ಗುಲ್ಬರ್ಗಾ

ನಲ್ಲಿಯಲ್ಲಿ ನಾಲೆ ನೀರು, ತಕ್ಷಣಕ್ಕಂತೂ ಪರಿಹಾರ ಇಲ್ಲವಯ್ಯ...

Published On :

ಕ.ಪ್ರ. ವಾರ್ತೆ ,  ಗುಲ್ಬರ್ಗ ,  ಮೇ 28
 ನೋಟ- 1
55 ವಾರ್ಡ್‌ಗಳಲ್ಲಿ ಹರಡಿರುವ ಗುಲ್ಬರ್ಗ ಮಹಾನಗರದಲ್ಲಿ ಶೇ.30ರಷ್ಟು ಪ್ರದೇಶವಷ್ಟೇ ಒಳ ಚರಂಡಿ ಸೌಕರ್ಯ ಪಡೆದಿದೆ, ಶೇ.70ರಷ್ಟು ಪ್ರದೇಶದಲ್ಲಿ ಈ ಸೌಕರ್ಯ ಮರೀಚಿಕೆ, ನಾಲೆ ನೀರು ತೆರೆದ ಚರಂಡಿ ಮೂಲಕ ಹರಿದು ನಗರ ನೀರಿನ ಮೂಲ ಭೀಮಾ ನದಿ ಸೇರುವುದನ್ನು ತಪ್ಪಿಸಲಾಗುತ್ತಿಲ್ಲ. ನೀರು ಶುದ್ಧೀಕರಣಕ್ಕೂ ಸಮಯ ಬೇಕು. ಚರಂಡಿ ಜಾಲ ಪೂರ್ಣಗೊಳ್ಳದ ಹೊರತು ನಾಲೆ ನೀರು ಭೀಮಾ ಸೇರುವುದನ್ನು ತಪ್ಪಿಸಲಾಗದು.
 ನೋಟ-2
ನಗರದಾದ್ಯಂತ 72 ಕಡೆಗಳಲ್ಲಿ ಒಳ ಚರಂಡಿ ಕೊಳವೆ ಮಾರ್ಗ ಹಾಗೂ ತೆರೆದ ಚರಂಡಿಗಳೆರಡೂ ಒಂದಕ್ಕೊಂದು ಬೆಸೆದುಕೊಂಡಿವೆ. ಹೀಗೆ ಬೆಸುಗೆಯಾದ ಕೊಳವೆ ನಲ್ಲಿ ನೀರು ಪೂರೈಸುವ ಕೊಳವೆಗೂ ತಾಕಿಕೊಂಡಿದೆ. ಹೀಗಾಗಿ ನಾಲೆ ನೀರು ನೇರವಾಗಿಯೇ ನಲ್ಲಿ ನೀರಿನ ಕೊಳವೆ ಸೋರುವುದರಿಂದ ರಾಡಿ ನೀರು ನಲ್ಲಿಗಳಿಂದ ಕೊಡ ತುಂಬುವುದನ್ನು ತಕ್ಷಣಕ್ಕೆ ತಪ್ಪಿಸಲಾಗದು.
 ನೋಟ-3
ನಗರದ ಚರಂಡಿ ನೀರು ನಿತ್ಯ 27 ಎಂಎಲ್‌ಡಿ ಹರಿದು ಭೀಮಾನದಿ ಸೇರಿದರೆ ಅಲ್ಲಿಂದಲೇ ಎತ್ತಲ್ಪಡುವ ನೀರು ಅದೆಷ್ಟು ಶುದ್ಧೀಕರಿಸಿದರೂ ಕೊಳಚೆ ಅಂಶ ಸಂಪೂರ್ಣ ಹೋದೀತೆ? ಹೀಗಾಗಿ ನಲ್ಲಿಯಲ್ಲಿ ಚರಂಡಿ ನೀರಿನ ಧಾರೆ ಹರಿದು ಬರುವುದನ್ನು ತಪ್ಪಿಸಲು ತಕ್ಷಣಕ್ಕೆ ಯಾರಿಂದಲೂ ಸಾಧ್ಯವಿಲ್ಲ.
- ಈ ಮೂರು ಸಂಗತಿಗಳನ್ನು ನಗರ ಪುರಪಿತೃಗಳ ಗಮನಕ್ಕೆ ತಂದವರು ಬೇರಾರೂ ಅಲ್ಲ, ನಗರ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಎಂಜಿನಿಯರ್ ಅಶೋಕ ಮಾಡ್ಯಾಳಕರ್.
ಪಾಲಿಕೆ ವಿಶೇಷ ಸಭೆಯಲ್ಲಿ ನಗರ ನೀರು ಪೂರೈಕೆಯ ಬಗ್ಗೆ ಮಾತನಾಡಿದ ಮಾಡ್ಯಾಳಕರ್, ನಲ್ಲಿಯಲ್ಲಿ ನಾಲೆ ನೀರು, ಹುಳು-ಹುಪ್ಪಡಿ ಸಮೇತ ಹರಿದು ಬರುವುದ್ಯಾಕೆ ಎಂಬ ಸದಸ್ಯರು ಕೆಲವರ ಪ್ರಶ್ನೆಗಳಿಗೆ ಉತ್ತರಿಸಿದಾಗ ಎಲ್ಲರೂ ಗಪ್‌ಚುಪ್.
