ಎಸ್ಪಿ ಚನ್ನಣ್ಣನವರ್ 50 ದಿನ...
ಹಾಸನ: ಜಿಲ್ಲೆಯ ಎಸ್ಪಿಯಾಗಿ ರವಿ ದ್ಯಾಮಪ್ಪ ಚನ್ನಣ್ಣನವರ್ ಅವರು ಅಧಿಕಾರ ವಹಿಸಿಕೊಂಡು ಇದೇ ಆಗಸ್ಟ್ 25 ಕ್ಕೆ 50 ದಿನಗಳಾಗಿವೆ.
ಈ ದಿನಗಳಲ್ಲಿ ಎಸ್ಪಿ ತಮ್ಮ ಕರ್ತವ್ಯವನ್ನು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ, ಆಗಿದ್ದೇನು, ಆಗಬೇಕಾಗಿದ್ದು ಏನು ಎಂಬ ಬಗ್ಗೆ ಅವಲೋಕನ ನಡೆಸಲಾಗುತ್ತಿದೆ.
ಜುಲೈ 5, 2013 ರಂದು ಅಧಿಕಾರ ಸ್ವೀಕಾರ ಮಾಡಿದ್ದ ಎಸ್ಪಿ, ಸಾರ್ವಜನಿಕರೊಡನೆ ನೇರ ಸಂಪರ್ಕ ಸಾಧಿಸುವ ಮೂಲಕ ಪೊಲೀಸ್ ಇಲಾಖೆಯ ಒಳ ಮತ್ತು ಹೊರಗಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಮರ್ಥವಾಗಿ ಕೌಶಲ್ಯ ಪ್ರದರ್ಶಿಸಿದ್ದು, ಅಸ್ತವ್ಯಸ್ತವಾಗಿದ್ದ ಹಾಸನ ನಗರದ ಸಂಚಾರ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಸುವ್ಯವಸ್ಥೆಯತ್ತ ಕೊಂಡೊಯ್ಯುವ ಬಗ್ಗೆ ಮಾಡಿರುವ ಯತ್ನ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದ್ದರೂ ಇನ್ನೂ ಅನೇಕ ಸಮಸ್ಯೆಗಳನ್ನು ಬಗೆಹರಿಸಬೇಕಾದ ಜವಾಬ್ದಾರಿ ಅವರ ಮೇಲಿದೆ.
ಜಿಲ್ಲಾದ್ಯಂತ ನಡೆದ ಹಲವು ಕಳವು ಪ್ರಕರಣಗಳು ಪತ್ತೆಯಾಗಿವೆ ನಿಜ. ಆದರೆ ಕೊಲೆ ಪ್ರಕರಣಗಳನ್ನು ನಿರೀಕ್ಷಿತ ಮಟ್ಟದಲ್ಲಿ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಜಿಲ್ಲಾ ಅಪರಾಧ ತನಿಖಾ ದಳ (ಡಿಸಿಆರ್ಬಿ) ವಿಭಾಗವನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ. ಜನರು ನೇರವಾಗಿ ಎಸ್ಪಿ ಅವರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಹೇಳಿಕೊಳ್ಳುವುದನ್ನು ಪೊಲೀಸ್ ಠಾಣಾ ಅಧಿಕಾರಿಗಳು ಸಹಿಸುತ್ತಿಲ್ಲ. ಇತ್ತ ಗಮನಹರಿಸಬೇಕಾಗಿದೆ.
ಪತ್ತೆಯಾಗದ ಪ್ರಕರಣಗಳು: ಹಾಸನ ನಗರದ ಎನ್.ಆರ್. ಪೊಲೀಸ್ ಠಾಣೆಗೆ ಹೊಂದಿಕೊಂಡಂತೆ ಇರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ 2013, ಮಾರ್ಚ್ 7 ರಂದು 32 ಲಕ್ಷ ರು. ಅಪಹರಿಸಿದ ಪ್ರಕರಣ ಪತ್ತೆಯಾಗಿಲ್ಲ.
2013 ಜುಲೈ 17ರಲ್ಲಿ ಹಾಸನ ನಗರದ ಷರೀಫ್ ಕಾಲೋನಿಯಲ್ಲಿ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಪ್ರಕರಣ ಪತ್ತೆಯಾಗಿಲ್ಲ.
