ದೇಗುಲ ಅಗಳಿನ ಏರಿ ಕುಸಿತ
ಕನ್ನಡಪ್ರಭ ವಾರ್ತೆ ಬೇಲೂರು ಆ.11
ವಿಷ್ಣುಸಮುದ್ರ ಬಸ್ ದುರಂತ ನೆನಪು ಮಾಸುವ ಮುನ್ನವೇ ಇಲ್ಲಿನ ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಅಗಳಿನ ಏರಿ 60 ರಿಂದ 70 ಅಡಿ ಕುಸಿದಿದೆ.
ಇಲ್ಲಿನ ಚನ್ನಕೇಶವಸ್ವಾಮಿ ದೇಗುಲಕ್ಕೆ ರಕ್ಷಣೆ ಮಾಡಲು ಹಿಂದಿನ ಕಾಲದಲ್ಲೇ ದೇಗುಲ ಸುತ್ತಲೂ ಅಗಳನ್ನು ತೋಡಲಾಗಿದೆ. ಈ ಅಗಳಿನಲ್ಲಿ ನೀರನ್ನು ಬಿಟ್ಟು ಮೊಸಳೆ ಇತರೆ ಮಾಂಸಹಾರಿ ಜಲಜೀವಿಗಳನ್ನು ಬಿಡಲಾಗುತ್ತಿತ್ತು. ಆಧುನೀಕತೆ ಬೆಳೆದಂತೆ ಅಗಳು ಮಾಯವಾಗಿ ಮನೆ ನಿರ್ಮಾಣವಾಗತೊಡಗಿ ಈಗ ಕೇವಲ ಮೂಡಿಗೆರೆ ರಸ್ತೆಯಲ್ಲಿ ಮಾತ್ರ ನೆಪಮಾತ್ರಕ್ಕೆ ಅಗಳಿದೆ.
ಈ ಅಗಳಿನಲ್ಲಿ ಹಲವಾರು ವರ್ಷಗಳಿಂದ ಪಟ್ಟಣದ ತ್ಯಾಜ್ಯನೀರು ಮತ್ತು ಮಳೆ ನೀರು ತುಂಬಿದೆ. ಇದು ಸಾಲದು ಎಂಬಂತೆ ಪ್ರತಿ ಸೋಮವಾರ ಸಂತೆ ನಡೆಯುತ್ತಿದ್ದು ಸಂಜೆ ವೇಳೆಗೆ ಉಳಿದ ತರಕಾರಿಯನ್ನು ಈ ಅಗಳಿನಲ್ಲೇ ಹಾಕುತ್ತಾರೆ.
ದುರ್ನಾತದ ಸ್ವಾಗತ: ಧರ್ಮಸ್ಥಳದಿಂದ ಬರುವ ಪ್ರವಾಸಿಗರಿಗೆ ಮೊದಲು ಸ್ವಾಗತ ಕೋರುವುದು ಅಗಳಿನಿಂದ ಬರುವ ದುರ್ವಾಸನೆ. ಈ ದುರ್ವಾಸನೆ ಎಷ್ಟರ ಮಟ್ಟಿಗೆ ಇದೆ ಎಂದರೆ ಪಟ್ಟಣದ 1 ಕಿ.ಮೀ ಉದ್ದಕ್ಕೂ ಮೂಗಿಗೆ ರಾಚುತ್ತಿದ್ದು ಪ್ರವಾಸಿಗರು ಮೂಗು ಮುಚ್ಚಿಕೊಂಡು ದೇಗುಲ ವೀಕ್ಷಿಸಲು ಬರುತ್ತಾರೆ.
ಮೂಡಿಗೆರೆ ರಸ್ತೆಯಲ್ಲಿ ಗಬ್ಬು ವಾಸನೆ ಇದ್ದು ಈ ಬಗ್ಗೆ ಸುತ್ತಮುತ್ತಲಿನ ನಿವಾಸಿಗಳು ತ್ಯಾಜ್ಯ ನೀರನ್ನು ಹೊರಹಾಕಲು ಪುರಸಭೆಗೆ ಮನವಿಮಾಡಿದ್ದರು. ಕಳೆದ ವರ್ಷ ಪುರಸಭೆಯವರು ತ್ಯಾಜ್ಯ ತೆಗೆಯಲು ಜೆಸಿಬಿ ತಂದು ಕೆಲವೆಡೆ ಗುಂಡಿ ತೋಡಿದ್ದರು.
