ಶಾಸಕರಿಂದ 122.92 ಲಕ್ಷಕಾಮಗಾರಿ ಪರಿಶೀಲನೆ
ಸುರಪುರ: ತಾಲೂಕಿನ ಶೆಳ್ಳಗಿ ಗ್ರಾಮದ ಹತ್ತಿರ ಹರಿಯುವ ಕೃಷ್ಣಾ ನದಿಗೆ ಶಾಸಕ ರಾಜಾ ವೆಂಕಟಪ್ಪನಾಯಕ ಇತ್ತೀಚೆಗೆ ಭೇಟಿ ನೀಡಿದರು. ನಂತರ ಶೆಳ್ಳಗಿ ಜಾಕ್‌ವೆಲ್‌ನಲ್ಲಿ ಕರ್ನಾಟಕ ಜಲ ಮಂಡಳಿಗೆ ವಹಿಸಲಾದ 122.92 ಲಕ್ಷಗಳ 5 ಕಾಮಗಾರಿಗಳನ್ನು ಪರಿಶೀಲಿಸಿದರು. ಜಾಕ್‌ವೆಲ್‌ನ ಮೋಟಾರ್, ಪಂಪ್, ಸ್ಟಾಟರ್ ದುರಸ್ಥಿಗೊಳಿಸಲು ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ಕುಂಬಾರಪೇಟದ ನೀರು ಶುದ್ಧೀಕರಣ ಕೇಂದ್ರಕ್ಕೆ (ಫಿಲ್ಟರ್ ಬೆಡ್) ಭೇಟಿ ನೀಡಿ ಪರಿಶೀಲಿಸಿದರು. ಜಾಕ್‌ವೆಲ್ ಪಂಪ್ ಹೌಸ್ ಮತ್ತು ನೀರು ಶುದ್ಧೀಕರಣ ಕೇಂದ್ರದ ಉಸ್ತುವಾರಿ ಸಲುವಾಗಿ 2 ಜನ ಸಿಬ್ಬಂದಿಯನ್ನು ಖಾಯಂ ಆಗಿ ಸುರಪುರಕ್ಕೆ ನಿಯೋಜಿಸುವಂತೆ ಜಲಮಂಡಳಿಯ ಎಇಇಗೆ ಸೂಚಿಸಿದರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ಮುಖ್ಯಾಧಿಕಾರಿ ಏಜಾಜ್ ಹುಸೇನ್, ಜಗದೀಶ್ ಚಂದ್ರ, ಎಇಇ ವಿಜಯಕುಮಾರ, ಎಇ ಶಂಕರಗೌಡ, ಆದಪ್ಪ ಸುರಪುರಕರ್, ಪುರಸಭೆ ಸದಸ್ಯ ವೆಂಕಟೇಶ ಹೊಸ್ಮನಿ, ಮುಖಂಡರಾದ ವಿಠ್ಠಲ ಯಾದವ್, ವೆಂಕೋಬ ಮಂಗಳೂರು, ವೆಂಕಟರೆಡ್ಡಿ ಭೋವಿ ಇದ್ದರು.
