ಗುಲ್ಬರ್ಗಾ

ಅಪರಾಧಿ ಪತ್ತೆಗೆ ಪೇದೆಗಳ ಕಾರ್ಯ ಶ್ಲಾಘನೀಯ

Published On :

ಗುಲ್ಬರ್ಗ: ಸಮಾಜದಲ್ಲಿ ನಡೆಯುವ ಯಾವುದೇ ಅಪರಾಧಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಅಧಿಕಾರಿಗಳಿಗಿಂತ ಕಾನ್‌ಸ್ಟೇಬಲ್‌ಗಳು ಅಪರಾಧದ ಮೂಲವನ್ನು ಕಂಡುಹಿಡಿದು, ಬುದ್ಧಿವಂತಿಕೆಯಿಂದ ಅಪರಾಧಿಗಳನ್ನು ವಶಕ್ಕೆ  ತೆಗೆದುಕೊಳ್ಳಲು ನೆರವಾಗುತ್ತಾರೆ ಎಂದು ಪೊಲೀಸ್ ಮಹಾನಿರ್ದೇಶಕ (ತರಬೇತಿ) ಸುಶಾಂತ ಮಹಾಪಾತ್ರ ತಿಳಿಸಿದರು.
ಪೊಲೀಸ್ ಪರೇಡ ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 14ನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ ಹಮ್ಮಿಕೊಂಡಿದ್ದ ನಿರ್ಗಮನ ಪಥಸಂಚಲನದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾನ್‌ಸ್ಟೇಬಲ್‌ಗಳಿಗೆ ನೀಡುವ ತರಬೇತಿಯು ಐಪಿಎಸ್, ಪಿಎಸ್‌ಐಗಳಿಗೆ ನೀಡುವ ತರಬೇತಿಗೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಕಾನ್‌ಸ್ಟೇಬಲ್‌ಗಳು ಸಾಮಾಜಿಕ ದೃಷ್ಟಿಕೋನದಿಂದ ತರಬೇತಿಯನ್ನು ಪಡೆಯಬೇಕೆಂದರು.
ಇಂಟಿಗ್ರೇಟೆಡ್ ಕಲಿಕಾ ಕ್ರಮ: ಪೊಲೀಸ್ ಇಲಾಖೆಯು ಈ ಮೊದಲು ಕೇವಲ ಅಪರಾಧ ನಿಗ್ರಹ ಮಾಡುವುದಕ್ಕೆ ಅಣಿಯಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದ್ದರಿಂದ ಪೊಲೀಸರಿಗೆ ಶಸ್ತ್ರಗಳು ಅವಶ್ಯಕವಾಗಿ ಬೇಕಾಗಿವೆ ಹಾಗೂ ತರಬೇತಿಯಲ್ಲಿ ಟೆರರಿಸಮ್, ನಕ್ಸಲಿಸಮ್ ನಿಗ್ರಹ, ಇಂಟರ್‌ನಲ್ ಸೆಕ್ಯೂರಿಟಿ, ಕಮ್ಯೂನಿಕೇಷನ್ ಮತ್ತು ಸಾಫ್ಟ್ ಸ್ಕಿಲ್ಸ್, ಕಂಪ್ಯೂಟರ್ ಟ್ರೇನಿಂಗ್, ಫೈಯರ್ ಆರ್ಮಸ್ ಟ್ರೇನಿಂಗ್ ಹಾಗೂ ಇಂಟರ್‌ನೆಟ್, ಜಿಪಿಎಸ್, ಮೊಬೈಲ್ ಬಳಕೆಗಳಿಂದಾಗುವ ಅಪರಾಧವನ್ನು ತಡೆಹಿಡಿಯಲು ಸಿಸಿ ಟಿವಿ, ಗೂಗಲ್ ಅರ್ಥ್ ಬಳಕೆಯ ಬಗ್ಗೆ ತಿಳಿಹೇಳಲು ವಿಷಯಗಳನ್ನು ಸೇರ್ಪಡೆ ಮಾಡಲಾಗಿದೆ. ಇನ್ನುಮುಂದೆ ಇಂಟಿಗ್ರೇಟೆಡ್ ಕಲಿಕಾ ಕ್ರಮ ಪರಿಚಯಿಸಲಾಗುತ್ತದೆ. ಪೊಲೀಸರು ಪ್ರತಿದಿನ ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಲಾಠಿ ಡ್ರಿಲ್‌ಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಬಹುಮಾನ ವಿತರಣೆ: ಈ ಸಂದರ್ಭದಲ್ಲಿ ಒಳಾಂಗಣದಲ್ಲಿ ಪ್ರಥಮ ಬಹುಮಾನ ಪಡೆದ ಪ್ರಕಾಶ ಬಜಂತ್ರಿ, ದ್ವಿತೀಯ ಬಹುಮಾನ ಪಡೆದ ಮಾಳಪ್ಪ, ಹೋರಾಂಗಣದಲ್ಲಿ ಪ್ರಥಮ ಬಹುಮಾನ ಪಡೆದ ರಾಘವೇಂದ್ರ ಎಂ.ಎಸ್, ದ್ವಿತೀಯ ಬಹುಮಾನ ಪಡೆದ ಸಿದ್ದಪ್ಪ ಮನ್ಯಾಳ, ಅತ್ಯುತ್ತಮ ಗುರಿಗಾರರಾದ ನಾಗರಾಜ ಎಂ.ಎ. ಹಾಗೂ ಸರ್ವೋತ್ತಮ ಶ್ರೇಷ್ಠ ಬಹುಮಾನ ಪಡೆದ ಶಿವಾನಂದ ಎಸ್.ಎಸ್. ಅವರಿಗೆ ಬಹುಮಾನ ವಿತರಣೆ ಮಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಚಿಂಚೋಳಿ ಡಿಎಸ್‌ಪಿ ರವಿ ಪಾಟೀಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಈಶಾನ್ಯ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಸುರೇಶ ಕುನ್ಹಿ ಮೊಹಮದ್, ಪೊಲೀಸ್ ಅಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