ಆದರೆ ಪುರಾತತ್ವ ಇಲಾಖೆ ಈ ಬಗ್ಗೆ ಆಕ್ಷೇಪಣೆ ಎತ್ತಿದ ಹಿನ್ನೆಲೆಯಲ್ಲಿ ಅರ್ಧ ಕೆಲಸ ನಿಲ್ಲಿಸಿ ಜಲಾನಯನ ಇಲಾಖೆ ಮೇಲೆ ಜವಬ್ಧಾರಿ ಹಾಕಿ ಸುಮ್ಮನಾದರು. ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಅಗಳು ಪೂರ್ತಿ ತುಂಬಿ ನೀರು ಹೊರ ಹೋಗಲು ಸಾಧ್ಯವಾಗಿರಲಿಲ್ಲ. ಕಳೆದ 2 ದಿನದಿಂದ ಅಗಳಿನ ಕೆರೆ ಏರಿ ಕುಸಿಯಲು ಆರಂಭಿಸಿದ್ದು ಈಗ ಮೂಡಿಗೆರೆ ಹೆದ್ದಾರಿ ರಸ್ತೆವರೆಗೆ ಭೂ ಕುಸಿತ ಉಂಟಾಗಿದೆ.
ಅಲ್ಲದೆ ಈ ಹಿಂದೆ ಅಗಳಿನ ನೀರು ಹೊರ ಹೋಗಲು ನಿರ್ಮಿಸಿದ್ದ ರಾಜಕಾಲುವೆ ಹೆದ್ದಾರಿ ಏರಿಯ ಕೆಳ ಭಾಗದಲ್ಲಿ ಇದ್ದು ನೀರು ರಭಸವಾಗಿ ರಾಜಮಾರ್ಗದಲ್ಲಿ ಹರಿದು ಹೋಗುತ್ತಿದೆ.
ಅಗಳಿನ ನೀರು ಹೆಚ್ಚಾದಾಗ ಏರಿ ಪಕ್ಕದಲ್ಲಿ ಇರುವ ಕಳಸಿನ ಕೆರೆಗೆ ನೀರು ಸರಾಗವಾಗಿ ಹರಿದು ಹೋಗಲು ಆಗಿನ ಕಾಲದಲ್ಲೇ ರಾಜಕಾಲುವೆಯನ್ನು ನಿರ್ಮಿಸಿರುವುದು ಅಂದಿನ ತಂತ್ರಜ್ಞಾನ ಹಾಗೂ ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
ತಪ್ಪಿದ ಭಾರಿ ಅನಾಹುತ: ಪಟ್ಟಣದ ಮೂಡಿಗೆರೆ ರಸ್ತೆಯಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತಿದ್ದು ಸಾವಿರಾರು ಜನರು ಇದೇ ದಾರಿಯಲ್ಲಿ ನಡೆದು ಹೋಗುತ್ತಾರೆ.
ಅಲ್ಲದೆ ಸಂತೆಯಲ್ಲಿ ಮಾರಾಟ ಮಾಡಲು ಬರುವ ಗ್ರಾಮೀಣ ಪ್ರದೇಶದ ರೈತರು ಈಗ ಕುಸಿದಿರುವ ಏರಿ ಮೇಲೆ ತಮ್ಮ ತರಕಾರಿಯನ್ನು ಇಟ್ಟು ಮಾರಾಟ ಮಾಡುತ್ತಾರೆ. ಒಂದು ವೇಳೆ ಸೋಮವಾರ ಈ ಘಟನೆ ನಡೆದಿದ್ದರೆ 60 ರಿಂದ 70 ಅಡಿ ಆಳದ ಭೂ ಕುಸಿತಕ್ಕೆ ಹಲವಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಳ್ಳುವ ಸಂಭವವಿತ್ತು.
