ಹಾಸನ

ಕೆಳಮಟ್ಟಕ್ಕಿಳಿದ ರಾಜ್ಯ ರಾಜಕೀಯ

Published On :

ಕ.ಪ್ರ. ವಾರ್ತೆ , ಹಾಸನ , ಏ. 21
ರಾಜ್ಯದ ರಾಜಕೀಯ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ಶಾಂತಿಗ್ರಾಮ ಹೋಬಳಿಯಲ್ಲಿ ಭಾನುವಾರ ನಡೆದ ಚುನಾವಣಾ ಪ್ರಚಾರ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಸ್ವಾರ್ಥ ಹೆಚ್ಚಾಗಿದ್ದು, ಅದು ರಾಜಕೀಯವನ್ನ ಅತ್ಯಂತ ಕೆಳಮಟ್ಟಕ್ಕೆ ಇಳಿಸಿದೆ. ರಾಜ್ಯದ ಜನತೆಗೆ ಅನ್ಯಾಯವಾಗುತ್ತಿದ್ದರೂ ಸರ್ಕಾರ ಉಳಿಸಿಕೊಳ್ಳುವಂತಹ ಪ್ರಯತ್ನಗಳಲ್ಲಿಯೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಳುಗಿದ್ದವು ಎಂದು ಆರೋಪಿಸಿದರು.
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆನ್ಯಾಯವಾದರೂ ಅದರ ವಿರುದ್ಧ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳಲಿಲ್ಲ. ಕೇಂದ್ರದ ಯುಪಿಎ ಸರ್ಕಾರ ಉಳಿಸಿಕೊಳ್ಳಲು ತಮಿಳುನಾಡಿಗೆ ಮಣಿದು ಐತೀರ್ಪು ಪ್ರಕಟಿಸಲಾಯಿತು. ಅದನ್ನು ಜಯಲಲಿತ ತಮ್ಮ ಹುಟ್ಟು ಹಬ್ಬಕ್ಕೆ ಸಿಕ್ಕ ಬಳುವಳಿ ಎಂದು ಪತ್ರಿಕೆಗಳಲ್ಲಿ ಜಾಹಿರಾತು ನೀಡಿದರು. ಆ ಶಕ್ತಿಯ ವಿರುದ್ಧ ಹೋರಾಟ ಮಾಡಬೇಕು. ಅದಕ್ಕೆ ರಾಜ್ಯದ ಜನತೆಯೇ ಶಕ್ತಿಯಾಗಿದ್ದಾರೆ. ಜನರ ಹಣದಲ್ಲಿ ನಿರ್ಮಿಸಿರುವ ಜಲಾಶಯಗಳಲ್ಲಿ ನೀರನ್ನು ಉಳಿಸಿಕೊಳ್ಳಲು ಜನತೆಯೇ  ಹೋರಾಟ ಮಾಡಬೇಕು ಎಂದು ಹೇಳಿದರು.
ಮೂಳೆ ಇಲ್ಲದ ನಾಲಿಗೆ:  ಯಗಜಿ ಅಣೆಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಅದಕ್ಕೆ ಬೇಕಾಗುವಷ್ಟು ಹಣ ಕೇಳಿದಾಗ ಅಧಿಕಾರಿಯೊಬ್ಬರು  ದೇವೇಗೌಡರು ಕೇಳಿದಾಗಲೆಲ್ಲ ಹಣ ನೀಡಲು ಮರದಿಂದ ಹಣ ಬೆಳೆಯುತ್ತಿಲ್ಲಾ ಎಂದು ದಾಖಲೆ ಪುಸ್ತಕದಲ್ಲಿ ಬರೆದಿದ್ದನ್ನು ಇನ್ನೂ ಮರೆತಿಲ್ಲ. ಅದೇ ಆರ್ಥಿಕ ಸುಧಾರಣೆಯನ್ನು ನಡೆಸಿದ್ದೇವೆ ಅಂದ ಪ್ರಧಾನಮಂತ್ರಿಗಳೇ ಒಂದು ಕಡೆ ಹೇಳುತ್ತಾರೆ. ಇನ್ನೊಂದೆಡೆ ನಷ್ಟವೂ ಇದೆ ಅಂತಾರೆ ಎಂದ ಅವರು, ಜೆಡಿಎಸ್ ಅಪ್ಪಮಕ್ಕಳ ಪಕ್ಷ ಅಂತ ಮೂಳೆ ಇಲ್ಲದ ನಾಲಿಗೆ ಏನ್ ಬೇಕಾದರೂ ಮಾತನಾಡಬಹುದು ಎಂದು ಟೀಕಿಸಿದರು.
ನನ್ನ 50 ವರ್ಷಗಳ ರಾಜಕೀಯ ಜೀವನದಲ್ಲಿ ಜನ ಸೋಲಿಸಿದ್ದಾರೆ, ಮತ್ತೇ ಅದೇ ಜನ ನನ್ನನ್ನು ಗೆಲ್ಲಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಪ್ರಾದೇಶಿಕ ಪಕ್ಷಗಳ ಸಭೆಯನ್ನು ನಡೆಸಿ ವಿ.ಪಿ.ಸಿಂಗ್ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಅಂತ ತೀರ್ಮಾನ ಮಾಡಿದೇವು. 1996ರಲ್ಲಿ ನರಸಿಂಹ ರಾವ್ -  ವಿ.ಪಿ.ಸಿಂಗ್ - ಆಗದಿದ್ದರೆ ಜ್ಯೋತಿಬಸು ಪ್ರಧಾನಿ ಆಗುವಂತೆ ಒತ್ತಾಯಿಸಿದೆವು. ಆದ್ರೆ ಅವರು ನನ್ನ ಹೆಸರು ಸೂಚಿಸಿದರು. ಆ ಕ್ಷಣ ನಾನು ಬೇಡ ಅಂದಾಗ ಅವರು ವಾಜಪೇಯಿ ಅವರಿಗೆ ಪರ್ಯಾಯವಾಗಿ ಸಮರ್ಥ ನಾಯರಿಲ್ಲ, ಅಂದಾಗ ನಾನು ಒಪ್ಪಿಕೊಂಡೆ. ನನ್ನದೊಂದು ಹುಟ್ಟಗುಣ ಅಂದ್ರೆ ಯಾವಾಗಲೂ ಸೋಲನ್ನು ಒಪ್ಪಿಕೊಳ್ಳದಿರುವುದು. ನಾನು ಪಿಎಂ ಆಗುತ್ತೇನೆ ಅಂತ ಅಂದುಕೊಂಡಿರಲಿಲ್ಲ ಎಂದು ನುಡಿದರು.
