ಆಸ್ಪತ್ರೆ ಅವ್ಯವಸ್ಥೆ: ಜೈಕರವೇ ಆಕ್ರೋಶ
ಅಫಜಲ್ಪುರ: ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು ಅವ್ಯವಸ್ಥೆಯ ತಾಣವಾಗಿದ್ದು ಸಂಪೂರ್ಣ ರೋಗಗ್ರಸ್ತವಾಗಿದೆ. ಕೂಡಲೇ ಈ ಆಸ್ಪತ್ರೆಗೆ ಸೂಕ್ತ ವೈದ್ಯರನ್ನು ನೇಮಿಸಿ ಖಡಕ್ಕಾಗಿ ತಾಕೀತು ಮಾಡಿ ಸೂಕ್ತವಾಗಿ ಕೆಲಸ ನಿರ್ವಹಿಸುವಂತೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಸುರೇಶ ಅವಟೆ ಆಗ್ರಹಿಸಿದ್ದಾರೆ. ಅವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ಕಂಡ ದೃಶ್ಯಗಳು ಮನಕಲುಕುವಂತಿತ್ತು. ನೂರಾರು ಜನ ಹೊರರೋಗಿಗಳು ವೈದ್ಯರ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ಯಾಮೊಬ್ಬ ಕರ್ತವ್ಯನಿರತ ವೈದ್ಯರು ಇರಲಿಲ್ಲ. ಈ ಕುರಿತು ಮೇಲಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಹಾರಿಕೆ ಉತ್ತರ ನೀಡಿದ್ದಾರೆ. ಈ ಆಸ್ಪತ್ರೆಯಲ್ಲಿ ನಾಲ್ವರು ಕರ್ತವ್ಯನಿರತ ವೈದ್ಯರಿದ್ದರೂ ಒಬ್ಬರೂ ಕರ್ತವ್ಯಕ್ಕೆ ಬಾರದೆ ಕರ್ತವ್ಯ ಚ್ಯುತಿ ಎಸಗಿದ್ದಾರೆ. ನಾಲ್ಕು ಜನ ವೈದ್ಯರ ಪೈಕಿ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಉಳಿದಿಬ್ಬರು ಆಸ್ಪತ್ರೆಗೆ ಬರುವುದೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಸಾಮಾನ್ಯ ಜನರ ಆರೋಗ್ಯದ ಗತಿ ಏನಾಗಬೇಕು ಎಂದು ಅವಟೆ ಪ್ರಶ್ನಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಶಿವರಾಜ ಸಜ್ಜನ ಶೇಟಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಎಲ್ಲಾ ವಾರ್ಡ್ಗಳನ್ನು ಪರಿಶೀಲಿಸಿದರು. ಅಫಜಲ್ಪುರ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳ ಕೊರತೆ ಇದೆ. ವೈದ್ಯಾಧಿಕಾರಿಗಳ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ ಪಿಹೆಚ್ಸಿಯಿಂದ ತಾತ್ಕಾಲಿಕ ನಿಯೋಜನೆ ಮಾಡಲಾಗಿದೆ. ಇನ್ನೂ ತಾಲೂಕಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಂತಹವರ ವಿರುದ್ದ ಗೈರು ಹಾಕಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಸಂತೋಷ ಪಾಟೀಲ್ ಅವರಿಗೆ ತಿಳಿಸಿದರು. ಆಸ್ಪತ್ರೆಯ ನೇತ್ರ ವೈದ್ಯ ಡಾ. ಪೈಸಲ್ ಫಜಲ್ ಅವರು ಕರ್ತವ್ಯಕ್ಕೆ ಗೈರು ಹಾಜರಿದ್ದಾರೆ. ಸುಮಾರು ಬಾರಿ ಎಚ್ಚರಿಸಿದರೂ ಕರ್ತವ್ಯಕ್ಕೆ ಗೈರಾಗಿದ್ದು ಜಿಲ್ಲಾಧಿಕಾರಿಗಳ ಮೂಲಕ ಮೆಮೊ ನೀಡಲಾಗಿದ್ದು ವರದಿ ನೀಡುವಂತೆ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳಾಗದಂತೆ ನೋಡಿಕೊಳ್ಳುತ್ತೇನೆ. ಎಲ್ಲಾ ವೈದ್ಯಾಧಿಕಾರಿಗಳ ಸಭೆ ಕರೆದಿದ್ದೇನೆ. ಅಲ್ಲಿ ಎಲ್ಲಕ್ಕೂ ಉತ್ತರ ನೀಡುತ್ತೇನೆ ಎಂದು ಅವರು ತಿಳಿಸಿದರು. ಜೈ ಕರವೇ ಉಪಾಧ್ಯಕ್ಷ ಮಹಾಂತೇಶ ಗುಣಾರಿ, ಯಲ್ಲಪ್ಪ ಗ್ಯಾನಾಗೋಳ, ಪ್ರಭಾರಿ ತಾಲೂಕು ವೈದ್ಯಾಧಿಕಾರಿ ಸಂತೋಷ ಪಾಟೀಲ್, ದಂತ ವೈದ್ಯ ಮನೋಜ ಕುಮಾರ ಇದ್ದರು.
