3 ಮಕ್ಕಳೊಂದಿಗೆ ತಾಯಿ ನಾಪತ್ತೆ
ಸಕಲೇಶಪುರ: ತನ್ನ ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ತಾಲೂಕಿನ ಯಸಳೂರು ಹೋಬಳಿಯ ಕೌಕೋಡಿ ಗ್ರಾಮದಲ್ಲಿ ನಡೆದಿದೆ. ಕೌಕೊಡಿ ಗ್ರಾಮದ ಕೆ.ಇ. ರಜಾಕ್ ಎಂಬುವರ ತಂಗಿ ನಸೀಮ (26), ಮಕ್ಕಳಾದ ಫಾರಿಷ (10), ಫಾಮಿದ (8), ಫಾಜೀಲ್ (2) ಜತೆ ನಾಪತ್ತೆಯಾಗಿದ್ದಾರೆ.
ಗಂಡನೊಂದಿಗೆ ಮನಸ್ತಾಪ ಮಾಡಿಕೊಂಡು ತನ್ನ ಮೂರು ಮಕ್ಕಳೊಂದಿಗೆ ಅಣ್ಣನ ಮನೆಯಲ್ಲಿದ್ದ ಈಕೆ ಏ.3 ರಂದು ಬೆಳಗ್ಗೆ 9 ಗಂಟೆಗೆ ಪತಿ ಮನೆಗೆ ಹೋಗುತ್ತೇನೆಂದು ಹೋದವರು ಗಂಡನ ಮನೆಗೆ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾರೆ.
ಕೆ.ಇ.ನಸೀಮ ಅವರು 5.4 ಅಡಿ ಎತ್ತರ, ಬಿಳಿ ಬಣ್ಣ, ಮಲಯಾಳಂ, ಕನ್ನಡ, ಬ್ಯಾರಿ, ತುಳು ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಚೂಡಿದಾರ ಮತ್ತು ಬುರ್ಖಾ ಧರಿಸಿದ್ದರು. ಮಕ್ಕಳಾದ ಫಾರಿಷ 6 ನೇ ತರಗತಿ ಓದುತ್ತಿದ್ದು, 3.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ ಮತ್ತು ಮಲಯಾಳಂ ಬಾಷೆ ಮಾತನಾಡುತ್ತಾಳೆ.
ಮನೆಯಿಂದ ಹೋಗುವಾಗ ಲಂಗ ಜಾಕೆಟ್ ಧರಿಸಿದ್ದಳು. ಮತ್ತೊಬ್ಬ ಮಗಳು ಫಾಮಿದ 4 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಕನ್ನಡ, ಮಲಯಾಳಂ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಬಿಳಿ ಲಂಗ ಜಾಕೆಟ್ ಧರಿಸಿದ್ದಳು. 2 ವರ್ಷದ ಮಗು ಫಾಝೀಲ್ ಎಣ್ಣೆಗೆಂಪು ಬಣ್ಣ ಹೊಂದಿದ್ದಾನೆ ಎಂದು ನಸೀಮ ಅವರ ಅಣ್ಣ ರಜಾಕ್ ಯಸಳೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರೌಢಶಾಲೆಯಲ್ಲಿ ಪರಿಕರ ಕಳವು
ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ, ಕಲ್ಕರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 25 ಸಾವಿರ ರು. ಮೌಲ್ಯದ ಪರಿಕರಗಳನ್ನು ಕಳವು ಮಾಡಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷಾ ನಿಮಿತ್ತ ಶಾಲಾ ಕೊಠಡಿಗಳಿಗೆ ಬೀಗ ಹಾಕಿಕೊಂಡು ಹೋಗಿದ್ದಾಗ ನಡೆದಿದೆ.
ಕಳ್ಳರು ಶಾಲಾ ಕೊಠಡಿಯ ಬೀಗ ಮುರಿದು ಒಳಪ್ರವೇಶಿಸಿ 25,000 ರು. ಬೆಲೆಯ ಕಂಪ್ಯೂಟರ್ ಕೊಠಡಿಯಲ್ಲಿದ್ದ 8 ಬ್ಯಾಟರಿಗಳು, ಬೀರುವಿನಲ್ಲಿದ್ದ 1 ಡಿವಿಡಿ ಪ್ಲೇಯರ್, 4 ಸ್ಪೀಕರ್ಗಳು, 1 ಮಲ್ಟಿಮಿಡಿಯಾ ಪ್ರೊಜೆಕ್ಟರ್, 6 ಮಕ್ಕಳು ಕುಳಿತುಕೊಳ್ಳುವ ಡೆಸ್ಕ್ಗಳು, ಅಡುಗೆ ಕೋಣೆಯಲ್ಲಿದ್ದ 330 ಕೆ.ಜಿ ಅಕ್ಕಿ ಮತ್ತು 4 ಗ್ಯಾಸ್ ಸಿಲೆಂಡರ್ಗಳನ್ನು ಕಳವು ಮಾಡಿದ್ದಾರೆ. ಮುಖ್ಯೋಪಾಧ್ಯಾಯ ಲಕ್ಷ್ಮೀಕಾಂತ್ ನುಗ್ಗೇಹಳ್ಳಿ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪುರುಷ ಶವ ಪತ್ತೆ
ಅರಸೀಕೆರೆ: ಅಪರಿಚಿತ ಗಂಡಸಿನ ಶವ ತಾಲೂಕಿನ ಬೊಮ್ಮೇನಹಳ್ಳಿಯಲ್ಲಿ ಪತ್ತೆಯಾಗಿದೆ.ತಾಲೂಕಿನ ಕಸಬಾ ಹೋಬಳಿ, ಬೊಮ್ಮೇನಹಳ್ಳಿ ಗ್ರಾಮದ ಕೆರೆಯ ತೂಬಿನಗುಂಡಿಯಲ್ಲಿ ಅಪರಿಚಿತ ಗಂಡಸಿನ ಶವ ಬಿದ್ದಿರುವುದಾಗಿ ಗ್ರಾಮಲೆಕ್ಕಾಧಿಕಾರಿ ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಸುಮಾರು 35-40 ವರ್ಷ. 5.6 ಅಡಿ ಎತ್ತರ, ಕೋಲುಮುಖ, ಕೊಳೆತ ಶರೀರ, ಮೈಮೇಲೆ ಬಟ್ಟೆ ಇರುವುದಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