40 ಸಾವಿರ ಮನೆಗೆ ನಲ್ಲಿ ಸಂಪರ್ಕ ಇವೆ. ಇವುಗಳಲ್ಲಿ ಶೇ.40 ಪ್ರದೇಶದಲ್ಲಿನ ನಲ್ಲಿಯಲ್ಲಿ ಕೊಳಚೆ ನೀರು ಹರಿದು ಬರುವ ಸಮಸ್ಯೆ ಯಾವಾಗಲೂ ಕಾಡುತ್ತಿರುತ್ತದೆ. ಶುದ್ಧೀಕರಣ ಘಟಕ ಸ್ಥಾಪಿಸಿ ಚರಂಡಿ ನೀರು ಶುದ್ಧೀಕರಿಸಿದಾಗ ಅಥವಾ ನದಿ ಸೇರುವ ನಾಲಿಯ ದಿಕ್ಕನ್ನೇ ಬದಲಿಸುವ ಕೆಲಸವಾದಲ್ಲಿ ಮಾತ್ರ ನಗರ ಜನತೆ ಎದರಿಸುತ್ತಿರುವ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.
ಪುರಪಿತೃಗಳ ತಕರಾರು: ಗುಲ್ಬರ್ಗ ಉತ್ತರ- ದಕ್ಷಿಣ ಎರಡೂ ಪ್ರದೇಶಗಳಲ್ಲಿರುವ ಜನ ಮನುಷ್ಯರೇ ಅಲ್ಲಂದು ಜಲ ಮಂಡಳಿ ತಿಳಿದಂತಿದೆ. ಹುಳು ಇರುವ ನೀರು ನಿತ್ಯ ಪೂರೈಸುತ್ತಿದೆ ಎಂದು ಸೈಯ್ಯದ್ ಅಹ್ಮದ್ ಗಂಭೀರ ಆರೋಪ ಮಾಡಿದರು. ಕೋಟಿಗಟ್ಟಲೇ ಹಣ ವೆಚ್ಚವಾಗುತ್ತಿದ್ದರೂ ನಗರವಾಸಿಗಳು ಶುದ್ಧ ಕುಡಿಯುವ ನೀರು ಪಡೆಯಲಾಗುತ್ತಿಲ್ಲ. ಮತ್ತೀಗ ಅಭಾವ ಪರಿಹಾರ ನಿಧಿಯಲ್ಲಿ ಕೊಳವೆಬಾವಿ ಕೊರೆಯಲು ಮುಂದಾಗಿದ್ದಾರೆ. ಈಗಿರುವ ಕೊಳವೆಗಳ ದುರಸ್ತಿಗೂ ಮುಂದಾಗಿದ್ದಾರೆ. ನಗರಕ್ಕೆ ಈಗ ಪೂರೈಸುವ ನೀರನ್ನೇ ಸರಿಯಾಗಿ, ಶುದ್ಧೀಕರಿಸಿ ಪೂರೈಸಿದರೆ ಕೊಳವೆ ಬಾವಿಗಳ ಅಗತ್ಯ ಇರದು ಎಂದು ಸದಸ್ಯ ಸೈಯ್ಯದ್ ಅಹ್ಮದ್ ಹೇಳಿದರು.
ಮಹಿಳಾ ಸದಸ್ಯರು ತಮ್ಮ ಬಡಾವಣೆಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆಯೂ ಎಂಜಿನಿಯರ್ ಮಾಡ್ಯಾಳಕರ್ ಸೆಳೆಯಲು ಪ್ರಯತ್ನಿಸಿದರು. ಸಭೆಯಲ್ಲಿ ಈ ಬಗ್ಗೆ ಅನೇಕರು ಮಾತನಾಡುತ್ತ ನೀರು, ಚರಂಡಿ ನಿರ್ವಹಣೆ ಇಲ್ಲಿ ತುಂಬ ಸಮಸ್ಯೆಗಳಿಂದ ಕೂಡಿದೆ ಎಂದು ಅತೃಪ್ತಿ ಹೊರಹಾಕಿದರು.
ಜೂಜು- ಮೋಜಿನ ಜಲ ಮಂಡಳಿ ಸಿಬ್ಬಂದಿ: ಚೆನ್ನವೀರ ನಗರದಲ್ಲಿ ವಾರಕ್ಕೊಮ್ಮೆ ನೀರು ಬರುತ್ತಿಲ್ಲ, 2 ದಿನಗಳ ಹಿಂದಷ್ಟೆ ಯಾಕೆ ಹೀಗೆ ಎಂದು ಫಿಲ್ಟರ್ ಬೆಡ್‌ಗೆ ಹೋಗಿ ನೋಡಿದರೆ ಅಲ್ಲಿರುವ ಸಿಬ್ಬಂದಿ ಉಡಾಫೆಯಿಂದ ಮಾತನಾಡಿದರು. ಇಸ್ಪೀಟ್ ಆಡುವಾಗ ತುಸು