ಹಾಸನ

ಓಲೈಕೆ ಯೋಜನೆ ಅವಶ್ಯಕತೆ ಇಲ್ಲ

Published On :

ಕನ್ನಡಪ್ರಭ ವಾರ್ತೆ ,  ಹೊಳೆನರಸೀಪುರ ,  ಆ.30
ಶಿಕ್ಷಕರು ದೇಶಕ್ಕೆ ಪ್ರತಿಭಾವಂತರನ್ನು ಕೊಡುಗೆ ನೀಡುವ ಕಾರ್ಖಾನೆಗಳಿದ್ದಂತೆ. ರಾಷ್ಟ್ರವನ್ನು ಉಳಿಸಿ ಸುಭಿಕ್ಷತೆಯಿಂದ ಕೂಡಿದ ನಾಡನ್ನು ಕಟ್ಟುವ ಯುವಕರನ್ನು ತಯಾರಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
 ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರದ ಆಂತರಿಕ ಭದ್ರತೆಗಿರುವ ಸವಾಲುಗಳು ಎಂಬ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಎಲ್ಲಾ ಮಕ್ಕಳಿಗೂ ಸಮಾನ ಶಿಕ್ಷಣ ದೊರೆಯುವಂತಹ ನೀತಿಯನ್ನು ಜಾರಿಗೆ ತರದೆ, ಜನತೆಯನ್ನು ಮೆಚ್ಚಿಸುವ ಯಾವುದಾವುದೋ ಯೋಜನೆಗಳನ್ನು ಜಾರಿಗೆ ತಂದರೂ ಅದು ಕೇವಲ ತಾತ್ಕಾಲಿಕ ಮಾತ್ರ ಎಂದು ಹೇಳಿದರು.
ಜೀವನ ರೂಪಿಸಿಕೊಳ್ಳುವ ಶಿಕ್ಷಣ ಅಗತ್ಯ:   ಬಡಮಕ್ಕಳಿಗೂ ಉನ್ನತ ಶಿಕ್ಷಣ ದೊರಕಿ ಅವರ ಬದುಕೂ ಹಸನಾಗುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿಯನ್ನು ರೂಪಿಸುವುದನ್ನು ಬಿಟ್ಟು, ಈ ಸರ್ಕಾರಗಳು ಅಗ್ಗದ ದರದಲ್ಲಿ ಅಕ್ಕಿ, ಹಾಲು, ಇನ್ನೇನನ್ನೋ ಕೊಡುವುದನ್ನು ಬಿಟ್ಟು, ಪ್ರತಿಯೊಬ್ಬರಿಗೂ ಅವರ ಜೀವನ ರೂಪಿಸಿಕೊಳ್ಳುವಂತಹ ಉತ್ತಮ ಶಿಕ್ಷಣ ನೀಡಿದಲ್ಲಿ ಸರ್ಕಾರಗಳ ಈ ಓಲೈಕೆಯ ಯೋಜನೆಗಳ ಅವಶ್ಯಕತೆ ಇರುವುದಿಲ್ಲ ಎಂದು ಸರ್ಕಾರದ ನೀತಿ, ಧೋರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
 ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ 42 ಕಾಲೇಜುಗಳ ರಾಜ್ಯಶಾಸ್ತ್ರ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು ಹಾಗೂ ಆಯ್ದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಚಾರ ಸಂಕಿರಣದಲ್ಲಿ ಎರಡು ಗೋಷ್ಠಿಗಳನ್ನು ಆಯೋಜಿಸಿಲಾಗಿತ್ತು.
 ಮೊದಲ ಗೋಷ್ಠಿಯಲ್ಲಿ ಪ್ರಾಧ್ಯಾಪಕ ಭರತ್‌ರಾಜೇಂದ್ರ ಅರಸ್ ರಾಜಕೀಯ ಅನಿಶ್ಚಿತತೆ ಹಾಗೂ ಆರ್ಥಿಕ ಹಿಂಜರಿತ ಭಾರತದ ಆಂತರಿಕ ಸವಾಲಾಗಿದೆ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು.
