ಗುಲ್ಬರ್ಗಾ

ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆಯಿಂದ

Published On :

ಕ.ಪ್ರ. ವಾರ್ತೆ ಗುಲ್ಬರ್ಗ ಮಾ.26
ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಾ.28ರಿಂದ ಪ್ರಾರಂಭವಾಗಲಿರುವ ಪರೀಕ್ಷೆಗಳು ಏ.9ರವರೆಗೆ ನಡೆಯಲಿವೆ. ಗುಲ್ಬರ್ಗ ವಿಭಾಗದ 6 ಜಿಲ್ಲೆಗಳ ಒಟ್ಟು 1.40 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಗುಲ್ಬರ್ಗ ಜಿಲ್ಲೆಯ- 36,774, ಯಾದಗಿರಿ- 10,610, ರಾಯಚೂರು- 21,067, ಬೀದರ್ 26,168, ಬಳ್ಳಾರಿ- 29,226 ಹಾಗೂ ಕೊಪ್ಪಳ- 16,651 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು ವಿದ್ಯಾಥಿಗಳ ಪೈಕಿ 331 ವಿಕಲಚೇತನರೂ ಸೇರಿದ್ದಾರೆ.
ಒಟ್ಟು ವಿದ್ಯಾರ್ಥಿಗಳ ಪೈಕಿ 83,787 ಜನ ಗ್ರಾಮೀಣ ಪ್ರದೇಶದವರಾಗಿದ್ದಾರೆ, ಉಳಿದ 56,679 ನಗರ ಪ್ರದೇಶದವರು. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಲ್ಲಿ 77,255 ಸರ್ಕಾರಿ, 23,450 ಅನುದಾನಿತ ಹಾಗೂ 39,760 ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಾಗಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ರೀತಿಯ ನಕಲು ನಡೆಯದಂತೆ ಶಿಕ್ಷಣ ಇಲಾಖೆ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ವಿಶೇಷ ಜಾಗೃತ ದಳಗಳನ್ನು ರಚಿಸಿದೆ.
ವಿಡಿಯೋ ಚಿತ್ರೀಕರಣ: ಈಗಾಗಲೇ ಈ ವಿಭಾಗದ 6 ಜಿಲ್ಲೆಗಳಲ್ಲಿರುವ ಪರೀಕ್ಷಾ ಕೇಂದ್ರಗಳ ಪೈಕಿ ಅತೀ ಸೂಕ್ಷ್ಮ ಕೇಂದ್ರಗಳನ್ನು ಗುರುತಿಸಲಾಗಿದೆ. ಒಟ್ಟು 574 ಪರೀಕ್ಷಾ ಕೇಂದ್ರಗಳಿವೆ. ಅವುಗಳಲ್ಲಿ 46 ಸೂಕ್ಷ್ಮ, 27 ಅತೀ ಸೂಕ್ಷ್ಮ ಕೇಂದ್ರಗಳಾಗಿವೆ.
ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಪರೀಕ್ಷಾ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಒಟ್ಟು ಕೇಂದ್ರಗಳ ಪೈಕಿ ಗುಲ್ಬರ್ಗ ಜಿಲ್ಲೆಯಲ್ಲಿ 164, ಯಾದಗಿರಿ- 50, ರಾಯಚೂರು- 93, ಬೀದರ್- 91, ಬಳ್ಳಾರಿ- 112 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 64 ಕೇಂದ್ರಗಳಿವೆ. ಗುಲ್ಬರ್ಗ ಜಿಲ್ಲೆಯಲ್ಲಿ 23 ಹಾಗೂ ರಾಯಚೂರು ಜಿಲ್ಲೆಯಲ್ಲಿ 4 ಅತೀ ಸೂಕ್ಷ್ಮ ಕೇಂದ್ರಗಳಿವೆ, ಅದೇ ರೀತಿ ಗುಲ್ಬರ್ಗ ಜಿಲ್ಲೆಯಲ್ಲಿ 20, ಯಾದಗಿರಿ 11, ರಾಯಚೂರು 15 ಸೂಕ್ಷ್ಮ ಕೇಂದ್ರಗಳಿವೆ. ಅತೀ ಸೂಕ್ಷ್ಮ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ.
ಜಾಗೃತ ದಳ: ಗುಲ್ಬರ್ಗ ಹಾಗೂ ಯಾದಗಿರಿ ಜಿಲ್ಲೆಗಳಿಗಾಗಿ ಅಪರ ಆಯುಕ್ತ ರಾಧಾಕೃಷ್ಣ ಮದನಕರ ನೇತೃತ್ವದಲ್ಲಿ ಬೀದರ್ ಮತ್ತು ರಾಯಚೂರು ಜಿಲ್ಲೆಗಳಿಗಾಗಿ ನಿರ್ದೇಶಕ ಎ. ರುದ್ರಪ್ಪ ನೇತೃತ್ವದಲ್ಲಿ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಾಗಿ ಸಹ ನಿರ್ದೇಶಕ ಎಚ್. ಬಾಲರಾಜ ನೇತೃತ್ವದಲ್ಲಿ ಸಂಚಾರಿ ಜಾಗೃತ ದಳಗಳನ್ನು ರಚನೆ ಮಾಡಲಾಗಿದೆ. ಮೂರು ಜಿಲ್ಲಾ ಮಟ್ಟದ ಸಂಚಾರಿ ಜಾಗೃತ ದಳಗಳನ್ನು ರಚನೆ ಮಾಡಲಾಗಿದ್ದು, ಉಪ ನಿರ್ದೇಶಕ ಬಿ.ಎಸ್. ಪರಮೇಶ, ಎಸ್‌ಎಫ್‌ಎ ಜಿಲ್ಲಾ ಯೋಜನಾ ಉಪ ಸಮನ್ವಯ ಅಧಿಕಾರಿ ಜನಾರ್ದನ ರೆಡ್ಡಿ ಹಾಗೂ ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿಕಾರಿ ಸೂರ್ಯಕಾಂತ ಮದಾನೆ ಜಿಲ್ಲಾ ಮಟ್ಟದ ಜಾಗೃತ ದಳಗಳ ನೇತೃತ್ವ ವಹಿಸಲಿದ್ದಾರೆ.