ವಿದ್ಯುತ್‌ಕಂಬ ಅಳವಡಿಕೆ
ಸುರಪುರ: ಪಟ್ಟಣದ ದೋಬಿಗಲ್ಲಿ ವಾರ್ಡ್‌ನ ಖಾನಿಕೇರಾ ಬಡಾವಣೆಗೆ ಶೀಘ್ರವೇ ವಿದ್ಯುತ್ ಕಂಬ ಅಳವಡಿಸಲಾಗುವುದೆಂದು ಜೆಸ್ಕಾಂ ಎಇಇ ಬಸವರಾಜ ಪಿವಿ ಭರವಸೆ ನೀಡಿದರು. ಖಾನಿಕೇರಾದಲ್ಲಿ ವಿದ್ಯುತ್ ಕಂಬಗಳಿಲ್ಲದ್ದಕ್ಕಾಗಿ ಕಟ್ಟಿಗೆ ಕಂಬಗಳನ್ನು ಹಾಕಿ ವಿದ್ಯುತ್ ಪಡೆಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಬಡಾವಣೆಯಲ್ಲಿ 5 ಕಂಬ ಮತ್ತು ಸಿದ್ದಾರ್ಥ ಲಾಡ್ಜ್ ಹತ್ತಿರ 5 ಕಂಬಗಳ ಅವಶ್ಯಕತೆಯಿದೆ. ನಿಗದಿಪಡಿಸಿರುವ ಮೊತ್ತ ಪಾವತಿಸಿದರೆ ಶೀಘ್ರವೇ ಕಂಬಗಳನ್ನು ಹಾಕಲಾಗುವುದು ಎಂದು ವಾರ್ಡ್ ಸದಸ್ಯ ಪಾರಪ್ಪ ಗುತ್ತೇದಾರರಿಗೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಅವರು ಆ ಮೊತ್ತವನ್ನು ಭರಿಸಲಾಗುವುದು ಎಂದರು. ಮುಂಬರುವ ದಿನಗಳಲ್ಲಿ ಟಿಸಿ ಅಳವಡಿಸಿ ಇಲಾಖೆಯಿಂದ ಇನ್ನಷ್ಟೂ ಅನುಕೂಲ ಮಾಡಿಕೊಡಲಾಗುವುದೆಂದು ಆಶ್ವಾಸನೆ ನೀಡಿದರು. ಜೆಸ್ಕಾಂ ವಲಯಾಧಿಕಾರಿ ಮಹೇಶ್, ಉದಯ್‌ಕುಮಾರ್, ದೇವು ಖಾನಿಕೇರಾ ಇತರರಿದ್ದರು.
ವಿದ್ಯುತ್ ವ್ಯತ್ಯಯ ಇಂದು
ಗುಲ್ಬರ್ಗ: ನಗರದ 11 ಕೆ.ವಿ. ಶಾಂತಿನಗರ ಫೀಡರ್‌ನಲ್ಲಿ ಜು.16ರಂದು ತುರ್ತು ಕೆಲಸ ಕೈಗೊಳ್ಳಲಾಗುತ್ತಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಎಂ.ಎಸ್.ಕೆ.ಮಿಲ್, ಜಿ.ಡಿ.ಎ, ಎಂ.ಎಸ್.ಕೆ.ಮಿಲ್.ಗೇಟ್, ಖದೀರ್ ಚೌಕ್, ಮಹಮ್ಮದಿ ಚೌಕ್, ಗಾಲೀಬ್ ಕಾಲೋನಿ, ವೆಂಕಟೇಶ್ವರ ದೇವಸ್ಥಾನ, ಎನ್.ಆರ್. ಕಾಲೋನಿ, ಅಫಜಲ್ಪುರ ಕ್ರಾಸ್ ಏರಿಯಾ, ಶಾಂತಿ ನಗರ, ಪಾರ್ಷಿಯಲ್ ವಿದ್ಯಾ ನಗರ, ವಡ್ಡರಗಲ್ಲಿ, ಬೋರಾಬಾಯಿ ನಗರ ಮತ್ತು ಬಸವ ನಗರಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ನೆಲೋಗಿಯಲ್ಲಿ ಆಷಾಢ ಉತ್ಸವ ಇಂದಿನಿಂದ