2013 ಜುಲೈನಲ್ಲಿ ಹಾಸನ ತಾಲೂಕು ಗುಡ್ಡೇನಹಳ್ಳಿ ಬಸ್ ನಿಲ್ದಾಣದ ಬಳಿ ದೇವರಾಜು ಎಂಬಾತ ಕೊಲೆಯಾಗಿದ್ದ ಪ್ರಕರಣ ಇನ್ನೂ ನಿಗೂಢವಾಗಿದೆ.
ಕಾನ್ಸ್ಟೇಬಲ್ಗಳ ಸಮಸ್ಯೆ: ಜಿಲ್ಲಾ ಸಶಸ್ತ್ರ ಪಡೆಯ (ಡಿಎಆರ್) 25 ಕ್ಕೂ ಹೆಚ್ಚು ಕಾನ್ಸ್ಟೇಬಲ್ಗಳನ್ನು ಎಸ್ಪಿ ಕಚೇರಿಗೆ ನಿಯೋಜನೆ ಮಾಡಿಕೊಂಡಿರುವುದು ಸರಿಯಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಪೊಲೀಸ್ ಠಾಣೆಗಳಲ್ಲಿ ಅಗತ್ಯದಷ್ಟು ಸಿವಿಲ್ ಕಾನ್ಸ್ಟೇಬಲ್ಗಳು ಇಲ್ಲ. ಪರಿಣಾಮ ಡಿಎಆರ್ ಕಾನ್ಸ್ಟೇಬಲ್ಗಳು ಮಾಡಬೇಕಾದ ಕೆಲಸವನ್ನು ಸಿವಿಲ್ ಪೊಲೀಸರು ಮಾಡಬೇಕಾಗಿದೆ.
ನ್ಯಾಯಾಲಯಗಳಿಗೆ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿರುವವರನ್ನು ಕರೆದುಕೊಂಡು ಹೋಗಬೇಕಾದ ಜವಾಬ್ದಾರಿ ಡಿಎಆರ್ ಪೊಲೀಸರದ್ದು. ಆ ಪೊಲೀಸರ ಸಂಖ್ಯೆ ಕಡಿಮೆ ಆಗಿದ್ದರಿಂದ ಸಿವಿಲ್ ಪೊಲೀಸರೇ ನ್ಯಾಯಾಲಯಗಳಿಗೆ ಕೈದಿಗಳನ್ನು ಕರೆದುಕೊಂಡು ಹೋಗಬೇಕಾಗಿದೆ. ಇದರಿಂದ ಠಾಣೆಗಳ ಕೆಲಸಕ್ಕೆ ಹಿನ್ನಡೆಯಾಗಿದೆ.
ಎಸ್ಪಿ ಕಚೇರಿಯ ಸಿಬ್ಬಂದಿ ಕಾನ್ಸ್ಟೇಬಲ್ಗಳು ಸಾಲ ತೆಗೆದುಕೊಳ್ಳಲು ಬೇಕಾದ ಆಕ್ಷೇಪಣಾ ರಹಿತ ಪತ್ರ ನೀಡುವುದು ಸೇರಿದಂತೆ ಅನೇಕ ಕೆಲಸಗಳಿಗೆ ವಿಳಂಬವಾಗುತ್ತಿದೆ. ಇದು ರಜೆ ಇಲ್ಲದೇ ಹಗಲಿರುಳು ದುಡಿಯುವ ಕಾನ್ಸ್ಟೇಬಲ್ಗಳಿಗೆ ನೋವು ಉಂಟು ಮಾಡಿದೆ.
ಕೆಲ ಪೊಲೀಸರು ಲೇವಾದೇವಿ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಯುವಕರು ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಸಿಲುಕಿಕೊಂಡು ಸಮಾಜಘಾತುಕ ಶಕ್ತಿಗಳಾಗಿ ಪರಿವರ್ತನೆಗೊಳ್ಳುತ್ತಿರುವ ದೂರಿನತ್ತ ಕೂಡ ಎಸ್ಪಿ ಚಿತ್ತ ಹರಿಸಬೇಕಾಗಿದೆ
ಹಾಸನ ನಗರದ ವಿದ್ಯಾನಗರದಲ್ಲಿ ಪೊಲೀಸ್ ಠಾಣೆ ಮತ್ತು ಚನ್ನರಾಯಪಟ್ಟಣ ಮತ್ತು ಅರಸೀಕೆರೆ ಪಟ್ಟಣಗಳಲ್ಲಿ ಸಂಚಾರಿ ಠಾಣೆ ಆರಂಭಿಸಬೇಕೆಂಬ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ ಆನೇಕ ವರ್ಷಗಳೇ ಉರುಳಿವೆ. ಈ ಠಾಣೆಗಳು ಆರಂಭಿಸುವ ಬಗ್ಗೆ ಗಮನಹರಿಸಬೇಕಾಗಿದೆ.
