ಆಲಿಕಲ್ಲಿನೇಟಿಗೆ ಬರ್ಬಾದ್ ಆದ್ರು ಗುಲ್ಬರ್ಗ ರೈತ್ರು
-ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಮಾ.6
ಹವಾಮಾನ ವೈಪರಿತ್ಯದಿಂದಾಗಿ ಆಳಂದ- ಅಫಜಲ್ಪುರ ಸೇರಿದಂತೆ ಜಿಲ್ಲೆಯಾದ್ಯಂತ ಕಳೆದ ಸೋಮವಾರ ಸಂಜೆ ಸುರಿದ ಆಲಿಕಲ್ಲು ಮಳೆಗೆ ಸಾವಿರಾರು ಎಕರೆ ಜಮೀನಲ್ಲಿ ಬೆಳೆದು ನಿಂತಿದ್ದ ತೋಟಗಾರಿಕೆ ಹಾಗೂ ಒಣ ಬೇಸಾಯದ ಬೆಳೆಗಳು ಸರ್ವನಾಶವಾಗಿವೆ. ಅಂದಾಜು 100 ಕೋಟಿ ಮೌಲ್ಯದ ಬೆಳೆ ನಷ್ಟ ರೈತರು ಅನುಭವಿಸಿದ್ದಾರೆ.
ಜಿಲ್ಲೆಯಲ್ಲಿ ತೋಟಗಾರಿಕೆ ಹಸಿರು ಚಿಗುರಿದ್ದೇ ಆಳಂದ ತಾಲೂಕಿನಲ್ಲಿ. ಇದೇ ತಾಲೂಕಿನಲ್ಲಿ ಆಲಿಕಲ್ಲು ಹೊಡೆತ ಜೋರಾಗಿತ್ತು. ಇದರಿಂದಾಗಿ ತಡಕಲ್ ಸೇರಿದಂತೆ 20ಕ್ಕೂ ಹೆಚ್ಚು ಗ್ರಾಮಗಳಲ್ಲಿನ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಜೊತೆಗೆ ಅಫಜಲ್ಪುರದಲ್ಲಿಯೂ ಅಲ್ಪಸ್ವಲ್ಪ ಇರುವ ತೋಟಗಾರಿಕೆ, ತರಕಾರಿ ಬೆಳೆಗಳೂ ಹಾನಿಯಾಗಿವೆ. ಮೆಣಸಿನಕಾಯಿ, ಟೊಮೆಟೋ, ಬೆಂಡೆ, ಈರುಳ್ಳಿ, ಗಜ್ಜರಿ, ಶುಂಠಿ, ಕರಿಬೇವು, ಕೊತ್ತಂಬರಿ, ಮೆಂತೆ, ಪಾಲಕ್, ಪುಂಡಿ ಸೇರಿದಂತೆ 2 ಸಾವಿರ ಎಕರೆ ಪ್ರದೇಶದಲ್ಲಿ ಹರಡಿದ್ದ ತರಕಾರಿ ಬೆಳೆ, ದ್ರಾಕ್ಷಿ, ದಾಳಿಂಬೆ, ಪಪ್ಪಾಯಿ, ನಿಂಬೆ, ಬಾಳೆ, ಕಮಲಾಪುರ ಕೆಂಬಾಳೆ ಸೇರಿದಂತೆ 500 ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ತೋಟಗಾರಿಕೆಯ ಹಣ್ಣಿನ ಬೆಳೆಗಳು ಸರ್ವನಾಶವಾಗಿವೆ.
ಹಿಮ-ಮಳೆಗೆ ಸಾಕ್ಷಿಯಾಗಿರುವ ಆಳಂದ, ಅಫಜಲ್ಪುರ ಹಳ್ಳಿಗಳಲ್ಲಿ ಸಂಚರಿಸುತ್ತಿರುವ ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಪ್ರಕಾರ, ಜಿಲ್ಲೆಯಲ್ಲಿ ತೋಟಗಾರಿಕೆ ಸರ್ವನಾಶವಾಗಿದೆ. ಇನ್ನು ಜೋಳ, ಗೋದಿ, ಕುಸುಬೆಯ ಒಣ ಬೇಸಾಯವೂ ಬುಡಮೇಲು ಎಂದಿದ್ದಾರೆ.
ಹುಳಿಯಾಯ್ತು ದ್ರಾಕ್ಷಿ: ಆಳಂದ ಹಾಗೂ ಅಫಜಲ್ಪುರದಲ್ಲಿ ಈ ಬಾರಿ 300 ಎಕರೆಯಷ್ಟು ದ್ರಾಕ್ಷಿ ಬಂಪರ್ ಫಸಲಾಗಿ ಕಂಗೊಳಿಸುತ್ತಿತ್ತು. ಮಾರುಕಟ್ಟೆಯಲ್ಲಿಯೂ ಈ ದ್ರಾಕ್ಷಿಗೆ ಭಾರಿ ಬೇಡಿಕೆ ಇತ್ತು. ಕಟಾವು ಮಾಡಿ ನಿತ್ಯ ಮಾರಾಟ ಮಾಡುತ್ತಿದ್ದ ರೈತರಿಗೆ ಆಲಿಕಲ್ಲು ಏಟಿನಿಂದ ದ್ರಾಕ್ಷಿ ಹುಳಿಯಾಗಿದೆ.
ಬಾಳೆ- ಪಪ್ಪಾಯಿ ಹಾಳು: ಬಾಳೆ, ಕೆಂಬಾಳೆ, ಪಪ್ಪಾಯಿ ಹಣ್ಣಿನ ಬೇಸಾಯಗಾರರಂತೂ ಬಿರುಗಾಳಿ, ಮಳೆ, ಆಲಿಕಲ್ಲು ಹೊಡೆತಕ್ಕೆ ತತ್ತರಿಸಿದ್ದಾರೆ. ಕಮಲಾಪುರದ ಕೆಂಬಾಳೆ ಗಿಡಗಳು ಸಂಪೂರ್ಣ ನೆಲಕ್ಕೊರಗಿದರೆ, ಆಳಂದ, ಅಫಜಲ್ಪುರದ ಬಾಳೆ ತೋಟಗಳು ಎಲ್ಲಿವೆ ಎಂದು ಹುಡುಕುವಂತಾಗಿದೆ. ಅಫಜಲ್ಪುರ ಹಾಗೂ ಆಳಂದದಲ್ಲಿ 12 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಜೋಳ- ಗೋದಿ ಮಳೆಗೆ ನೆಲಕ್ಕೊರಗಿದೆ. ಕಾಳು ಕಟ್ಟಿರುವ ತೆನೆಯೇ ನೆಲಕ್ಕೊರಗಿದ್ದರಿಂದ ಹಸಿಯಿಂದಾಗಿ ಕಾಳು ಕಪ್ಪಾಗುತ್ತದೆ. ಹಂದಿ, ಇಲಿ, ಹೆಗ್ಗಣಗಳ ಕಾಟ, ನೆಲಕ್ಕೊರಗಿದ ಬೆಳೆ ಅಲ್ಲೇ ಕೊಳೆಯುತ್ತದೆ, ಏನೂ ಮಾಡಲಾಗದು ಎಂದು ರೈತರು ತಲೆ ಮೇಲೆ ಕೈ ಹೊತ್ತಿದ್ದಾರೆ. ಚಿತ್ತಾಪುರ, ಗುಲ್ಬರ್ಗ, ಜೇವರ್ಗಿ ತಾಲೂಕಿನಲ್ಲಿಯೂ ಜೋಳ- ಗೋದಿಗೆ ಹಾನಿಯುಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