ಧೈರ್ಯದಿಂದ ಪರೀಕ್ಷೆ ಎದುರಿಸಿ: ಪಾಟೀಲ್
ಆಳಂದ: ವಿದ್ಯಾರ್ಥಿಗಳು ಪರೀಕ್ಷೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಪರೀಕ್ಷೆಯ ಸಮಯದಲ್ಲಿ ಯಾವುದೇ ರೀತಿಯ ಭಯ, ಆತಂಕಕ್ಕೆ ಒಳಗಾಗದೇ ಧೈರ್ಯದಿಂದ ಪರೀಕ್ಷೆ ಎದುರಿಸಲು ಸನ್ನದ್ಧರಾಗುವಂತೆ ಸರಸಂಬಾದ ಮಹಾದೇವಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಮೌಲ್ಯಾಧಾರಿತ ಗುಣಗಳನ್ನು ಬೆಳೆಸಿಕೊಳ್ಳಬೇಕು. ಕಲಿತ ಶಾಲೆ, ಜನ್ಮ ನೀಡಿದ ಊರು, ಹೆತ್ತ ತಂದೆ, ತಾಯಿಗಳಿಗೂ ಕಳಂಕ ತರದೇ ಕೀರ್ತಿ ತರುವ ವಿದ್ಯಾರ್ಥಿಗಳಾಗಿ ಹೊರಹೊಮ್ಮುಂತೆ ಸಲಹೆ ನೀಡಿದರು.
ಹಿರೋಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಧರ್ಮರಾಜ ಕೊರಳ್ಳಿ, ಸಂಬುದ್ಧ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಅಶೋಕ ರೆಡ್ಡಿ ಅತಿಥಿಗಳಾಗಿ ಮಾತನಾಡಿದರು. ಮುಖ್ಯಗುರು ಎಲ್.ಎಸ್. ಬೀದಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸರಿಯಾಗಿ ಪರೀಕ್ಷೆ ಬರೆದು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುವಂತೆ ಹುರಿದುಂಬಿಸಿದರು. ಶಿಕ್ಷಕ ಬಸವರಾಜ ಕಡಗಂಚಿ, ಬಸವರಾಜ ಚೌಧರಿ, ರಾಜಕುಮಾರ ಪವಾರ, ರಾಜಕುಮಾರ ಛಲವಾದಿ, ಶ್ರೀಶೈಲ ಬಿರಾದಾರ, ಸತೀಶ ಕೋಗನೂರೆ, ಬಾಬುರಾವ ಚಿಕಣಿ ಪಾಲ್ಗೊಂಡಿದ್ದರು.

