ಗುಲ್ಬರ್ಗಾ

ಕಾಶ್ಮೀರ ಕಂಡಂಗಾಯ್ತು!

Published On :

ಗುಲ್ಬರ್ಗ: ಜಿಲ್ಲೆಯ ಹಲವೆಡೆ ಸೋಮವಾರ ಸುರಿದ ಆಲಿಕಲ್ಲು ಮಳೆ ಅಪಾರ ಹಾನಿ ಉಂಟು ಮಾಡಿದೆ. ಆಳಂದದಲ್ಲಿ ತಡಕಲ್, ಬೆಳಮಗಿ, ಕರಹರಿ, ಕಮಲಾನಗರ, ಸನಗುಂದಿ, ದಣ್ಣೂರು ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳು, ಅಫಜಲ್ಪುರ ತಾಲೂಕಿನ ಗುಡೂರ, ಜೇವರ್ಗಿ, ತೆಲ್ಲೂರು ಸೇರಿದಂತೆ 10 ಹಳ್ಳಿಗಳು, ಚಿಂಚೋಳಿ ತಾಲೂಕಿನ ಅನೇಕ ಭಾಗ, ಶಹಬಾದ್ ಸೇರಿದಂತೆ ಚಿತ್ತಾಪುರ ತಾಲೂಕಿನ ಹಲವೆಡೆ ಬಿರುಸಿನ ಮಳೆ, ಆಲಿಕಲ್ಲು ಮಳೆ ಸುರಿದು ಜನಜೀವನ, ರೈತರ ಬದುಕು ಅಸ್ತವ್ಯಸ್ತ ಮಾಡಿದೆ.
ಆಳಂದ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿದ್ದ 400 ಎಕರೆಗಿಂತ ಅಧಿಕ ದ್ರಾಕ್ಷಿ ಹಾಳಾಗಿದೆ. ಮಳೆಯಿಂದ ನೂರಾರು ಎಕರೆ ದ್ರಾಕ್ಷಿ ಹಾಳಾಗಿ ರೈತರು ಕಂಗಾಲಾಗಿದ್ದಾರೆ. ಬ್ಯಾಂಕಿನಿಂದ ಸಾಲ ಮಾಡಿ ದ್ರಾಕ್ಷಿ ತೋಟ ಮಾಡಿದ್ದೆವು. ಅದೆಲ್ಲಿಂದ ಆಲಿಕಲ್ಲು ಮಳೆ ಬಂತೋ ಎಂದು ತಲೆ ಮೇಲೆ ಕೈಹೊತ್ತಿದ್ದಾರೆ. ತೋಟಗಾರಿಕೆ ಬೆಳೆ, ಜೋಳ, ಗೋಧಿ ಸೇರಿದಂತೆ ಬೇಸಾಯದ ಬೆಳೆಗಳು ನೆಲಕಚ್ಚಿದ್ದರಿಂದ ಜಿಲ್ಲೆಯಲ್ಲಿ 1ಗಂಟೆ ಸುರಿದ ಮಳೆ ಬಹುಕೋಟಿ ರುಪಾಯಿ ಹಾನಿ ಉಂಟು ಮಾಡಿದೆ.
ಮುಖ್ಯಾಂಶಗಳು...
1. ಆಳಂದ ತಾಲೂಕಿನ ತಡಕಲ್ ಆರಂಭಗೊಂಡು ಬೆಳಮಗಿ, ಕರಹರಿ, ಕಮಲಾನಗರ ಸೇರಿದಂತೆ 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸೋಮವಾರ ಮಾ. 3ರಂದು ಆಲಿಕಲ್ಲು ಸಮೇತ ಬಿರುಸಿನ ಮಳೆ.
2. ಸಂಜೆ ಸುರಿದ ಮಳೆಗೆ 6 ಮಂದಿ ಗಾಯ, ನೂರಾರು ಕುರಿಗಳು, ಹಕ್ಕಿಗಳು, ಹಾವುಗಳ ಮಾರಣ ಹೋಮ. ಹೊಲಗದ್ದೆಗಳಲ್ಲಿ ಕೆಲಸದಲ್ಲಿ ತೊಡಗಿದ್ದ ಕೂಲಿ ಕಾರ್ಮಿಕರು, ಮಹಿಳೆಯರು ಆಲಿಕಲ್ಲು ಬಡಿದು ಆಸ್ಪತ್ರೆಗೆ ದಾಖಲು.
3. ದಣ್ಣೂರು, ಗುಡೂರು, ತಡಕಲ್ ಮೊದಲ್ಗೊಂಡು ಆಳಂದ ಹಾಗೂ ಅಫಜಲ್ಪುರ ತಾಲೂಕಿನಲ್ಲಿರುವ ನೂರಾರು ಎಕರೆ ದ್ರಾಕ್ಷಿ ಫಸಲು ನೆಲಸಮ. ನೂರಾರು ರೈತರ ಮುಗಿಲು ಮುಟ್ಟಿದ ಗೋಳು.
4. ಜೋಳ, ಗೋದಿ, ಕುಸುಬಿ ಬೆಳೆ ಹಾಳು, ತರಕಾರಿ ಬೆಳೆಗೂ ತಟ್ಟಿತು ಅಕಾಲಿಕ ಮಳೆ ಪೆಟ್ಟು, ತರಕಾರಿ ಬೆಳೆಗಳೆಲ್ಲವೂ ಹಾಳು.
5. ಶಹಾಬಾದ್‌ನಲ್ಲಿ 10 ಕೆ.ಜಿ. ತೂಕದ ಬಂಡೆಗಲ್ಲು ಗಾತ್ರದ ಆಲಿಕಲ್ಲು ಪ್ರತ್ಯಕ್ಷ- ಜನತೆ ದಂಗು.
6. ಚಿಂಚೋಳಿ ತಾಲೂಕಲ್ಲೂ ಅಲ್ಲಲ್ಲಿ ಆಲಿಕಲ್ಲು ಸುರಿದು ಹೊಲಗದ್ದೆಯ ಫಸಲು ಹಾಳು.
7. ಅಫಜಲ್ಪುರದಲ್ಲಿ ಆಲಿಕಲ್ಲು ಮಳೆ, ಜೇವರ್ಗಿ (ಬಿ) ಗ್ರಾಮದಲ್ಲಿ ಯುವಕ ರಾಜಶೇಖರ ಸಿಡಿಲಿಗೆ ಬಲಿ.
8. ಆಳಂದ ಗಡಿಯಿಂದ ಶುರುವಾದ ಹಿಮಪಾತ ಅಫಜಲ್ಪುರ ಹಾಗೂ ಚಿಂಚೋಳಿ ಸೆರಗಿಗೆ ಅಂಟಿಕೊಂಡು ಹೋಗಿದ್ದರಿಂದ ಹಿಮಪಾತವಾದಲ್ಲೆಲ್ಲಾ ಜನರ ಗೋಳು- ಆಕ್ರಂದನ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.