ವಿಳಂಬವಾಯ್ತು, ಪಾನಮತ್ತನಾಗಿ ಮಲಗಿದ್ದೆ, ಏಳುವುದು ವಿಳಂಬವಾಯ್ತು... ಎಂದು ಜಲ ಮಂಡಳಿ ಸಿಬ್ಬಂದಿ ಹೇಳಿದ್ದಾರೆ. ಪಾಲಿಕೆ ಸದಸ್ಯನಿಗೇ ಈ ರೀತಿ ಹೇಳಿದರೆ ಸಾಮಾನ್ಯರ ಗತಿ ಏನು ಎಂದು ವಿಠ್ಠಲ ಜಾಧವ ಸಭೆಯ ಗಮನ ಸೆಳೆದರಲ್ಲದೆ ಉದ್ಧಟತನದಿಂದ ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ನಗರ ನೀರು ಪೂರೈಕೆಯ ಬಗ್ಗೆ ಸಭೆಯಲ್ಲಿ ಸಾಕಷ್ಟು ಹೊತ್ತು ಚರ್ಚೆಯಾಯಿತೇ ಹೊರತು ಯಾವುದೇ ಜನಪರ ನಿರ್ಣಯಗಳು ಹೊರಬೀಳಲಿಲ್ಲ.
ದುಬಾರಿ ಶುಲ್ಕ ವಸೂಲಿ ಯಾಕೆ?: ಸದಸ್ಯ ಸೈಯ್ಯದ್ ಅಹ್ಮದ್ ಮಾತನಾಡುತ್ತ ಪಾಲಿಕೆ ಕೆಎಂಸಿ ಕಾಯ್ದೆ ಅವಕಾಶಗಳನ್ನು ಮೀರಿ ತೆರಿಗೆ ಹೆಚ್ಚಿಸಿದೆ. ಇದಲ್ಲದೆ ಖಾತೆ ಬದಲಾವಣೆಗೂ ಈಗಿರುವ ಸರ್ಕಾರದ ಸುತ್ತೋಲೆಯಂತೆ ಛಾಪಾ ಕಾಗದದ ಮೇಲಿನ ಮೊತ್ತದಂತೆ ಹಣ ಪಡೆಯದೆ ಹೆಚ್ಚಿನ ಹಣ ಪಡೆಯುತ್ತಿದೆ. ಇದು ಅನ್ಯಾಯದ ಪರಮಾವಧಿ ಎಂದು ಸದಸ್ಯ ಸೈಯ್ಯದ್ ಅಹ್ಮದ್ ಗಮನ ಸೆಳೆದಾಗ, ಮೇಯರ್ ಅಲಿಯಾ ಶಿರಿನ್ ಈ ವಿಚಾರವಾಗಿ ಶೀಘ್ರವೇ ಆಡಳಿತ, ವಿರೋಧ ಪಕ್ಷಗಳ ಸದಸ್ಯರನ್ನೊಳಗೊಂಡ ಸಭೆ ಕರೆಯಲಾಗುತ್ತದೆ. ಅಲ್ಲಿ ಈ ಸಂಗತಿ ಚರ್ಚಿಸೋಣ ಎಂದರು.
ಬೇಕಾಬಿಟ್ಟಿ ತೆರಿಗೆ ಹೆಚ್ಚಿಸಲು ಸಾಧ್ಯವಿಲ್ಲ, ಖಾತೆ ಬದಲಾವಣೆಗೂ ಸುತ್ತೋಲೆ ಹೊರತುಪಡಿಸಿ ಹಣ ವಸೂಲಿ ಸಲ್ಲದು. ಹೀಗಾಗಿ ಪಾಲಿಕೆ ಈ ವಿಚಾರದಲ್ಲಿ ಬೇಗನೆ ಕ್ರಮ ಜರುಗಿಸಬೇಕು ಎಂದು ಸೈಯ್ಯದ್ ಅಹ್ಮದ್ ಆಗ್ರಹಿಸಿದರು.
ಮಾಡ್ಯಾಳಕರ್ ಸಭೆಯ ಗಮನಕ್ಕೆ ತಂದ ಸಂಗತಿಗಳಿವು
1) ಶೇ.70ರಷ್ಟು ಪ್ರದೇಶ ಒಳ ಚರಂಡಿ ಸವಲತ್ತು ಇಲ್ಲದ್ದಾಗಿದೆ. ಇಲ್ಲಿನ ಕೊಳಕು ನೀರು ತೆರೆದ ಚರಂಡಿಯಲ್ಲೇ ಪ್ರವಹಿಸುವುದರಿಂದ ನಾಲೆ ತುಂಬಿ ಹರಿಯುತ್ತ ಭೀಮೆ ಸೇರುತ್ತಿದೆ. ತಕ್ಷಣಕ್ಕೆ ಈ ಸಮಸ್ಯೆಗೆ ಪರಿಹಾರವೆಂದರೆ ಎಸ್ಟಿಪಿ ಬಲಗೊಳಿಸುದೇ ಆಗಿದೆ. ನಗರಕ್ಕೆ ನೂರಕ್ಕೆ ನೂರು ಯುಜಿಡಿ ಸೌಕರ್ಯ ಒದಗಿಸಲು 660 ಕೋಟಿ ಅಂದಾಜು ವೆಚ್ಚದ ಕ್ರಿಯಾ ಯೋಜನೆ ಸಿದ್ಧಗೊಳಿಸಲಾಗಿದೆ.

