ಮೇಲ್ಮನೆ ಚುನಾವಣೆಯಲ್ಲೂ ನೆಟ್ಟ NOTA
ಗುಲ್ಬರ್ಗ: ಈಗಾಗಲೇ ಪಾರ್ಲಿಮೆಂಟ್ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರದಲ್ಲೇ ಅಳವಡಿಸಲ್ಪಟ್ಟಿದ್ದ 'ಮೇಲ್ಕಂಡ ಯಾರೂ ಅಲ' (ನನ್ ಆಫ್ ದಿ ಅಬೋವ್- ನೋಟಾ) ಆಯ್ಕೆ ಜೂ.20ರಂದು ಮತದಾನ ನಡೆಯಲಿರುವ ಈಶಾನ್ಯ ಶಿಕ್ಷಕ ಮತಕ್ಷೇತ್ರದ ಚುನಾವಣೆಯಲ್ಲಿಯೂ ಪ್ರತ್ಯಕ್ಷವಾಗಲಿದೆ.
ಈ ಚುನಾವಣೆಯಲಿ 'ನೋಟಾ' ಆಯ್ಕೆ ಅವಕಾಶ ಮತದಾರನಿಗೆ ದೊರಕುತ್ತಿರುವುದು ಇದೇ ಮೊದಲು. ಮತದಾರ ಪ್ರಾಶಸ್ತ್ಯ ಮತಗಳನ್ನಾದರೂ ಚಲಾಯಿಸಬೇಕು, ನೋಟಾ ಅಂಕಣದಲ್ಲಾದರೂ ಗುರುತಿಸಬೇಕು. ಇವರೆಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಮಾತ್ರ ಅವಕಾಶವಿದೆ.
ಚುನಾವಣಾ ಆಯೋಗ ಈ ಆಯ್ಕೆಯನ್ನು ನಮೂದಿಸುವಂತೆ ಸೂಚಿಸಿದ್ದರಿಂದ ಜೂ.20ರಂದು ನಡೆಯುವ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾನದ ಮತಪತ್ರದಲ್ಲಿ 'ನೋಟಾ' ಆಯ್ಕೆಯನ್ನು ನೀಡಲಾಗುತ್ತಿದೆ.
ಈಶಾನ್ಯ ಶಿಕ್ಷಕ ಮತಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಏಳೂ ಅಭ್ಯರ್ಥಿಗಳ ಹೆಸರುಗಳಿರುವ ಮತಪತ್ರದಲ್ಲಿ ಕೊನೆಯದಾಗಿ 'ನೋಟಾ' ಎಂದು ಸೇರಿಸಿ ಮುದ್ರಿಸಲಾಗುತ್ತದೆ. ಇದು ಪ್ರಾಶಸ್ತ್ಯ ಮತಗಳ ಚಲಾವಣೆಯ ಚುನಾವಣೆ. ಮತದಾರರು ತಾವು ಬಯಸುವ ಅಭ್ಯರ್ಥಿಗಳಿಗೆ ಪ್ರಾಶಸ್ತ್ಯ ಮತ ನೀಡುವ ಅವಕಾಶವಿದೆ. ಪ್ರಾಶಸ್ತ್ಯ ಮತವು ಕನ್ನಡ, ಇಂಗ್ಲಿಷ್ ಹಾಗೂ ರೋಮನ್ ಸಂಖ್ಯೆಯಲ್ಲಿಯೇ ಮಾತ್ರ ನೀಡಬೇಕು.
ಮೇಲ್ಕಂಡ ಯಾರೂ ಅಲ್ಲ ಎಂಬ ನೋಟಾ ಆಯ್ಕೆಯ ಅವಕಾಶವಿರುವ ಕೊನೆಯ ಅಂಕಣದಲ್ಲಿ ಮತದಾರರು 'ಕ್ರಾಸ್' ಅಥವಾ 'ರೈಟ್ ಮಾರ್ಕ್' ಮಾಡುವ ಮೂಲಕ ಮಾತ್ರ ತಮ್ಮ ಅಭಿಪ್ರಾಯ ತಿಳಿಸಬೇಕು. ಇದನ್ನು ಹೊರತುಪಡಿಸಿ ಇನ್ನಾವುದೇ ಮಾರ್ಕ್ ಮಾಡಿದಲ್ಲಿಯೂ ಅಂತಹ ಮತಪತ್ರ ಅಸಿಂಧುವಾಗುತ್ತದೆ. ಮತದಾರರು ಮತಪತ್ರದಲ್ಲಿ ಪ್ರಾಶಸ್ತ್ಯ ಮತಗಳನ್ನಾದರೂ ನೀಡಬೇಕು, ಇಲ್ಲವೇ 'ನೋಟಾ' ಆಯ್ಕೆಯಾದರೂ ಮಾಡಿಕೊಳ್ಳಬೇಕು.
ಪ್ರಾಶಸ್ತ್ಯ ಮತ ನೀಡುವುದು ಅಥವಾ ಮೇಲ್ಕಂಡ ಯಾರೂ ಅಲ್ಲ(ನೋಟಾ) ಇವೆರಡರಲ್ಲಿ ಒಂದಕ್ಕೆ ಮಾತ್ರ ಅವಕಾಶವಿರುತ್ತದೆ ಎಂಬುದನ್ನು ಮತದಾರರು ಅರಿಯಬೇಕು ಎಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯಾ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