ಜೇವರ್ಗಿ: ತಾಲೂಕಿನ ನೆಲೋಗಿ ದ ಹನುಮಾನ್ ದೇವರ ಆಷಾಢೋತ್ಸವ ಜು.16, 17ರಂದು ನಡೆಯಲಿದೆ. ಬುಧವಾರ ಬೆ.11ಕ್ಕೆ ಹಾಗೂ ವೇದಾನಂದ ಸ್ವಾಮಿಗಳ ಮನೆಯಿಂದ ಪ್ರಾಣದೇವರ ಸನ್ನಿಧಿಗೆ ತೆರಳಿ ಪ್ರಾಣದೇವರನ್ನು ಪಲ್ಲಕ್ಕಿಯಲ್ಲಿ ಬರಮಾಡಿಕೊಳ್ಳುವುದು. ರಾತ್ರಿ 7ರಿಂದ 8ರವರೆಗೆ ಲಕ್ಷ್ಮೀ ಶೋಭಾನೆ ಹಾಗೂ ಸೌಂದರ್ಯ ಲಹರಿ ಕಾರ್ಯಕ್ರಮ. ರಾತ್ರಿ 8ರಿಂದ 10ರವರೆಗೆ ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ, ರಾತ್ರಿ 10ರಿಂದ ಬೆಳಗಿನವರೆಗೆ ವಿವಿಧ ಕಲಾವಿದರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಸೇವೆ ನಡೆಯಲಿದೆ. ಜು.17ರಂದು ಬೆ.6 ರಿಂದ 9ರವರೆಗೆ ಪ್ರಾಣದೇವರ ದರ್ಶನ ಹಾಗೂ ಮಂಗಳಾರತಿ, ಬೆ.9ರಿಂದ 10.30ರ ವರೆಗೆ ಶಂಕರಾಚಾರ್ಯರು ಅಷ್ಟೋತ್ತರ ಹಾಗೂ ಆನಂದಸಿಂಧು ಕಾರ್ಯಕ್ರಮ ನಡೆಯಲಿದೆ. ಬೆ.10.30ರಿಂದ ಮ. 12ರವರೆಗೆ ಪವಮಾನ ಹೋಮ, ರಾಮರಕ್ಷಾ ಹಾಗೂ ಹನುಮಾನ ಚಾಲಿಸಾ ಪಠಣ ನಡೆಯಲಿದೆ. ಮ.2ಕ್ಕೆ ವಿಶೇಷ ವಾರ್ಕರಿ ಭಜನೆ ಸಂಕೀರ್ತನೆಯೊಂದಿಗೆ ಪ್ರಾಣದೇವರ ಪಲ್ಲಕ್ಕಿ ಮೆರವಣಿಗೆ ಬೀಳ್ಕೊಡಲಾಗುವುದು. ಸಂಜೆ 6.30ಕ್ಕೆ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ನೀಡಲಾಗುವುದು. ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಾಣದೇವರ ದರ್ಶನಾಶೀರ್ವಾದ ಪಡೆದುಕೊಳ್ಳಬೇಕೆಂದು ಹನುಮಾನ ದೇವಸ್ಥಾನದ ಸದ್ಭಕ್ತ ಮಂಡಳಿ ಹಾಗೂ ವೇದಾನಂದ ಸೇವಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಮಳಖೇಡದಲ್ಲಿ ಜಯತೀರ್ಥರ ಮಧ್ಯಾರಾಧನೆ ಇಂದು
ಗುಲ್ಬರ್ಗ: ಉತ್ತರಾದಿಮಠದ ಪರಂಪರೆಯಲ್ಲಿ ಬರುವ ಪ್ರಮುಖ ಯತಿವರೇಣ್ಯರಾದ ಮಜ್ಜಯತೀರ್ಥರ ಆರಾಧನಾ ಮಹೋತ್ಸವ ಸೇಡಂ ತಾಲೂಕಿನ ಕಾಗಿಣಾತೀರ ಮಳಖೇಡದಲ್ಲಿ ಜು.15ರಿಂದ ಆರಂಭವಾಗಿದ್ದು, ಬುಧವಾರ ಯತಿಗಳ ಮಧ್ಯಾರಾಧನೆ ನಡೆಯಲಿದೆ. ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥರು ಆರಾಧನೆಯ ನೇತೃತ್ವ ವಹಿಸುವುದು ವಿಶೇಷ. ಈಗಾಗಲೇ ಗುಲ್ಬರ್ಗ ಪ್ರವಾಸದಲ್ಲಿರುವ ಸತ್ಯಾತ್ಮತೀರ್ಥರು ಮಂಗಳವಾರ ಜಯತೀರ್ಥರು ನೆಲೆನಿಂತು ಆಚಾರ್ಯ ಮಧ್ವರ ಗ್ರಂಥಗಳಿಗೆ ಟೀಕೆಗಳನ್ನು ಬರೆದಂತಹ ಪವಿತ್ರ ಕ್ಷೇತ್ರ ಯರಗೋಳದಲ್ಲಿ ಪೂಜಾದಿಗಳನ್ನು ನೆರವೇರಿಸಿದರು. ಇಲ್ಲಿರುವ ರಾಮಚಂದ್ರತೀರ್ಥರು ಹಾಗೂ ವಿದ್ಯಾನಿಧಿ ತೀರ್ಥರ ಬೃಂದಾವನಗಳಿಗೂ ಪೂಜೆ- ಮಂಗಳಾರತಿಯನ್ನು ಶ್ರೀಗಳು ನೆರವೇರಿಸಿದರು. ಆರಾಧನೆಯ ಮೂರು ದಿನಗಳ ಕಾಲ ಜಯತೀರ್ಥರ ಮೂಲಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಸಂಗೀತ, ಭಜನೆ, ಪಂಡಿತರಿಂದ ಉಪನ್ಯಾಸ, ಶ್ರೀಗಳಿಂದ ಆಶೀರ್ವಚನ, ಶ್ರೀಗಳಿಂದ ಸುಧಾಪಾಠ, ತಪ್ತ ಮುದ್ರಾಧಾರಣೆ (ಜು.16 ಮತ್ತು 17ಕ್ಕೆ), ರಥಾಂಗ ಹೋಮ, ರಥೋತ್ಸವ, ರಾಮದೇವರ ಪೂಜೆ, ಪಂಡಿತರ ಉಪನ್ಯಾಸಾದಿ ಕಾರ್ಯಕ್ರಮಗಳು ಆರಾಧನೆಯಲ್ಲಿ ಜರುಗಲಿವೆ.
ಯೋಜನೆ ಸದುಪಯೋಗ ಅಗತ್ಯ
ಶಹಾಪುರ: ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿನ ಅವಶ್ಯ ಕಾಮಗಾರಿಗಳನ್ನು ಸರ್ವ ಸದಸ್ಯರು ಗ್ರಾ.ಪಂ ಅಧ್ಯಕ್ಷರ ಅಧಿಕಾರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಯೋಜನೆಗಳ ಸದುಪಯೋಗ ಪಡೆಯಬೇಕೆಂದು ಪಿಡಿಒ ಮದನಾ ತಿಳಿಸಿದರು. ತಾಲೂಕಿನ ಕೊಳ್ಳೂರು ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, 13ನೇ ಹಣಕಾಸು ಕ್ರಿಯಾಯೋಜನೆ, ಬಿಆರ್‌ಜಿಎಫ್ ಗ್ರಾಮ ಸ್ವರಾಜ್ಯ ಮತ್ತು ಕರ ವಸೂಲಿ ಜಾಗೃತಿ ಬಗ್ಗೆ ಮಾಹಿತಿ ನೀಡಿ ಸರ್ವರ ಸಹಕಾರದೊಂದಿಗೆ ಶೌಚಾಲಯದ ಅಗತ್ಯತೆ, ಹಳ್ಳಿಗಳ ಸ್ವಚ್ಛತೆ, ವಿದ್ಯುತ್ ಸೌಕರ್ಯ, ನಿಂತ ನೀರಿನ ತಗ್ಗು ಗುಂಡಿ ಮುಚ್ಚುವುದು, ಕುಡಿಯುವ ನೀರಿನ ತೊಂದರೆ ಬಗೆ ಹರಿಸುವ ಕುರಿತಂತೆ ಸಭೆಯಲ್ಲಿ ಚರ್ಚಿಸಿ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

