ನಾಳೆಯಿಂದ ತರಬೇತಿ ಶಿಬಿರ
ಹಾಸನ: ನಗರದ ರಂಗೋಲಿ ಹಳ್ಳದ ಬ್ರಹ್ಮಕುಮಾರಿ ಆಶ್ರಮ ರಸ್ತೆಯಲ್ಲಿರುವ ವ್ಯಕ್ತಿತ್ವ ವಿಕಾಸ ಕೇಂದ್ರದಲ್ಲಿ ಆ. 21 ರಿಂದ 13 ದಿನಗಳ ಕಾಲ ಧ್ಯಾನ, ಯೋಗ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ತರಬೇತಿ ಶಿಬಿರ ಏರ್ಪಡಿಸಿದೆ ಎಂದು ವ್ಯಕ್ತಿತ್ವ ವಿಕಾಸ ಕೇಂದ್ರದ ಮುಖ್ಯಸ್ಥ ಸುರೇಶ್ಗುರೂಜಿ ತಿಳಿಸಿದ್ದಾರೆ. ಬುಧವಾರ ಸಂಜೆ 6-30ಕ್ಕೆ ಶಿಬಿರದ ಪರಿಚಯವಿದೆ. ಯೋಗ, ಪ್ರಾಣಾಯಾಮ ಮತ್ತು ವ್ಯಕ್ತಿತ್ವ ವಿಕಾಸ ತರಬೇತಿಯು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದ್ದು, ಗುಣಮಟ್ಟದ ತರಬೇತಿಗಾಗಿ ಶಿಬಿರಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಪಡಿಸಲಾಗಿದೆ ಎಂದಿದ್ದಾರೆ. ಮೊದಲು ಹೆಸರು ನೋಂದಾಯಿಸಿ ಕೊಂಡವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ 9448156105 ಸಂಪರ್ಕಿಸಲು ಕೋರಲಾಗಿದೆ.
ಅಂದರ್ ಬಾಹರ್: ನಾಲ್ವರ ಬಂಧನ
ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ನಾಲ್ವರನ್ನು ಬಂಧಿಸಿಸಲಾಗಿದೆ. ತಾ. ಯಸಳೂರು ಹೋಬಳಿ, ಕೌಕೋಡಿ ಬಸ್ ನಿಲ್ದಾಣದ ಬಳಿ ಅಂದರ್ ಬಾಹರ್ ಜೂಜಾಡುತ್ತಿದ್ದಾಗ ತಡಕಲು ಗ್ರಾಮದ ಶಂಕರ (25), ಕೌಕೋಡಿ ಗ್ರಾಮದ ಉಮೇಶ (32), ಹೊಸೂರಳ್ಳಿಯ ಅಶೋಕ (35) ಎಂಬವರನ್ನು ಬಂಧಿಸಿದ್ದು, ಪಣಕ್ಕಿಟ್ಟಿದ್ದ 2000 ರು. ನಗದು ವಶಪಡಿಸಿ ಕೊಂಡಿದ್ದಾರೆ.
ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹಾಸನ ನಗರ ಚಿಕ್ಕನಾಳು ಆಟೋ ನಿಲ್ದಾಣ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದಾಗ ಪೊಲೀಸ ದಾಳಿ ನಡೆಸಿ ಚಿಕ್ಕನಾಳದ ಅಮ್ಜದ್ಪಾಷಾ (33) ಎಂಬಾತನನ್ನು ಬಂಧಿಸಿದ್ದು, ಮಟ್ಕಾ ಜೂಜಾಟದಿಂದ ಗಳಿಸಿದ್ದ 1010 ರು. ನಗದು ವಶಪಡಿಸಿ ಕೊಂಡಿದ್ದಾರೆ. ಪೊಲೀಸರು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಯುವಕ ನಾಪತ್ತೆ
ಚನ್ನರಾಯಪಟ್ಟಣ: ತಾ. ಕಸಬಾ ಹೋಬಳಿ, ನಲ್ಲೂರು ಗ್ರಾಮದ ಕೃಷ್ಣಮೂರ್ತಿ ಅವರ ಪುತ್ರ ತೀರ್ಥಕುಮಾರ್(19) ಸಂಬಂಧಿಕರ ಮನೆಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾನೆ.