ನನ್ನ ಜನ ಯಾವತ್ತೂ ನನ್ನ ಕೈಬಿಟ್ಟಿಲ್ಲ:  ಈ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ಸ್ಪರ್ಧಿಸಿದ್ದು, ಹೋಬಳಿಯ ಜನತೆ ರೇವಣ್ಣ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೆನೆದು ಅವರಿಗೆ ಮತ ಹಾಕಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಬೇಕು. ನನ್ನ ಜನ ಯಾವತ್ತೂ ನನ್ನ ಕೈಬಿಟ್ಟಿಲ್ಲ. ಆದ್ದರಿಂದ ಜೆಡಿಎಸ್‌ಗೆ ಮತ ನೀಡಿ ರೇವಣ್ಣ ಜಯಶೀಲರನ್ನಾಗಿ ಮಾಡುವಂತೆ ಮನವಿ ಮಾಡಿದರು.
ನಾಯಕ ಎಚ್.ಡಿ.ರೇವಣ್ಣ ಮಾತನಾಡಿ, ಶಾಂತಿ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಕಾಮಸಮುದ್ರ ಯೋಜನೆಯಡಿ 16 ಸಾವಿರ ಎಕರೆಗೆ ನೀರಿನ ವ್ಯವಸ್ಥೆ ಕಲ್ಪಿಸುವಂತಹ 72 ಕೋಟಿ ರು. ಟೆಂಡರ್ ಕರೆಯಬೇಕಾಗಿದೆ. ಶಾಂತಿಗ್ರಾಮ, ಮರ್ಕುಲಿ ಸೇರಿದಂತೆ ನಾನಾ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಒದಗಿಸುವಂತಹ ಯೋಜನೆ ಇದಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ ಮಣೆ ಹಾಕಿ ರಾಜ್ಯಕ್ಕೆ ಮರಣ ಶಾಸನ ಬರೆದಿದೆ ಎಂದು ಆರೋಪಿಸಿದ ಅವರು, ವಿದ್ಯುತ್ ಇಲಾಖೆಯಲ್ಲಿ 13 ಸಾವಿರ ಕೋಟಿ ರು.ಗಳ ನಷ್ಟ ಉಂಟಾಗಿದ್ದು, ಅಸಮರ್ಪಕ ವಿದ್ಯುತ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಈ ಭಾಗದ ಜನತೆ ಇಲ್ಲಿನ ಅಭಿವೃದ್ಧಿ ಅರಿತು ನನಗೆ ಮತ ನೀಡಬೇಕು. ಒಂದು ತಾಲೂಕಿನಲ್ಲಿ ಅಗಿರುವಂತಹ ಅಭಿವೃದ್ಧಿ ಕಾರ್ಯಗಳನ್ನು ಈ ಹೋಬಳಿಯಲ್ಲಿ ಮಾಡಲಾಗಿದೆ. ಅದನ್ನು ಮನಗಂಡು ಪಕ್ಷದ ಕೈ ಬಿಡಬೇಡಿ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಈ ಹೋಬಳಿಯಿಂದ ಪ್ರತಿನಿಧಿಸಿರುವ ಎಚ್.ಡಿ.ರೇವಣ್ಣ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಎಂತಹ ಸಂದರ್ಭದಲ್ಲಿಯೂ ಈ ಹೋಬಳಿಯ ಮತದಾರರು ದೇವೇಗೌಡ ಹಾಗೂ ಪಕ್ಷ ಬಿಟ್ಟಿಲ್ಲ. ಇಲ್ಲಿನ ಅಭಿವೃದ್ಧಿ ಕಾರ್ಯಗಳಾದ ರಸ್ತೆ, ನೀರು, ಚರಂಡಿ, ಆಸ್ಪತ್ರೆ ಇವುಗಳನ್ನು ಮನಗಂಡು ಅಭ್ಯರ್ಥಿ ರೇವಣ್ಣ ಅವರಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಕೆ.ಎಂ.ರಾಜೇಗೌಡ, ಬಿ.ವಿ.ಕರೀಗೌಡ, ಎಂ.ಜಿ. ದೊಡ್ಡೇಗೌಡ, ಜಿಪಂ ಸದಸ್ಯ ಸ್ವಾಮಿಗೌಡ, ನಾರಾಯಣಗೌಡ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.