ಶೇಖಮ್ಮ ನಿಧನ
ಸುರಪುರ: ಸಮೀಪದ ರಂಗಂಪೇಟೆಯ ಶೇಖಮ್ಮ ಶಿವನಾಗಪ್ಪ ಕಲಕೇರಿ(75) ಮಂಗಳವಾರ ನಿಧನರಾದರು. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರೂ ಸೇರಿದಂತೆ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ. ಅಂತ್ಯಕ್ರಿಯೆ ಬುಧವಾರ ಬೆಳಗ್ಗೆ 10 ಗಂಟೆಗೆ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಹಿಂದಿನ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಉಚಿತ ನೇತ್ರ ತಪಾಸಣಾ ಶಿಬಿರ
ಗುಲ್ಬರ್ಗ: ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ವಿಭಾಗ ಗುಲ್ಬರ್ಗ, ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಜೇವರ್ಗಿ, ಜಿಲ್ಲಾ ನೇತ್ರ ಶಸ್ತ್ರ ಚಿಕಿತ್ಸಾ ಘಟಕ ಹಾಗೂ ತಾಲೂಕಿನ ಆರೋಗ್ಯಾಧಿಕಾರಿಗಳ ಕಚೇರಿ ಜೇವರ್ಗಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದಲಿತ ಸೇನೆ ವಲಯ ಘಟಕ ಯಡ್ರಾಮಿ ಇವುಗಳ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಯಡ್ರಾಮಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಿನಾಂಕ ಮಾ.28 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ. ಮಾ.29 ರಂದು ಜೇವರ್ಗಿಯ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರ ನಡೆಸಲಾಗುವುದು. ಎಲ್ಲ ಕಣ್ಣಿನ ಪೊರೆವುಳ್ಳ ರೋಗಿಗಳ ಕಣ್ಣಿನಲ್ಲಿ ಉಚಿತ ಐಓಎಲ್ ಅಳವಡಿಸಲಾಗುವುದು. ಕಣ್ಣಿನ ಪೊರೆವುಳ್ಳ ಫಲಾನುಭವಿಗಳಿಗೆ ವಾಹನದ ಮೂಲಕ ಜೇವರ್ಗಿ ತಾಲೂಕು ಆಸ್ಪತ್ರೆಗೆ ಕರೆತರಲಾಗುವುದು. ನೇತ್ರ ಶಸ್ತ್ರಚಿಕಿತ್ಸೆಗೊಳಪಟ್ಟ ಫಲಾನುಭವಿಗಳಿಗೆ ಉಚಿತ ಊಟ, ಔಷಧಿಗಳನ್ನು ನೀಡಲಾಗುವುದು. ನಾಗರಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಅಂಧತ್ವ ಕಾರ್ಯಕ್ರಮ ಅಧಿಕಾರಿ ಡಾ. ಎಂ.ಎಸ್. ವರ್ಮಾ ಕೋರಿದ್ದಾರೆ. ಮಾಹಿತಿಗೆ ಮೊಬೈಲ್ ದೂ. 08472-278649, 9900950971, 9845579504, 9901199489, 9008740711ಗೆ ಸಂಪರ್ಕಿಸಿ.
ವಿಶ್ವ ರಂಗಭೂಮಿ ದಿನಾಚರಣೆ ನಾಳೆ
ಸೇಡಂ: ನೀನಾಸಂ ರಂಗಶಿಕ್ಷಣ ಕೇಂದ್ರ ಹೆಗ್ಗೋಡು ಸಹಕಾರದೊಂದಿಗೆ ನಾನು-ನಮ್ಮೂರು ಶಾಲಾ ಮಕ್ಕಳ ವೇದಿಕೆ ಸರ್ಕಾರಿ ಪ್ರೌಢಶಾಲೆ ಜಾಕನಪಲ್ಲಿಯಿಂದ ಮಾ.27 ರಂದು ವಿಶ್ವ ರಂಗಭೂಮಿ ದಿನಾ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ದೊಡ್ಡಟ ಪರಿಕರಗಳು ಮಕ್ಕಳಿಂದ ನಿರ್ಮಿಸಿ, ಅಂದು ಗ್ರಾಮದಲ್ಲಿ ಎಲ್ಲ ಪರಿಕರ ಮತ್ತು ಮುಖವರ್ಣಿಕೆಯೊಂದಿಗೆ ಗ್ರಾಮದಲ್ಲಿ ಮಕ್ಕಳ ತಂಡ ತಿರುಗಾಟ ಮಾಡಲಿದೆ. ಮಕ್ಕಳಿಗೆ ದೊಡ್ಡಾಟದ ಕುರಿತು ಹಾಡು ಗತ್ತುಗಳ ಪ್ರಾತ್ಯಕ್ಷತೆ ನಡೆಯಲಿದೆ. ಸಂಜೆ ಶಾಲಾ ಮಕ್ಕಳ ರಂಗ ಚಟುವಟಿಕೆಗಳ ಫ್ಲ್ಯೆಕ್ಸ್ಗಳನ್ನು ದೊಡ್ಡಾಟದ ಮಾಸ್ತರುಗಳಾದ ಸಿದ್ದಯ್ಯ ಸ್ವಾಮಿ ಜಾಕನಪಲ್ಲಿ, ಮದನಾ ಗ್ರಾಮದ ರಾಮ್ಲು ಕುಂಬಾರ ಸೇರಿದಂತೆ ಗ್ರಾಮದ ರೈತ ಮಹಿಳೆಯರಿಂದ ರಂಗ ಚಟುವಟಿಕೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಮ್ಲು ಕುಂಬಾರರನ್ನು ಸನ್ಮಾನಿಸಲಿದ್ದಾರೆ ಎಂದು ಮಕ್ಕಳ ವೇದಿಕೆ ನಿರ್ದೇಶಕ ಮತ್ತು ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ ತಿಳಿಸಿದ್ದಾರೆ.