ಸಹ ಶಿಕ್ಷಕಿಯರಿಗೆ ಸೂಚನೆ
ಗುಲ್ಬರ್ಗ: ಮಾ.28ರಿಂದ ಏ.9ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳನ್ನ ಶಾಂತಿಯುತವಾಗಿ ಹಾಗೂ ಸುಗಮವಾಗಿ ನಡೆಸಲು ಹಾಗೂ ನಕಲನ್ನು ತಡೆಯುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶದಲ್ಲಿ ಪರೀಕ್ಷಾ ಸಮಯದಲ್ಲಿ ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಸಿಬ್ಬಂದಿ, ವಿದ್ಯಾರ್ಥಿಗಳ ಹಾಗೂ ಯಾವುದೇ ವ್ಯಕ್ತಿಗಳು ಮೊಬೈಲ್‌ಗಳನ್ನು ಉಪಯೋಗಿಸುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಡಾ. ಎನ್.ವಿ. ಪ್ರಸಾದ್ ಆದೇಶ ಹೊರಡಿಸಿದ್ದಾರೆ. ಪರೀಕ್ಷೆಯ ದಿನಗಳಂದು ಬೆಳಗಿನ 9.30ರಿಂದ ಮಧ್ಯಾಹ್ನ 12.15 ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5.15 ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಆ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಿರಾಕ್ಸ್ ಮತ್ತು ಪುಸ್ತಕ ಅಂಗಡಿಗಳನ್ನು ಮುಚ್ಚುವಂತೆಯೂ ಆದೇಶಿಸಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಲು ಸಹ ಶಿಕ್ಷಕಿಯರಿಗೆ ಸೂಚನೆ: ಚಿತ್ತಾಪುರ ತಾಲೂಕಿನ ಗುಂಡಗುರ್ತಿ, ಚಿಂಚೋಳಿ(ಎಚ್) ಮತ್ತು ಪೇಠಶಿರೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಹ ಶಿಕ್ಷಕಿ(ಟಿಜಿಟಿ)ಯರಾದ ಅಮೀನಾ ಅಫ್ರೀನ್ ಮತ್ತು ಆಶಾ ಅವರ ಒಂದು ವಾರದೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ ಸೂಚಿಸಿದ್ದಾರೆ.
ಈ ಸಹ ಶಿಕ್ಷಕಿಯರು ಕ್ರಮವಾಗಿ 11-04-2010 ರಿಂದ ಮತ್ತು 26-07-2010 ರಿಂದ ಹಾಗೂ 25-01-2011 ರಿಂದ ಶಾಲಾ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಹಲವಾರು ಬಾರಿ ನೋಟಿಸುಗಳನ್ನು ನೀಡಿದ್ದರೂ ಕರ್ತವ್ಯಕ್ಕೆ ಹಾಜರಾಗಿರುವುದಿಲ್ಲ. ಅಂತಿಮವಾಗಿ ಈಗ ಒಂದು ವಾರದೊಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದು, ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಶಿಕ್ಷಕಿಯರನ್ನು ಸೇವೆಯಿಂದ ವಜಾ ಮಾಡಲಾಗುವುದೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.