ಚಹರೆ 5.5 ಅಡಿ ಎತ್ತರ, ಉದ್ದ ಮುಖ, ಗೋದಿ ಮೈ ಬಣ್ಣ, ಕನ್ನಡ ಮಾತನಾಡುತ್ತಾನೆ.
ಮನೆಯಿಂದ ಹೋಗುವಾಗ ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಎಂದು ತಂದೆ ಕೃಷ್ಣಮೂರ್ತಿ ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಕೃತಿ ಮಡಿಲಲ್ಲಿ ಸ್ವಾತಂತ್ರ್ಯ ದಿನಾಚರಣೆ
ಹಾಸನ: ತಾಲೂಕಿನ ಅನುಗನಾಳಿನಲ್ಲಿರುವ ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ ಬಿಸಿಆರ್ಟಿ ಪ್ರಕೃತಿ ಮಡಿಲಿನಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಕೃಷಿ ವಿಜ್ಞಾನಿ ಡಾ. ಮಳಲೀಗೌಡ ಧ್ವಜಾರೋಹಣ ನೆರವೇರಿಸಿದರು. ಅನುಗನಾಳುಗೆ ಹೊಂದಿಕೊಂಡಿರುವ ಸಿದ್ದಾಪುರದ ಹುಚ್ಚಪ್ಪ ದೇವರ ಮಂಟಿಯಲ್ಲಿ ಸುಮಾರು ನಾನಾ ಜಾತಿಯ ಸಾವಿರ ಸಸಿಗಳನ್ನು ಪರಿಸರ ಪ್ರೇಮಿಗಳು ನೆಟ್ಟರು. ಆದಾಯ ತೆರಿಗೆ ಅಧಿಕಾರಿ ಬಸವರಾಜು, ಬಿಸಿಆರ್ಟಿ ಉಷಾ ಬಿ.ಪ್ರಸನ್ನಕುಮಾರ್, ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಸದಸ್ಯರು ಹಾಗೂ ಹಗರಿಬೊಮ್ಮೇನಹಳ್ಳಿ ಮಹಂತೇಶ್, ಎ.ಕೆ.ಭರತ್, ಭೂಮಿಕಾ ಕೆ, ಶಿವಪ್ಪ, ಕೃಷಿ ತಜ್ಞರಾದ ಮಹದೇವ್, ಶಿಕ್ಷಕ ಕುಮಾರೇಗೌಡ, ಶಾಲಾ ಮಕ್ಕಳು, ಅನುಗನಾಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
ಹರಿಕಥಾ ವಿದ್ವಾನ್ ನಂಜುಂಡಶೆಟ್ಟಿಗೆ ಮಾಚಿದೇವ ಪ್ರಶಸ್ತಿ
ಹೊಳೆನರಸೀಪುರ: ಪಟ್ಟಣದ ಹರಿಕಥಾ ವಿದ್ವಾನ್, ಗಾಯಕರು, ಹಿರಿಯ ರಂಗಕಲಾವಿದ, ಸಮಾಜ ಸೇವಕರಾದ ಎಚ್.ಎನ್.ನಂಜುಂಡಶೆಟ್ಟಿ ಅವರಿಗೆ ರಾಜ್ಯ ಮಡಿವಾಳ ಮಾಚಿದೇವ ಕ್ಷೇಮಾಭಿವೃದ್ಧಿ ಸಂಘ 2013ನೇ ಸಾಲಿನ ರಾಜ್ಯ ಮಡಿವಾಳ ಮಾಚಿದೇವ ಪ್ರಶಸ್ತಿ ನೀಡಿ ಗೌರವಿಸಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ಹಾಗೂ ಮೈಸೂರು, ನಂಜನಗೂಡು, ತಮಿಳುನಾಡು ಕಡೆಗಳಲ್ಲಿ ಸನ್ಮಾನಿಸಲಾಗಿದೆ. ರಾಜ್ಯ ಮಡಿವಾಳ ಮಾಚಿದೇವ ಸಂಘ ಬೆಂಗಳೂರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ವಾಲ್ಮೀಕಿ ಸಂಘಕ್ಕೆ ಆಯ್ಕೆ
ಹಾಸನ: ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾಗಿ ಬಿ.ಆರ್. ಪ್ರಕಾಶ್, ಗೌರವ ಅಧ್ಯಕ್ಷರಾಗಿ ಜಿ.ಓ. ಮಹಾಂತಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸಿದ್ದಮಲ್ಲಪ್ಪ ಎನ್.ಸಿ. ಪ್ರಧಾನ ಕಾರ್ಯದರ್ಶಿ ಎನ್.ಟಿ. ಶ್ರೀನಿವಾಸ್, ಸಹಕಾರ್ಯದರ್ಶಿ ರಾಜಶೇಖರ್ ಕೆ.ಸಿ. ಜಂಟಿ ಕಾರ್ಯದರ್ಶಿ ಶೇಖರಪ್ಪ ಸಿ.ಎಸ್, ಖಜಾಂಚಿ ಬಲರಾಮಮೂರ್ತಿ ಬಿ.ಆರ್., ಜಿಲ್ಲಾ ಸಂಚಾಲಕರಾಗಿ ಬಿ.ಎಚ್. ಧರ್ಮಪ್ಪ ನಾಯಕ, ಸಂಘಟನಾ ಕಾರ್ಯದರ್ಶಿಯಾಗಿ ಎಂ. ಮೂಡಲಗಿರಿ ಆಯ್ಕೆಯಾಗಿದ್ದಾರೆ.
