ಹಾಸನ

ಬಗೆಹರಿದ ಮುಖಂಡರ ಮನಸ್ತಾಪ

Published On :

ಹಾಸನ: ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್‌ನಲ್ಲಿ ಎದ್ದಿದ್ದ ಭಿನ್ನಾಭಿಪ್ರಾಯದ ಅಲೆ ಕೊನೆಗೂ ಶಮನಗೊಂಡಿದೆ.
ಅಚ್ಚರಿ ಅಂದ್ರೆ... ಭಾನುವಾರ ತಾಲೂಕಿನ ಶಾಂತಿಗ್ರಾಮ ಹೋಬಳಿಯಲ್ಲಿ ನಡೆದ ಚುನಾವಣಾ ಪ್ರಚಾರ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಿನ್ನಾಭಿಪ್ರಾಯಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಪಟೇಲ್
ಶಿವರಾಂ, ಮುಖಂಡ ಬಿ.ವಿ.ಕರೀಗೌಡ, ಕೆ.ಎಂ. ರಾಜೇಗೌಡ, ಜಿಪಂ ಸದಸ್ಯ ಸ್ವಾಮಿಗೌಡ ಹಾಗೂ ನಾರಾಯಣಗೌಡ ಅವರು ದೇವೇಗೌಡರೊಂದಿಗೆ ಒಂದೇ ವೇದಿಕೆಯನ್ನೇರಿ ತಮ್ಮಲ್ಲಿನ ಭಿನ್ನಾಭಿಪ್ರಾಯ ಶಮನಗೊಂಡಿದೆ ಎಂಬುದನ್ನು ಸಾಬೀತು ಪಡಿಸಿದರು.
ಸತತ ಎರಡು ದಿನಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡುವಂತೆ ಮನವಿ ಮಾಡಿದರು. ಬೇಲೂರು, ಹೊಳೆನರಸೀಪುರ, ಅರಕಲಗೂಡು, ಹಾಸನ ಹಾಗೂ ಚನ್ನರಾಯಪಟ್ಟಣ ತಾಲೂಕುಗಳಿಗೆ ಭೇಟಿ ನೀಡಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಮನಸ್ತಾಪಗೊಂಡಿದ್ದ ನಾಯಕರು ಕಳೆದ ಎರಡು ದಿನಗಳಿಂದ ಚುನಾವಣಾ ಪ್ರಚಾರಕ್ಕೆ ಪಕ್ಷದ ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡಿರಲಿಲ್ಲ.
ಭಿನ್ನಾಭಿಪ್ರಾಯಕ್ಕೆ ಕಾರಣ: ಹಾಸನ ಕ್ಷೇತ್ರಕ್ಕೆ ಪಕ್ಷದಿಂದ ಹಾಲಿ ಶಾಸಕ ಎಚ್.ಎಸ್.ಪ್ರಕಾಶ್‌ಗೆ ನೀಡದೆ ಕೆ.ಎಂ.ರಾಜೇಗೌಡರಿಗೆ ಟಿಕೆಟ್ ನೀಡಬೇಕು ಎಂದು ಈ ನಾಯಕರು ಪಟ್ಟು ಹಿಡಿದಿದ್ದರು. ಅದಕ್ಕೆ ಮಣಿಯದ ವರಿಷ್ಠರು ಹಾಲಿ ಶಾಸಕರಿಗೆ ಟಿಕೆಟ್ ನೀಡಿದರು. ಇದರಿಂದ ಮುಖಂಡರಲ್ಲಿ ಮನಸ್ತಾಪ ಉಂಟಾಗಿ ಚುನಾವಣಾ ಪ್ರಚಾರದಲ್ಲಿ ಈ ಪೈಕಿ ಯಾವೊಬ್ಬ ನಾಯಕರು ಪಕ್ಷದ ವೇದಿಕೆಯನ್ನು ಹಂಚಿಕೊಂಡಿರಲಿಲ್ಲ.
ಎಚ್.ಎಸ್.ಪ್ರಕಾಶ್ ಮೂರು ಬಾರಿ ಶಾಸಕರಾಗಿದ್ದಾರೆ. ಈ ಬಾರಿ ಕೆ.ಎಂ.ರಾಜೇಗೌಡರಿಗೆ ಟಿಕೆಟ್ ನೀಡುವಂತೆ ಪಟೇಲ್ ಶಿವರಾಂ, ಬಿ.ವಿ.ಕರೀಗೌಡ, ಸ್ವಾಮಿಗೌಡ ಹಾಗೂ ನಾರಾಯಣಗೌಡ ವರಿಷ್ಠರ ಮೇಲೆ ಒತ್ತಡ ಹಾಕಿದ್ದರು. ಟಿಕೆಟ್ ನೀಡುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾದ ನಂತರ ಈ ನಾಯಕರು ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರಲ್ಲಿಲ್ಲ. ಈ ಗೊಂದಲ ಎಚ್.ಡಿ.ದೇವೇಗೌಡರೇ ಬಗೆಹರಿಸಲು ಸರಿಯಾದ ವ್ಯಕ್ತಿ ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿತ್ತು. ಆದರೆ, ಶಾಂತಿಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಪಟೇಲ್ ಶಿವರಾಂ, ಕರೀಗೌಡ, ರಾಜೇಗೌಡ, ಸ್ವಾಮಿಗೌಡ ಹಾಗೂ ನಾರಾಯಣಗೌಡ ವೇದಿಕೆ ಹಂಚಿಕೊಂಡಿದ್ದು ಎಲ್ಲರಲ್ಲಿ ಅಚ್ಚರಿ ಮೂಡಿಸಿತು.  ನಮ್ಮ ಕರೀಗೌಡರು ಸಹ ಹಲವಾರು ಬಾರಿ ಶಾಸಕರಾಗಿ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ.  ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅದೇ ರೀತಿ ಕೆ.ಎಂ.ರಾಜೇಗೌಡರು, ನಾರಾಯಣಗೌಡ, ಸ್ವಾಮಿಗೌಡ ಎಲ್ಲರು ಪಕ್ಷಕ್ಕೆ ದುಡಿದ್ದಾರೆ ಎಂದು ಹೇಳುವ ಮೂಲಕ ಒಗ್ಗಟ್ಟಿನಿಂದ ಇದ್ದೇವೆ ಎಂದು ಜನತೆಯ ಮುಂದೆ ಸಾರಿದರು.

-ಪಿ.ರವಿಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.