ಕೋಡ್ಲಾ ಜಾತ್ರೆ ಮುಂದೂಡಿಕೆ
ಸೇಡಂ: ಏ.17ರಂದು ನಡೆಯಬೇಕಾಗಿದ್ದ ತಾಲೂಕಿನ ಕೋಡ್ಲಾ ಗ್ರಾಮದ ಉರಿಲಿಂಗ ಪೆದ್ದಿ ಮಠದ ಜಾತ್ರಾಮಹೋತ್ಸವವನ್ನು ಮುಂದೂಡಲಾಗಿದೆ ಎಂದು ಮಠದ ನಂಜುಂಡ ಮಹಾಸ್ವಾಮಿ ತಿಳಿಸಿದ್ದಾರೆ. ಮಠದ ಆವರಣದಲ್ಲಿ ನಂಜುಂಡ ಸ್ವಾಮಿಗಳು ಹಾಗೂ ಮೈಸೂರಿನ ಜ್ಞಾನಪ್ರಕಾಶ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತಿರ್ಮಾನ ಕೈಗೊಳ್ಳಲಾಗಿದೆ. ಜಾತ್ರೆಯ ದಿನದಂದು ರಾಜ್ಯದಲ್ಲಿ ಲೋಕಸಭೆಗೆ ನಡೆಯುವ ಚುನಾವಣೆಯ ಮತದಾನ ದಿನವಾದ್ದರಿಂದ ಏ.20ರಂದು ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಲು ಸಭೆಯಲ್ಲಿ ಸಹಮತದಿಂದ ಭಕ್ತರ ಸಮ್ಮುಖದಲ್ಲಿ ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ಮಾಜಿ ಜಿಪಂ ಸದಸ್ಯ ಮಹಾಂತಪ್ಪ ಸಂಗಾವಿ, ಮುಖಂಡ ಶಂಕರ ಕೋಡ್ಲಾ, ಬಸವರಾಜ ಚಿಂಚೋಳಿ, ಕಾಶಪ್ಪ ನೂಲಿ, ನರಸಪ್ಪ ಕುದರೆನ, ಗುರುಲಿಂಗ ನೂಲಿ, ಕಾಶಪ್ಪ ಚಿಟ್ನಳ್ಳಿ, ಕಾಶಪ್ಪ ತೆಲ್ಕೂರ, ಮಲ್ಲಿಕಾರ್ಜುನ, ಶಿವರಾಜ ಗೌನಹಳ್ಳಿ, ರವಿ ಇದ್ದರು.
31ರಂದು ಜಾತ್ರೆ
ಶಹಾಬಾದ್: ವಲಯದ ಕುಲಕುಂದಾ ಗ್ರಾಮದ ವೀರೇಶ್ವರ ದೇವಾಲಯದಲ್ಲಿ ಮಾ.31 ರಂದು ಜಾತ್ರಾ ಮಹೋತ್ಸವ ನಿಮಿತ್ತ ಮುಗುಳಕೊಡ ಯಲ್ಲಾಲಿಂಗರ 9 ದಿನಗಳ ಪುರಾಣವನ್ನು ಮಾ.23 ರಂದು ಸಂಜೆ ಪ್ರಾರಂಭಿಸಲಾಯಿತು ಎಂದು ಮಲ್ಲಿನಾಥ ಮಡಿವಾಳ ತಿಳಿಸಿದ್ದಾರೆ. ಗದಗನ ವಿರೂಪಕ್ಷಯ್ಯ ಶಾಸ್ತ್ರಿಗಳು ಜಿಗಳೂರವರು ಪ್ರವಚನ ನಡೆಸಿಕೊಡಲಿದ್ದು, ಮಾ.31 ರಂದು ನಾಲವಾರದ ಡಾ. ಸಿದ್ದ ತೋಟೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ದೀಪೋತ್ಸವ, ಜಾತ್ರೆ ಧರ್ಮಸಭೆ ಶ್ರೀಗಳಿಂದ ಆಶೀರ್ವಾದ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

