ಹಾಸನ

ಅಭ್ಯರ್ಥಿಗಳ ಹೆಸರು ಪ್ರಕಟ

Published On :

ಸಕಲೇಶಪುರ: ಕ್ಷೇತ್ರ ಪುನರ್ ವಿಂಗಡಣೆ ನಂತರ ಮಲೆನಾಡಿನ ಜೊತೆಗೆ ಅರೆ ಮಲೆನಾಡನ್ನು ಹೊಂದಿರುವ ಸಕಲೇಶಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಪ್ರಮುಖ ನಾಲ್ಕು ಪಕ್ಷದ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿದ್ದು, ಇದೀಗ ಚುನಾವಣೆ ಕಣ ರಂಗು ಪಡೆದುಕೊಳ್ಳುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಮಲ್ಲೇಶ್, ಬಿಜೆಪಿಯಿಂದ ಡಾ.ನಾರಾಯಣಸ್ವಾಮಿ, ಜೆಡಿಎಸ್‌ನಿಂದ ಶಾಸಕ ಎಚ್.ಕೆ ಕುಮಾರಸ್ವಾಮಿ ಹಾಗೂ ಕೆಜೆಪಿ ಅಭ್ಯರ್ಥಿಯಾಗಿ ಬೆಳಗೋಡು ಉಮೇಶ್ ಸ್ಪರ್ಧಿಸುತ್ತಿದ್ದು, ಬಹುತೇಕ ಎಲ್ಲಾ ಪಕ್ಷದಲ್ಲೂ ಚುರುಕಿನ ಚಟುವಟಿಕೆ ಕಂಡುಬರುತ್ತಿದೆ. ಎಲ್ಲರೂ ತಮ್ಮದೆ ಶೈಲಿಯಲ್ಲಿ ಜನ ಮನ ಗೆಲ್ಲಲು ಯತ್ನಿಸುತ್ತಿದ್ದಾರೆ. ಮತ ಕೇಳಿದವರಿಗೆಲ್ಲ ನಿಮಗೇ ಮತ ನೀಡುತ್ತೇವೆ ಎಂದು ಮತದಾರರು ಹೇಳಿ ರಾಜಕಾರಣಿಗಳನ್ನು ಕಳುಹಿಸಿ ಕೊಡುತ್ತಿದ್ದಾರೆ.
ಜೆಡಿಎಸ್ ಪ್ರಚಾರದಲ್ಲಿ ಮುಂದಿರುವಂತೆ ಭಾಸ:  ಜೆಡಿಎಸ್ ಎಲ್ಲರಿಗಿಂತ ಮೊದಲೇ ಅಭ್ಯರ್ಥಿ ಆಯ್ಕೆ ಮಾಡಿದೆ. ಈಗಾಗಲೇ ತಾಲೂಕು ಹಾಗೂ ಹೋಬಳಿವಾರು ಕಾರ್ಯಕರ್ತರ ಸಭೆ ನಡೆಸಿ, ಇದೀಗ ಬೂತ್ ಮಟ್ಟದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿರುವುದರಿಂದ ಇನ್ನಿತರ ಪಕ್ಷಗಳಿಗಿಂತ ಪ್ರಚಾರದಲ್ಲಿ ಮುಂದಿರುವಂತೆ ಭಾಸವಾಗುತ್ತಿದೆ.
ಕೆಜೆಪಿ ಪ್ರಚಾರದಲ್ಲಿ ಭಿನ್ನತೆ ತೋರುತ್ತಿದ್ದು ಕಡಿಮೆ ಸಮಯದಲ್ಲಿ ಬಹುತೇಕ ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಲಾಗುವುದು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ ಬಹುತೇಕ ಮತದಾರರಿಗೆ ಪತ್ರ ಬರೆದು ನಮ್ಮನ್ನು ಬೆಂಬಲಿಸುವಂತೆ ವಿನಂತಿಸಿಕೊಳ್ಳುವ ವಿನೂತನ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.
ಅಲ್ಲದೆ ಈಗಾಗಲೇ ತಾಲೂಕಿನಲ್ಲಿ ಎರಡು ಬಾರಿ ಕಾರ್ಯಕರ್ತರ ಸಭೆ ನಡೆಸಿ ಗಮನ ಸೆಳೆದಿರುವ ಪಕ್ಷದ ಅಭ್ಯರ್ಥಿಗೆ, ಇಬ್ಬರು ಮಾಜಿ ಶಾಸಕರು ಬಹಿರಂಗವಾಗಿ ಪ್ರಚಾರ ನಡೆಸುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಮೂವರು ಜಿಪಂ ಸದಸ್ಯರು ತೆರೆಯ ಹಿಂದೆ ಇವರ ಪರವಾಗಿ ಕೆಲಸ ಮಾಡುತ್ತಿರುವುದು, ಅಭ್ಯರ್ಥಿಗೆ ಲಾಭವಾಗುವ ಸಾದ್ಯತೆ ಹೆಚ್ಚಿದೆ.
ಬಿಜೆಪಿ ಇದುವರೆಗೂ ಕಾರ್ಯಕರ್ತರ ಸಭೆ ನಡೆಸದಿದ್ದರೂ ಗುಂಡ್ಯಾದ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಆರಂಭಿಸಿರುವ ಅಭ್ಯರ್ಥಿ ತಮ್ಮ ಕಳೆದ 5 ವರ್ಷಗಳ ವೈದ್ಯ ವೃತ್ತಿಯ ಫಲ ನಮಗೆ ಲಭಿಸಲಿದೆ ಎಂಬ ವಿಶ್ವಾಸದಲ್ಲಿದ್ದು, ತಮ್ಮ ಬೆಂಬಲಿಗರ ಪಡೆಯೊಂದಿಗೆ ಮತದಾರರನ್ನು ಮುಟ್ಟುವ ಯತ್ನ ನಡೆಸಿದ್ದಾರೆ.
ಸ್ವಪಕ್ಷದವರ ವಿರೋಧದ ನಡುವೆಯೂ ಪ್ರಚಾರ:  ಸ್ವಪಕ್ಷದವರ  ವಿರೋಧದ  ನಡುವೆಯೂ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮಲ್ಲೇಶ್ ಅವರು, ಕ್ಷೇತ್ರದ ಹಲವು ಹಿರಿಯ ಕಾಂಗ್ರೆಸ್ಸಿಗರು ಹಾಗೂ ಉತ್ಸಾಹಿ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಪ್ರಚಾರದಲ್ಲಿ ಭಾಗಿಯಾಗುವಂತೆ ಮನವೊಲಿಸುತ್ತಿದ್ದು, ಅವರಿಗೆ ಪಕ್ಷದ ಒಂದು ಬಣ ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಪಕ್ಷದ ಕಚೇರಿಯಲ್ಲಿ ಲವಲವಿಕೆ ಕಂಡು ಬರುತ್ತಿದೆ.
ಒಟ್ಟಿನಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆಯ ನಡುವೆಯೂ ನಾನಾ ಪಕ್ಷದ ಕಾರ್ಯಕರ್ತರು ಹಲವು ಅಮಿಷಗಳನ್ನು ಒಡ್ಡಿ ತಮ್ಮ ಅಭ್ಯರ್ಥಿಗಳ ಗೆಲವಿಗೆ ಶ್ರಮಿಸುತ್ತಿರುವುದರಿಂದ ಚುನಾವಣಾ ಕಣ ರಂಗು ಪಡೆದುಕೊಂಡಿದೆ.

-ಎಸ್.ಎಂ.ಮಂಜುನಾಥ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.