ಕೆರೆಗೆ ವಿಷಯುಕ್ತ ನೀರು: ಚನ್ನಕೇಶವಸ್ವಾಮಿ ಅಗಳಿನಲ್ಲಿ ಹಲವಾರು ವರ್ಷಗಳಿಂದ ಪಟ್ಟಣದ ತ್ಯಾಜ್ಯ ವಸ್ತು, ಕೊಳೆತ ಪ್ರಾಣಿ, ಕೊಳೆತ ತರಕಾರಿ, ಹರಕೆ ಮುಡಿ ಕೂದಲು ಸೇರಿದಂತೆ ಎಲ್ಲವನ್ನೂ ಈ ಅಗಳಿನಲ್ಲೇ ಹಾಕಲಾಗುತ್ತಿದೆ.
ಅಲ್ಲದೆ ಜೆ.ಪಿ ನಗರದ ಯುಜಿಡಿ ಪೈಪ್ ಒಡೆದು ಅದರ ಕೊಳಕು ನೀರು ಕೂಡ ಕೆರೆಗೆ ಹರಿದು ಹೋಗುತ್ತಿದೆ. ಈಗಾಗಲೇ ಈ ನೀರು ವಿಷಯುಕ್ತವಾಗಿದೆ ಎಂಬುದು ಸುತ್ತಮುತ್ತಲಿನ ನಿವಾಸಿಗಳ ಅನಿಸಿಕೆ. ಇಂತಹ ನೀರು ಈಗ ಕಳಸಿನ ಕೆರೆಗೆ ಹರಿದು ಹೋಗುತ್ತಿದೆ.
ಕಳಸಿನ ಕೆರೆ ನೀರನ್ನು ಹೊಲ ಗದ್ದೆ ಅಲ್ಲದೆ ಜನಜಾನುವಾರು ಉಪಯೋಗಿಸುತ್ತಿದ್ದು ಈಗ ತ್ಯಾಜ್ಯ ನೀರು ಸೇರ್ಪಡೆಯಿಂದ ಕೆರೆಯ ನೀರು ಮಲೀನವಾಗತೊಡಗಿದೆ.
ಸೇತುವೆ ನಿರ್ಮಾಣಕ್ಕೆ ಆಗ್ರಹ: ಚನ್ನಕೇಶವಸ್ವಾಮಿ ದೇಗುಲದ ಐತಿಹಾಸಿಕ ಅಗಳನ್ನು ಕಾಪಾಡುವುದು ಹಾಗೂ ಹೆದ್ದಾರಿ ಕುಸಿತ ತಪ್ಪಿಸಲು ಸೇತುವೆ ನಿರ್ಮಾಣ ಮಾಡಬೇಕು ಎಂದು ರಾಜ್ಯ ರೈತಸಂಘದ ಸಂಘಟನಾ ಕಾರ್ಯದರ್ಶಿ ಬಳ್ಳೂರು ಸ್ವಾಮಿಗೌಡ ಹಾಗೂ ಪ್ರಗತಿಪರ ಸಂಘಟನೆ ಅಧ್ಯಕ್ಷ ಕೆ.ಸುದರ್ಶನ್, ದಸಂಸ ಸಂಚಾಲಕ ಲಕ್ಷ್ಮಣ್, ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಕೇಬಲ್ ವಿಜಯಕುಮಾರ್, ವರ್ತಕ ಇರ್ಷಾದ್ ಒತ್ತಾಯಿಸಿದ್ದಾರೆ.
ಈಗಾಗಲೆ ಧರ್ಮಾವರಂ ಮಂಗಳೂರು ರಾಜ್ಯ ಹೆದ್ದಾರಿ ಕಾಮಗಾರಿ ಕೆಲಸ ಆರಂಭವಾಗಿದೆ. ಹೆದ್ದಾರಿ ಕಾಮಗಾರಿ ಮಾಡುವಾಗ ಮತ್ತೆ ಏರಿಯನ್ನು ನಿರ್ಮಿಸಿದರೆ ಅಗಳಿನ ನೀರು ಹೊರ ಹೋಗಲು ಸಾಧ್ಯವಾಗದೆ ಮತ್ತೆ ದುರ್ನಾತ ಅನುಭವಿಸಬೇಕಾಗುತ್ತದೆ ಮತ್ತು ಭೂ ಕುಸಿದ ಆತಂಕವಿದ್ದು ಇಲ್ಲಿ ಸೇತುವೆಯನ್ನು ನಿರ್ಮಿಸಿದರೆ ಒಳ್ಳೆಯದು ಎಂಬುದು ಜನತೆ ಅಭಿಪ್ರಾಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

