ರಸ್ತೆಗಳೋ.. ಮೃತ್ಯು'ಗೂಡು'ಗಳೋ..
ಅ.ರಾ. ಸುಬ್ಬರಾವ್
ಅರಕಲಗೂಡು: ಇನ್ನಷ್ಟು ಅಪಘಾತಗಳು ಸಂಭವಿಸಿ ನೂರಾರು ಜೀವಗಳು ಬಲಿಯಾದರೂ ಜಡ್ಡುಗಟ್ಟಿದ ಸರ್ಕಾರಗಳಿಗೆ ಬುದ್ಧಿ ಬರುವುದೇ ಇಲ್ಲ. ಅಧಿಕಾರಿಗಳದ್ದೂ ಅದೇ ಜಡ್ಡುಗಟ್ಟಿದ ಮನಸ್ಥಿತಿ. ಯಾವುದಾದರೂ ಅನಾಹುತಗಳು ಸಂಭವಿಸಿದ ಕೂಡಲೇ ಮೊಸಳೆ ಕಣ್ಣೀರು ಸುರಿಸಿ, ಕೇವಲ ಭರವಸೆಗಳನ್ನು ನೀಡಿ ಹೋಗುವುದನ್ನು ರಾಜಕಾರಣಿಗಳಂತೆ ಅಧಿಕಾರಿಗಳೂ ಕಲಿತು ಬಿಟ್ಟಿದ್ದಾರೆ.
ತಾಲೂಕಿನ ಅಗ್ರಹಾರದಲ್ಲಿ ಹಳ್ಳವೊಂದಕ್ಕೆ ಮದುವೆ ದಿಬ್ಬಣದ ಲಾರಿಯೊಂದು ಬಿದ್ದು ಸುಮಾರು 25 ಮಂದಿ ಸಾವನ್ನಪ್ಪಿದ್ದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಘಟನೆ ಸ್ಥಳಕ್ಕೆ ಬಂದು ಹಲವು ಭರವಸೆಗಳನ್ನು ನೀಡಿದ್ದರು. ಆದರೆ ಮೃತರ ಕುಟುಂಬಕ್ಕೆ ಒಂದಷ್ಟು ಪರಿಹಾರ ನೀಡಿದ್ದು ಬಿಟ್ಟರೆ ಇನ್ಯಾವ ಸಾಧನೆಯೂ ಆಗಲಿಲ್ಲ. ಕೆರೆಯ ಏರಿಯನ್ನು ಮಣ್ಣು ಎರಚಿ ಒಂದಷ್ಟು ಅಗಲ ಮಾಡಿದ್ದು ಬಿಟ್ಟರೆ ಮತ್ತೇನೂ ಮಾಡಲಿಲ್ಲ.
ಅಂತಹುದೇ ಅನಾಹುತ ಇತ್ತೀಚೆಗಷ್ಟೇ ಬೇಲೂರಿನಲ್ಲಿ ಸಂಭವಿಸಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಕೆರೆಗೆ ಬಿದ್ದು ಎಂಟು ಜನರನ್ನು ಬಲಿ ತೆಗೆದುಕೊಂಡಿತು. ರಾಜಕಾರಣಿಗಳು, ಅಧಿಕಾರಿಗಳು ಅದೇ ಮೊಸಳೆ ಕಣ್ಣೀರು ಸುರಿಸಿ ಹೋಗಿದ್ದಾರೆ. ಘಟನೆ ಸಂಭವಿಸಿದಾಗ ಮಾತ್ರ ಹೀಗಾಗಬೇಕು, ಹಾಗಾಗಬೇಕು ಎಂದೆಲ್ಲಾ ಗೊಣಗುವ ನಮ್ಮ ಸಂಘಸಂಸ್ಥೆಗಳದ್ದೂ ಅದೇ ಸ್ಥಿತಿಯಾಗಿಬಿಟ್ಟಿದೆ.
ತಾಲೂಕಿನ ಕೆರೆಗಳ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಗಳ ಸ್ಥಿತಿಯೂ ಅದೇ. ಕೆರೆಗಳ ಪಕ್ಕದಲ್ಲಿ ಬಹುತೇಕ ಕೆರೆಗಳಿಗೆ ತಡೆಗೋಡೆಯೇ ಇಲ್ಲ. ಇದರಿಂದ ಯಾವುದೇ ಸಮಯದಲ್ಲಾದರೂ ಅವಘಡಗಳು ಸಂಭವಿಸಬಹುದಾದ ಪರಿಸ್ಥಿತಿ. ಉದಾಹರಣೆಗೆ ಅರಕಲಗೂಡಿನಿಂದ ಕೊಳ್ಳಂಗಿಗೆ ಹೋಗುವ ರಸ್ತೆ. ಹದಗೆಟ್ಟು ವಾಹನಗಳನ್ನು ಓಡಿಸಲಾರದ ದುಸ್ಥಿತಿ.