ಬಸ್ ಹರಿದು ಗಾಯಗೊಂಡಿದ್ದ ವ್ಯಕ್ತಿ ಸಾವು
ಹೊಳೆನರಸೀಪುರ: ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.ತಾಲೂಕಿನ ಹಳ್ಳಿಮೈಸೂರು ಹೋಬಳಿ ಬಂಟಲು ತಳಲು ಗ್ರಾಮದ ಕೆಂಪೇಗೌಡ (55) ಸಾವನ್ನಪ್ಪಿದ ದುರ್ದೈವಿ.ಕೆಂಪೇಗೌಡ ಆಸ್ಪತ್ರೆಗೆ ಹೋಗಲೆಂದು ತಮ್ಮ ಗ್ರಾಮದಿಂದ ಸಾರಿಗೆ ಬಸ್ಸಿನಲ್ಲಿ ಬಂದು ಹೊಳೆನರಸೀಪುರ ನಿಲ್ದಾಣದಲ್ಲಿ ಬಸ್ನಿಂದ ಇಳಿಯುವಾಗ ಬಿದ್ದಾಗ ಚಾಲಕ ಬಸ್ ಮುಂದೆ ಓಡಿಸಿದಾಗ ಬಸ್ನ ಚಕ್ರ ಹರಿದು ಗಾಯಗಳಾಯಿತು. ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಪುತ್ರ ಪುನೀತ್ ನಗರ ಠಾಣೆಗೆ ದೂರು ನೀಡಿದ್ದಾರೆ.
ಅನಿಲ ಸೋರಿಕೆ: ಶಿಕ್ಷಕರಿಂದ ತಪ್ಪಿದ ಅವಘಡ
ಹಾಸನ: ತಾಲೂಕಿನ ಹನುಮಂತಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಅಡುಗೆ ಅನಿಲ ಸೋರಿದ ವೇಳೆ ಶಿಕ್ಷಕರ ಜಾಗರೂಕತೆಯಿಂದ ಸಂಭವಿಸುತ್ತಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ.
ಸಿಲೆಂಡರ್ಗೆ ಹೊಸ ಪೈಪ್ ಅಳವಡಿಸುವಾಗ ಸರಿಯಾಗಿ ವಾಷರ್ ಹಾಕದೆ ಇದ್ದುದ್ದರಿಂದ ಅನಿಲ ಸೋರಿಕೆ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಶಾಲೆಯಲ್ಲಿದ್ದ ಬೆಂಕಿ ಆರಿಸುವ ಯಂತ್ರದ ಮೂಲಕ ಬೆಂಕಿ ನಂದಿಸಲು ಹಾಗೂ ಅಲ್ಲೇ ಇದ್ದ ಮರಳು ಹಾಕಿ ಬೆಂಕಿ ನಂದಿಸುವಲ್ಲಿ ಸಫಲರಾದರು.
ಈ ವೇಳೆ ಶಿಕ್ಷಕರು ಅಗ್ನಿ ಶಾಮಕದಳಕ್ಕೆ ದೂರವಾಣಿ ಮಾಡುವ ಬದಲು ಗಾಬರಿಯಲ್ಲಿ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಶಿಕ್ಷಕರ ಜಾಗೃತಿಯಿಂದ ಆಗುತ್ತಿದ್ದ ಅನಾಹುತ ತಪ್ಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