 ಡಾ.ಎಂ.ಕೆ.ಹರೀಶ್, ಪ್ರೊ.ಪ್ರಮೀಳ ರಾವ್ ಭಾರತದ ಆಂತರಿಕ ಭದ್ರತೆಯ ಸವಾಲಾಗಿ ನಕ್ಸಲೀಸಂ, ಡಿ.ಲತಾ ಹಾಗೂ ಬಿ.ಪಿ.ವಿಜಯರಾಜು ರಾಷ್ಟ್ರೀಯ ನೈತಿಕತೆಯ ಪಾತ್ರ ವಿಷಯ ಕುರಿತು ತಮ್ಮ ವಿಚಾರಧಾರೆ ಮಂಡಿಸಿದರು.
 ಗೋಷ್ಠಿಯಲ್ಲಿ ನಿರ್ಣಾಯಕರಾಗಿ ಹಾಸನ ಎವಿಕೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಕುಶಾಲಪ್ಪ ಹಾಗೂ ಹಾಸನದ ಸರ್ಕಾರಿ ಕಾನೂನು ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ.ಎನ್.ಎಂ.ಲಕ್ಷ್ಮಣ್ ಕಾರ್ಯ ನಿರ್ವಹಿಸಿದರು.
 ಸರ್ಕಾರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಸಿ.ಎಸ್.ಶಿವೇಗೌಡ ಅಧ್ಯಕ್ಷತೆ ವಹಿಸಿದ್ದರು.
 ಎರಡನೇ ಗೋಷ್ಠಿಯಲ್ಲಿ ಆನಂದಗೌಡ ಅವರು ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕೋಮುವಾದ, ಕೃಷ್ಣಾನಾಯಕ್ ಅವರು ಎಡಪಂಥೀಯ ತೀವ್ರವಾದ ಸವಾಲುಗಳು, ಕುದುರಿಹಾಳ್ ಹಾಗೂ ಚೈತ್ರ ಮತ್ತು ಪರಮೇಶ್ ಅವರು ಕೋಮುವಾದ, ಮತ್ತು ಸುವರ್ಣ ಅವರು ಭಯೋತ್ಪಾದನೆ ಕುರಿತು ವಿಚಾರ ಮಂಡಿಸಿದರು.
 ಹಾಸನದ ಎನ್.ಡಿ.ಆರ್.ಕೆ.ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ರಮೇಶ್, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡಾ.ಉದಯಕುಮಾರ್ ಗೋಷ್ಠಿ ನಿರ್ಣಾಯಕರಾಗಿದ್ದರು. ಸರ್ಕಾರಿ ಕಲಾ ಕಾಲೇಜಿನ ಪ್ರೊ. ಅಣ್ಣಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.
 ಇದೇ ಮೊದಲ ಬಾರಿಗೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಆಯೋಜಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಅಧ್ಯಯನಾಸಕ್ತರಿಗೆ ಹೆಚ್ಚಿನ ವಿಚಾರಗಳ ಲಭ್ಯತೆ ಹಾಗೂ ವೈಚಾರಿಕ ಚಿಂತನೆಗಳಿಗೆ ಸಹಕಾರಿಯಾಯಿತು.
  ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪಿ.ಆರ್.ಶಾಂತ, ಎನ್.ವಿ.ಶ್ರೀನಿವಾಸ್, ಕೃಷ್ಣಾನಾಯಕ್‌ನೇತೃತ್ವ ಹಿಸಿದ್ದರು. ಪ್ರಾಧ್ಯಾಪಕ ಭುವನೇಂದ್ರ, ಪ್ರೊ.ನಯನತಾರಾಮಣಿ, ಪೂರ್ಣಿಮ, ದೈಹಿಕ ಶಿಕ್ಷಣ ನಿರ್ದ್ದೇಶಕ ಎಸ್.ಕಿರಣ್‌ರಾವತ್, ಮಧುಸೂದನ್ ಸಹಕಾರ ನೀಡಿದರು. ಪ್ರಾಂಶುಪಾಲ ಪ್ರೊ. ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.