ಕೊಟ್ಟೂರು-ಹರಿಹರ ರೈಲು ಮಾರ್ಗಕ್ಕೆ ಚಾಲನೆ
ಕ.ಪ್ರ.ವಾರ್ತೆ ಕೊಟ್ಟೂರು ಮಾ. 3
ಸಾವಿರಾರು ಕೋಟಿ ರುಪಾಯಿ ಖರ್ಚು ಮಾಡಿದರೂ ಜನತೆಗೆ ಕೊಡಲಾಗದ ಮಹತ್ವದ ಯೋಜನೆ ಮತ್ತು ಲಾಭವನ್ನು ಹೈದರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ 371(ಜೆ)ಯ ಅನುಕೂಲತೆಗಳ ಮೂಲಕ ಯುಪಿಎ ಸರ್ಕಾರ ಒದಗಿಸಿಕೊಟ್ಟಿದೆ. ಈ ಭಾಗದ ಸಮಗ್ರ ಅಭಿವೃದ್ಧಿಗೆ ತಾವು ಬೇಡಿಕೆ ಸಲ್ಲಿಸಿದ ಎಲ್ಲದಕ್ಕೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಯಾವುದೇ ಅಪಸ್ವರ ಎತ್ತದೆ ಸಮ್ಮತಿ ವ್ಯಕ್ತಪಡಿಸುವ ಮೂಲಕ ಮಹತ್ಸಾಧನೆ ಗೈಯ್ಯಲು ನೆರವಾಗಿದ್ದಾರೆ ಎಂದು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸೋಮವಾರ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ರೇಲ್ವೆ ನಿಲ್ದಾಣದಲ್ಲಿ ಕೊಟ್ಟೂರು-ಹರಿಹರ ನೂತನ ರೈಲು ಮಾರ್ಗವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಹೈ-ಕ ಭಾಗದ ಜನತೆಗೆ ಪುನರ್ಜನ್ಮ ಪಡೆದ ಹೆಮ್ಮೆ ಈಗ ಆಗಿದೆ. ನಿಜಕ್ಕೂ ಇದೊಂದು ಮಹತ್ವದ ಸಾಧನೆ. ಆಂಧ್ರದ ತೆಲಂಗಾಣ ಭಾಗದ ಜನತೆಗೆ ಸಿಗುವ ಮಾನ್ಯತೆ ಪ್ರಮಾಣದಲ್ಲಿಯೇ ರಾಜ್ಯದ ಈ ಭಾಗದ ಜನರಿಗೂ ಸಿಗುವಂತೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಪ್ರಯೋಜನದ ವ್ಯಾಪ್ತಿಗೆ ಬಳ್ಳಾರಿ ಜಿಲ್ಲೆ ಸೇರಿಸಿದ್ದು, ಈ ಭಾಗ ಸಂಪೂರ್ಣ ಅಭಿವೃದ್ಧಿ ಹೊಂದಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿ ಆಗಲಿದೆ. ರೇಲ್ವೆ ಇಲಾಖೆಯಲ್ಲಿ ತಾವು ಅಧಿಕಾರವಹಿಸಿಕೊಂಡ ಎಂಟು ತಿಂಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಾಗಿವೆ ಎಂದರು. ತೋಟಗಾರಿಕಾ ಸಚಿವ ಡಾ. ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ಎಚ್.ಎಸ್. ಶಿವಶಂಕರ್, ಎಸ್. ಭೀಮಾನಾಯ್ಕ, ಎಚ್.ಪಿ. ರಾಜೇಶ್, ತುಕಾರಾಂ, ಸಂಸದೆ ಜೆ. ಶಾಂತಾ, ಮತ್ತಿತರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ರೇಲ್ವೆ ಇಲಾಖೆಗೆ 1500 ಕೋಟಿ ಲಾಭ
ಕೊಟ್ಟೂರು: ರೇಲ್ವೆ ಇಲಾಖೆ ಪ್ರಸ್ತುತ ಸಾಲಿನಲ್ಲಿ 1500 ಕೋಟಿ ಲಾಭ ಗಳಿಸಿದೆ. ಕಳೆದ ವರ್ಷ 350 ಕೋಟಿ ನಷ್ಟದಲ್ಲಿತ್ತು. ಈ ತೆರನಾದ ನಷ್ಟವನ್ನು ತುಂಬಿ ಲಾಭ ತಂದುಕೊಡುವ ಮಹತ್ವದ ಸಾಧನೆ ಮಾಡಲಾಗಿದೆ ಎಂದು ಖರ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

