ತು ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.
ಶುಕ್ರವಾರ ಪ್ರಶ್ನೋತ್ತರ ಕಲಾಪದಲ್ಲಿ ಡಾ. ಮಾಲಕರಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ನೀಡಿದ ಉತ್ತರದಿಂದ ತೃಪ್ತರಾಗದ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಈ ಸಮಸ್ಯೆ ಕುರಿತು ಗಂಭೀರ ಚರ್ಚೆ ಅಗತ್ಯವಿದೆ ಎಂದು ಮಾಲಕರಡ್ಡಿ ಬೆಂಬಲಕ್ಕೆ ನಿಂತರು.
ರೈತರಿಗೆ ತೊಂದರೆ: ನನ್ನ ಮತಕ್ಷೇತ್ರದಲ್ಲಿ ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಲಾಗಿದೆ. ಆದರೆ ಅದಕ್ಕೆ ತಕ್ಕಂತೆ ಟ್ರಾನ್ಸ್ಫಾರ್ಮರ್ಗಳನ್ನು ಒದಗಿಸದೇ ಇರುವುದರಿಂದ ಯಾವ ರೈತರ ಜಮೀನುಗಳಿಗೂ ನೀರಿನ ಕೊರತೆ ನೀಗಿಸಲಾಗುತ್ತಿಲ್ಲ. ಒಂದೇ ಟ್ರಾನ್ಸ್ಫಾರ್ಮರ್ಗೆ ಹತ್ತು ಹಲವು ಪಂಪ್ಸೆಟ್ಗಳನ್ನು ಜೋಡಿಸಿರುವುದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದೆ ಎಲ್ಲ ರೈತರಿಗೂ ತೊಂದರೆಯಾಗುತ್ತಿರುವುದರಿಂದ ಹೆಚ್ಚಿನ ಟ್ರಾನ್ಸ್ಫಾರ್ಮರ್ಗಳನ್ನು ಪೂರೈಸಬೇಕು ಎಂದರು.
ಇದಕ್ಕೆ ಬೆಂಬಲ ವ್ಯಕ್ತಪಡಿಸಿದ ಬಿಜೆಪಿಯ ಲಕ್ಷ್ಮಣ ಸವದಿ, ಬಸವರಾಜ ಬೊಮ್ಮಾಯಿ ಅವರು, ಸದನದ ಹಿರಿಯ ಸದಸ್ಯ ಡಾ. ಮಾಲಕರಡ್ಡಿಯವರ ತೀರಾ ಗಂಭೀರ ಪ್ರಶ್ನೆ ಕೇಳಿದ್ದು, ಇದಕ್ಕೆ ಸಚಿವರು ಮಾಮೂಲಿ ದಾಟಿಯ ಉತ್ತರ ನೀಡಬಾರದು. ಈ ಕುರಿತು ಗಂಭೀರ ಚರ್ಚೆ ನಡೆಯಬೇಕಿದೆ ಎಂದು ಪ್ರತಿಪಾದಿಸಿದರು. ಕ್ರಮಬದ್ಧವಾಗಿ ಪಂಪ್ಸೆಟ್ಗೆ ಅವಕಾಶ ಪಡೆದುಕೊಂಡು ಸ್ವಂತ ಹಣದಿಂದ ಪಂಪ್ಸೆಟ್ಗೆ ಟ್ರಾನ್ಸ್ಫಾರ್ಮರ್ ಖರೀದಿಸಿದ ರೈತನ ಪಂಪ್ಸೆಟ್ಗಳಿಗೆ ಸಕ್ರಮಗೊಳಿಸಿದ ಪಂಪ್ಸೆಟ್ಗಳನ್ನು ಜೋಡಿಸಿರುವುದರಿಂದ ಮೊದಲು ಹಣ ನೀಡಿ ಖರೀದಿಸಿದ ರೈತರ ಹೊಲಗಳಿಗೆ ನೀರು ಪೂರೈಸಲು ತೊಂದರೆಯಾಗಿದೆ ಎಂದು ಲಕ್ಷ್ಮಣ ಸವದಿ ಹೇಳಿದರು.