ಅರ್ಧದಿಂದ ಎರಡು ಅಡಿಗಳವರೆಗೂ ಗುಂಡಿಗಳು ಬಿದ್ದಿವೆ. ಗುಂಡಿಗಳಿಂದ ತಪ್ಪಿಸಿಕೊಂಡು ಹೋಗುವ ಪ್ರಯತ್ನ ಚಾಲಕರದ್ದಾದರೆ, ಜೀವ ಬಿಗಿ ಹಿಡಿದು ಕೂರುವ ಪರಿಸ್ಥಿತಿ ಪ್ರಯಾಣಿಕರದ್ದು. ಈ ಮಧ್ಯೆ ದಾರಿಯುದ್ದಕ್ಕೂ ಸಿಗುವ ನೀರು ತುಂಬಿದ ಬೃಹತ್ ಕೆರೆಗಳು. ಇಲ್ಲಿನ ಮುಂಡುಗೋಡು ಕೆರೆಯಂತೂ ಭರ್ತಿಯಾಗಿ ಕೋಡಿ ಬಿದ್ದಿದೆ.
ಕೆರೆ ಏರಿಯ ರಸ್ತೆ ಸಂಪೂರ್ಣ ಹಾನಿಯಾಗಿದೆ. ಈ ರಸ್ತೆಯ ಒಂದು ಕಡೆ ಕೆರೆ ಇದ್ದರೆ ಮತ್ತೊಂದೆಡೆ ಭಾರೀ ಹಳ್ಳದಲ್ಲಿರುವ ಜಮೀನುಗಳು. ಎತ್ತ ಹೋದರೂ ಅಪಾಯ ತಪ್ಪಿದ್ದಲ್ಲ. ಇಲ್ಲಿ ಯಾವ ಕಡೆಗೂ ತಡೆಗೋಡೆ ಇಲ್ಲ. ಇದೇ ರಸ್ತೆಯಲ್ಲಿ ಮುಂದುವರೆದು ಹೋದರೆ ಸಿಗುವುದು ಕೊಳ್ಳಂಗಿ ಕೆರೆ. ಸಂಪೂರ್ಣ ತಿರುವಿನಿಂದ ಕೂಡಿರುವು ಈ ಕೆರೆಯೂ ತುಂಬಿ ಹರಿಯುತ್ತಿದ್ದು, ಏಕಪಥ ರಸ್ತೆಯಾಗಿರುವುದರಿಂದ ಇಲ್ಲಿಯೂ ಅಪಾಯ ಕಾದು ಕೂತಿದೆ.
ಈ ಬಾರಿ ಅತಿಯಾದ ಮಳೆ ಸುರಿದಿರುವುದರಿಂದ ಕೆರೆಗಳು ಮತ್ತು ರಸ್ತೆಗಳ ಬದಿಗಳು ಶೀತಲಗೊಂಡಿದ್ದು,ಅಲ್ಲಲ್ಲಿ ಕುಸಿದಿದೆ. ಯಾವುದಾದರೂ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿತೆಂದರೆ ಎದುರಿನಿಂದ ಬರುವ ವಾಹನಗಳು ಸಂಚರಿಸಲು ಸಾಧ್ಯವಿಲ್ಲದಾಗಿದೆ. ಎರಡು ವರ್ಷಗಳ ಹಿಂದೆ ಮಾಡಿದ ಕಳಪೆ ಮಣ್ಣು ಎರಚುವ ಕಾರ್ಯ ಮಾಡಿದ್ದರಿಂದ ರಸ್ತೆಗಳೂ ಕೆಸರು ಗದ್ದೆಗಳಾದಂತಾಗಿದೆ.
ಇಲ್ಲಿನ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರುವ ಈ ರಸ್ತೆ ದುರಸ್ಥಿ ಮತ್ತು ಕೆರೆಗಳಿಗೆ ತಡೆಗೋಡೆ ನಿರ್ಮಿಸಲು ಅಧಿಕಾರಿಗಳು ಮಾತ್ರ ಮನಸ್ಸು ಮಾಡಿಲ್ಲ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಇತಿಹಾಸದ ದುರ್ಘಟನೆಗಳನ್ನು ನೆನೆದು ಅಪಾಯದ ಕೆರೆಗಳಿಗೆ ತಡೆಗೋಡೆ ಹಾಗೂ ಹಾಳು ಬಿದ್ದಿರುವ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