2) 1,160 ಕಿ.ಮೀ. ರಸ್ತೆ ಉದ್ದವಿರುವ ನಗರದಲ್ಲಿ 300 ಕಿ.ಮೀ. ಮಾತ್ರ ಯುಜಿಡಿ ಸೌಕರ್ಯವಿದೆ. ಸಮೀಕ್ಷೆಗೆ, ಲೈನ್ ಎಸ್ಟಿಮೇಟ್ ಮಾಡಲು 73 ಲಕ್ಷ ಬೇಕೆಂದು ಪಾಲಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಾಲಿಕೆಯಿಂದ ಇನ್ನೂ ಒಪ್ಪಿಗೆ ದೊರಕಿಲ್ಲ.

3) 55 ವಾರ್ಡ್‌ಗಳಲ್ಲಿ 4ರಲ್ಲಿ ನಿರಂತರ ನೀರು ಯೋಜನೆ ಇದ್ದರೆ 35ರಲ್ಲಿ ಮೂರು ದಿನಕ್ಕೊಮ್ಮೆ 11ರಲ್ಲಿ 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಭೀಮಾ, ಬೆಣ್ಣೆತೊರಾ ಸೇರಿದಂತೆ ನಿತ್ಯ 70 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಭೀಮೆಯಲ್ಲಿ ಇನ್ನೂ 50 ಟಿಎಂಸಿ ಅಡಿ ನೀರಿನ ಲಭ್ಯತೆ ಇರುವುದರಿಂದ ಬರುವ 25ರಿಂದ 30 ದಿನಗಳವರೆಗೂ ಈ ನೀರು ಸಾಕಾಗುತ್ತದೆ.

4) ನಗರದಲ್ಲಿರುವ 1,435 ಕೊಳವೆಬಾವಿಗಳ ಪೈಕಿ 500 ಕೆಲಸ ನಿಲ್ಲಿಸಿವೆ. ಇವುಗಳಿಗೆ ಕಾಯಕಲ್ಪ ನೀಡಲು 47 ಲಕ್ಷ ಪ್ರಸ್ತಾವನೆ ಸಲ್ಲಿಸಲಾಗಿದೆ.

5) ಅಭಾವ ಪರಿಹಾರ ನಿಧಿಯಲ್ಲಿ(1.86 ಕೋಟಿ) ಪ್ರತಿ ವಾರ್ಡ್‌ಗೆ 2 ಕೊಳವೆ ಬಾವಿ, 250 ಮೀಟರ್ ಕೊಳವೆ ಮಾರ್ಗ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗಿದ್ದು, ಪಾಲಿಕೆ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.