ಗುಲ್ಬರ್ಗಾ

ರಾತ್ರಿ 10ರ ನಂತರ ಧ್ವನಿವರ್ಧಕ ಬಳಸುವಂತಿಲ್ಲ

Published On :

ಗುಲ್ಬರ್ಗ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ಕೆಲವು ನಿಬಂಧನೆಗಳಿಗೊಳಪಟ್ಟು ಧ್ವನಿವರ್ಧಕಗಳನ್ನು ಬಳಸಲು ಭಾರತ ಚುನಾವಣಾ ಆಯೋಗ ಅನುಮತಿಯನ್ನು ನೀಡಿದೆ.
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಧ್ವನಿವರ್ಧಕಗಳನ್ನು ರಾತ್ರಿ 10ರಿಂದ ಬೆಳಗಿನ 6 ಗಂಟೆಯವರೆಗೆ ಬಳಸುವುದನ್ನು ನಿಷೇಧಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಎನ್. ವಿ. ಪ್ರಸಾದ್  ತಿಳಿಸಿದ್ದಾರೆ.
ಮೋಟಾರು ವಾಹನ ಕಾಯ್ದೆ ಅಥವಾ ಸ್ಥಳೀಯ ಕಾಯ್ದೆಗಳಿಗನುಗುಣವಾಗಿ ವಾಹನಗಳ ಮೂಲಕ ಧ್ವನಿವರ್ಧಕ ಬಳಸಿ ಪ್ರಚಾರ ಮಾಡುವುದಕ್ಕೆ ಅನುಮತಿ ನೀಡಲಿದ್ದು, ರಾತ್ರಿ 10ರ ನಂತರ ಚುನಾವಣಾ ಕಾರ್ಯಗಳಿಗೆ ಅಥವಾ ಸಾರ್ವಜನಿಕ ಸಭೆಗಳಿಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಲಾಗುವುದಿಲ್ಲ.
ರಾತ್ರಿ 10 ಗಂಟೆಯ ನಂತರ ಸಭೆ, ಸಮಾರಂಭ, ಇನ್ಯಾವುದೇ ಕಾರ್ಯಗಳಿಗೆ ಧ್ವನಿವರ್ಧಕಗಳನ್ನು ಬಳಸಿದಲ್ಲಿ ಸದರಿ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ವಾಹನಗಳ ಮೂಲಕ ಧ್ವನಿವರ್ಧಕ ಬಳಸಿ ಪ್ರಚಾರ ಮಾಡಲಿಚ್ಛಿಸುವ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ವಾಹನಗಳ ನೋಂದಣಿ ದಾಖಲೆ ಸಹಿತ ಸಂಪೂರ್ಣ ಮಾಹಿತಿಯನ್ನು ಅನುಮತಿ ನೀಡುವ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಆದರೆ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವ 48 ಗಂಟೆಗಳ ಅವಧಿಗೆ ಮುನ್ನ ಯಾವುದೇ ಕಾರಣಕ್ಕೂ ಯಾವುದೇ ಬಹಿರಂಗ ಪ್ರಚಾರಕ್ಕೆ ಅಥವಾ ವಾಹನಗಳಿಗೆ ಅನುಮತಿಯನ್ನು ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ವಿವರ
ಗುಲ್ಬರ್ಗ: ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 17ರಂದು ನಡೆಯುವ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆಗೆ ಮೂರನೆಯ ದಿನವಾದ ಶುಕ್ರವಾರದಂದು ಎಸ್‌ಯುಸಿಐ(ಸಿ) ಪಕ್ಷದ ಶರಣಬಸಪ್ಪ ಮಲಕಾಜಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಬಾಬುರಾವ ರಾಮ್ಲಾ ನಾಯಕ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದುವರೆಗೆ ನಾಲ್ಕು ಅಭ್ಯರ್ಥಿಗಳು ಒಟ್ಟು ಏಳು ನಾಮಪತ್ರಗಳನ್ನು ಸಲ್ಲಿಸಿದಂತಾಗಿದೆ ಎಂದು ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.