ಗಮನ ಸೆಳೆದ ಪಥಸಂಚಲನ
ಗುಲ್ಬರ್ಗದಲ್ಲಿ ಸೋಮವಾರ ಪೊಲೀಸ್ ಪರೇಡ್ ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 14ನೇ ತಂಡದ ಸಶಸ್ತ್ರ ಪೊಲೀಸ್ ಪೇದೆಗಳ ನಿರ್ಗಮನ ಪಥ ಸಂಚಲನದ ಅಂಗವಾಗಿ ನಡೆದ ಪರೇಡ್ ಆಕರ್ಷಕವಾಗಿತ್ತು, ಶಿಸ್ತಿನಿಂದ ಕೂಡಿತ್ತು.
ಪೊಲೀಸ್ ಮಹಾ ನಿರ್ದೇಶಕ(ತರಬೇತಿ) ಸುಷಾಂತ ಮಹಾಪಾತ್ರ, ಐಜಿಪಿ ಈಶಾನ್ಯ ವಲಯ ಸುರೇಶ ಮೊಹ್ಮದ್ ಸಮಾರಂಭದಲ್ಲಿ ಭಾಗವಹಿಸಿ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಪೇದೆಗಳಿಗೆ ಪಾರಿತೋಷಕ ವಿತರಿಸಿ ಶುಭ ಕೋರಿದರು. ಗೌರವ ವಂದನೆ, ಪಥ ಸಂಚಲನ, ರಾಷ್ಟ್ರಧ್ವಜ, ಪೊಲೀಸ್ ಧ್ವಜಗಳ ಆಗಮನ- ನಿರ್ಗಮನಗಳು ಸರ್ವರ ಗಮನ ಸೆಳೆದವು. ಎಸ್ಪಿ ಅಮೀತ್ ಸಿಂಗ್, ಎಎಸ್ಪಿ ಕಾಶೀನಾಥ ತಳಕೇರಿ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಕುಟುಂಬ ವರ್ಗದವರು ಭಾಗವಹಿಸಿದ್ದರು. ನಿರ್ಗಮನ ಪಥ ಸಂಚಲನಕ್ಕಾಗಿ ಎಂದೇ ಇಲ್ಲಿನ ಪರೇಡ್ ಮೈದಾನ ಸೊಗಸಾಗಿ, ಬಣ್ಣಬಣ್ಣದ ರಂಗೋಲಿಗಳೊಂದಿಗೆ ಸಿಂಗರಿಸಲ್ಪಟ್ಟಿದ್ದು ವಿಶೇಷವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.