ಜಿಲ್ಲಾದ್ಯಂತ ಇರುವ ಪೊಲೀಸ್ ಠಾಣಾಧಿಕಾರಿಗಳು ಠಾಣೆಗಳಲ್ಲೇ ಹೆಚ್ಚು ಕಾಲ ಕಳೆಯುವ ಬದಲು ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಮಾಡಬೇಕಾಗಿದೆ. ಹಾಸನ ನಗರದ ಜನದಟ್ಟಣೆ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿನ ಮಟ್ಟದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಬೇಕಾಗಿದೆ. ಭೂಮಾಫಿಯಾ ಹಾವಳಿಯನ್ನು ತಡೆಯವುದು ಕೂಡ ಅಗತ್ಯವಾಗಿದೆ. ರಾತ್ರಿ ಗಸ್ತು ಪರಿಣಾಮಕಾರಿಯಾಗಿ ಮಾಡಬೇಕಾಗಿದೆ.
ಎಸ್ಪಿ ಮಾಡಿದ್ದೇನು?
ಶಾಲೆ, ಕಾಲೇಜುಗಳಲ್ಲಿ ತೆರೆದ ಮನೆ ಎಂಬ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಲ್ಲಿ ಪೊಲೀಸ್ ಇಲಾಖೆ ಕಾರ್ಯ ವೈಖರಿ ಮತ್ತು ಸಂಚಾರಿ ಕಾನೂನುಗಳ ತಿಳಿವಳಿಕೆ ಮಾಡಿ ಕೊಟ್ಟಿದ್ದು, ಹಿರಿಯ ನಾಗರಿಕರ ಸಭೆ, ಆಟೋ ಮಾಲೀಕರು ಮತ್ತು ದಲಿತ ಸಂಘರ್ಷ ಸಮಿತಿ ಸೇರಿದಂತೆ ಆನೇಕ ಸಂಘಟನೆಗಳ ಮುಖಂಡರೊಡನೆ ಸಭೆ ನಡೆಸಿ ಜಿಲ್ಲೆಯ ಸಮಸ್ಯೆಗಳ ತಿಳಿದುಕೊಳ್ಳುವ ಯತ್ನ ಮಾಡಿದ್ದಲ್ಲದೇ, ಸಾರ್ವಜನಿಕರು ತಮ್ಮ ಕಚೇರಿಗೆ ಬಂದು ಅಹವಾಲುಗಳನ್ನು ಸಲ್ಲಿಸುವ ವ್ಯವಸ್ಥೆ ಮಾಡಿದ್ದು ಮತ್ತು ತೀವ್ರವಾಗಿ ಹದಗೆಟ್ಟಿದ್ದ ಹಾಸನ ನಗರದ ಸಂಚಾರಿ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲೇ ಕ್ರಮ ಜರುಗಿಸಲಾಗಿದೆ. ಬೈಕ್, ಲಾರಿ ಮತ್ತಿತರ ವಾಹನಗಳು ಮತ್ತು ಮನೆಗಳವು ಪ್ರಕರಣಗಳನ್ನು ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಪತ್ತೆ ಹಚ್ಚಿದ್ದು ಸೇರಿದಂತೆ ಹಲವು ಕ್ರಮಗಳ ಬಗ್ಗೆ ಸಾರ್ವಜನಿಕರ ಮೆಚ್ಚುಗೆ ಸಿಕ್ಕಿದೆ. ಆದರೆ ಕೊಲೆ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಅಷ್ಟೇನು ಯಶಸ್ವಿಯಾಗಿಲ್ಲ.
ದಯಾಶಂಕರ ಮೈಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