ಗುಣಮಟ್ಟದ ಟ್ರಾನ್ಸ್ಫಾರ್ಮರ್; ಭರವಸೆ: ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಿದ ತರುವಾಯ ಅದಕ್ಕೆ ತಕ್ಕಂತೆ ಟ್ರಾನ್ಸ್ಫಾರ್ಮರ್ ಪೂರೈಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಅಕ್ರಮ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಿದ ಉದ್ದೇಶವೂ ಈಡೇರದಂತಾಗುತ್ತದೆ. ಇದರಿಂದ ಬರಪೀಡಿತ ನಮ್ಮ ಜಿಲ್ಲೆಯಲ್ಲಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ರೈತರ ಬವಣೆಯಲ್ಲಿ ಮಾಲಕರಡ್ಡಿ ಸದನದ ಮುಂದೆ ಬಿಚ್ಚಿಟ್ಟರು.
ಮಾಲಕರಡ್ಡಿಯವರು ಉತ್ತಮ ಸಲಹೆಗಳನ್ನು ನೀಡಿದ್ದು, ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿ ಇನ್ನು ಮುಂದೆ ಈ ರೀತಿಯಾಗದಂತೆ ಗಮನಹರಿಸಲಾಗುವುದು. ಹಾಗೆಯೇ ಯಾದಗಿರಿ ಜಿಲ್ಲೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಉತ್ತಮ ಗುಣಮಟ್ಟದ ಟ್ರಾನ್ಸ್ಫಾರ್ಮರ್ಗಳನ್ನು ಒದಗಿಸಲು ತಾವು ಭರವಸೆ ನೀಡುವುದಾಗಿ ಸಚಿವ ಶಿವಕುಮಾರ್ ಸದನಕ್ಕೆ ತಿಳಿಸಿದರು.
ಕಪ್ಪು ಪಟ್ಟಿಗೆ ಸೇರಿಸಿಲ್ಲ: ಸಕ್ರಮಗೊಳಿಸಿದ ನಂತರ, ಇದು ರಾಜ್ಯದ ಎಲ್ಲೆಡೆಯ ಸಮಸ್ಯೆಯಾಗಿದ್ದು, ಈ ಕುರಿತು ಸರ್ಕಾರ ಗಂಭೀರವಾಗಿ ಆಲೋಚಿಸಿ ಈ ಸಮಸ್ಯೆ ನಿವಾರಿಸಲು ಮುಂದಾಗಬೇಕು. ಹಿರಿಯ ಸದಸ್ಯ ಮಾಲಕರಡ್ಡಿಯವರ ಕಳಕಳಿಯನ್ನು ಸಚಿವರು ಅರ್ಥ ಮಾಡಿಕೊಂಡು ಹೆಚ್ಚಿನ ಪ್ರಾಶಸ್ತ್ಯ ನೀಡಿ ಪರಿಹರಿಸಲು ಮುಂದಾಗಬೇಕು ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸಲಹೆ ನೀಡಿದರು.
ಕಳಪೆ ಗುಣಮಟ್ಟದ ರಿಪೇರಿ ಮಾಡಿದ ಕಂಪನಿಗಳಿಗೆ ದಂಡ ವಿಧಿಸಲಾಗುತ್ತದೆ. ಹಾಗೆಯೇ ಮಾಲಕರಡ್ಡಿಯವರ ಸಲಹೆಯಂತೆ ಅಂತಹ ಕಳಪೆ ದುರಸ್ತಿದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ ಉತ್ತಮ ಗುಣಮಟ್ಟದ ದುರಸ್ತಿದಾರರಿಗೆ ಟ್ರಾನ್ಸ್ಫಾರ್ಮರ್ದುರಸ್ತಿ ನೀಡಲು ಸೂಚನೆ ನೀಡಲಾಗುವುದು ಎಂದು ಸಚಿವರು ವಿವರಿಸಿದರು.
ಇದುವರೆಗೂ ಯಾವ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂಬುದನ್ನು ಸದನಕ್ಕೆ ವಿವರಿಸಬೇಕೆಂದು ಮಾಲಕರಡ್ಡಿ ಆಗ್ರಹಿಸಿದಾಗ, ಇದುವರೆಗೂ ಯಾರನ್ನೂ ಕಪ್ಪು ಪಟ್ಟಿಗೆ ಸೇರಿಸಲಾಗಿಲ್ಲ ಎಂದು ಸಚಿವರು ತಿಳಿಸಿದರು. ಈ ಕುರಿತು ಸರ್ಕಾರ ಬಿಗಿ ಕ್ರಮ ಕೈಗೊಳ್ಳಬೇಕು. ಹಾಗೆಯೇ ಹೆಚ್ಚಿನ ಟ್ರಾನ್ಸ್ಫಾರ್ಮರ್ಗಳನ್ನು ಪೂರೈಸಲು ಮುಂದಾಗಬೇಕು ಎಂದು ಅನೇಕ ಸದಸ್ಯರು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

